Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆದಾಯ ಹೆಚ್ಚಿಸಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿ ಸರ್ಕಾರ: ವಿದ್ಯುತ್‌, ಮದ್ಯ ಆಯ್ತು ಈಗ ಮತ್ತೊಂದು ದುಬಾರಿ?

ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಲು ಬೇರೆ ಬೇರೆ ಮೂಲಗಳಿಂದ ಸರ್ಕಾರದ ಬೊಕ್ಕಸಕ್ಕೆ ಆದಾಯ ಹೆಚ್ಚಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಮದ್ಯ, ವಿದ್ಯುತ್ ದರ ಏರಿಕೆ ಬೆನ್ನಲ್ಲೇ ಇದೀಗ ಮತ್ತೊಂದು ದುಬಾರಿಯಾಗಲಿದೆ.

ಆದಾಯ ಹೆಚ್ಚಿಸಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿ ಸರ್ಕಾರ: ವಿದ್ಯುತ್‌, ಮದ್ಯ ಆಯ್ತು ಈಗ ಮತ್ತೊಂದು ದುಬಾರಿ?
ವಿಧಾನಸೌಧ
Follow us
ರಮೇಶ್ ಬಿ. ಜವಳಗೇರಾ
|

Updated on:Jun 13, 2023 | 12:47 PM

ಬೆಂಗಳೂರು: ಐದು ಗ್ಯಾರಂಟಿಗಳನ್ನು ಸಮರ್ಪಕವಾಗಿ ಜಾರಿಗೆ ತರಲು ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಇನ್ನಿಲ್ಲದ ಕಸರತ್ತು ನಡೆಸಿದೆ. ಗ್ಯಾರಂಟಿಗಳ ವೆಚ್ಚ ಭರಿಸಲು ವಿವಿಧ ಮೂಲಗಳಿಂದ ಹಣ ಕ್ರೂಢೀಕರಣಕ್ಕೆ ಸರ್ಕಾರ ಮುಂದಾಗಿದೆ. ಆಸ್ತಿ ನೋಂದಣಿ, ಕಂದಾಯ, ಅಬಕಾರಿ ಸೇರಿದಂತೆ ಬೇರೆ ಬೇರೆ ಮೂಲಗಳಿಂದ ಸರ್ಕಾರದ ಬೊಕ್ಕಸಕ್ಕೆ ಆದಾಯ ಹೆಚ್ಚಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಮದ್ಯ, ವಿದ್ಯುತ್ ದರ ಏರಿಕೆ ಬೆನ್ನಲ್ಲೇ ಇದೀಗ ಮತ್ತೊಂದು ದುಬಾರಿಯಾಗಲಿದೆ. ಹೌದು… ರಾಜ್ಯಾದ್ಯಂತ ಆಸ್ತಿ ಮಾರಾಟಕ್ಕೆ ಸಂಬಂಧಿಸಿದಂತೆ ಹಾಲಿ ಇರುವ ಭೂಮಿಯ ಮಾರ್ಗಸೂಚಿ ಬೆಲೆಯನ್ನು ಶೇ.20ರಿಂದ 25ರಷ್ಟು ಹೆಚ್ಚಳ ಮಾಡುವಂತೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಮುದ್ರಾಂಕ ಮತ್ತು ನೋಂದಣಿ ಇಲಾಖೆ ಮುಂದಾಗಿದೆ.

ಇದನ್ನೂ ಓದಿ: ಒನ್ ಟು ತ್ರಿಬಲ್ ವಿದ್ಯುತ್ ದರ ಹೆಚ್ಚಿಸಿದ್ಯಾರು? ಎಲ್ಲಾ ಗೊಂದಲಗಳಿಗೆ ಸ್ಪಷ್ಟನೆ ನೀಡಿದ ಸಿದ್ದರಾಮಯ್ಯ

ಪಂಚ ಫ್ರೀ ಸ್ಕೀಂ ನೀಡಲು ಸರ್ಕಾರಕ್ಕೆ 50 ರಿಂದ 60 ಸಾವಿರ ಕೋಟಿ ರೂ. ಆದಾಯ ಬೇಕಿದೆ. ಹೀಗಾಗಿ ಯಾವ ಯಾವ ಇಲಾಖೆಯಿಂದ ಹೆಚ್ಚು ಆದಾಯ ಬರುತ್ತಿದೆಯೋ ಅದನ್ನು ಬಳಸಿಕೊಳ್ಳಲು ಸರ್ಕಾರ ಪ್ಲಾನ್ ಮಾಡಿದೆ. ಅದರಲ್ಲೂ ದೊಡ್ಡ ಪ್ರಮಾಣದ ಆದಯವನ್ನ ಕಂದಾಯ ಇಲಾಖೆ ಭರಿಸುವ ಶಕ್ತಿ ಹೊಂದಿದೆ. ಹೀಗಾಗಿ ಸರ್ಕಾರ ಕಂದಾಯ ಇಲಾಖೆಯ ಮೊರೆ ಹೋಗಿದೆ.

ಶೀಘ್ರದಲ್ಲೇ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲು ಇಲಾಖೆಯ ಅಧಿಕಾರಿಗಳು ಸಜ್ಜಾಗಿದ್ದಾರೆ. ಇದಕ್ಕೆ ಸರ್ಕಾರವೇನಾದರೂ ಒಪ್ಪಿ ಮಾರ್ಗಸೂಚಿ ಬೆಲೆ ಹೆಚ್ಚಾದರೆ ಸಹಜವಾಗಿಯೇ ಮುದ್ರಾಂಕ ಮತ್ತು ನೋಂದಣಿ ಶುಲ್ಕಗಳು ಏರಿಕೆ ಕಾಣಲಿವೆ. ಇದರಿಂದ ರಾಜ್ಯದಲ್ಲಿ ಯಾವುದೇ ರೀತಿಯ ಜಮೀನು, ನಿವೇಶನ, ಮನೆ, ಕಟ್ಟಡಗಳ ಖರೀದಿ ಇನ್ನಷ್ಟು ದುಬಾರಿಯಾಗುವುದು ನಿಶ್ಚಿತ.

ನೋಂದಣಿ ಮತ್ತು ಮುದ್ರಾಂಕ ನಿಯಮಗಳ ಪ್ರಕಾರ, ಪ್ರತಿ ವರ್ಷ ಭೂಮಿಯ ಮಾರ್ಗಸೂಚಿ ದರ ಹೆಚ್ಚಳ ಮಾಡಲು ಅವಕಾಶವಿದೆ. ಆದರೆ, ಕೋವಿಡ್‌ ಕಾರಣದಿಂದ 2019ರಿಂದ ಮಾರ್ಗಸೂಚಿ ದರ ಹೆಚ್ಚಳ ಮಾಡಿಲ್ಲ. ಕೋವಿಡ್‌ ಅವಧಿಯಲ್ಲಿ ಆಸ್ತಿ ನೋಂದಣಿ ಕುಸಿದಿದ್ದರಿಂದ ಹಿಂದಿನ ಸರ್ಕಾರ ಕಳೆದ ಎರಡು ವರ್ಷಗಳ ಕಾಲ ಮಾರ್ಗಸೂಚಿ ದರ ಕಡಿಮೆ ಮಾಡಿತ್ತು. ಈಗ ಕೋವಿಡ್‌ನಿಂದ ಸಾಮಾನ್ಯ ಸ್ಥಿತಿಗೆ ಮರಳಿದೆ. ಹಾಗಾಗಿ ಈ ವರ್ಷ ದರ ಹೆಚ್ಚಳ ಮಾಡುವಂತೆ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದೆ. ಪ್ರಸ್ತಾವನೆಯನ್ನು ಸರ್ಕಾರ ಒಪ್ಪಬಹುದು, ಬಿಡಬಹುದು. ಅಂತಿಮ ತೀರ್ಮಾನವನ್ನು ಕಂದಾಯ ಸಚಿವರು ಹಾಗೂ ಮುಖ್ಯಮಂತ್ರಿ ಕೈಗೊಳ್ಳಲಿದ್ದಾರೆ.

ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದ ಕೂಡಲೇ ಚುನಾವಣೆಗೆ ಮುನ್ನ ನೀಡಿದ್ದ ಐದೂ ಭರವಸೆಗಳನ್ನು ಅನುಷ್ಠಾನಗೊಳಿಸಿ ಆದೇಶಿಸಿರುವುದರಿಂದ ಸುಮಾರು 60 ಸಾವಿರ ಕೋಟಿ ರು.ಗಳಷ್ಟುಅನುದಾನ ಈ ಯೋಜನೆಗಳಿಗೆ ಬೇಕಾಗುತ್ತದೆ. ಹಾಗಾಗಿ ಆಸ್ತಿ ನೋಂದಣಿ, ಕಂದಾಯ, ಅಬಕಾರಿ ಸೇರಿದಂತೆ ಬೇರೆ ಬೇರೆ ಮೂಲಗಳಿಂದ ಸರ್ಕಾರದ ಬೊಕ್ಕಸಕ್ಕೆ ಆದಾಯ ಹೆಚ್ಚಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಹಾಗಾಗಿ ಇಲಾಖೆ ಸಲ್ಲಿಸಲಿರುವ ಮಾರ್ಗಸೂಚಿ ದರ ಹೆಚ್ಚಳದ ಪ್ರಸ್ತಾವನೆಗೆ ಒಪ್ಪಿಗೆ ದೊರೆಯುವ ಸಾಧ್ಯತೆ ಇದೆ ಎನ್ನುತ್ತವೆ ಮೂಲಗಳು.

ರಾಜ್ಯದಲ್ಲಿ ಸದ್ಯ 255 ಉಪ ನೋಂದಣಿ ಕಚೇರಿಗಳಿವೆ. ಅವುಗಳ ಪೈಕಿ ಶೇ.10 ರಷ್ಟುಕ ಚೇರಿಗಳ ವ್ಯಾಪ್ತಿಯಲ್ಲಿ ಮಾತ್ರ ಮಾರ್ಗಸೂಚಿ ಬೆಲೆ ಅತ್ಯಂತ ಕಡಿಮೆ ಇದೆ. ಪ್ರಸ್ತಾವನೆಗೆ ಒಪ್ಪಿಗೆ ದೊರೆತರೆ ಮುಂದೆ ಎಲ್ಲ ಕಡೆಯೂ ಬೆಲೆ ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಎಷ್ಟು ಹೆಚ್ಚಿಸಿದರೆ ಎಷ್ಟು ಆದಾಯ ಸಂಗ್ರಹ?

ಕನಿಷ್ಠ 15% ಪ್ರಸ್ತಾವನೆಗೆ ಸರ್ಕಾರ ಒಪ್ಪಿಗೆ ನೀಡಿದರೆ 19 ಸಾವಿರ ಕೋಟಿ ರೂ. ತೆರಿಗೆ ಸಂಗ್ರಹವಾಗಲಿದೆ. ಒಂದೊಮ್ಮೆ ಸರ್ಕಾರ ಕಳೆದ ಮೂರು ವರ್ಷದಿಂದ ತೆರಿಗೆ ಹೆಚ್ಚಳ ಮಾಡಿಲ್ಲ ಎಂದು ಶೇ.30 ರಿಂದ 35ರಷ್ಟು ಹೆಚ್ಚಳ ಮಾಡಿದ್ರೆ 42 ಸಾವಿರ ಕೋಟಿಯಿಂದ 45 ಸಾವಿರ ಕೋಟಿ ರೂ. ತೆರಿಗೆ ಸಂಗ್ರಹವಾಗಲಿದೆ. ಫ್ರೀ ಸ್ಕಿಂ ಬರಿಸಲು 30 ರಿಂದ 35 % ಹೆಚ್ಚಳ ಮಾಡಿದ್ರೆ ಸಾಕು 45 ಸಾವಿರ ಕೋಟಿ ತೆರಿಗೆ ಸಂಗ್ರಹವಾಗಲಿದ್ದು, ಕಾಂಗ್ರೆಸ್ ಸರ್ಕಾರದ ಪಂಚ್ ಗ್ಯಾರಂಟಿಗಳಿಗೆ ಇದೊಂದೇ ಇಲಾಖೆಯಿಂದಲೇ ಶೇ 70% ರಷ್ಟು ಆದಾಯ ಕ್ರೂಢೀಕರಣಕ್ಕೆ ಮುಂದಾಗಿದೆ. ಸದ್ಯ ಬಿಬಿಎಂಪಿ, ನಗರ ಸಭೆ ಪುರಸಭೆ ವ್ಯಾಪ್ತಿಯಲ್ಲಿ 6.06 , ಬಿಡಿಎ ಹಾಗೂ ರೆವಿನ್ಯೂ ವ್ಯಾಪ್ತಿಯಲ್ಲಿ 6.65 ಸೈಟ್ ನೋಂದಣಿ ಶುಲ್ಕ ಇದೆ.

Published On - 12:04 pm, Tue, 13 June 23