ಭೂಕುಸಿತ ಆತಂಕ: ಕುಮಟಾ ತೊರ್ಕೆ ಸೇರಿ ಉತ್ತರ ಕನ್ನಡದ ನಾಲ್ಕು ಪ್ರದೇಶಗಳು ಅತಿ ಅಪಾಯಕಾರಿ, ಸಮೀಕ್ಷಾ ವರದಿ
ಕಳೆದ ವರ್ಷ ಶಿರೂರು ಭೂಕುಸಿತದಿಂದ ಕಂಗೆಟ್ಟಿದ್ದ ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸೂಕ್ಷ್ಮ ಪ್ರದೇಶಗಳಲ್ಲಿ ಮತ್ತೆ ಜಿಎಸ್ಐ ಸಮೀಕ್ಷೆ ನಡೆಸಲಾಗಿದ್ದು, ಆತಂಕಕಾರಿ ಮಾಹಿತಿ ತಿಳಿದುಬಂದಿದೆ. ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಪಶ್ಚಿಮ ಘಟ್ಟ ಭಾಗಗಳಲ್ಲಿ ಭೂ ಕುಸಿತವಾಗುತ್ತಿದೆ. ಇದರ ಬೆನ್ನಲ್ಲೇ ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ ಇದೀಗ ಮತ್ತೊಂದು ವರದಿ ನೀಡಿದ್ದು ಜಿಲ್ಲೆಯ ನಾಲ್ಕು ಸ್ಥಳಗಳಲ್ಲಿ ಯಾವಾಗ ಬೇಕಾದರೂ ಗುಡ್ಡ ಕುಸಿಯಬಹುದು ಎಂದು ಎಚ್ಚರಿಕೆ ನೀಡಿದೆ.

ಕಾರವಾರ, ಜೂನ್ 4: ಉತ್ತರ ಕನ್ನಡ ಜಿಲ್ಲೆಯ ಶಿರೂರಿನಲ್ಲಿ ಕಳೆದ ವರ್ಷ ಜುಲೈ 16 ರಂದು ಭೂಕುಸಿತವಾಗಿ (Landslide) 11 ಜನ ಮೃತಪಟ್ಟಿದ್ದರು.ಇದರ ಜೊತೆಗೆ ಕಾರವಾರ (Karwar), ಸಿದ್ದಾಪುರ, ಕುಮಟಾ ಭಾಗದಲ್ಲಿ ಸಹ ಭೂಕುಸಿತವಾಗಿ ಜನರ ನೆಮ್ಮದಿ ಕಸಿದಿತ್ತು. ಜಿಲ್ಲೆಯ (Uttara Kannada) ಅನೇಕ ಕಡೆಗಳಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕೆಲಸಗಳು, ರಸ್ತೆಗಳ ಅಗಲೀಕರಣ ಕಾಮಗಾರಿಗಳು ಭೂ ಕುಸಿತವಾಗಲು ಮುಖ್ಯ ಕಾರಣ ಎಂದು ಭೂ ವಿಜ್ಞಾನಿಗಳು ವರದಿಯಲ್ಲಿ ತಿಳಿಸಿದ್ದರು. ಇದುವರೆಗೂ ಒಟ್ಟು 35 ಬಾರಿ ಜಿಲ್ಲೆಯಲ್ಲಿ ಸರ್ವೇ ಮಾಡಲಾಗಿದ್ದು, ಜಿಲ್ಲೆಯ 439 ಭೂ ಭಾಗಗಳನ್ನು ಕುಸಿತ ಸಾಧ್ಯತೆ ಇರುವ ಪ್ರದೇಶಗಳು ಎಂದು ವರದಿ ತಿಳಿಸಿತ್ತು. 2025 ರ ಎಪ್ರಿಲ್ ತಿಂಗಳಲ್ಲಿ ತಜ್ಞರು ಜಿಲ್ಲೆಯ ಭೂ ಭಾಗಗಳ ಅಧ್ಯಯನ ನಡೆಸಿ ಹೆದ್ದಾರಿಯ 19 ಸ್ಥಳಗಳು ಅತೀ ಸೂಕ್ಷ್ಮವೆಂದು ವರದಿ ನೀಡಿದ್ದಾರೆ. ಇದೀಗ ಹೆದ್ದಾರಿ ಭಾಗದ ನಾಲ್ಕು ಸ್ಥಳಗಳು ಅತೀ ಅಪಾಯಕಾರಿಯಾಗಿದ್ದು , ವಸತಿ ಇರುವ ಭಾಗದಲ್ಲಿ ಜನರನ್ನು ಸ್ಥಳಾಂತರಿಸಲು ಸೂಚಿಸಿದೆ.
ಉತ್ತರ ಕನ್ನಡ ಜಿಲ್ಲೆಯ ಯಾವ ಪ್ರದೇಶಗಳಿಗೆ ಭೂಕುಸಿತ ಭೀತಿ?
ಜಿಯಾಲಜಿಕಲ್ ಸರ್ವೆ ಆಫ್ ಇಂಡಿಯಾ ವರದಿ ಪ್ರಕಾರ , ಕುಮಟಾ ತಾಲೂಕಿನ ಬರ್ಗಿಯ ಕುರಿಗದ್ದೆ , ಕುಮಟಾ ತಾಲೂಕಿನ ಗೋಕರ್ಣ ಭಾಗದ ತೊರ್ಕೆ ಗ್ರಾಮ, ಹೊನ್ನಾವರದ ಆಲಂಕಿ ಗ್ರಾಮದ ಡಾ.ಬಿ.ಆರ್ .ಅಂಬೇಡ್ಕರ್ ರೆಸಿಡೆನ್ಸಿಯಲ್ ಸ್ಕೂಲ್ , ಯಲ್ಲಾಪುರ ಕೊಡ್ಲಗದ್ದೆ ಭಾಗದಲ್ಲಿ ಮಣ್ಣು ಹೆಚ್ಚು ಸಡಿಲವಾಗಿದೆ. ಕುಮಟಾದ ತೊರ್ಕೆಯಲ್ಲಿ ಅತೀ ಹೆಚ್ಚು ಮಣ್ಣು ಸಡಿಲವಾಗಿದ್ದು, ಈ ಭಾಗದಲ್ಲಿ ಯಾವಾಗ ಬೇಕಾದರೂ ಮಣ್ಣು ಕುಸಿಯುವ ಎಚ್ಚರಿಕೆ ನೀಡಲಾಗಿದೆ. ಏತನ್ಮಧ್ಯೆ ಅರಣ್ಯ ಇಲಾಖೆ ಸಚಿವ ಈಶ್ವರ್ ಕಂಡ್ರೆ ಸಹ ಇದೀಗ ಪಶ್ಚಿಮ ಘಟ್ಟ ಭಾಗದ ಧಾರಣ ಸಾಮರ್ಥ್ಯದ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಸೂಚಿಸಿದ್ದು, ಮೂರು ತಿಂಗಳ ಗಡವು ನೀಡಿದ್ದಾರೆ.
ಇದನ್ನೂ ಓದಿ: ಐತಿಹಾಸಿಕ ಸದಾಶಿವಗಡ ಕೊಟೆಯ ಮೇಲೆ ಜಂಗಲ್ ಲಾಡ್ಜ್ ಕಣ್ಣು: ರೆಸಾರ್ಟ್ ನಿರ್ಮಾಣಕ್ಕೆ ಸ್ಥಳೀಯ ಸಂಘಟನೆಗಳ ವಿರೋಧ
ಸದ್ಯ ಜಿಲ್ಲೆಯಲ್ಲಿ ಮಳೆ ಅಬ್ಬರ ಕಡಿಮೆ ಇದೆ. ಆದರೆ, ಅಲ್ಲಲ್ಲಿ ಸಣ್ಣ ಪ್ರಮಾಣದ ಭೂ ಕುಸಿತವಾಗುತಿದೆ. ಹೆಚ್ಚು ಮಳೆಯಾದರೆ ದೊಡ್ಡ ಪ್ರಮಾಣದ ಭೂ ಕುಸಿತದ ಸಾಧ್ಯತೆ ಇದೆ. ಇದೀಗ ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾದ ವರದಿಯಿಂದ ಜಿಲ್ಲಾಡಳಿತ ಇನ್ನಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಮುಂದಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ