ಉತ್ತರ ಕನ್ನಡ: ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಾಗಿ ಸಿಎಂಗೆ ರಕ್ತದಲ್ಲಿ ಪತ್ರ ಅಭಿಯಾನ
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಕೊರತೆಯಿಂದ ತುರ್ತು ಚಿಕಿತ್ಸೆಗೆ ಜನ ದೂರದ ಜಿಲ್ಲೆಗಳಿಗೆ ಅಲೆಯಬೇಕಿದೆ. ಅದೆಷ್ಟೋ ಜೀವಗಳು ದಾರಿ ಮಧ್ಯೆಯೇ ಅಸುನೀಗಿವೆ. ಹೀಗಾಗಿ ರಾಜ್ಯ ಸರ್ಕಾರದ ಗಮನ ಸೆಳೆಯಲು ಜಿಲ್ಲೆಯ ಯುವಕರು ಮುಂದಾಗಿದ್ದು'ಆಸ್ಪತ್ರೆ ನೀಡಿ ಇಲ್ಲವೇ ದಯಾಮರಣ ಕರುಣಿಸಿ' ಎಂದು ಸಿಎಂಗೆ ರಕ್ತದಲ್ಲಿ ಪತ್ರ ಬರೆಯುವ ಅಭಿಯಾನ ಆರಂಭಿಸಿದ್ದಾರೆ.

ಕಾರವಾರ, ನವೆಂಬರ್ 13: ಯಾವುದಾರೂ ಅಪಘಾತಗಳು ನಡೆದರೆ, ತುರ್ತು ಅಗತ್ಯ ಬಂದರೆ ಉನ್ನತ ಚಿಕಿತ್ಸೆ ನೀಡುವ ಸಾಮರ್ಥ್ಯ ಇರುವ ಆಸ್ಪತ್ರೆಗಳು ಉತ್ತರ ಕನ್ನಡ ಜಿಲ್ಲೆಯಲ್ಲಿ ಇಲ್ಲ. ಇಂತಹ ಸಂದರ್ಭಗಳಲ್ಲಿ ಒಂದೋ ನೆರೆ ಜಿಲ್ಲೆಯಾದ ಉಡುಪಿ, ಮಂಗಳೂರಿಗೆ ಹೋಗಬೇಕು. ಇಲ್ಲವೇ ಹುಬ್ಬಳ್ಳಿಯ ದಾರಿ ಹಿಡಿಯಬೇಕು. ಹೀಗಾಗಿ ಜಿಲ್ಲೆಗೊಂದು ಸುಸಜ್ಜಿತ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂಬುದು ಇಲ್ಲಿನ ಜನರ ಬಹುಕಾಲದ ಕೂಗು. ಈ ವಿಚಾರವಾಗಿ ಇಲ್ಲಿಯವರೆಗೂ ಅನೇಕ ಹೋರಾಟಗಳು ನಡೆದಿವೆ. ಸರ್ಕಾರದ ಗಮನವನ್ನೂ ಸೆಳೆಯಲಾಗಿದೆ. ಹೀಗಿದ್ದರೂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮಾತ್ರ ಇನ್ನು ಗಗನ ಕುಸುಮವಾಗಿರುವ ಹಿನ್ನಲೆ ಜಿಲ್ಲೆಯ ಯುವಕರು ಹೊಸ ಆಂದೋಲನ ಆರಂಭಿಸಿದ್ದಾರೆ. ಆಸ್ಪತ್ರೆ ಕೊಡಿ ಇಲ್ಲವಾದರೆ ದಯಾಮರಣ ಕರುಣಿಸಿ ಎಂದು ಸಿಎಂಗೆ ರಕ್ತದಲ್ಲಿ ಪತ್ರ ಬರೆಯುವ ಚಳವಳಿ ಆರಂಭಿಸಿದ್ದಾರೆ.
ಉತ್ತರ ಕನ್ನಡ ಭೌಗೋಳಿಕವಾಗಿ ಅತಿ ದೊಡ್ಡದಾಗಿದ್ದು, ಕಡಲ ತೀರಕ್ಕೆ ಹೊಂದಿಕೊಂಡಿರೋ ಈ ಜಿಲ್ಲೆಯಲ್ಲಿ ಸುಸಜ್ಜಿತ ವೈದ್ಯಕೀಯ ಸೇವೆ ಸಿಗದ ಕಾರಣ ಅದೆಷ್ಟೋ ಮನೆಗಳ ಬೆಳಕು ಆರಿವೆ. ಯಾವುದೇ ಉನ್ನತ ಚಿಕಿತ್ಸೆಗಳು ಬೇಕಿದ್ದರೂ ನೂರಾರು ಕಿಲೋ ಮೀಟರ್ ಅಲೆಯಬೇಕಾದ ಸ್ಥಿತಿ ಜಿಲ್ಲೆಯ ಜನರದ್ದಾಗಿದೆ. ಹೀಗಾಗಿ ಅದೆಷ್ಟೋ ಮಂದಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ದಾರಿ ಮಧ್ಯವೇ ಜೀವ ಕಳೆದುಕೊಂಡ ಉದಾಹರಣೆಗಳು ಸಾಕಷ್ಟಿವೆ. ಈ ಹಿನ್ನಲೆ ಸಿಎಂಗೆ ಪತ್ರ ಬರೆಯುವ ಅಭಿಯಾನ ಆರಂಭಿಸಲಾಗಿದ್ದು, ಭಟ್ಕಳ ಮೂಲದ ಮಸ್ತಾಪ್ಪ ನಾಯ್ಕ್ ಬೆಳಸೆ ನೇತೃತ್ವದ ತಂಡ ಸರ್ಕಾರದ ಗಮನ ಸೆಳೆಯಲು ಯತ್ನಿಸಿದೆ.
ಇದನ್ನೂ ಓದಿ: ಅರ್ಧ ಬೆಲೆಗೆ ಗೃಹೋಪಯೋಗಿ ವಸ್ತು ಆಮಿಷ, ನೂರಾರು ಮಂದಿಗೆ ಮಕ್ಮಲ್ ಟೋಪಿ
ಆಸ್ಪತ್ರೆ ನೀಡಿ ಇಲ್ಲವೇ ದಯಾಮರಣ ಕರುಣಿಸಿ ಎಂದು ಮಸ್ತಾಪ್ಪ ನಾಯ್ಕ್ ಬೆಳಸೆ ಈಗಾಗಲೇ ಸಿಎಂಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ. ಇವರ ಜೊತೆಗೆ ಜಿಲ್ಲೆಯ ಸುಮಾರು 7 ಲಕ್ಷ ಜನರು ಅಂಚೆ ಪತ್ರದ ಮೂಲಕ ಆಸ್ಪತ್ರೆಗಾಗಿ ಸಿಎಂಗೆ ಮನವಿ ಮಾಡಲು ಮುಂದಾಗಿದ್ದು, ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಿಂದಲೂ ಪತ್ರ ಅಭಿಯಾನ ಆರಂಭವಾಗಿದೆ. ಇದುವರೆಗೂ ನಡೆದ ಹೋರಾಟಗಳಿಗೆ ಮಣಿಯದ ಸರ್ಕಾರ, ಈ ಪತ್ರ ಅಭಿಯಾನಕ್ಕಾದರೂ ಸ್ಪಂದಿಸಲಿ. ಬಜೆಟ್ನಲ್ಲಿ ಅನುದಾನ ನೀಡಿ ಉತ್ತರ ಕನ್ನಡ ಜಿಲ್ಲೆಗೊಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ಮಾಡಲಿ ಎಂಬ ಆಶಯ ಜಿಲ್ಲೆಯ ಜನರದ್ದು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



