ಅಂದು ಡ್ರಮ್ಮರ್ ಆಗಿದ್ದ ಉಡುಪಿಯ ಯುವಕ, ಈಗ ಅಥ್ಲೆಟಿಕ್ಸ್​ನ ಬಿರುಸಿನ ಓಟಗಾರ!

ಉಡುಪಿಯ ಖ್ಯಾತ ಕ್ರೀಡಾ ತರಬೇತುದಾರ ಜಹಿರ್ ಅಬ್ಬಾಸ್ ಅವರಿಂದ ತರಬೇತಿ ಪಡೆಯುತ್ತಿರುವ ಅಭಿನ್, ತನ್ನ ಮಿಂಚಿನ ವೇಗದಿಂದಾಗಿ ಕೀನ್ಯಾದ ನೈರೋಬಿಯಲ್ಲಿ ನಡೆಯಲಿರುವ ಅಂಡರ್ ಟ್ವೆಂಟಿ ಅಂತರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ.

  • ಹರೀಶ್. ಪಿ
  • Published On - 17:16 PM, 22 Feb 2021
ಅಂದು ಡ್ರಮ್ಮರ್ ಆಗಿದ್ದ ಉಡುಪಿಯ ಯುವಕ, ಈಗ ಅಥ್ಲೆಟಿಕ್ಸ್​ನ ಬಿರುಸಿನ ಓಟಗಾರ!
ಅಭಿನ್

ಉಡುಪಿ: ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಏಳು ವರ್ಷದ ಹಿಂದೆ ಅತ್ಯಂತ ಕಿರಿಯ ವಯಸ್ಸಿನ ಡ್ರಮ್ಮರ್ ಎಂದು ಖ್ಯಾತಿ ಗಳಿಸಿದ್ದ ಉಡುಪಿಯ ಅಭಿನ್ ಈಗ ಮತ್ತೊಂದು ಅಚ್ಚರಿಯ ಸಾಧನೆ ಮಾಡಿದ್ದಾನೆ. ಅಭಿನ್ ಈ ಬಾರಿ ಅಸ್ಸಾಂನ ಗುವಾಹಟಿಯಲ್ಲಿ ನಡೆದ ಅಂಡರ್ ಟ್ವೆಂಟಿ ನ್ಯಾಷನಲ್ ಅಥ್ಲೆಟಿಕ್ಸ್ ಕೂಟದ 200 ಮೀಟರ್ ರೇಸ್​ನಲ್ಲಿ ಚಿನ್ನದ ಪದಕ ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದ್ದಾನೆ. ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಅಭಿನ್, ಈಗ ಕ್ರೀಡಾಕ್ಷೇತ್ರದಲ್ಲಿಯೂ ಸಾಧನೆ ಮಾಡುವತ್ತ ಗಟ್ಟಿ ಹೆಜ್ಜೆ ಇಡುತ್ತಿದ್ದಾನೆ.

ಉಡುಪಿಯ ಅಂಬಾಗಿಲು ನಿವಾಸಿ ಭಾಸ್ಕರ ದೇವಾಡಿಗ ಅವರ ಮಗನಾದ ಅಭಿನ್ ಬಾಲ್ಯದಿಂದಲೂ ಸಂಗೀತದ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದ. ಶಿವಮಣಿ ಅವರಿಂದ ಪ್ರೇರಣೆ ಪಡೆದಿದ್ದ ಅಭಿನ್, ತನ್ನ 7ನೇ ವಯಸ್ಸಿಗೆ ಲೀಲಾ ಜಾಲವಾಗಿ ಡ್ರಮ್ ಬಾರಿಸುವ ಮೂಲಕ ಸಂಗೀತ ಪ್ರಿಯರ ಮನಸೂರೆಗೊಳಿಸಿದ್ದ. ಆದರೆ ಈ ಅಭಿನ್ ಒಳಗೆ ಒಬ್ಬ ಅಸಾಧಾರಣ ಓಟಗಾರ ಕೂಡ ಅವಿತಿದ್ದಾನೆ.

ಅಭಿನ್ ಓಟಗಾರನಾಗಿ ಸಾಧನೆ ಮಾಡಬಲ್ಲ ಎನ್ನುವುದನ್ನು ಅರಿತ ಶಾಲೆಯ ದೈಹಿಕ ಶಿಕ್ಷಕರು, ಈತನನ್ನು ಜಿಲ್ಲಾಮಟ್ಟದ ಸ್ಪರ್ಧೆಗಳಿಗೆ ತಯಾರು ಮಾಡಿದರು. ಅಲ್ಲಿಂದ ಆರಂಭವಾದ ಅಭಿನ್ ಓಟ ಈಗ ರಾಷ್ಟ್ರೀಯ ಮಟ್ಟಕ್ಕೆ ಮುಟ್ಟಿದೆ. ಭೋಪಾಲ್​ನಲ್ಲಿ ನಡೆದ ಜೂನಿಯರ್ ಫೆಡರೇಶನ್ ಕ್ರೀಡಾಕೂಟದಲ್ಲಿ ಚಿನ್ನ ಗೆಲ್ಲುವ ಮೂಲಕ ಭರವಸೆಯ ಓಟಗಾರನಾಗಿ ಹೊರಹೊಮ್ಮಿದ್ದಾನೆ. ಸದ್ಯ ಉಡುಪಿಯ ಖ್ಯಾತ ಕ್ರೀಡಾ ತರಬೇತುದಾರ ಜಹಿರ್ ಅಬ್ಬಾಸ್ ಅವರಿಂದ ತರಬೇತಿ ಪಡೆಯುತ್ತಿರುವ ಅಭಿನ್, ತನ್ನ ಮಿಂಚಿನ ವೇಗದಿಂದಾಗಿ ಕೀನ್ಯಾದ ನೈರೋಬಿಯಲ್ಲಿ ನಡೆಯಲಿರುವ ಅಂಡರ್ ಟ್ವೆಂಟಿ ಅಂತರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ.

athletic runner

ಅಭ್ಯಾಸದಲ್ಲಿ ತೊಡಗಿರುವ ಅಭಿನ್

ಆದರೆ ಈ ಸ್ಪರ್ಧೆ ಜೂನ್ ತಿಂಗಳ ಒಳಗೆ ನಡೆದರೆ ಮಾತ್ರ ಅಭಿನ್ ಭಾಗವಹಿಸುವ ಸಾಧ್ಯತೆ ಇದೆ. ಜೂನ್ ಬಳಿಕ ಅಭಿನ್ ವಯಸ್ಸು 21 ಆಗುವ ಕಾರಣ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎನ್ನುವುದು ಸದ್ಯ ಬೆಸರದ ಸಂಗತಿಯಾಗಿದೆ.

athletic runner

ಅಭಿನ್ ಕೋಚ್ ಜೊತೆಗಿರುವ ಚಿತ್ರ

ತನ್ನ ಬಿಡುವಿನ ವೇಳೆ ಸಂಗೀತ ಕಾರ್ಯಕ್ರಮಗಳಿಗೆ ತೆರಳಿ ಡ್ರಮ್ ನುಡಿಸುವ ಮೂಲಕ ಹಣ ಸಂಗ್ರಹಿಸಿ ಅದನ್ನು ಅಭಿನ್ ತನ್ನ ಕ್ರೀಡಾ ಸಾಧನೆಗೆ ಬಳಸುತ್ತಿದ್ದಾನೆ. ಚೀನಾದಲ್ಲಿ ನಡೆಯುವ ವರ್ಲ್ಡ್‌ ಯುನಿವರ್ಸಿಟಿ ಗೇಮ್‌ನಲ್ಲಿ ಭಾಗವಹಿಸುವುದು ತನ್ನ ಮುಂದಿನ ಗುರಿ ಎಂದಿರುವ ಅಭಿನ್, ಇದಕ್ಕಾಗಿ ಭುವನೇಶ್ವರದಲ್ಲಿ ಹೆಚ್ಚಿನ ತರಬೇತಿ ಪಡೆಯಲು ಸಿದ್ಧತೆ ನಡೆಸುತ್ತಿದ್ದಾನೆ.

athletic runner

ಅಥ್ಲೆಟಿಕ್ಸ್ ಕೂಟದ 200 ಮೀಟರ್ ರೇಸ್​ನಲ್ಲಿ ಚಿನ್ನದ ಪದಕ ಗಳಿಸಿದ ಅಭಿನ್

athletic runner ರಿಯಾಲಿಟಿ ಶೋ ಒಂದರಲ್ಲಿ ಡ್ರಮ್ಮರ್ ಆಗಿದ್ದ ಅಭಿನ್

ಇದನ್ನೂ ಓದಿ: ಅಥ್ಲೆಟಿಕ್ಸ್​​ ಕೂಟದಲ್ಲಿ ಕಲಾತಂಡಗಳ ಕಲರವ, ಬಾನಂಗಳವೂ ಕಲರ್​ಫುಲ್..