ಉಡುಪಿ ಜಿಲ್ಲೆಯಲ್ಲಿ ಮಳೆ ಕಡಿಮೆ, ಬರಿದಾಗುತ್ತಿದೆ ಜೀವ ನದಿ ವಾರಾಹಿ, ಮುಂದಿನ ದಿನಗಳು ಹೇಗಪ್ಪಾ ಎಂಬುದು ಸ್ಥಳೀಯರ ಆತಂಕದ ಪ್ರಶ್ನೆ
ಒಟ್ಟಾರೆಯಾಗಿ ಉಡುಪಿ ಜಿಲ್ಲೆಯಲ್ಲಿ ಕಡಿಮೆ ಮಳೆಯಾದ ಹಿನ್ನೆಲೆಯಲ್ಲಿ ಕೃಷಿಕರು ಮತ್ತು ಕುಡಿಯುವ ನೀರಿಗಾಗಿ ಆಲೋಚಿಸುವಂತೆ ಮಾಡಿದೆ. ಇನ್ನು ಜೀವನದಿ ವಾರಾಹಿ ಅವಧಿಗೂ ಮೊದಲೇ ಬತ್ತಿ ಹೋದರೆ ಮುಂದಿನ ದಿನಗಳು ಹೇಗೆ ಎನ್ನುವುದು ಸ್ಥಳೀಯರ ಆತಂಕದ ಪ್ರಶ್ನೆಯಾಗಿದೆ.
ಈ ಬಾರಿ ಮಳೆಯ ಪ್ರಮಾಣ (Udupi Rain) ಹಿಂದೆಂದಿಗಿಂತಲೂ ಅತ್ಯಂತ ಕಡಿಮೆಯಾಗಿ ಬಿದ್ದಿರುವ ಹಿನ್ನೆಲೆಯಲ್ಲಿ ಬಹುತೇಕ ನದಿಗಳು ಅವಧಿಗೆ ಮುನ್ನ ಬತ್ತಿ ಹೋಗುತ್ತಿವೆ. ಅದರಲ್ಲೂ ಅವಳಿ ತಾಲೂಕುಗಳಿಗೆ ಜೀವನದಿಯಾಗಿರುವ ವರಾಹಿ ನದಿ ಈ ಬಾರಿ ಅವಧಿಗೂ ಮುಂಚೆಯೇ ಬರಿದಾಗುವ ಸಾಧ್ಯತೆ ಎದುರಾಗಿದೆ. ಇನ್ನು ವಾರಾಹಿ ನದಿಯನ್ನ (Varahi river) ಗುರಿಯಾಗಿಸಿಕೊಂಡು ಅನೇಕ ನೀರಿನ ಯೋಜನೆಗಳನ್ನು ತರುತ್ತಿರುವುದು ಸ್ಥಳೀಯರ ಬೇಸರಕ್ಕೂ ಕಾರಣವಾಗಿದೆ. ಹೌದು ಉಡುಪಿ ಜಿಲ್ಲೆಯ ಬೈಂದೂರು ಮತ್ತು ಕುಂದಾಪುರ ತಾಲೂಕಿನ ಜೀವನದಿ ವರಾಹಿ ಎಂದರೆ ತಪ್ಪಾಗಲಾರದು. ಎಂಬತ್ತರ ದಶಕದಲ್ಲಿ ವಾರಾಹಿ ಯೋಜನೆಯ ಹರಿವನ್ನ ಗಮನಿಸಿ ಜಿಲ್ಲೆಯ ರೈತರಿಗೆ ಮತ್ತು ಕಬ್ಬು ಬೆಳೆಗಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಾರಾಹಿ ಯೋಜನೆ ಆರಂಭವಾಗಿತ್ತು.
ಆದರೆ 30-35 ವರ್ಷ ಕಳೆದರೂ ಇದುವರೆಗೆ ವಾರಾಹಿ ಯೋಜನೆಯ ಕಾಲುವೆಗಳಲ್ಲಿ ಪರಿಪೂರ್ಣವಾಗಿ ನೀರು ಹರಿದು ಬಂದಿಲ್ಲ. ಆದರೆ ಈ ಬಾರಿ ಜಿಲ್ಲೆಯಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಮಳೆಯಾಗಿರುವ ಹಿನ್ನೆಲೆಯಲ್ಲಿ ವರಾಹಿ ನದಿಯು ಕೂಡ ಅವಧಿಗೂ ಮೊದಲು ಬತ್ತುವ ಭೀತಿ ಎದುರಾಗಿದೆ. ವರಾಹಿ ನದಿಗೆ ಶಿವಮೊಗ್ಗ ಜಿಲ್ಲೆಯ ಮಾಣಿಯಲ್ಲಿ ಅಡ್ಡಲಾಗಿ ಕಟ್ಟಲು ಕಟ್ಟಿರುವ ಅಣೆಕಟ್ಟಿನಲ್ಲಿ ಈ ಬಾರಿ ಕೇವಲ ಒಂಬತ್ತು ಟಿಎಂಸಿ ನೀರು ಶೇಖರಣೆ ಆಗಿರುವುದು ವಾರಾಹಿ ನದಿಯನ್ನ ನಂಬಿಕೊಂಡಿರುವವರಿಗೆ ಆತಂಕ ಹೆಚ್ಚಿಸಿದೆ ಎನ್ನುತ್ತಾರೆ ಸ್ಥಳೀಯರಾದ ಆವರ್ಸೆ ರತ್ನಾಕರ ಶೆಟ್ಟಿ.
ವರಾಹಿ ಯೋಜನೆ ಪ್ರಾರಂಭವಾಗಿ ಹಲವರು ವರ್ಷಗಳು ಕಳೆದರೂ ಇದುವರೆಗೆ ಹಲವಾರು ಸರಕಾರಗಳು ಬಂದರೂ ಯೋಜನೆ, ಪೂರ್ಣಗೊಂಡಿಲ್ಲ. ಇದರ ಜೊತೆಗೆ ವಾರಾಹಿ ನದಿಯನ್ನ ಇನ್ನೂ ಅನೇಕ ಯೋಜನೆಗಳಿಗೆ ಬಳಸಿಕೊಳ್ಳುತ್ತಿರುವ ವಿಚಾರವಾಗಿ ಸ್ಥಳೀಯ ಕೃಷಿಕರಿಗೆ ಸರಕಾರದ ವಿರುದ್ಧ ಅಸಮಾಧಾನವಿದೆ.
ಇದನ್ನೂ ಓದಿ: ಕಾಂತಾರ ಚಿತ್ರ ಖ್ಯಾತಿಯ ಕೋಲ ಕಟ್ಟುವ ಪಾಣಾರ ಸಮಾಜದವರಿಗೆ ಬೊಮ್ಮಾರ ಬೆಟ್ಟು ಗ್ರಾಮ ಪಂಚಾಯಿತಿಯಿಂದ ಮೋಸ
ಬತ್ತುತ್ತಿರುವ ವಾರಾಹಿ ನದಿಯನ್ನ ಅವಲಂಬಿಸಿಕೊಂಡು ಈಗಾಗಲೇ ಹಾಲಾಡಿ ಸಮೀಪದ ಬರತ್ಕಲ್ ಎನ್ನುವಲ್ಲಿಂದ ಉಡುಪಿ ನಗರಸಭೆಗೆ ನೀರು ಸರಬರಾಜು ಮಾಡುವ ಯೋಜನೆ ಚಾಲ್ತಿಯಲ್ಲಿದೆ. ಇದರ ಜೊತೆಗೆ ವಾರಾಹಿಂದಲೇ ಹೆಬ್ರಿ, ಕಾರ್ಕಳ ಹಾಗೂ ಬೆಳ್ತಂಗಡಿವರೆಗೂ ನೀರು ಸರಬರಾಜು ಮಾಡುವ ಇನ್ನೊಂದು ಯೋಜನೆ ಪ್ರಾರಂಭಿಸುವ ಲಕ್ಷಣಗಳು ಈ ಭಾಗದಲ್ಲಿ ಕಂಡು ಬರುತ್ತಿದ್ದು ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಅವಳಿ ಜಿಲ್ಲೆಗಳಲ್ಲಿ ಸುಮಾರು ಆರಕ್ಕೂ ಹೆಚ್ಚು ನದಿಗಳು ಇದ್ದರೂ ಕೂಡ ಕೇವಲ ವಾರಾಹಿ ಉದ್ದೇಶಿಸಿ ಸರಕಾರ ಯೋಜನೆಗಳನ್ನ ರೂಪಿಸಿರುವ ವಿಚಾರವಾಗಿ ಸ್ಥಳೀಯ ಕೃಷಿಕರು ಅಕ್ರೋಶಗೊಂಡಿದ್ದಾರೆ ಎನ್ನುತ್ತಾರೆ ಹೋರಾಟಗಾರ ಚಿಟ್ಟೆ ರಾಜಗೋಪಾಲ್ ಹೆಗ್ಡೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ