ತುಮಕೂರು ಡಿಸಿ ಕಚೇರಿಯಲ್ಲಿ ಕೆಲಸ ಕೊಡಿಸುವುದಾಗಿ ವಂಚನೆ: ಪೊಲೀಸ್ ವಶಕ್ಕೆ ಮಹಿಳೆ

ಮೊಸ ಮಾಡುವ ಹೆಂಗಸಿಗೆ ನಿರುದ್ಯೋಗಿ ಯುವಕರೇ ಟಾರ್ಗೆಟ್. ಡಿಸಿ ಕಚೇರಿಯಲ್ಲಿ ಡಿಸಿ ಪಿಎ, ಎಡಿಸಿ ಪಿಎ ಹಾಗೂ ಎಸಿ ಪಿಎ ಇಷ್ಟೇ ಅಲ್ಲದೇ ಮುಜರಾಯಿ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚಿಸಿದ ಘಟನೆ ತುಮಕೂರಿನಲ್ಲಿ ನಡೆದಿದೆ.

  • ಮಹೇಶ್
  • Published On - 22:31 PM, 23 Feb 2021
ತುಮಕೂರು ಡಿಸಿ ಕಚೇರಿಯಲ್ಲಿ ಕೆಲಸ ಕೊಡಿಸುವುದಾಗಿ ವಂಚನೆ: ಪೊಲೀಸ್ ವಶಕ್ಕೆ ಮಹಿಳೆ
ಸೌಮ್ಯ ಅಲಿಯಾಸ್ ಲಾವಣ್ಯ ಗೌಡ

ತುಮಕೂರು: ಯಾರಾದರೂ ಕೆಲಸ ಕೊಡಿಸುತ್ತೇನೆ ಎಂದು ಹಣ ಕೇಳಿದರೆ ಈಗಲೇ ಎಚ್ಚೆತ್ತುಕೊಳ್ಳಿ ಏಕೆಂದರೆ ಕೆಲಸ ಕೊಡಿಸುತ್ತೇನೆ ಎಂದು ಮೋಸ ಮಾಡುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಈ ರೀತಿ ಮೋಸ ಮಾಡಿದ ಘಟನೆಯೊಂದು ಸದ್ಯ ಬೆಳಕಿಗೆ ಬಂದಿದ್ದು, ತುಮಕೂರಿನ ಡಿಸಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಕಚೇರಿಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ವಂಚಿಸಿದ್ದಾಳೆ.

ಈ ರೀತಿ ಮೊಸ ಮಾಡುವ ಹೆಂಗಸಿಗೆ ನಿರುದ್ಯೋಗಿ ಯುವಕರೇ ಟಾರ್ಗೆಟ್. ಡಿಸಿ ಕಚೇರಿಯಲ್ಲಿ ಡಿಸಿ ಪಿಎ, ಎಡಿಸಿ ಪಿಎ ಹಾಗೂ ಎಸಿ ಪಿಎ ಇಷ್ಟೇ ಅಲ್ಲದೇ ಮುಜರಾಯಿ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚಿಸಿದ ಘಟನೆ ತುಮಕೂರಿನಲ್ಲಿ ನಡೆದಿದೆ.

ಬೆಂಗಳೂರಿನ ಮಾದನಾಯಕನಹಳ್ಳಿ ನಿವಾಸಿಯಾದ ಸೌಮ್ಯ ಅಲಿಯಾಸ್ ಲಾವಣ್ಯ ಗೌಡ ವಂಚಿಸಿದ ಮಹಿಳೆಯಾಗಿದ್ದು, ಈಕೆ ಕಳೆದ ಒಂದು ವರ್ಷದಿಂದ ತುಮಕೂರಿನ ಡಿಸಿ ಕಚೇರಿಯಲ್ಲಿ ಆಧಾರ್ ಕಾರ್ಡ್, ಪೆನ್​ಷನ್ ಅದು ಇದು ಅಂತಾ ಜನರಿಗೆ ಕೆಲಸ ಮಾಡಿಕೊಡುತ್ತಿದ್ದರು. ಇದನ್ನು ದುರುಪಯೋಗ ಪಡಿಸಿಕೊಂಡ ಸೌಮ್ಯ, ಕೆಲವರ ಬಳಿ ಕೆಲಸ ಕೊಡಿಸುವುದಾಗಿ ನಂಬಿಸಿ ಹಣ ಪೀಕಿದ್ದಾಳೆ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರಿನ ರಶ್ಮಿ, ರಾಜೇಶ್, ತಿಮ್ಮರಾಜು ಹಾಗೂ ಸಂದೀಪ್ ಕುಮಾರ್ ಎನ್ನುವರ ಬಳಿ ಡಿಸಿ ಕಚೇರಿಯಲ್ಲಿ ಆಪ್ತ ಸಹಾಯಕರ ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷಗಟ್ಟಲೆ ಹಣ ತೆಗೆದುಕೊಂಡು ಮೋಸ ಮಾಡಿದ್ದಾಳೆ. ಅಲ್ಲದೇ ಅಂಕಪಟ್ಟಿಗಳನ್ನ ಕೂಡ ಪಡೆದಿದ್ದು, ಎಷ್ಟು ದಿನವಾದರೂ ಕೂಡ ಕೆಲಸ ಬರದಿದ್ದಾಗ ರಾಜೇಶ್ ಹಾಗೂ ಇತರರು ಡಿಸಿ ಕಚೇರಿಯಲ್ಲಿ ಹೋಗಿ ಕೇಳಿದಾಗ ಅಧಿಕಾರಿಗಳು ಯಾವುದು ಕೆಲಸ ಇಲ್ಲ, ಸರ್ಕಾರವೂ ಕೂಡ ಈ ಬಗ್ಗೆ ಕರೆ ಮಾಡಿಲ್ಲ ಎಂದಿದ್ದಾರೆ. ಆಗ ಪ್ರಕರಣ ಬೆಳಕಿಗೆ ಬಂದಿದೆ. ತಕ್ಷಣವೇ ನಾಲ್ವರು ತುಮಕೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮಹಿಳೆ ಮಾದನಾಯಕನಹಳ್ಳಿಯಿಂದ ಪ್ರತಿದಿನ ತುಮಕೂರಿನ ಡಿಸಿ ಕಚೇರಿಗೆ ಬಂದು ಅಧಿಕಾರಿಗಳ ಬಳಿ ಜನರ ಕೆಲಸ ಮಾಡಿಸಿಕೊಡುತ್ತಿದ್ದಳು. ಇದನ್ನೇ ಬಂಡವಾಳ ಮಾಡಿಕೊಂಡು ಜನರನ್ನು ಯಾಮಾರಿಸಿದ್ದಾಳೆ. ಸದ್ಯ ಬಂಧಿತಳಿಂದ ₹ 1.20 ಲಕ್ಷ ನಗದು, ಮೂಲ ಅಂಕಪಟ್ಟಿ, ಮೊಬೈಲ್ ಪೋನ್ ವಶಕ್ಕೆ ಪಡೆಯಲಾಗಿದೆ. ಇನ್ನಾದರೂ ಜನರು ಇಂತಹವರಿಂದ ದೂರ ಉಳಿಯುವುದು ಒಳ್ಳೆಯದು.

ಇದನ್ನೂ ಓದಿ: ದಿಶಾ ರವಿ ಬಂಧನ ಪ್ರಕರಣ; ಒಂದು ದಿನದ ಪೊಲೀಸ್ ಕಸ್ಟಡಿಗೆ ಒಪ್ಪಿಸಲು ಒಪ್ಪಿದ ನ್ಯಾಯಾಲಯ