ಕಣ್ಸೆಳೆಯುವ ಶಿರಸಿ ಮಾರಿಕಾಂಬಾ ದೇವಿಯ ಜಾತ್ರೆ: ಇತಿಹಾಸ, ಮಹತ್ವವೇನು? ಇಲ್ಲಿದೆ ಮಾಹಿತಿ
ಮಾರ್ಚ್ 15 ಅಂದರೆ ನಿನ್ನೆಯಿಂದ ಜಾತ್ರೆ ಆರಂಭವಾಗಿದೆ. 9 ದಿನಗಳ ಕಾಲ ನಡೆಯುವ ಈ ಅದ್ದೂರಿ ಜಾತ್ರಾ ಮಾಹೋತ್ಸವ ಮಾರ್ಚ್ 23ರಂದು ಕೊನೆಗೊಳ್ಳುತ್ತದೆ. ನಿನ್ನೆಯಿಂದ ಜಾತ್ರೆಗೆ ಭರ್ಜರಿ ಚಾಲನೆ ದೊರೆತಿದೆ.
ಸದ್ಯ ಉತ್ತರಕನ್ನಡ (Uttara Kannada) ಜಿಲ್ಲೆಯಲ್ಲಿ ಎಲ್ಲರ ಬಾಯಲ್ಲೂ ಒಂದೇ ಮಾತು. ಜಾತ್ರೆಗೆ ಯಾವಾಗ ಹೋಗೋದು? ಈ ಬಾರಿ ವಿಶೇಷತೆ ಏನಂತೆ? ಹೌದು, ದಕ್ಷಿಣ ಭಾರತದ ಅತಿ ದೊಡ್ಡ ಜಾತ್ರೆ ಶಿರಸಿ (Sirsi) ಮಾರಿಕಾಂಬಾ ದೇವಿಯ ಜಾತ್ರೆ ಆರಂಭವಾಗಿದೆ. ಮಾರ್ಚ್ 15 ಅಂದರೆ ನಿನ್ನೆಯಿಂದ ಜಾತ್ರೆ ಆರಂಭವಾಗಿದೆ. 9 ದಿನಗಳ ಕಾಲ ನಡೆಯುವ ಈ ಅದ್ದೂರಿ ಜಾತ್ರಾ ಮಹೋತ್ಸವ ಮಾರ್ಚ್ 23ರಂದು ಕೊನೆಗೊಳ್ಳುತ್ತದೆ. ನಿನ್ನೆಯಿಂದ ಜಾತ್ರೆಗೆ ಭರ್ಜರಿ ಚಾಲನೆ ದೊರೆತಿದೆ. ರಾಜ್ಯದ ಅತೀ ದೊಡ್ಡ ಜಾತ್ರೆ ಎನ್ನುವ ಹೆಸರು ಪಡೆದ ಜಾತ್ರೆಗೆ ದಿನನಿತ್ಯ ಲಕ್ಷಾಂತರ ಜನರ ದಂಡೇ ಹರಿದುಬರುತ್ತದೆ.
ಇಂದು ಮಧ್ಯಾಹ್ನ ಶಿರಸಿಯ ಬಿಡಕಿ ಬೈಲಿನ ಗದ್ದುಗೆಯಲ್ಲಿ ರಥದ ತಾಯಿ ಮಾರಿಕಾಂಬೆಯನ್ನು ತಂದು ಪ್ರತಿಷ್ಠಾಪನೆ ಮಾಡಲಾಗುತ್ತದೆ. ದೇವಿಯ ಕಲ್ಯಾಣ ಮಹೋತ್ಸವ ಮಾರ್ಚ್ 15 ರಂದು ರಾತ್ರಿ ಜರುಗಿದೆ. ಮಾರ್ಚ್ 16 ರಂದು ಮಾರಿಕಾಂಬಾ ದೇವಿಯ ರಥ ದೇವಾಲಯದ ಆವರಣದಿಂದ ಹೊರಟು ಮಧ್ಯಾಹ್ನ ಗದ್ದುಗೆಗೆ ಬಂದು ಆಸೀನಳಾಗುತ್ತಾಳೆ.
ಶಿರಸಿಯಲ್ಲಿ ನಡೆಯುವ ಈ ಜಾತ್ರೆ 2 ವರ್ಷಗಳಿಗೊಮ್ಮೆ ಆಚರಿಸಲಾಗುತ್ತದೆ. ಇನ್ನೊಂದು ವಿಶೇಷವೆಂದರೆ ಜಾತ್ರೆ ಇರುವ ವರ್ಷ ಇಲ್ಲಿ ಹೋಳಿಯನ್ನು ಆಚರಣೆ ಮಾಡುವುದಿಲ್ಲ. ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವ ಉತ್ತರ ಕನ್ನಡ ಜಿಲ್ಲೆಯ ಗರಿಮೆ ಎಂದರೂ ತಪ್ಪಾಗಲಾರದು.
ಜಾತ್ರೆಯ ಆಚರಣೆ: ಶಿರಸಿ ಜಾತ್ರೆಯನ್ನು ಸ್ಥಳೀಯರು ಮಾರಿ ಜಾತ್ರೆ ಎಂದೇ ಕರೆಯುತ್ತಾರೆ. ಬೇರೆ ಜಾತ್ರೆಗಳಲ್ಲಿ ಮೂಲ ವಿಗ್ರಹವನ್ನು ದೇವಾಲಯದಲ್ಲಿಯೇ ಬಿಟ್ಟು ಉತ್ಸವ ಮೂರ್ತಿಯನ್ನು ರಥ ಅಥವಾ ಪಲ್ಲಕ್ಕಿಯಲ್ಲಿಟ್ಟು ಧಾರ್ಮಿಕ ವಿಧಿವಿಧಾನ ಮಾಡಲಾಗುತ್ತದೆ. ಆದರೆ ಶಿರಸಿ ಜಾತ್ರೆ ವಿಭಿನ್ನ. ಇಲ್ಲಿ ದೇವಾಲಯದಲ್ಲಿನ 7 ಅಡಿ ವಿಗ್ರಹವನ್ನೇ ಅಲಂಕಾರ ಸಮೇತ ಮದುವೆ ಮಾಡಿ ಮೆರವಣಿಗೆಯಲ್ಲಿ ಬಿಡಕಿ ಬೈಲಿಗೆ ತರಲಾಗುತ್ತದೆ. ಭಕ್ತರಿಗೆ ನಿಕಟ ದರ್ಶನ ನೀಡುವ ತಾಯಿಯನ್ನು ಭಕ್ತರು ಕಣ್ತುಂಬಿಕೊಳ್ಳುತ್ತಾರೆ. 7 ಅಡಿ ವಿಗ್ರಹ, ವಜ್ರ, ನವರತ್ನ ಖಚಿತ ಸ್ವರ್ಣರತ್ನ, ಹಾರ, ನೂಪುರ, ಬೆಳ್ಳಿ, ಕಡಗಗಳು, 8 ಕೈಗಳು. ಒಂದೊಂದು ಕೈಗಳಲ್ಲೂ ಒಂದೊಂದು ವಿಶಿಷ್ಟ ಆಭರಣ ಹಿಡುದು ಗದ್ದುಗೆಯಲ್ಲಿ ವಿರಾಜಮಾನಳಾಗುತ್ತಾಳೆ. ಮಹಿಷ ಮರ್ಧಿನಿ, ಕೆಂಪು ಮುಖ, ಅರಳಿದ ಕಂಗಳು ಜನರನ್ನು ಸೆಳೆಯುತ್ತದೆ. 9 ದಿನಗಳ ಅದ್ದೂರಿ ಆಚರಣೆ, ಧಾರ್ಮಿಕ ವಿಧಿವಿಧಾನಗಳ ಬಳಿಕ ದೇವಿಯನ್ನು ವಾಪಸ್ ಕೊಂಡೊಯ್ದು ಚಪ್ಪರಕ್ಕೆ ಬೆಂಕಿ ಹಚ್ಚಲಾಗುತ್ತದೆ. ಇದಕ್ಕೆ ಕಾರಣ ಎಂದರೆ ಮಹಿಷಾಸುರ ಸುಳ್ಳು ಹೇಳಿ ಆಕೆಯನ್ನು ವಿವಾಹವಾಗುತ್ತಾನೆ. ಇದನ್ನು ತಿಳಿದ ಆಕೆ, ಮಹಿಷನನ್ನು ವಧಿಸಲು ತಯಾರಾಗುತ್ತಾಳೆ. ಇದರಿಂದ ಆತ ಕೋಣದ ದೇಹದ ಒಳಗೆ ಸೇರಿಕೊಳ್ಳುತ್ತಾನೆ. ಕೋಣನ ಕತ್ತನ್ನು ಕಡಿದು ರೋಷಾವೇಶದಿಂದ ತಾಯಿ ಮಾರಿಕಾಂಬೆ ಮಹಿಷಾಸುರನ ಮರ್ಧನ ಮಾಡುತ್ತಾಳೆ. ಇದರ ಸಾಂಕೇತಿಕ ಆಚರಣೆಯೇ ಮಾರಿಕಾಂಬಾ ಜಾತ್ರೆಯಾಗಿದೆ.
ಜಾತ್ರೆ ಮುಗಿದು 40 ದಿನಗಳ ದೇವಿ ಅಶೌಚಳಾಗಿದ್ದರಿಂದ ದೇವಸ್ಥಾನದ ಬಾಗಿಲನ್ನು ಮುಚ್ಚಲಾಗುತ್ತದೆ. ಭಕ್ತರಿಗೆ ದೇವಿಯ ದರ್ಶನವಿರುವುದಿಲ್ಲ. ವಿಗ್ರಹವನ್ನು ಧಾರ್ಮಿಕ ಆಚರಣೆಯ ಮೂಲಕ ನೀರಿನಲ್ಲಿ ಮುಳುಗಿಸಿಡಲಾಗುತ್ತದೆ. 40 ದಿನಗಳ ಬಳಿಕ ಸೂತಕ ಕಳೆದ ಮೇಲೆ ಮತ್ತೆ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ.
ಮಾರಿಕಾಂಬಾ ಜಾತ್ರೆಯ ಇತಿಹಾಸ: ಅಂದಿನ ಕಾಲದ ಚೆನ್ನಾಪುರ ಸೀಮಿಯಲ್ಲಿದ್ದ ಶಿರಸಿ ಪುಟ್ಟ ಹಳ್ಳಿಯಾಗಿತ್ತು. ಹಾನಗಲ್ನಲ್ಲಿ ದೇವಿಯ ಜಾತ್ರಾಯನ್ನು ಆಚರಿಸಲಾಗುತ್ತಿತ್ತು. ಒಂದು ಬಾರಿ ಜಾತ್ರೆ ಮುಗಿದ ನಂತರ ದೇವಿ ಮಾರಿಕಾಂಬೆಯ ವಿಗ್ರಹ ಮತ್ತು ಆಭರಣಗಳನ್ನು ಪೆಟ್ಟಿಗೆಯೊಂದರಲ್ಲಿ ಇಟ್ಟು ಶಿರಸಿಗೆ ತರಲಾಗುತ್ತಿತ್ತು. ಈ ಸಂದರ್ಭದಲ್ಲಿ ಕಳ್ಳರು ದೇವಿಯ ವಿಗ್ರಹ ಮತ್ತು ಆಭರಣವಿದ್ದ ಪೆಟ್ಟಿಗೆಯನ್ನು ಕದ್ದು, ಆಭರಣಗಳನ್ನೆಲ್ಲ ದೋಚಿ, ದೇವಿಯ ವಿಗ್ರಹವನ್ನು ಅಲ್ಲೇ ಹತ್ತಿರದ ಕೆರೆಯೊಳಗೆ ಹಾಕಿ ಹೋದರು. ನಂತರ ಈ ಮಾರಿಕಾಂಬೆ ಬಸವ ಎಂಬ ಭಕ್ತನ ಕನಸಿನಲ್ಲಿ ಬಂದು ನಿಮ್ಮೂರಿನ ಕೆರೆಯಲ್ಲಿದ್ದೇನೆ ಎಂದು ಹೇಳಿದ ಹಾಗೆ ಭಾಸವಾಗಿತ್ತಂತೆ, ಬೆಳಿಗ್ಗೆ ಎದ್ದು ಹತ್ತಿರದ ಕೆರೆಗೆ ಹೋಗಿ ನೋಡಿದಾಗ ಪೆಟ್ಟಿಗೆಯೊಂದು ತೇಲುತ್ತಿರುವುದು ಕಂಡಿತ್ತು. ಆ ಪೆಟ್ಟಿಗೆಯನ್ನು ತೆರೆದಾಗ ದೇವಿಯ ವಿಗ್ರಹವಿರುವುದು ಸ್ಪಷ್ಟವಾಯಿತು. ಹೀಗಾಗಿ ಈ ವಿಗ್ರಹ ಸಿಕ್ಕ ಕೆರೆಗೆ ಈಗಲೂ ದೇವಿಕೆರೆ ಎಂದೇ ಕರೆಯಲಾಗುತ್ತದೆ.
ಹೀಗೆ ಕೆರೆಯಲ್ಲಿ ಸಿಕ್ಕ ದೇವಿಯ ವಿಗ್ರಹವನ್ನು ಕ್ರಿ.ಶ.1689 ರಲ್ಲಿ ವೈಶಾಖ ಮಾಸದ ಶುಕ್ಲ ಪಕ್ಷದ ಅಷ್ಟಮಿಯಂದು, ಮಂಗಳವಾರ ಮಾರಿಕಾಂಬಾ ದೇವಾಲಯದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ಅನ್ಯಜಾತಿಯ ಹುಡುಗನೊಬ್ಬ ಬ್ರಾಹ್ಮಣ ಹುಡುಗಿಯನ್ನು ವೇದಾಧ್ಯಯನದ ಆಸೆಯಿಂದ ಸುಳ್ಳು ಹೇಳಿ ಮದುವೆಯಾಗಿ, ನಂತರ ಮಾಂಸ ತಿಂದು ಸಿಕ್ಕಿಬಿದ್ದು, ಪತ್ನಿಯ ಕೈಯಿಂದ ಕೊಲೆಯಾದ ಕತೆಯೂ ಇದೆ. ಇದೇ ಕಾರಣದಿಂದ ಪ್ರತೀ ವರ್ಷ ಜಾತ್ರೆಯ ಮಹೋತ್ಸವದ ಆರಂಭದ ಮೊದಲು ದೇವಿಗೆ ರಕ್ತವನ್ನು ತಿಲಕವಾಗಿ ಇಡಲಾಗುತ್ತದೆ. ನಂತರ ದೇವಿಯನ್ನು ಬಿಡಕಿ ಬೈಲಿನ ಗದ್ದುಗೆಗೆ ತಂದು 9 ದಿನಗಳ ಅದ್ದೂರಿ ಜಾತ್ರಾ ಮಹೋತ್ಸವವನ್ನು ಆಚರಣೆ ಮಾಡಲಾಗುತ್ತದೆ.
9 ದಿನವೂ ಜನಜಂಗುಳಿ: ಶಿರಸಿ ಜಾತ್ರೆ ಎಂದರೆ ಜನವೋ ಜನ. ಕಣ್ಣು ಕುಕ್ಕುವ ಲೈಟ್ಗಳು, ನಾಟಕ, ಯಕ್ಷಗಾನಗಳ ತಂಡಗಳ ಪ್ರದರ್ಶನ. ಕರ್ನಾಟಕ ಮಾತ್ರವಲ್ಲದೆ, ನೆರೆಯ ಮಹಾರಾಷ್ಟ್ರ, ಗೋವಾ, ತಮಿಳುನಾಡು, ಕೇರಳ ಸೇರಿದಂತೆ ಬೇರೆ ಬೇರೆ ರಾಜ್ಯಗಳಿಂದಲೂ ಜನರು ಆಗಮಿಸುತ್ತಾರೆ. ಸರ್ಕಸ್ ಕಂಪೆನಿಗಳು, ಹೆಂಗಳೆಯರ ಕಣ್ಣು ತಂಪಾಗಿಸುವಷ್ಟು ಬಳೆ, ಓಲೆಗಳ ಸಾಲು ಸಾಲು ಅಂಗಡಿಗಳು, ಬಾಯಿ ಸಿಹಿ ಮಾಡುವ ಮಿಠಾಯಿ, ತರಹೇವಾರಿ ತಿಂಡಿಗಳು, ಮನರಂಜನೆಯ ಆಟಗಳು ಕಣ್ಸೆಳೆಯುತ್ತವೆ.
ಇದನ್ನೂ ಓದಿ:
Holi 2022 Date: ಹೋಲಿಕಾ ದಹನ ಯಾವಾಗ? ಹೋಳಿಯ ಮಹತ್ವವೇನು? ಇಲ್ಲಿದೆ ತಿಳಿದುಕೊಳ್ಳಿ
Published On - 12:43 pm, Wed, 16 March 22