ಮಲೆನಾಡಿನಲ್ಲಿ ಹೆಚ್ಚಾದ ಮಂಗನ ಕಾಯಿಲೆ; ಆರೋಗ್ಯ ಇಲಾಖೆ ಬಳಿ ಇಲ್ಲ ಲಸಿಕೆ

| Updated By: ಆಯೇಷಾ ಬಾನು

Updated on: Jan 27, 2024 | 3:37 PM

ಉತ್ತರಕನ್ನಡ ಜಿಲ್ಲೆಯ ಮಲೆನಾಡಿಗರಿಗೆ ಮಂಗನ ಕಾಯಿಲೆ ಆತಂಕ ಕಾಡುತ್ತಿದೆ. ಕಾಯಿಲೆಗೆ ಈ ಹಿಂದೆ ನೀಡಲಾಗುತಿದ್ದ ಲಸಿಕೆ ಪರಿಣಾಮಕಾರಿ ಅಲ್ಲ ಹಾಗೂ ಗುಣಮಟ್ಟದ ಕಾರಣ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (CDSCO) ಹಿಂಪಡೆದಿದೆ. ಹೀಗಾಗಿ ಮಂಗನಕಾಯಿಲೆಗೆ ಲಸಿಕೆ ಸಹ ಇಲ್ಲ. ಹೀಗಾಗಿ ಜನರಲ್ಲಿ ಆತಂಕ ಹೆಚ್ಚಾಗಿದೆ.

ಮಲೆನಾಡಿನಲ್ಲಿ ಹೆಚ್ಚಾದ ಮಂಗನ ಕಾಯಿಲೆ; ಆರೋಗ್ಯ ಇಲಾಖೆ ಬಳಿ ಇಲ್ಲ ಲಸಿಕೆ
ಮಂಗ
Follow us on

ಕಾರವಾರ, ಜ.27: ಕೊರೊನಾ (Coronavirus) ಹಾವಳಿಯಿಂದ ತತ್ತರಿಸಿದ್ದ ಜನ ಈಗ ಚೇತರಿಸಿಕೊಳ್ಳುತ್ತಿದ್ದಾರೆ‌. ಆದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ‌ ಮಂಗನ ಕಾಯಿಲೆ (Monkey Disease) ಪಸರಿಸುತ್ತಿದೆ. ಕೆಲವು ವರ್ಷಗಳಿಂದ ಮಂಗನ ಕಾಯಿಲೆ ಪತ್ತೆ ಆಗದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಕೊಡಬೇಕಿರುವ ಲಸಿಕೆ ಬಗ್ಗೆಯೂ ಇಲಾಖೆ ಯೋಚನೆ ಮಾಡದೆ ಸುಮ್ಮನಾಗಿತ್ತು. ಹೀಗಾಗಿ ಇದೀಗ ಮಂಗನ ಕಾಯಿಲೆ ರೋಗ ಪತ್ತೆಯಾಗಿದ್ದು ಹೆಚ್ಚಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಪರದಾಡುತ್ತಿದೆ.

ಚಳಿಗಾಲ ಪ್ರಾರಂಭವಾಗುತ್ತಿರುವ ಬೆನ್ನಲ್ಲೇ ಉತ್ತರಕನ್ನಡ ಜಿಲ್ಲೆಯ ಮಲೆನಾಡಿಗರಿಗೆ ಮಂಗನ ಕಾಯಿಲೆ ಆತಂಕ ಕಾಡುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ, ಹೊನ್ನಾವರ, ಕುಮಟಾ, ಭಟ್ಕಳ, ಜೋಯಿಡಾ ಘಟ್ಟಭಾಗದಲ್ಲಿ ಮಂಗನಿಂದ ಹಬ್ಬುವ ಕೆ.ಎಫ್.ಡಿ ಕಾಯಿಲೆ ಇದೀಗ ಶಿವಮೊಗ್ಗ ನಂತರ ಉತ್ತರ ಕನ್ನಡ ಜಿಲ್ಲೆಯನ್ನು ಮತ್ತೆ ಕಾಡುತ್ತಿದೆ. ಕಳೆದ ಐದು ವರ್ಷದಲ್ಲಿ ಮಂಗನ ಕಾಯಿಲೆಗೆ ಜಿಲ್ಲೆಯಲ್ಲಿ 200ಕ್ಕೂ ಹೆಚ್ಚು ಜನ ಸೋಂಕಿತರಾಗಿದ್ದು 8 ಜನ ಈ ಕಾಯಿಲೆಯಿಂದ ಮೃತರಾಗಿದ್ದರು. ಇದೀಗ ಶಿವಮೊಗ್ಗ ಜಿಲ್ಲೆಯ ಗಡಿಯನ್ನು ಹೊಂದುಕೊಂಡಿರುವ ಸಿದ್ದಾಪುರದ ಕೊರ್ಲಕೈ, ಬಿಳಗಿ ಗ್ರಾಮದ ಒಟ್ಟು ಐದು ಜನರಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡರೇ ಹಲವು ಜನರಲ್ಲಿ ಈ ಸೊಂಕಿನ ಲಕ್ಷಣ ಕಂಡುಬಂದಿದೆ. ಇನ್ನು ಈ ಭಾಗದ ಜನರ ರಕ್ತ ಮಾದರಿ ಸಹ ಪಡೆಯಲಾಗುತ್ತಿದೆ. ಇನ್ನು ಈ ಭಾಗದಲ್ಲಿ ಎರಡು ಮಂಗಳು ಸಾವನ್ನಪ್ಪಿದೆ. ಹೀಗಾಗಿ ಈ ಭಾಗದ ಜನರಿಗೆ ಕಾಡಿಗೆ ತೆರಳದಂತೆ ನಿರ್ಬಂಧ ವಿಧಿಸಲಾಗಿದೆ.

ಇದನ್ನೂ ಓದಿ: ಶಿವಮೊಗ್ಗ ಜಿಲ್ಲೆಯಲ್ಲಿ ಮಂಗನಕಾಯಿಲೆಗೆ 18 ವರ್ಷದ ಯುವತಿ ಸಾವು

ವರ್ಷದ ಮೊದಲೇ ಸಿದ್ದಾಪುರದಲ್ಲಿ ಮಂಗನ ಕಾಯಿಲೆ ಖಾತೆ ತೆರದಿದೆ. ಆದರೆ ಈ ಕಾಯಿಲೆಗೆ ಈ ಹಿಂದೆ ನೀಡಲಾಗುತಿದ್ದ ಲಸಿಕೆ ಪರಿಣಾಮಕಾರಿ ಅಲ್ಲ ಹಾಗೂ ಗುಣಮಟ್ಟದ ಕಾರಣ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (CDSCO) ಹಿಂಪಡೆದಿದೆ. ಹೀಗಾಗಿ ಮಂಗನಕಾಯಿಲೆಗೆ ಲಸಿಕೆ ಸಹ ಇಲ್ಲ. ಜಿಲ್ಲಾ ಆರೋಗ್ಯ ಇಲಾಖೆ ಸೊಳ್ಳೆ, ಉಣಗು, ತಿಗಣೆಗಳು ಕಚ್ಚದಂತೆ ತಡೆಯುವ ಡಿ.ಎಮ್.ಪಿ ಆಯಲ್ ನನ್ನು ಮಾತ್ರ ಜನರಿಗೆ ನೀಡುತ್ತಿದ್ದು ಎರಡು ವರ್ಷದಿಂದ ಲಸಿಕೆ ಬಂದ್ ಮಾಡಿದೆ. ಹೀಗಾಗಿ ಜನರಲ್ಲಿ ಸಹ ಲಸಿಕೆ ಇಲ್ಲದ ಕಾರಣ ಭಯ ಹುಟ್ಟುವಂತೆ ಮಾಡಿದೆ. ಇನ್ನು ಆರೋಗ್ಯ ಇಲಾಖೆಯೊಂದಿಗೆ ಸ್ಥಳೀಯ ಶಾಸಕರು ಸಭೆ ನಡೆಸಿ ಔಷಧ ಇಲ್ಲದ ಕಾರಣ ಜನರಲ್ಲಿ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಲು ತಿಳಿಸಿದ್ದಾರೆ.

ಸದ್ಯ ಹೋದೆಯಾ ಪಿಶಾಚಿ ಎಂದರೇ ಬಂದೆಯಾ ಗವಾಕ್ಷಿ ಎನ್ನುವಂತೆ ಮಾರಣಾಂತಿಕ ಮಂಗನ ಕಾಯಿಲೆ ಉತ್ತರ ಕನ್ನಡ ಜಿಲ್ಲೆಯ ಮಲೆನಾಡಿಗರನ್ನು ಬೆಂಬಿಡದೇ ಕಾಡುತಿದ್ದು ಎರಡು ವರ್ಷದಿಂದ ಲಸಿಕೆ ಇಲ್ಲದೇ “ತೈಲವೇ ಗತಿ” ಎನ್ನುವಂತಾಗಿದೆ. ದೊಡ್ಡ ಮಟ್ಟದ ಸಾವುನೋವುಗಳು ಆಗುವುದರೊಳಗೆ ಸರ್ಕಾರ ಇದಕ್ಕೊಂದು ಪರಿಹಾರ ಕಂಡುಕೊಳ್ಳಬೇಕಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ