ವಿಶೇಷ ಚೇತನರಾಗಿಯೇ ಒಡಹುಟ್ಟಿರುವ ಉಡುಪಿಯ ಈ ಅಣ್ಣ-ತಂಗಿಯ ಉತ್ಸಾಹವನ್ನು ಯಾರೂ ಕಿತ್ತುಕೊಳ್ಳಲು ಸಾಧ್ಯವಾಗಿಲ್ಲ, ಕಲಾ ಜಗತ್ತಿನಲ್ಲಿ ಮಿಂಚುತ್ತಿದ್ದಾರೆ ಇವರು
ಜೀವನ ಎಂಬ ಮಾಯದ ನಾಟಕದಲ್ಲಿ ನಾನಾ ಸವಾಲುಗಳು ಎದುರಾಗುತ್ತವೆ. ಆದರೂ ವಿಶೇಷ ಚೇತನರಾಗಿಯೇ ಒಡಹುಟ್ಟಿರುವ ಉಡುಪಿಯ ಅಣ್ಣ-ತಂಗಿಯ ಉತ್ಸಾಹವನ್ನು ಯಾರೂ ಕಿತ್ತುಕೊಳ್ಳಲು ಸಾಧ್ಯವಾಗಿಲ್ಲ. ಅನುವಂಶಿಕ ಕಾಯಿಲೆಯಿಂದ ಬಳಲುತ್ತಿದ್ದರೂ ಗಣೇಶ್ ಮತ್ತು ಸುಮಾ ಪಂಜಿಮಾರ್ ಅವರು ಎಲ್ಲಾ ಅಡೆತಡೆಗಳನ್ನು ನಿವಾರಿಸಿ ಕಲಾ ಜಗತ್ತಿನಲ್ಲಿ ಮಿಂಚಿದ್ದಾರೆ.
ಜೀವನ ಎಂಬ ಮಾಯದ ನಾಟಕದಲ್ಲಿ ನಾನಾ ಸವಾಲುಗಳು ಎದುರಾಗುತ್ತವೆ. ಆದರೂ ವಿಶೇಷ ಚೇತನರಾಗಿಯೇ ಒಡಹುಟ್ಟಿರುವ ಉಡುಪಿಯ ಅಣ್ಣ-ತಂಗಿಯ ಉತ್ಸಾಹವನ್ನು ಯಾರೂ ಕಿತ್ತುಕೊಳ್ಳಲು ಸಾಧ್ಯವಾಗಿಲ್ಲ. ಅನುವಂಶಿಕ ಕಾಯಿಲೆಯಿಂದ ಬಳಲುತ್ತಿದ್ದರೂ ಗಣೇಶ್ ಮತ್ತು ಸುಮಾ ಪಂಜಿಮಾರ್ ಅವರು ಎಲ್ಲಾ ಅಡೆತಡೆಗಳನ್ನು ನಿವಾರಿಸಿ ಕಲಾ ಜಗತ್ತಿನಲ್ಲಿ ಮಿಂಚಿದ್ದಾರೆ.
ಗಣೇಶ್ ಕುಲಾಲ್ ಪಂಜಿಮಾರ್ (35) ಮತ್ತು ಅವರ ಸಹೋದರಿ ಸುಮಾ ಪಂಜಿಮಾರ್ (22) ಅವರು (Ganesh Kulal Panjimar-Suma Panjimar) ಕಲಾಕೃತಿಗಳನ್ನು ರಚಿಸಲು ಪೆನ್ಸಿಲ್, ಎಣ್ಣೆಗಳು ಮತ್ತು ಅಕ್ರಿಲಿಕ್‌ನಂತಹ ವಿವಿಧ ಮಾಧ್ಯಮಗಳನ್ನು ಬಳಸುವ ಕಲಾವಿದರು (artists). ಕುತೂಹಲಕಾರಿ ಸಂಗತಿಯೆಂದರೆ ಕಾಲಕ್ಕೆ ತಕ್ಕಂತೆ ಇವರಿಬ್ಬರೂ YouTube ವೀಡಿಯೊಗಳನ್ನು ನೋಡಿ, ತಮ್ಮ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ.
ಗಣೇಶ್ ಅವರು 700 ಕ್ಕೂ ಹೆಚ್ಚು ರೇಖಾಚಿತ್ರಗಳು ಮತ್ತು ವರ್ಣಚಿತ್ರಗಳನ್ನು ರಚಿಸಿದ್ದಾರೆ. ತಮ್ಮ ಆರಂಭಿಕ ಕೃತಿಗಳನ್ನು ಮೆಚ್ಚಿದವರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಸುಮಾ ಅವರ ನೆಚ್ಚಿನ ಕ್ಷೇತ್ರ ಕ್ವಿಲ್ಲಿಂಗ್. ಅವರೂ ಸಹ ಅನೇಕ ಕಲಾಕೃತಿಗಳನ್ನು ರಚಿಸಿದ್ದಾರೆ. ಒಡಹುಟ್ಟಿದವರು ಆಸ್ಟಿಯೋಜೆನೆಸಿಸ್ ಇಂಪರ್ಫೆಕ್ಟಾ (osteogenesis imperfecta -OI) ಎಂಬ ಕಾಯಿಲೆಯೊಂದಿಗೆ ಬದುಕು ನಡೆಸುತ್ತಿದ್ದಾರೆ. ಈ ಕಾಯಿಲೆಯು ಮೂಳೆಗಳನ್ನು ದುರ್ಬಲಗೊಳಿಸುತ್ತದೆ ಮತ್ತು ಮೂಳೆಗಳು ಮುರಿದುಹೋಗುವಂತೆ ಮಾಡುವ ಅನುವಂಶಿಕ ಕಾಯಿಲೆಯಾಗಿದೆ.
ಗಣೇಶ್ ಮತ್ತು ಸುಮಾ – ಉಡುಪಿಯ ಶಿರ್ವ ಸಮೀಪದ ಪಂಜಿಮರದ ನಾಗಮಣಿ ಮತ್ತು ದಿವಂಗತ ರಾಮ ಮೂಲ್ಯ ಅವರ ಮಕ್ಕಳು. ಅವರು ತಮ್ಮ ಜೀವನದುದ್ದಕ್ಕೂ ಈ ಕಾಯಿಲೆಯೊಂದಿಗೆ ಬದುಕು ನಡೆಸುತ್ತಿದ್ದಾರೆ. ಗಣೇಶ್ ಅವರು ಐದು ವರ್ಷದವರಿದ್ದಾಗ ಆಸ್ಟಿಯೋಜೆನೆಸಿಸ್ ಇಂಪರ್ಫೆಕ್ಟಾಗೆ ತುತ್ತಾದರು. ಆದರೆ ಸುಮಾ ಅವರು ಕೇವಲ ಏಳು ತಿಂಗಳ ಮಗುವಾಗಿದ್ದಾಗ ಈ ಜೆನೆಟಿಕ್ ಕಾಯಿಲೆಯನ್ನು ಹೊಂದಿದ್ದರು. ಸುಮಾಗೆ ನಡೆದಾಡಲು ಸಾಧ್ಯವಾಗದ ಕಾರಣ, ಅವಳು 6 ನೇ ತರಗತಿಯಲ್ಲಿದ್ದಾಗಲೇ ಶಾಲೆಯನ್ನು ಬಿಡಬೇಕಾಯಿತು. ಅವಳು ಇದುವರೆಗೂ ಎಂಟು ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದಾಳೆ. ಗಣೇಶ್ ಕೇವಲ 22 ಕೆಜಿ ತೂಕವಿದ್ದು, ಒಮ್ಮೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.
ಅವರಿಬ್ಬರೂ ತಮ್ಮ ಅಸಾಹಯಕ ಸ್ಥಿತಿಯ ಹೊರತಾಗಿಯೂ, ಒಡಹುಟ್ಟಿದವರಿಬ್ಬರೂ ಶಿಕ್ಷಣವನ್ನು ಪಡೆಯುವ ಮೂಲಕ, ತಮಗೆ ಉದ್ಯೋಗಗಳನ್ನು ಅರಸುವ ಮಹತ್ವಾಕಾಂಕ್ಷೆಯನ್ನು ಹೊಂದಿದ್ದರು. ಹಾಗಾಗಿ ಅವರು ಯಾವುದೆ ಕಾರಣಕ್ಕೂ ತಮ್ಮ ಶಿಕ್ಷಣ ಸ್ಥಗಿತಗೊಳ್ಳದಂತೆ ನೋಡಿಕೊಂಡರು. ಅದಕ್ಕಾಗಿ ಅವರು ತಮ್ಮ ಕೈ ಮೀರಿ ಪ್ರಯತ್ನಿಸಿದ್ದಾರೆ. ದಾನಿಯೊಬ್ಬರು ಗಣೇಶ್‌ಗೆ ಎಲೆಕ್ಟ್ರಿಕ್ ಬ್ಯಾಟರಿ ಚಾರ್ಜಿಂಗ್ ಟ್ರೈಸಿಕಲ್ ವ್ಯವಸ್ಥೆ ಮಾಡಿದ್ದಾರೆ. ಅದರಿಂದ ಅವರು ತಮ್ಮ ಬಿ.ಕಾಂ ಕೋರ್ಸ್ ಅನ್ನು ಪೂರ್ಣಗೊಳಿಸಲು ಸಾಧ್ಯವಾಗಿದೆ.
ಗಣೇಶ್ ಕಲೆಯತ್ತ ತಮ್ಮ ಪಯಣವನ್ನು ಹೇಗೆ ಪ್ರಾರಂಭಿಸಿದರು ಎಂಬುದು ನಿಜಕ್ಕೂ ಚೇತೋಹಾರಿ ಕಥೆಯಾಗಿದೆ. ಒಮ್ಮೆ ಅವರು ತಮ್ಮ ತಾಯಿಯ ಛಾಯಾಚಿತ್ರವನ್ನು ನೋಡುತ್ತಾ, ಅದನ್ನು ಕಲೆಯಲ್ಲಿ ಯಥಾವತ್ತಾಗಿ ಬಿಡಿಸಿದ್ದಾರೆ. ಅದರ ನಂತರ ಅವರ ಕೌಶಲ್ಯ ಅರಳುತ್ತಾ ಬಂತು ಎಂದು The New Indian Express ವರದಿ ಮಾಡಿದೆ.
ತಮ್ಮಲ್ಲಿರುವ ಕಲೆಯನ್ನು ಕಲಿಯಲು ಅನೇಕ ಅಭಿಮಾನಿಗಳು ತಮ್ಮ ಬಳಿಗೆ ಬಂದರೂ, ಗಣೇಶ್ ಅವರನ್ನು ನಯವಾಗಿ ತಿರಸ್ಕರಿಸಿದರು. ಕಲಾಭಿಮಾನಿಗಳಿಂದ ತಮಗೆ ಸಿಕ್ಕಿರುವ ಬೆಂಬಲವೇ ತಮಗೆ ಪ್ರೇರಣಾಶಕ್ತಿಯಾಗಿದೆ ಎಂದು ಒಡಹುಟ್ಟಿದ ವಿಶೆಷ ಚೇತನರು ದಿ ನ್ಯೂ ಸಂಡೆ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ. ಗಣೇಶ್ ಅವರು ದೇವರುಗಳು, ಗಣ್ಯ ವ್ಯಕ್ತಿಗಳು, ಪಕ್ಷಿಗಳು ಮತ್ತು ಪ್ರಾಣಿಗಳ ಹಲವಾರು ರೇಖಾಚಿತ್ರಗಳನ್ನು ರಚಿಸಿದ್ದಾರೆ. 100 ಕ್ಕೂ ಹೆಚ್ಚು ಕಲೆ ಮತ್ತು ಕರಕುಶಲ ಕೃತಿಗಳನ್ನು ರಚಿಸಿರುವ ಸುಮಾ, ಅಣ್ಣ ಗಣೇಶ್ ನನಗೆ ಸ್ಫೂರ್ತಿ ಎಂದು ಹೇಳುತ್ತಾರೆ. ಗಣೇಶ್ ಅವರನ್ನು ವಿವಿಧ ಸಂಘ ಸಂಸ್ಥೆಗಳು 44 ಕ್ಕೂ ಹೆಚ್ಚು ಬಾರಿ ಸನ್ಮಾನಿಸಿವೆ ಮತ್ತು 2021 ರಲ್ಲಿ ಉಡುಪಿ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಗಳಿಸಿದ್ದಾರೆ.
ಬೆಳಗಿನ ವೇಳೆಯಲ್ಲಿ ತಮ್ಮ ಕಲಾ ತಪಸ್ಸು ಮಾಡಲು ಇಷ್ಟಪಡುವುದಾಗಿ ಗಣೇಶ್ ಹೇಳುತ್ತಾರೆ. “ಕಲಾಕೃತಿ ರಚನೆಗೆ ಪ್ರಾಥಮಿಕವಾಗಿ ಏಕಾಗ್ರತೆಯ ಅಗತ್ಯವಿದೆ. ಕೆಲವೊಮ್ಮೆ, ವೈಫಲ್ಯಗಳೂ ಇರುತ್ತವೆ, ಆದರೆ ಏಕಾಗ್ರತೆ ಮುಖ್ಯವಾಗಿದೆ,” ಎಂದು ಅವರು ಹೇಳುತ್ತಾರೆ. ಅವರು ತಮ್ಮ ಕಲೆಗಾಗಿ ಕಚ್ಚಾ ವಸ್ತುಗಳನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡುತ್ತಾರೆ.
ಗಣೇಶ್ ತಮ್ಮ ಯೂಟ್ಯೂಬ್ ಚಾನೆಲ್ ಅನ್ನು ಹೊಂದಿದ್ದಾರೆ — ಗಣೇಶ್ ಪಂಜಿಮಾರ್ ಆರ್ಟ್ಸ್ Ganesh Panjimar Arts — ಅಲ್ಲಿ ವೀಕ್ಷಕರು ಅವರ ಪ್ರತಿಭೆ ಮತ್ತು ಸಮರ್ಪಣಾಭಾವವನ್ನು ಅರಿಯಬಹುದು. ಗಣೇಶ್ ತಮ್ಮ ಕಲಾಕೃತಿಯನ್ನು ಯೂಟ್ಯೂಬ್, ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಮತ್ತು ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಪ್ರಚಾರ ಮಾಡುತ್ತಾರೆ. ಇನ್ನು ತಂಗಿ ಸುಮಾ ಅವರು ಅಣ್ಣನ ಕೆಲಸವನ್ನು ಮೊಬೈಲ್ ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡುವ ಮೂಲಕ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಅದನ್ನು ಅಪ್‌ಲೋಡ್ ಮಾಡುವ ಮೂಲಕ ಅಣ್ಣನಿಗೆ ನೆರವಾಗುತ್ತಾರೆ.
ಈ ಒಡಹುಟ್ಟಿದವರ ವಿಶೇಷ ಕಲೆಯು ಪ್ರಪಂಚದಾದ್ಯಂತ ಮೆಚ್ಚುಗೆ ಗಳಿಸಿದೆ. ಸುಮಾ ಅವರ ರೆಸಿನ್ ಕಲಾ ಕೃತಿಗಳನ್ನು ಕೀ ಚೈನ್ ಗಳಲ್ಲಿ ಚಿತ್ರಿಸಲಾಗಿದೆ. ಇದರೊಂದಿಗೆ ಅವರು ಸಾಮಾನ್ಯ ಕೀಚೈನ್‌ಗಳನ್ನು ಮೌಲ್ಯವರ್ಧನೆಯೊಂದಿಗೆ ಆಕರ್ಷಕ ಕೃತಿಗಳಾಗಿ ಪರಿವರ್ತಿಸುತ್ತಾರೆ. ಹಾಗೆಯೆ ಅವುಗಳನ್ನು ಅತ್ಯಲ್ಪ ಬೆಲೆಗೆ ಮಾರಾಟ ಮಾಡುತ್ತಾರೆ. ಅವಳ ರೇಷ್ಮೆ ದಾರದ ಕಲೆ, ಮಣ್ಣಿನ ಕಲೆ ಮತ್ತು ಕ್ವಿಲ್ಲಿಂಗ್ ಕೃತಿಗಳು ಮಂತ್ರಮುಗ್ಧಗೊಳಿಸುತ್ತವೆ. ಸುಮಾ ಅವರಿಗೂ 20 ಬಾರಿ ಸನ್ಮಾನ ಮಾಡಲಾಗಿದೆ. ಮಂಗಳೂರು ಮೂಲದ ವೈದ್ಯ ಡಾ. ಅಣ್ಣಯ್ಯ ಕುಲಾಲ್ ಉಳ್ತೂರ್, ಒಡಹುಟ್ಟಿದ ಈ ವಿಶೇಷ ಚೇತನರ ಪ್ರಯತ್ನಗಳಿಗೆ ನೀರೆರೆಯುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ