Ghar Wapsi: ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿದ್ದ ತುಮಕೂರು ಅರ್ಚಕ ಮುಂಜಿಗೆ ಹೆದರಿ ಮರಳಿಬಂದ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Aug 21, 2022 | 10:47 AM

ಹೆಸರು ಬದಲಿಸಿಕೊಂಡು ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದ ಚಂದ್ರಶೇಖರಯ್ಯ, ಮುಂಜಿಗೆ ಹೆದರಿ ‘ಘರ್ ವಾಪ್ಸಿ’ (ಮರಳಿ ಹಿಂದೂ ಧರ್ಮಕ್ಕೆ) ಮಾಡಿದರು.

Ghar Wapsi: ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿದ್ದ ತುಮಕೂರು ಅರ್ಚಕ ಮುಂಜಿಗೆ ಹೆದರಿ ಮರಳಿಬಂದ
ಇಸ್ಲಾಂ ಧರ್ಮದಿಂದ ಮತ್ತೆ ಹಿಂದೂ ಧರ್ಮಕ್ಕೆ ಬಂದ ಅರ್ಚಕ ಚಂದ್ರಶೇಖರಯ್ಯ
Follow us on

ತುಮಕೂರು: ಪತ್ರಿಕೆಗಳಲ್ಲಿ ಪ್ರಕಟಣೆ ಕೊಟ್ಟು ಅಧಿಕೃತವಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿದ್ದ ವ್ಯಕ್ತಿಯೊಬ್ಬ ಮುಂಜಿಗೆ ಹೆದರಿ ಮರಳಿ ಹಿಂದೂ ಧರ್ಮಕ್ಕೆ ಬಂದಿರುವ ಘಟನೆ ತಾಲ್ಲೂಕಿನ ಹಿರೇಹಳ್ಳಿಯಲ್ಲಿ ನಡೆದಿದೆ. ಗ್ರಾಮದ ಓಂಕಾರೇಶ್ವರ ದೇವಸ್ಥಾನದ ಅರ್ಚಕರಾಗಿದ್ದ ಎಚ್.ಆರ್.ಚಂದ್ರಶೇಖರಯ್ಯ ಅವರು ಮುಬಾರಕ್ ಪಾಷಾ ಎಂದು ಹೆಸರು ಬದಲಿಸಿಕೊಂಡು ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದರು. ಬಳಿಕ ಮುಂಜಿಗೆ ಹೆದರಿ ‘ಘರ್ ವಾಪ್ಸಿ’ (ಮರಳಿ ಹಿಂದೂ ಧರ್ಮಕ್ಕೆ) ಮಾಡಿದರು. ಸಕ್ಕರೆ ಕಾಯಿಲೆ ಇರುವುದರಿಂದ ಮುಂಜಿ ಮಾಡಿಸಿಕೊಳ್ಳಲು ಆಗುವುದಿಲ್ಲ. ಮುಂಜಿ ಮಾಡಿದರೆ ಮಾತ್ರ ಮುಸ್ಲಿಮರಲ್ಲಿ ಸರಿಯಾಗಿ ಶವ ಸಂಸ್ಕಾರ ಮಾಡುವುದು ಎಂದು ಚಂದ್ರಶೇಖರಯ್ಯ ತಿಳಿಸಿದರು. ಮುಸ್ಲಿಂ ಸಮುದಾಯದವರೇ ಹೆಚ್ಚಾಗಿರುವ ಪ್ರದೇಶದಲ್ಲಿ ಮನೆ ಕಟ್ಟಿಕೊಂಡಿದ್ದ ಚಂದ್ರಶೇಖರಯ್ಯ, ತುಮಕೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಮುಖಂಡ ತನ್ವಿರ್ ಜೊತೆ ಹೆಚ್ಚಿನ ಒಡನಾಟ ಇರಿಸಿಕೊಂಡಿದ್ದಾರೆ. ಕೊನೆಗೆ ತನ್ವಿರ್ ಅವರಿಗೆ ಸೇರಿದ ಮಸೀದಿಗೇ ಹೋಗಿ ಮತಾಂತರವಾಗಿದ್ದರು.

ಅರ್ಚಕ ಮತಾಂತರವಾಗಿರುವ ಸುದ್ದಿ ತಿಳಿದ ತಕ್ಷಣ ಮಾಜಿ ಸಚಿವ ಸೊಗಡು ಶಿವಣ್ಣ ಸ್ಥಳಕ್ಕೆ ಭೇಟಿ ನೀಡಿ, ಮರಳಿ ಹಿಂದೂ ಧರ್ಮಕ್ಕೆ ಬರುವಂತೆ ಚಂದ್ರಶೇಖರಯ್ಯ ಅವರ ಮನವೊಲಿಸಲು ಯತ್ನಿಸಿದ್ದರು. ಸೊಗಡು ಶಿವಣ್ಣ ಅವರ ಮಾತಿಗೆ ಬೆಲೆಕೊಡುವುದರ ಜೊತೆಗೆ ಮುಂಜಿಗೆ ಅಂಜಿ ತಾನು ವಾಪಸ್ ಬಂದಿದ್ದೇನೆ ಎಂದು ಚಂದ್ರಶೇಖರ್ ಹೇಳಿದರು. ಅಣ್ಣತಮ್ಮಂದಿರರ ನಡುವಿನ ಆಸ್ತಿ ಜಗಳದಿಂದ ಬೇಸತ್ತಿದ್ದ ಚಂದ್ರಶೇಖರ್ ನಮ್ಮವರು ಯಾರೂ ಸಹಾಯಕ್ಕೆ ಬರುವುದಿಲ್ಲ ಎಂದು ನೊಂದಿದ್ದರು. ಇದೇ ಮನಸ್ಥಿತಿಯಲ್ಲಿ ಮತಾಂತರ ಆಗಲು ಮುಂದಾಗಿದ್ದರು.

‘ಸ್ವ-ಇಚ್ಛೆಯಿಂದ ಇಸ್ಲಾಂ ಧರ್ಮಕ್ಕೆ ಮತಾಂತರವಾಗುತ್ತಿದ್ದೇನೆ’ ಎಂದು ಆಗಸ್ಟ್​ 18ರಂದು ಚಂದ್ರಶೇಖರಯ್ಯ ಪತ್ರಿಕೆಗಳಲ್ಲಿ ಜಾಹೀರಾತು ನೀಡಿದ್ದರು. ಇದೀಗ ಮನಸ್ಸು ಬದಲಿಸಿಕೊಂಡು ಹಿಂದೂ ಧರ್ಮಕ್ಕೆ ಮರಳಿ ಬಂದಿರುವ ಅವರು ‘ಮುಂದೆಯೂ ಮತಾಂತರಕ್ಕೆ ಯತ್ನಿಸುವುದಿಲ್ಲ’ ಎಂದು ಹೇಳಿದ್ದಾರೆ.

ಏನಿದು ಮುಸ್ಲಿಂ ಮುಂಜಿ?

ಇಸ್ಲಾಂನ ಸುನ್ನತಿ ಪ್ರಕ್ರಿಯೆಯನ್ನು ಕರ್ನಾಟಕದಲ್ಲಿ ಮುಂಜಿ ಎಂದು ಕರೆಯಲಾಗುತ್ತಿದೆ. ಧಾರ್ಮಿಕ ರಿವಾಜುಗಳ ಪ್ರಕಾರ, ಪುರುಷರ ಶಿಶ್ನದ ಮುಂದೊಗಲನ್ನು ಭಾಗಶಃ ಅಥವಾ ಸಂಪೂರ್ಣವಾಗಿ ತೆಗೆಯುವ ಪ್ರಕ್ರಿಯೆ ಇದು. ಮುಸ್ಲಿಮರು ಇದನ್ನು ನೈರ್ಮಲ್ಯ ಮತ್ತು ಶುಚಿತ್ವದ (ತಾಹರ) ಭಾಗವಾಗಿ ಪರಿಗಣಿಸುತ್ತಾರೆ. ಹೊಸದಾಗಿ ಮತಾಂತರಗೊಂಡವರನ್ನು ಈ ವಿಧಿಗೆ ಒಳಪಡಿಸುವುದು ವಾಡಿಕೆಯಾಗಿದೆ.