ಯೂಟ್ಯೂಬ್​, ವೆಬ್ ಸೈಟ್ ಮೂಲಕ ರೈತನಿಗೆ ವಂಚನೆ; ಹಳೇ ನಾಣ್ಯ ಖರೀದಿ ನೆಪದಲ್ಲಿ ಮುಗ್ಧ ರೈತನಿಂದ 7 ಲಕ್ಷ ಪೀಕಿದ ಸೈಬರ್ ಖದೀಮರು

ಉತ್ತರ ಕನ್ನಡ ಜಿಲ್ಲೆಯ ರೈತನೊಬ್ಬ ಕಷ್ಟ ಪಟ್ಟು ಜಮೀನಿನಲ್ಲಿ ದುಡಿದು ಲಕ್ಷ ಲಕ್ಷ ಹಣ ಸಂಪಾದನೆ ಮಾಡಿದ್ದ. ಆದ್ರೆ, ಅವನ ಆಸೆ ದಿನದಿಂದ ಹೆಚ್ಚಾಗುತ್ತಿತ್ತು. ಸುಲಭವಾಗಿ ಹೇಗೆ ಹಣ ಗಳಿಸಬಹುದು ಎಂದು ಆಗಾಗ ಯುಟ್ಯೂಬ್​ನಲ್ಲಿ ಸರ್ಚ್ ಮಾಡುತ್ತಿದ್ದ. ಆ ದಿನ ಯುಟ್ಯೂಬ್​ನಲ್ಲಿ ಸಿಕ್ಕ ಒಂದು ಫೋನ್ ನಂಬರ್​ದಿಂದ ಆತ ಗಳಿಸಿದ್ದ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡು ಪೊಲೀಸ್ ಠಾಣೆ ಮೆಟ್ಟಿಲೆರಿದ್ದಾನೆ.

ಯೂಟ್ಯೂಬ್​, ವೆಬ್ ಸೈಟ್ ಮೂಲಕ ರೈತನಿಗೆ ವಂಚನೆ; ಹಳೇ ನಾಣ್ಯ ಖರೀದಿ ನೆಪದಲ್ಲಿ ಮುಗ್ಧ ರೈತನಿಂದ 7 ಲಕ್ಷ ಪೀಕಿದ ಸೈಬರ್ ಖದೀಮರು
ವಂಚನೆಗೊಳಗಾದ ರೈತ ರಮೇಶ್
Follow us
ಸೂರಜ್​, ಮಹಾವೀರ್​ ಉತ್ತರೆ
| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 15, 2024 | 8:47 PM

ಉತ್ತರ ಕನ್ನಡ, ಫೆ.15: ಜಿಲ್ಲೆಯ ಶಿರಸಿ(Sirsi) ತಾಲೂಕಿನ ಸಾಲ್ಕಣಿ ಗ್ರಾಮದ ರೈತ ರಮೇಶ್ ಎಂಬುವವರು ಯೂಟ್ಯೂಬ್​ ಹಾಗೂ ವೆಬ್ ಸೈಟ್ ಮೂಲಕ ಬರೊಬ್ಬರಿ 7 ಲಕ್ಷ ರೂ. ಕಳೆದುಕೊಂಡಿದ್ದಾರೆ. ಊರಿನಲ್ಲಿಯೇ ಅಡಿಕೆ ತೋಟ ಮಾಡಿಕೊಂಡು ಅದರಲ್ಲಿ ಬರುವ ಹಣದಲ್ಲಿ ಒಂದಿಷ್ಟು ಉಳಿಸಿ ನೆಮ್ಮದಿಯಾಗಿದ್ದಾತನಿಗೆ ಯೂಟ್ಯೂಬ್ ವ್ಯಾಮೋಹ ಹೆಚ್ಚಾಗಿದೆ. ಪ್ರತಿ ದಿನ ಯೂಟ್ಯೂಬ್ ನೋಡುತ್ತಿದ್ದ ಅವರು, ಹಳೆ ನಾಣ್ಯಗಳ ಮಾರಾಟದ ಕುರಿತು ವಿಡಿಯೋ ನೋಡಿದ್ದಾರೆ. ತನ್ನ ಮನೆಯಲ್ಲಿ ಇರುವ ಹಳೆಯ ನಾಣ್ಯವನ್ನು ಮಾರಾಟ ಮಾಡಿ, ಇದರಿಂದ ಲಕ್ಷಾಂತರ ರೂಪಾಯಿ ಗಳಿಸಬಹುದು ಎಂದು ಯೂಟ್ಯೂಬ್​ನಲ್ಲಿ ನೀಡಿದ್ದ ವೆಬ್ ಸೈಟ್​ನ್ನು ಗೂಗಲ್​ನಲ್ಲಿ ಸರ್ಚ ಮಾಡಿದಾತನಿಗೆ ಓಲ್ಡ್ ಕಾಯನ್ ಕಂಪನಿ ಎಂಬ ವೆಬ್ ಸೈಟ್ ದೊರೆತಿದ್ದು, ಅದಕ್ಕೆ ಸಂಪರ್ಕಿಸಿದಾತ ತನ್ನ ಬಳಿ ಇರುವ ಹಳೇ ನಾಣ್ಯ ಮಾರಾಟ ಮಾಡುವ ಬಗ್ಗೆ ಪ್ರಸ್ತಾಪಿಸಿದ್ದಾನೆ.

ಮೊದಲು ರಿಜಿಸ್ಟೇಷನ್​ಗೆ ಹಣ ಕಟ್ಟಬೇಕು. ನಂತರ ಮಾರಾಟ ಮಾಡಬಹುದು. ನಿಮ್ಮ ಬಳಿ ಇರುವ ನಾಣ್ಯಕ್ಕೆ 17 ಲಕ್ಷಕ್ಕೂ ಅಧಿಕ ಬೆಲೆ ಇದೆ ಎಂದು ನಂಬಿಸಿ. ಮೊದಲು ಅಕೌಂಟ್ ವೆರಿಫಿಕೇಶನ್ ಎಂದು ಹೇಳಿ 9 ಸಾವಿರ, ನಂತರ ಟ್ಯಾಕ್ಸ್ ಎಂದು 16 ಸಾವಿರ ಹೀಗೆ ಹಂತ ಹಂತವಾಗಿ ಏಳು ಲಕ್ಷ ವನ್ನು ಪೀಕಿದ್ದಾರೆ. ನಂತರ ವರ್ಷದ ಕೂಳಿಗಾಗಿ ಇರಿಸಿದ್ದ ಹಣವೂ ಖರ್ಚಾಗಿದೆ. ಇದರಿಂದ ತನ್ನ ಅಕೌಂಟ್ ಡೀ ಆಕ್ಟಿವ್ ಮಾಡುವಂತೆ ಕೇಳಿದ್ದಾರೆ. ಅದಕ್ಕೂ ಕೂಡ ವಂಚಕರು ಹಣ ಕೇಳಿದ್ದಾರೆ. ನಂತರ ತಾನು ಮೋಸ ಹೋಗುತ್ತಿರುವ ಬಗ್ಗೆ ಅರಿವಾಗಿ, ಶಿರಸಿ ಠಾಣೆ ಮೆಟ್ಟಿಲೇರಿದ್ದಾನೆ. ಇದೀಗ ಕಾರವಾರದ ಸೈಬರ್ ಕ್ರೈಮ್​ಗೆ ಪ್ರಕರಣ ಹಸ್ತಾಂತರವಾಗಿದೆ.

ಇದನ್ನೂ ಓದಿ:ಬೆಂಗಳೂರು: ಐಫೋನ್ ಹೆಸರಲ್ಲಿಆಂಡ್ರಾಯ್ಡ್ ಫೋನ್ ನೀಡಿ 60 ಸಾವಿರ ವಂಚನೆ ಆರೋಪ

ಜಿಲ್ಲೆಯಲ್ಲಿ 1.21 ಕೋಟಿ ರೂಪಾಯಿ ವಂಚನೆ

ದೇಶದಲ್ಲೇ ಸೈಬರ್ ಕ್ರೈಮ್ ಪ್ರಕರಣದಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ 2022 ರಲ್ಲಿ 43 ಲಕ್ಷದ ವರೆಗೆ ವಿವಿಧ ಪ್ರಕರಣದಲ್ಲಿ ಹಣ ಕಳೆದುಕೊಂಡ ಪ್ರಕರಣ ದಾಖಲಾದ್ರೆ, 2023 ರ ಸಾಲಿನಲ್ಲಿ ದುಪ್ಪಟ್ಟಾಗಿದ್ದು, ವಿವಿಧ ಪ್ರಕರಣದಲ್ಲಿ ಒಟ್ಟು 1.21 ಕೋಟಿ ರುಪಾಯಿ ವಂಚನೆಗಳಾಗಿವೆ. ಇನ್ನು ಅನ್ ಲೈನ್ ಹಾಗೂ ಠಾಣೆಯಲ್ಲಿ ದೂರು ನೀಡಿದ ಪ್ರಕರಣವೂ ಸೇರಿದರೇ ಈ ವರ್ಷದಲ್ಲಿ 2 ಕೋಟಿ ಗಡಿ ದಾಟಿದೆ. ವಂಚನೆಗೊಳಗಾಗುವವರು ಬಹುತೇಕರು ವಿದ್ಯಾವಂತರಾದರೇ , ಯೂಟ್ಯೂಬ್, ಫೇಸ್ ಬುಕ್, ವಾಟ್ಸ್ ಆಪ್ , ವೆಬ್ ಸೈಟ್​ಗಳಿಂದಲೇ ವಂಚನೆಗೊಳಗಾಗಿದ್ದಾರೆ.

ದಿನದಿಂದ ದಿನಕ್ಕೆ ಪ್ರಕರಣ ಹೆಚ್ಚಾಗುತ್ತಿರುವುದರಿಂದ ಸೈಬರ್ ಕ್ರೈಮ್ ಠಾಣೆಯನ್ನು ಸಹ ಹೆಚ್ಚಿಸಬೇಕು. ಜನರಲ್ಲಿ ಜಾಗೃತಿ ಮೂಡಿಸಲು ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂಬ ಆಗ್ರಹ ಸ್ಥಳೀಯರದ್ದು, ಸಾಮಾಜಿಕ ಜಾಲತಾಣದ ಅತಿಯಾದ ಅವಲಂಬನೆ, ಮಾಹಿತಿಯ ಕೊರತೆ ಮುಗ್ಧ ಜನರು ಮೋಸ ಹೋಗುವಂತೆ ಮಾಡುತಿದ್ದು ,ಯಾವುದೂ ಅತಿಯಾದರೂ ಅದು ವಿಷವಾಗುತ್ತೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಂತಿದೆ. ಅತೀ ಆಸೆಗೆ ಬಿದ್ದ ರೈತನೊಬ್ಬ ಹಣ ಮಾಡಲು ಹೋಗಿ ತನ್ನ ವರ್ಷದ ಕೂಳನ್ನೇ ಕಳೆದುಕೊಂಡಿದ್ದು ಮಾತ್ರ ದುರಂತ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ