ಶೇಂಗಾ ಬೀಜ ಗಂಟಲಲ್ಲಿ ಸಿಲುಕಿ ಬಾಲಕ ಸಾವು; ದೇವರ ಮುಂದೆ ಶವವಿಟ್ಟು ಮಗು ಬದುಕಿಸುವಂತೆ ಪ್ರಾರ್ಥಿಸಿದ ಅಜ್ಜಿ

ಸತ್ತ ಮಗುವನ್ನು ಬದುಕಿಸುವಂತೆ ಗಣಪತಿ ದೇಗುಲದಲ್ಲಿ ಗಂಟೆ ಬಾರಿಸುತ್ತಾ ಅಜ್ಜಿ ಪ್ರಾರ್ಥನೆ ಮಾಡಿದ್ದಾರೆ. ಬಳಿಕ ಸಂಬಂಧಿಕರು ಅಜ್ಜಿಯನ್ನು ಸಂತೈಸಿ ಮನೆಗೆ ಕರೆದೊಯ್ದಿದ್ದಾರೆ.

ಶೇಂಗಾ ಬೀಜ ಗಂಟಲಲ್ಲಿ ಸಿಲುಕಿ ಬಾಲಕ ಸಾವು; ದೇವರ ಮುಂದೆ ಶವವಿಟ್ಟು ಮಗು ಬದುಕಿಸುವಂತೆ ಪ್ರಾರ್ಥಿಸಿದ ಅಜ್ಜಿ
ಪ್ರಾರ್ಥನೆ (ಪ್ರಾತಿನಿಧಿಕ ಚಿತ್ರ)

ಕಾರವಾರ: ಶೇಂಗಾ ಬೀಜ ಗಂಟಲಿನಲ್ಲಿ ಸಿಲುಕಿ ಮಗು ಸಾವನ್ನಪ್ಪಿದ ನೋವಿನ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ನಡೆದಿದೆ. ಎರಡೂವರೆ ವರ್ಷದ ಬಾಲಕ ಸಾತ್ವಿಕ್, ಶೇಂಗಾ ಬೀಜ ಗಂಟಲಿನಲ್ಲಿ ಸಿಲುಕಿ ಮರಣಿಸಿದ್ದಾನೆ. ಸಾವನ್ನಪ್ಪಿದ ಮಗು ಬದುಕಿಸುವಂತೆ ಆತನ ಅಜ್ಜಿ ದೇವರ ಮೊರೆ ಹೋಗಿದ್ದಾರೆ. ಬಾಲಕನ ಶವ ದೇವರ ಮುಂದಿಟ್ಟು ಅಜ್ಜಿ ಪ್ರಾರ್ಥನೆ ಮಾಡಿದ ಮನಕಲಕುವ ಸನ್ನಿವೇಶವೂ ನಡೆದಿದೆ.

ಸತ್ತ ಮಗುವನ್ನು ಬದುಕಿಸುವಂತೆ ಗಣಪತಿ ದೇಗುಲದಲ್ಲಿ ಗಂಟೆ ಬಾರಿಸುತ್ತಾ ಅಜ್ಜಿ ಪ್ರಾರ್ಥನೆ ಮಾಡಿದ್ದಾರೆ. ಬಳಿಕ ಸಂಬಂಧಿಕರು ಅಜ್ಜಿಯನ್ನು ಸಂತೈಸಿ ಮನೆಗೆ ಕರೆದೊಯ್ದಿದ್ದಾರೆ. ಶೇಂಗಾ ಬೀಜ ಗಂಟಲಲ್ಲಿ ಸಿಲುಕಿದ್ದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿ ಆಗದೆ ಮಗು ಸಾವನ್ನಪ್ಪಿದೆ. ಮನಕಲಕುವ ದೃಶ್ಯ ನೋಡಿ ಸ್ಥಳೀಯರು ಭಾವುಕರಾಗಿದ್ದಾರೆ.

ಉತ್ತರ ಕನ್ನಡದಲ್ಲಿ ಕೊರೊನಾ ಕೂಡ ಹೆಚ್ಚಳ
ಕೊವಿಡ್ ಸೋಂಕು ನಗರಗಳಿಂದ ಹಳ್ಳಿಯ ಜಾಡು ಹಿಡಿದಿದೆ. ಮಲೆನಾಡು, ಕರಾವಳಿ ಮತ್ತು ಬಯಲುಸೀಮೆಯ ಪ್ರದೇಶಗಳನ್ನು ಹೊಂದಿರುವ ಹಸಿರ ತವರು ಉತ್ತರ ಕನ್ನಡ ಕೊವಿಡ್ ಪಾಸಿಟಿವಿಟಿ ದರದಲ್ಲಿ ಅತ್ಯಂತ ಮುಂಚೂಣಿಯಲ್ಲಿರುವ ಜಿಲ್ಲೆ ಎಂದು ಕೇಂದ್ರ ಆರೋಗ್ಯ ಇಲಾಖೆಯೇ ಇತ್ತೀಚಿಗೆ ತಿಳಿಸಿತ್ತು. ಅದರ ನಂತರವೂ ಉತ್ತರ ಕನ್ನಡದಲ್ಲಿ ಕೊವಿಡ್ ಹಿಡಿತಕ್ಕೆ ಸಿಲುಕುತ್ತಿಲ್ಲ. ಮೂಲತಃ ಅಷ್ಟೇನೂ ಜನದಟ್ಟಣೆ ಇಲ್ಲದಿದ್ದರೂ ಕೊವಿಡ್ ತನ್ನ ಗಡಿಗಳನ್ನು ಉತ್ತರ ಕನ್ನಡದ ಹಳ್ಳಿಹಳ್ಳಿಗಳಲ್ಲೂ ವಿಸ್ತರಿಸಿಬಿಟ್ಟಿದೆ. ಬೆಂಗಳೂರಿನಿಂದ ಬರುವವರನ್ನು ಹಿಂದಿನ ವರ್ಷದಂತೆ ಬೇಗನೇ ಹದ್ದುಬಸ್ತಿನಲ್ಲಿಡದೇ, ಸೋಂಕು ಹರಡದಂತೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಲು ಸ್ವಲ್ಪ ತಡ ಮಾಡಿತು ಎಂಬ ಅಭಿಪ್ರಾಯ ಇಲ್ಲಿಯ ಸ್ಥಳೀಯರದು. ಜತೆಗೆ ಬೆಂಗಳೂರಿನಿಂದ ಆಗಮಿಸಿದ ಊರ ಪೋರರನ್ನು ಸೇರಿಸಿಕೊಂಡೇ ಮದುವೆ ಮಾಡಿದ್ದು ಸ್ಥಳೀಯರ ತಪ್ಪು.

ನಿನ್ನೆ (ಮೇ 17) ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜತೆ ನಡೆದ ವರ್ಚುವಲ್ ಸಭೆಯಲ್ಲಿ ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲೈ‌ ಮುಹಿಲನ್‌ ಸಹ ಪಾಲ್ಗೊಂಡಿದ್ದರು. ಅದೂ ಸ್ವತಃ ಕೊವಿಡ್ ಸೋಂಕಿತರಾಗಿ. ಕೆಲ ದಿನಗಳ ಹಿಂದಷ್ಟೇ ತಲೆ ನೋವು ಹಾಗೂ ಮೈಕೈ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಅವರು ಕೊವಿಡ್ ತಪಾಸಣೆಗೊಳಗಾಗಿದ್ದರು. ಆನಂತರ ಕೊವಿಡ್ ಸೋಂಕು ಜಿಲ್ಲಾಧಿಕಾರಿಗಳನ್ನು ಬಾಧಿಸುತ್ತಿರುವುದು ಖಚಿತವಾಗಿತ್ತು. ಸದ್ಯ ಜಿಲ್ಲಾಧಿಕಾರಿ ಮುಲೈ‌ ಮುಹಿಲನ್‌ ದೂರವಾಣಿ, ವಿಡಿಯೋ ಕಾನ್ಫರೆನ್ಸ್​ ಮೂಲಕವೇ ಅಧಿಕಾರಿಗಳಿಗೆ ನಿರ್ದೇಶನ ನೀಡುತ್ತಿದ್ದಾರೆ. ಉತ್ತರ ಕನ್ನಡದಲ್ಲಿ ಪ್ರತಿದಿನವೂ ಸಾವಿರದ ಸಮೀಪವೇ ಕೊವಿಡ್ ಸೋಂಕಿತರು ಪತ್ತೆಯಾಗುತ್ತಿದ್ದು, ನಿನ್ನೆ (ಮೇ 17) ಸಹ 1,288 ಸೋಂಕಿತರು ಪತ್ತೆಯಾಗಿದ್ದಾರೆ. 15 ಸೋಂಕಿತರು ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚುತ್ತಲೇ ಇದೆ ಕೊರೊನಾ ಸೋಂಕಿತರ ಪ್ರಮಾಣ; ಹತೋಟಿಗೆ ತರಲು ಹರಸಾಹಸ

ಕೊರೊನಾ ಪಾಸಿಟಿವಿಟಿ ಹೆಚ್ಚಿರುವ ಜಿಲ್ಲೆಗಳ ಕುರಿತು ನರೇಂದ್ರ ಮೋದಿ ಚರ್ಚೆ; ಉತ್ತರ ಕನ್ನಡ ನಂ.1