Stone Crushing | ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದ ಸಚಿವ ನಿರಾಣಿ; 5 ಸಾವಿರಕ್ಕೂ ಹೆಚ್ಚು ಮಂದಿಗೆ ಉದ್ಯೋಗಾವಕಾಶ

Murugesh Nirani: ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಮದ್ದಕ್ಕನಹಳ್ಳಿ ಗ್ರಾಮದ ಕಲ್ಲು ಕುಟಿಗರ ಸಹಕಾರ ಸಂಘಕ್ಕೆ ಗ್ರೇ ಗ್ರಾನೈಟ್ ಕಲ್ಲು ಗಣಿ ನಡೆಸಲು ಸಚಿವ ಸಂಪುಟದಲ್ಲಿ ಅನುಮತಿ ನೀಡಲಾಗಿದೆ. ಇದರಿಂದಾಗಿ ಸುಮಾರು ಐದು ಸಾವಿರಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಲಭಿಸಲಿದೆ. Stone Crushing |

  • TV9 Web Team
  • Published On - 16:59 PM, 20 Feb 2021
Stone Crushing | ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದ ಸಚಿವ ನಿರಾಣಿ; 5 ಸಾವಿರಕ್ಕೂ ಹೆಚ್ಚು ಮಂದಿಗೆ ಉದ್ಯೋಗಾವಕಾಶ
ಸಚಿವ ಮುರುಗೇಶ್ ನಿರಾಣಿ

ಬೆಂಗಳೂರು: ಇಲಾಖೆಯಲ್ಲಿ ಹೊಸ ಹೊಸ ಸುಧಾರಣೆಗಳನ್ನು ಜಾರಿ ಮಾಡುತ್ತಿರುವ ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಇದೀಗ ಸಾವಿರಾರು ಜನರಿಗೆ ಆಶ್ರಯ ಒದಗಿಸುವ ಗ್ರಾನೈಟ್ ಕಲ್ಲು ಗಣಿ ಗುತ್ತಿಗೆಯನ್ನು ಹರಾಜು ರಹಿತವಾಗಿ ನೀಡಿ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಚಿವ ನಿರಾಣಿಯವರ ಸತತ ಪರಿಶ್ರಮದ ಫಲವಾಗಿ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕಲ್ಲು ಗಣಿ ಗುತ್ತಿಗೆಗೆ ಕೊನೆಗೂ ಚಾಲನೆ ಸಿಕ್ಕಿದೆ.

ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಮದ್ದಕ್ಕನಹಳ್ಳಿ ಗ್ರಾಮದ ಕಲ್ಲು ಕುಟಿಗರ ಸಹಕಾರ ಸಂಘಕ್ಕೆ (ಸರ್ವೆ ನಂ.12 12.20 ಎಕರೆ) ಪ್ರದೇಶದಲ್ಲಿ ಗ್ರೇ ಗ್ರಾನೈಟ್ ಕಲ್ಲು ಗಣಿ ನಡೆಸಲು ಸಚಿವ ಸಂಪುಟದಲ್ಲಿ ಅನುಮತಿ ನೀಡಲಾಗಿದೆ. ಇದರಿಂದಾಗಿ ಸುಮಾರು ಐದು ಸಾವಿರಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಲಭಿಸಲಿದ್ದು, ಅವರ ಕುಟುಂಬಕ್ಕೂ ಪ್ರತ್ಯೇಕವಾಗಿ ಹಾಗೂ ಪರೋಕ್ಷವಾಗಿ ಆಶ್ರಯ ಸಿಗಲಿದೆ.

ಕಲ್ಲು ಕುಟಿಗರ ಸಹಕಾರ ಸಂಘಕ್ಕೆ ಸಾರ್ವಜನಿಕ ಹಿತದೃಷ್ಟಿಯಿಂದ (ಕರ್ನಾಟಕ ಉಪಖನಿಜ ರಿಯಾಯಿತಿ ನಿಯಮಗಳು, 1994ರ ನಿಯಮ 56ರಡಿ ವಿಶೇಷ ಪ್ರಕರಣವೆಂದು) ಪರಿಗಣಿಸಿ ಹರಾಜು ರಹಿತವಾಗಿ ಮಂಜೂರಾತಿ ಮಾಡಲು ಶುಕ್ರವಾರ ನಡೆದ ಸಂಪುಟ ಸಭೆ ಒಮ್ಮತದ ತೀರ್ಮಾನ ಕೈಗೊಂಡಿದೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ನೋಂದಣಿ ಮಾಡಿಸಿಕೊಳ್ಳಲಾಗದ ಸ್ಥಿತಿಯಲ್ಲಿದ್ದ ಈ ಸಂಘಕ್ಕೆ ಮಾನವೀಯತೆಯ ದೃಷ್ಟಿಯಿಂದ ಹರಾಜು ರಹಿತವಾಗಿ ಮಂಜೂರು ಮಾಡಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಜನ ಸ್ನೇಹಿ ಎಂಬುದನ್ನು ಸಚಿವ ನಿರಾಣಿ  ಸಾಬೀತು ಮಾಡಿದ್ದಾರೆ.

ಅಧಿಕಾರ ಸ್ವೀಕರಿಸಿದ ಮೊದಲ ದಿನದಿಂದಲೂ ಜಡ್ಡುಗಟ್ಟಿರುವ ವ್ಯವಸ್ಥೆಗೆ ಮುಕ್ತಿ ಹಾಡಲು ಮುಂದಾಗಿರುವ ನಿರಾಣಿ ಈ ಹಿಂದೆ ಇದೇ ಇಲಾಖೆಯ ಸಚಿವರುಗಳು ನಿರ್ಲಕ್ಷ್ಯ ಮಾಡಿದ್ದ ಕಡತಗಳನ್ನು ವಿಲೇವಾರಿ ಮಾಡಿ ಇಲಾಖೆಯನ್ನು ಜನಾನುರಾಗಿ ಮಾಡುವತ್ತ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.

ನಿರ್ಲಕ್ಷ್ಯ ಮಾಡಿದ್ದ ಹಿಂದಿನ ಸಚಿವರು
ವಾಸ್ತವವಾಗಿ ಇದು ಎಂದೋ ಆಗಬೇಕಾಗಿದ್ದ ಕೆಲಸವಾಗಿತ್ತು. ಆದರೆ ಈ ಹಿಂದೆ ಇದೇ ಇಲಾಖೆಯ ಸಚಿವರಾಗಿದ್ದ ಕೆಲವರು ಉದಾಸೀನ ತೋರಿದ್ದರಿಂದ ನೆನೆಗುದಿದೆ ಬಿದ್ದಿತ್ತು. ಮದ್ದಕ್ಕನಹಳ್ಳಿ ಕಲ್ಲು ಕುಟಿಗರ ಸಹಕಾರ ಸಂಘಕ್ಕೆ ಕಲ್ಲು ಗಣಿ ಗುತ್ತಿಗೆಯನ್ನು ಮಂಜೂರು ಮಾಡಬೇಕೆಂಬ ಪ್ರಸ್ತಾವನೆ ಹಲವು ವರ್ಷಗಳಿಂದ ಇಲಾಖೆಯ ಹಂತದಲ್ಲೇ ನೆನೆಗುದಿಗೆ ಬಿದ್ದಿತ್ತು. ಇದರ ಬಗ್ಗೆ ಸವಿಸ್ತಾರವಾಗಿ ಅಧ್ಯಯನ ನಡೆಸಿದ ಸಚಿವರು, ಅಧಿಕಾರಿಗಳು ಹಾಗೂ ಸಂಬಂಧ ಪಟ್ಟವರ ಜೊತೆಗೆ ಚರ್ಚೆಸಿ ಇದಕ್ಕೊಂದು ಪರಿಹಾರ ಒದಗಿಸಲೇಬೇಕು ಎಂಬ ದೃಢ ಸಂಕಲ್ಪ ಮಾಡಿದ ಪರಿಣಾಮ ಇಂದು ಕಾರ್ಯರೂಪಕ್ಕೆ ಬಂದಿದೆ.

ಸಂಘಕ್ಕೆ 1995 ರಿಂದ ಜನರಿಗೆ ಬರುವಂತೆ 5 ವರ್ಷಗಳ ಅವಧಿಗೆ ಗಣಿ ಗುತ್ತಿಗೆಯನ್ನು ಮಂಜೂರು ಮಾಡಿ ಪುನಃ 20 ವರ್ಷಗಳ ಅವಧಿಗೆ ನವೀಕರಿಸಲಾಗಿತ್ತು. ಇದಾದ ಬಳಿಕ ಸಂಘವು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಕಾರಣ ನಿಯಮದಂತೆ ನಾಲ್ಕು ತಿಂಗಳ ಅವಧಿಯೊಳಗೆ ನೋಂದಣಿ ಮಾಡಿಸಿಕೊಂಡಿರಲಿಲ್ಲ. ಈ ಕಾರಣದಿಂದಾಗಿ ಉಪನೋಂದಣಾಧಿಕಾರಿಗಳು 2015 ರ ಡಿಸೆಂಬರ್ 29ರಂದು ನೋಂದಣಿ ಮಾಡಲು ಅವಕಾಶವಿಲ್ಲವೆಂದು ಹೇಳಿದ್ದರು. ಬಳಿಕ ನೋಂದಣಿ ಮಾಡಿಸಿಕೊಳ್ಳಲು ಸಂಘವು 2015 ರ ಡಿಸೆಂಬರ್ 29ರಂದು ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು.

ಸಂಘದ ಈ ಪ್ರಸ್ತಾವನೆಯ ಅಭಿಪ್ರಾಯ ಕೋರಿ ಕಾನೂನು ಇಲಾಖೆಗೆ ಸಲ್ಲಿಸಲಾಗಿತ್ತು. ನಂತರ ಕಾನೂನು ಇಲಾಖೆಯು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಆಡಳಿತಾತ್ಮಕ ನಿರ್ಣಯ ಕೈಗೊಳ್ಳುವಂತೆ ಸಲಹೆ ನೀಡಿ ಈ ಗಣಿ ಗುತ್ತಿಗೆಯನ್ನು ಸದರಿ ಸಂಘಕ್ಕೆ ನೀಡುವುದರಿಂದ ಆರ್ಥಿಕ ಹೊರಯಾಗುವುದಿಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.

ಪುನ: ಗುತ್ತಿಗೆಯನ್ನು ಸಂಘಕ್ಕೆ ಮರು ಮಂಜೂರು ಮಾಡಲು ಅಂದಿನ ಸಚಿವರು ಸೂಚಿಸಿದ್ದರು. 11 ಸಂಘವು 1995 ರಿಂದ ಸ್ವಾಧೀನಕ್ಕೆ ನೀಡಲು ಕೋರಿದ್ದು, ಆದರೆ ಹಿಂದಿನ ಸರ್ಕಾರದ ಪ್ರಧಾನ ಕಾರ್ಯದರ್ಶಿಯವರು ನಿಯಮಾವಳಿಗಳ ಪ್ರಕಾರ ಹಿಂದಿನ ದಿನಾಂಕದಿಂದ ಅನುಮತಿ ನೀಡಲು ಸಾಧ್ಯವಿಲ್ಲ ಎಂದಿದ್ದರು. ಆದರೆ 2017 ತಿದ್ದುಪಡಿ ನಿಯಮ ಜಾರಿಯಾದ ನಂತರ ಮರು ಮಂಜೂರಾತಿಗೆ ಅವಕಾಶವಿರುತ್ತದೆ. ಆದ್ದರಿಂದ ಸದರಿ ಗಣಿ ಗುತ್ತಿಗೆಯನ್ನು ರದ್ದುಪಡಿಸಿ ಹರಾಜು ಮೂಲಕ ವಿಲೇವಾರಿ ಮಾಡಲು ಟಿಪ್ಪಣಿ ಮಂಡಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಸಚಿವರ ಅಭಿಪ್ರಾಯ ಭಿನ್ನವಾಗಿದ್ದರಿಂದ ಕಡತವನ್ನು ಮುಂದಿನ ನಿರ್ಣಯಕ್ಕೆ ಮುಖ್ಯ ಕಾರ್ಯದರ್ಶಿಯವರಿಗೆ ಸಲ್ಲಿಸಲಾಗಿತ್ತು.

2018 ರ ಸೆಪ್ಟೆಂಬರ್ 20 ರ ಸಚಿವ ಸಂಪುಟ ಸಭೆಯ ಪ್ರಸ್ತಾವನೆಯನ್ನು ಪರಿಶೀಲಿಸಿ ಅಡ್ವೊಕೇಟ್ ಜನರಲ್ ರವರು 2019 ಫೆಬ್ರವರಿ 15 ರಂದು ನೀಡಿದ ಅಭಿಪ್ರಾಯದಲ್ಲಿ ಸದರಿ ಕಲ್ಲು ಗಣಿ ಗುತ್ತಿಗೆಯನ್ನು ಮರು ಮಂಜೂರು ಮಾಡಬಹುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: Corona Virus: ಕರ್ನಾಟಕದಲ್ಲಿ ಲಾಕ್​ಡೌನ್​ ಮಾಡುವ ಚಿಂತನೆ ಇಲ್ಲ; ಸಚಿವ ಡಾ.ಕೆ. ಸುಧಾಕರ್ ಸ್ಪಷ್ಟನೆ

ಇದನ್ನೂ ಓದಿ: Pogaru 1st Day Collection: ಧ್ರುವ ಸರ್ಜಾ ನಟನೆಯ ಪೊಗರು ಮೊದಲ ದಿನದ ಗಳಿಕೆ ಎಷ್ಟು ಗೊತ್ತಾ?