ಆತ್ಮಗಳಿಗೆ ಪಿತೃ ಸ್ಥಾನ ಕೊಡಿಸುವ ‘ಕಾಲೆ ಕೋಲ’ ಆಚರಣೆ; ಏನಿದರ ವಿಶೇಷತೆ?

ಬದುಕಿದ್ದಾಗ ಹಿರಿಯರಿಗೆ ಗೌರವ ಕೊಡುವುದು ನಮ್ಮ ಸಂಸ್ಕಾರ. ಸತ್ತ ನಂತರವೂ ಅವರ ಆತ್ಮಗಳಿಗೆ ಸದ್ಗತಿ ಕೊಡಿಸುವುದು ನಮ್ಮ ಸಂಸ್ಕೃತಿ. ದೇಹದಿಂದ ಆತ್ಮ ದೂರವಾದರೂ ಮನೆ ಮತ್ತು ಕುಟುಂಬದ ಮೇಲಿನ ಮೋಹ ಹೋಗುವುದಿಲ್ಲವಂತೆ.

ಆತ್ಮಗಳಿಗೆ ಪಿತೃ ಸ್ಥಾನ ಕೊಡಿಸುವ ‘ಕಾಲೆ ಕೋಲ’ ಆಚರಣೆ; ಏನಿದರ ವಿಶೇಷತೆ?
ಕಾಲೆ ಕೋಲ ಆತ್ಮಗಳಿಗೆ ಪಿತೃ ಸ್ಥಾನ ಕೊಡಿಸುವ ಅಪರೂಪದ ಆಚರಣೆ
Edited By:

Updated on: Dec 12, 2021 | 11:04 AM

ಉಡುಪಿ: ತುಳುನಾಡ ಜನರು ದೇವರ ಹರಕೆಯಾದರೂ ಬಾಕಿ ಇಟ್ಟಾರು, ಆದರೆ ಪಿತೃಗಳ ಆರಾಧನೆಯಲ್ಲಿ ಯಾವುದೇ ಅಸಡ್ಡೆ ತೋರಲ್ಲ. ಕುಟುಂಬದ ಹಿರಿಯರು ಸತ್ತಾಗ, ಅವರ ಆತ್ಮ ಅಷ್ಟೊಂದು ಸುಲಭದಲ್ಲಿ ಮನೆ ಬಿಟ್ಟು ಹೋಗಲು ಒಪ್ಪೋದಿಲ್ಲ ಎಂಬ ನಂಬಿಕೆ ಜನರಿಗಿದೆ. ಆಗ ಸ್ವತ: ಬಂಟ ದೈವಗಳೇ ಬಂದು ಆ ಆತ್ಮಗಳಿಗೆ ಪಿತೃ ಸ್ಥಾನ ಕೊಡಿಸುವ ಅಪರೂಪದ ಆಚರಣೆಯೊಂದು ಕರಾವಳಿಯಲ್ಲಿದೆ. ಅದುವೇ ‘ಕಾಲೆ ಕೋಲ’.

ಬದುಕಿದ್ದಾಗ ಹಿರಿಯರಿಗೆ ಗೌರವ ಕೊಡುವುದು ನಮ್ಮ ಸಂಸ್ಕಾರ. ಸತ್ತ ನಂತರವೂ ಅವರ ಆತ್ಮಗಳಿಗೆ ಸದ್ಗತಿ ಕೊಡಿಸುವುದು ನಮ್ಮ ಸಂಸ್ಕೃತಿ. ದೇಹದಿಂದ ಆತ್ಮ ದೂರವಾದರೂ ಮನೆ ಮತ್ತು ಕುಟುಂಬದ ಮೇಲಿನ ಮೋಹ ಹೋಗುವುದಿಲ್ಲವಂತೆ. ಕಪ್ಪು ಮೈ ಬಣ್ಣದ ವೇಷಧಾರಿ ಆ ಮೋಹದ ಸಂಕೇತ. ಕರಾವಳಿಯ ಮನೆತನಗಳಲ್ಲಿ ಕುಟುಂಬದ ಹಿರಿಯರು ಸತ್ತಾಗ, ಈ ಅಪರೂಪದ ಆಚರಣೆ ನಡೆಯುತ್ತದೆ. ಅಪರಕ್ರಿಯೆಯ ದಿನ ಮೋಹಕ್ಕೊಳಗಾದ ಪ್ರೇತಾತ್ಮವನ್ನು ಮನೆ ಪಕ್ಕದ ಸಮಾಧಿಗೆ ಕೊಂಡೊಯ್ಯಲು ಸ್ವತ: ಬಂಟ ದೈವಗಳು ಧರೆಗಿಳಿದು ಬರುತ್ತವೆ. ಬಾಳಿ ಬದುಕಿದ ಮನೆಯನ್ನು ಬಿಟ್ಟು ಹೋಗಲು ಪ್ರೇತಾತ್ಮ ಅನುಭವಿಸುವ ಸಂಕಟ, ವೇದನೆಗಳೆಲ್ಲವೂ ನರ್ತನ ರೂಪದಲ್ಲಿ ಕಾಣಬಹುದು.

ಮನೆಯ ಪ್ರತಿಯೊಬ್ಬರನ್ನೂ ನೆನೆದು, ಹಾರೈಸಿ ಪ್ರೇತಾತ್ಮ ಮನೆಯಿಂದ ಬೀಳ್ಕೊಡುವ ಗಳಿಗೆ ಭಾವನಾತ್ಮಕವಾಗಿರುತ್ತದೆ. ದೈವಗಳ ಆರಾಧನೆಯ ಸ್ವರೂಪದಲ್ಲಿ ಕಾಲೆ ಕೋಲವಾಗಿ ಈ ಅಪರಕ್ರಿಯೆ ನಡೆಯುತ್ತದೆ. ಉಡುಪಿ ಜಿಲ್ಲೆಯ ಉಪ್ಪೂರು ಸಮೀಪದ ಉಗ್ಗೇಲುಬೆಟ್ಟಿನಲ್ಲಿ ಮನೆಯ ಹಿರಿಯಜ್ಜಿ ಸತ್ತಾಗ ಕುಟುಂಬಸ್ಥರು ಈ ಆಚರಣೆ ನಡೆಸಿದರು.

ಬಂಟ ದೈವಗಳೇ ಬಂದು ಆ ಆತ್ಮಗಳಿಗೆ ಪಿತೃ ಸ್ಥಾನ ಕೊಡಿಸುತ್ತದೆ

ಕುಟುಂಬದ ಹಿರಿಯರು ಆಯುಷ್ಯ ಪೂರ್ಣಗೊಂಡು ಸತ್ತಾಗ ಈ ವಿಧಿ ನಡೆಯುತ್ತದೆ. ಅದರಲ್ಲೂ ಅನಾರೋಗ್ಯ ಪೀಡಿತರಾಗಿ ನರಳಿ ಸತ್ತಾಗ, ಅವರ ಮೇಲಿನ ಪ್ರೀತಿ ಹಾಗೂ ಸದ್ಗತಿಗಾಗಿ ಈ ದೈವಾರಾಧನೆ ನಡೆಸಲಾಗುತ್ತದೆ. ತುಳುನಾಡಿನ ಮೂಲ ಆಚರಣೆಯಲ್ಲಿ ಸತ್ತ ನಂತರದ ಸ್ವರ್ಗ-ನರಕದ ಯಾವುದೇ ಕಲ್ಪನೆಯಿಲ್ಲ. ಏನಿದ್ದರೂ ಪಿತೃಗಳನ್ನು ಜೊತೆಗೆನೇ ಇರಿಸಿಕೊಂಡು ಪೂಜಿಸುವುದು ಪದ್ಧತಿ. ಅದಕ್ಕೆ ಅನುಸಾರವಾಗಿ ಪ್ರೇತಾತ್ಮಕ್ಕೆ ಪಿತೃಸ್ಥಾನ ನೀಡಲು, ಸಮಾಧಿಯಲ್ಲಿ ನೆಲೆಯಾಗಿಸಲು ಈ ಸಂಪ್ರದಾಯ ಪಾಲಿಸಲಾಗುತ್ತದೆ. ಬಂಟ ದೈವಗಳು ಬಂದು ಆತ್ಮವನ್ನು ಕರೆದೊಯ್ಯುವ ಅಪರೂಪದ ಸನ್ನಿವೇಷ ಕುಣಿತದ ರೂಪದಲ್ಲಿ ಪ್ರಸ್ತುತಗೊಳ್ಳುತ್ತದೆ. ಪಿತೃಗಳು ಸಂತುಷ್ಟರಾಗಿದ್ದರೆ, ಆ ಕುಟುಂಬಕ್ಕೆ ಏಳಿಗೆಯಾಗುತ್ತದೆ. ಹಾಗಾಗಿ ಸತ್ತು 13 ನೇ ದಿನಕ್ಕೆ ಈ ಆಚರಣೆ ನಡೆಸಲಾಗುತ್ತದೆ.

ತನ್ನ ಕುಟುಂಬದ ಮುಂದಿನ ತಲೆಮಾರುಗಳು ತನ್ನನ್ನು ಮರೆಯಬಾರದು ಎನ್ನುವುದೇ ಬದುಕಿದ್ದಾಗ ಮನುಷ್ಯನಿಗಿರುವ ಅತಿದೊಡ್ಡ ಆಸೆ. ಹಿರಿಯರ ಆಸೆ ತೀರಿಸುವ ಕಾಲೆ ಕೋಲ ನಿಜಕ್ಕೂ ಜನಪದದ ಅದ್ಭುತ ಸಂಸ್ಕಾರ.

ವರದಿ: ಹರೀಶ್ ಪಾಲೆಚ್ಚಾರ್

ಇದನ್ನೂ ಓದಿ

Sydney Diary : ‘ನಾನೇನಿದ್ದರೂ ಷ. ಶೆಟ್ಟರ್, ಎಂ. ಎಂ. ಕಲಬುರ್ಗಿಯಂತಹ ಸಂಶೋಧಕರ ಮಟ್ಟದ ಪ್ರಶ್ನೆಗಳಿಗೆ ಮಾತ್ರ ಉತ್ತರಿಸಬೇಕು ಅಂತಂದುಕೊಂಡಿದ್ದೆ’

ಮಕ್ಕಳ ಹಾಜರಾತಿ ಹೆಚ್ಚಳಕ್ಕೆ ಶಿಕ್ಷಕರಿಂದ ಹೊಸ ಪ್ರಯತ್ನ, ಅಚ್ಚರಿಯಂತೆ ಮಕ್ಕಳ ಹಾಜರಾತಿ ಏರಿಕೆ