National Farmers Day 2020 | ಐಟಿಯಿಂದ ಮೇಟಿಗೆ ಬಂದ ವಸಂತ ಕಜೆ ಕಂಡುಕೊಂಡ ಕೃಷಿ ಫಿಲಾಸಫಿ
ಉದ್ಯೋಗ ಮಾಡಿದ್ದು ಸಾಕು, ನಾಳೆಯಿಂದ ಕೃಷಿ ಮಾಡುತ್ತೇನೆ ಎಂದರೆ ಸಾಧ್ಯವಿಲ್ಲ. ಉದ್ಯೋಗ ಬಿಟ್ಟ ತಕ್ಷಣ ಒಮ್ಮೆಗೆ ಆದಾಯ ಶೂನ್ಯವಾಗುತ್ತದೆ. ಬಹು ಮುಂಚಿನಿಂದಲೇ ಸಂಪೂರ್ಣ ಕೃಷಿಕನಾಗುವ ಯೋಜನೆಯಿದ್ದ ಕಾರಣ ವಸಂತ ಕಜೆ ಆದಾಯ ಕುಸಿತದ ಸಮಸ್ಯೆಯನ್ನು ಸರಿದೂಗಿಸಿಕೊಂಡರು. ಅವರವರ ಶಕ್ತಿಗನುಸಾರ ಅವರವರೇ ಈ ಸೂತ್ರ ಸಿದ್ಧಪಡಿಸಿಕೊಳ್ಳಬೇಕು ಎಂಬ ಸಲಹೆ ಕಜೆ ಅವರದು.

ಬೆಳೆ ಬಂದಾಗಲೇ ಕೊಯ್ಲು ಮಾಡಬೇಕು, ಕಾಯಿ ಬಲಿತಾಗಲೇ ಹಣ್ಣಾಗುತ್ತದೆ, ದಿನಾಂಕಗಳಿಗೆ ಇಲ್ಲಿ ಮಹತ್ವವಿಲ್ಲ. ಕೃಷಿಯಲ್ಲಿ ಒಂದು ನಿರ್ದಿಷ್ಟ ದಿನದ ಆಚರಣೆಗೆ ಅರ್ಥವೇ ಇಲ್ಲ ಎನ್ನುತ್ತಲೇ ಮಾತಿಗಿಳಿದರು ವಸಂತ ಕಜೆ. ಅವರ ಮಾತುಗಳು ಕೃಷಿ ತತ್ವಜ್ಞಾನವನ್ನು ರೂಢಿಸಿಕೊಂಡ ಬಗೆಯನ್ನು ಮನದಟ್ಟು ಮಾಡುತ್ತಿತ್ತು.
ಬಹುತೇಕ ನಗರವಾಸಿಗಳ ಕಲ್ಪನೆಯಲ್ಲಿ ಕೃಷಿ ಎಂದರೆ ಸುಂದರ ಕೆಲಸ. ಆದರೆ, ಕೃಷ್ಣ ಕೊಳಲು ನುಡಿಸುತ್ತಾ ಗೋಪಿಕೆಯರ ಜೊತೆ ದನ ಕಾಯುವ ಚಿತ್ರಪಟದಂತೆ ನೈಜ ಪರಿಸ್ಥಿತಿಯಿಲ್ಲ. ‘ದನ ಕಾಯುವುದು’ ಎಷ್ಟು ಕಷ್ಟದ ಕೆಲಸ ಎಂಬುದು ಕಾದು ನೋಡಿದವರಿಗೇ ಗೊತ್ತು.
ವಸಂತ ಕಜೆ ಇಂಜಿನಿಯರ್ ಪದವೀಧರರು. ಮನೆಯಲ್ಲಿನ ಕೃಷಿ ವಾತಾವರಣ ಬಾಲ್ಯದಲ್ಲೇ ಅವರ ಕೈಗಳಿಗೆ ‘ಮಣ್ಣು’ ಅಂಟಿಸಿತು. ಇಂಜಿನಿಯರಿಂಗ್ ಓದಿ ಬೆಂಗಳೂರು, ಇಂಗ್ಲೆಂಡ್ಗಳಲ್ಲಿ ಕೆಲಸ ನಿರ್ವಹಿಸುವಾಗಲೇ ನಗರ ಜೀವನದ ಮೂಲಭೂತ ವ್ಯವಸ್ಥೆಗಳ ‘ಶುದ್ಧತೆ’ಯ ಕುರಿತು ಸಂಶಯ ಹುಟ್ಟಿತು. ಅಷ್ಟರಲ್ಲಿ ಪುಟ್ಟ ವಸಂತ ನೆಟ್ಟಿದ್ದ ಗಿಡಗಳು ಎತ್ತರಕ್ಕೆ ಬೆಳೆದಿದ್ದವು. ಅದೇ ಗಿಡಗಳು ಕಜೆಯವರನ್ನು ಕರೆದವು.
ಪೇಟೆಯಲ್ಲಿ ಉದ್ಯೋಗ ಮಾಡಿದ್ದು ಸಾಕು, ನಾಳೆಯಿಂದ ಕೃಷಿ ಮಾಡುತ್ತೇನೆ ಎಂದರೆ ಸಾಧ್ಯವಿಲ್ಲ. ಪ್ರತಿ ತಿಂಗಳ ಸಂಬಳದ ಕಲ್ಪನೆ ಕೃಷಿಕರಲ್ಲಿಲ್ಲ. ಉದ್ಯೋಗ ಬಿಟ್ಟ ತಕ್ಷಣ ಒಮ್ಮೆಗೆ ಆದಾಯ ಶೂನ್ಯವಾಗುತ್ತದೆ. ಏನು ಮಾಡಬೇಕೆಂದು ತೋಚುವುದಿಲ್ಲ. ಬಹು ಮುಂಚಿನಿಂದಲೇ ಸಂಪೂರ್ಣ ಕೃಷಿಕನಾಗುವ ಯೋಜನೆಯಿದ್ದ ಕಾರಣ ವಸಂತರು ಒಮ್ಮೆಗೆ ಆದಾಯ ಕುಸಿತದ ಸಮಸ್ಯೆಯನ್ನು ಸರಿದೂಗಿಸಿಕೊಂಡರು. ಅವರವರ ಶಕ್ತಿಗನುಸಾರ ಅವರವರೇ ಈ ಸೂತ್ರ ಸಿದ್ಧಪಡಿಸಿಕೊಂಡೇ ಕೃಷಿಗಿಳಿಯಬೇಕು ಎಂಬ ಸಲಹೆ ಅವರದು. ಅಡಿಕೆ ತೆಂಗು, ಬಾಳೆ, ಕಾಳುಮೆಣಸಿನ ಸಾಂಪ್ರದಾಯಿಕ ಬೆಳೆಗಳ ಜೊತೆಗೆ ಅವರ ಕೃಷಿ ಜೀವನದ ಅನುಷ್ಠಾನಗಳು ನಿಜಕ್ಕೂ ವಿಭಿನ್ನ.
ಹಾಗೆಂದು ವಸಂತ ಕಜೆಯವರು, ಕೇವಲ ಉಮೇದಿಗೆ ಒಳಗಾಗಿ ಕೃಷಿಯ ಬೆನ್ನುಬಿದ್ದವರಲ್ಲ. ಯಾರೂ ಏನನ್ನೋ ಮಾಡಿಬಿಡುತ್ತೇನೆ ಎಂಬ ಹುಕಿಗೆ ಸಿಲುಕಿ ಕೃಷಿಗೆ ಬರಬಾರದು. ಕೃಷಿಯಲ್ಲಿ ವಿಪರೀತ ತಾಳ್ಮೆ ಬೇಕು. ನಿರ್ದಿಷ್ಟ ಯೋಜನೆ, ಕೆಲಕಾಲ ಆರ್ಥಿಕವಾಗಿ ಸಂಭಾಳಿಸಿಕೊಳ್ಳಬಲ್ಲ ಶಕ್ತಿ, ಮತ್ತು ಅತಿ ಮುಖ್ಯವಾಗಿ ತಾಳ್ಮೆ. ಬಾಳೆಗೊನೆ ಬರಲು ಬಾಳೆ ಗಿಡ ನೆಟ್ಟ ಒಂದು ವರ್ಷ ಬೇಕು. ಕೊನೆ ಕೊಯ್ದು ವಾರ ಕಾದರಷ್ಟೇ ಕಾಯಿಗೆ ಹಣ್ಣಿನ ರೂಪ ಸಿಗುತ್ತದೆ. ರೆಡಿ ಟು ಈಟ್, ರೆಡಿ ಟು ಅರ್ನ್ ಪರಿಕಲ್ಪನೆಗೆ ಕೃಷಿಯಲ್ಲಿ ಅಸ್ತಿತ್ವ ಇಲ್ಲ. ಇದನ್ನು ನೆನಪಿಡುವಂತೆ ವಸಂತ ಕಜೆ ಪದೆ ಪದೇ ಎಚ್ಚರಿಸುತ್ತಾರೆ.
ಕೃಷಿಯ ಅಗಾಧ ವಿಸ್ತಾರವನ್ನು ಸದ್ಬಳಕೆ ಮಾಡಿಕೊಳ್ಳುವವರ ಅವಶ್ಯಕತೆ ಇದೆ. ಕೃಷಿ ಭೂಮಿಗೆ ಸಂಬಂಧಿಸಿಯೇ ಉದ್ಯೋಗ, ಉದ್ಯಮ ಕಟ್ಟುವವರಿಗೆ ಕೈತುಂಬಾ ಕೆಲಸಗಳಿವೆ. ವಸಂತ ಕಜೆಯವರು ಔಷಧಿ ಸಸ್ಯಗಳ ‘ಕಜೆ ಸಸ್ಯೋದ್ಯಾನ’ ಹಲವರಿಗೆ ಮಾದರಿ. ಔಷಧ ಸಸಿಗಳ ಮಾರುಕಟ್ಟೆಯನ್ನೂ ಯಶಸ್ವಿಯಾಗಿ ಕಂಡುಕೊಂಡಿದ್ದಾರೆ. ಕೃಷಿಯ ಜೊತೆ ನೆಂಟಸ್ತನ ಹೊಂದಿರುವ ವೃತ್ತಿಗಳಾದ ಜೇನು ಸಾಕಾಣಿಕೆ, ವಿವಿಧ ಸಾಕುಪ್ರಾಣಿಗಳ ತಳಿ ಅಭಿವೃದ್ಧಿ, ಹೈನುಗಾರಿಕೆ, ಮಸಾಲೆ-ಸಾಂಬಾರು ಪದಾರ್ಥ ಉತ್ಪಾದನೆ, ಕೃಷ್ಯುತ್ಪನ್ನ ಮೌಲ್ಯವರ್ಧನೆ, ಕರಕುಶಲ ವಸ್ತು ತಯಾರಿಕೆಗಳಲ್ಲಿ ತೊಡಗಬಹುದು. ಆದರೆ, ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಸ್ವಭಾವತಃ ಆಸಕ್ತಿ, ಕೌಶಲ ಹೊಂದಿರಬೇಕು.
ಈಗಲೂ ಎಂಜಿನಿಯರ್ ಆಗಿರುವ ಗೆಳೆಯರು ವಸಂತ ಕಜೆಯವರಿಗೆ ಶಹಬ್ಬಾಸ್ ಹೇಳುತ್ತಾರೆ. ಕೃಷಿಕರಾಗುವ ಇಚ್ಛೆಯಿದ್ದೂ, ಉದ್ಯೋಗ ತ್ಯಜಿಸಿ ಪೂರ್ಣಕಾಲಿಕ ಕೃಷಿಕರಾಗಲಾಗದ ಇಬ್ಬಂದಿ ಪರಿಸ್ಥಿತಿಯ ಗೆಳೆಯರು ಶರಣಾಗತಿ ಸೂಚಿಸುತ್ತಾರೆ. ಕಜೆಯರ ‘ಐಟಿಯಿಂದ ಮೇಟಿಗೆ’ ಪುಸ್ತಕ ಓದಿ ಪ್ರಭಾವಿತರಾದವರು ಬಹು ದೊಡ್ಡ ಸಂಖ್ಯೆಯಲ್ಲಿದ್ದಾರೆ.
ಕಜೆಯವರು ಕೃಷಿ ಮತ್ತು ಕಾರ್ಪೊರೇಟ್ನ ವ್ಯತ್ಯಾಸಗಳನ್ನು ಸ್ಪಷ್ಟವಾಗಿ ಗುರುತಿಸುತ್ತಾರೆ. ಕೃಷಿಯಲ್ಲಿ ಆದಾಯ ದ್ವಿಗುಣಗೊಳಿಸಬೇಕೆಂಬ ನಿರ್ದಿಷ್ಟ ಗುರಿ ಇಟ್ಟುಕೊಳ್ಳುವುದು ಸಾಧ್ಯವಿಲ್ಲ. ಕೇವಲ ಲಾಭವೊಂದೇ ಕೃಷಿಯ ಗುರಿ ಆಗಲೂಬಾರದು. ಕೃಷಿ ಆರಾಮದಾಯಕವೆಂಬ ಮನಸ್ಥಿತಿ ನಿಮ್ಮಲ್ಲಿದ್ದರೆ ದಯವಿಟ್ಟು ಅದನ್ನು ಬಿಟ್ಟುಬಿಡಿ. ‘ಆಸಕ್ತಿಯಿದ್ದವರು ಯೋಚಿಸಿ, ಯೋಜನೆ ರೂಪಿಸಿ. ಕೃಷಿ ಎಂದರೆ ಚಂದ ಎಂದು ಕುರುಡಾಗಿ ಧುಮುಕಬೇಡಿ. ಸಾವಧಾನವಾಗಿ ಕೃಷಿಯಲ್ಲಿ ತೊಡಗಿಸಿಕೊಳ್ಳಿ’. ಏಕೆಂದರೆ ದಿನದ 24 ಘಂಟೆಗಳನ್ನೂ ತನ್ನ ತೆಕ್ಕೆಗೆ ಎಳೆದುಕೊಳ್ಳುವ ಕೃಷಿ ಒಂದು ಕೆಲಸವಲ್ಲ, ಜೀವನ ವಿಧಾನ.
ವಸಂತ ಕಜೆ: 12 ವರ್ಷ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸಿ, ಇದೀಗ ಸಂಪೂರ್ಣ ಪ್ರಮಾಣದ ಕೃಷಿಕರು. ಅವರ ಅನುಭವ ‘ಐಟಿಯಿಂದ ಮೇಟಿಗೆ’ ಪುಸ್ತಕ ಸ್ಪೂರ್ತಿದಾಯಕ. ಕೃಷಿ ತತ್ವಜ್ಞಾನವನ್ನು ಅನುಷ್ಠಾನಕ್ಕೆ ತಂದಿರುವ ಅವರ ದಕ್ಷಿಣ ಕನ್ನಡದ ಪುತ್ತೂರಿನ ಕಜೆ ಈಗ ಲೋಕಮಾನ್ಯ.
National Farmers Day 2020 | ಹೊಲದತ್ತ ಹೆಜ್ಜೆ ಹಾಕಲು ಭಯವೇಕೆ? ಮಣ್ಣಲ್ಲವೇ ನಮ್ಮನ್ನೆಲ್ಲಾ ಪೊರೆವ ತಾಯಿ..
Published On - 5:13 pm, Wed, 23 December 20