ವಿಜಯಪುರ: ಬರದ ನಾಡು ವಿಜಯಪುರ ಜಿಲ್ಲೆಯಲ್ಲಿ ಅರಣ್ಯ ಪ್ರಮಾಣ ಕಡಿಮೆ. ಅರಣ್ಯ ಸಂಪತ್ತನ್ನು ಉಳಿಸಿಕೊಳ್ಳಲು ಸದಾ ಪ್ರಯತ್ನ ಮಾಡಲಾಗುತ್ತಿದೆ. ಕಡಿಮೆ ಪ್ರಮಾಣದ ಅರಣ್ಯವನ್ನು ಹೆಚ್ಚು ಮಾಡಲು ಒಂದು ಕಡೆ ಪ್ರಯತ್ನ ನಡೆಯುತ್ತಿದ್ದರೆ, ಇನ್ನೊಂದು ಕಡೆ ಇದ್ದ ಮರಗಿಡಗಳನ್ನು ರಕ್ಷಣೆ ಮಾಡುವ ಕೆಲಸ ಮಾಡಲಾಗುತ್ತಿದೆ. ಮತ್ತೊಂದೆಡೆ ಅಭಿವೃದ್ಧಿ ಹೆಸರಲ್ಲಿ ರಸ್ತೆ ಬದಿಯ ಹಾಗೂ ಅಲ್ಪಸ್ವಲ್ಪ ಕಾಡನ್ನು ಕಡಿಯಲಾಗುತ್ತಿದೆ. ಈ ಮಧ್ಯೆ ನಗರದ ಭಾಗದಲ್ಲಿ ಮರ ಗಿಡಗಳನ್ನು ಉಳಿಸಲು ಏಳು ಜನರ ಯುವಕರ ತಂಡವೊಂದು ಶ್ರಮಿಸುತ್ತಿದೆ.
ಜಿಲ್ಲೆಯಲ್ಲಿ ಅರಣ್ಯ ಪ್ರದೇಶ ವಿರಳ. ಇಡೀ ಜಿಲ್ಲೆಯಲ್ಲಿಯೇ 1,770 ಹೆಕ್ಟೇರ್ ಪ್ರದೇಶ ಮಾತ್ರ ಅರಣ್ಯವಿದೆ. ಇದೇ ಭಾಗದಲ್ಲಿ ಅಭಿವೃದ್ಧಿ ಹೆಸರಿನಲ್ಲಿಯೂ ಮರಗಿಡಗಳನ್ನು ಕಡಿದು ಹಾಕಲಾಗುತ್ತಿದೆ. ಇದರಿಂದ ನಗರ ಭಾಗದಲ್ಲಿನ ಮರಗಳು ದಿನದಿಂದ ದಿನಕ್ಕೆ ಕಣ್ಮರೆಯಾಗುತ್ತಿವೆ. ಇಂಥಹ ಮರಗಳನ್ನು ರಕ್ಷಣೆ ಮಾಡಲು ಒಂದು ಯುವಕರ ತಂಡ ಕಳೆದ ಒಂದು ವರ್ಷದಿಂದ ಕೆಲಸ ಮಾಡುತ್ತಿದೆ.
ಮೊಳೆ ಮುಕ್ತ ಮರ ಅಭಿಯಾನ
ಮೊಳೆ ಮುಕ್ತ ಮರ ಅಭಿಯಾನ ಮಾಡುವ ಮೂಲಕ ಮರಗಿಡಗಳನ್ನು ಸಂರಕ್ಷಣೆ ಮಾಡುತ್ತಿದೆ ಯುವಕರ ತಂಡ. ಇಂಡಿ ತಾಲೂಕಿನ ಭತಗುಣಿ ಗ್ರಾಮದ ಇಬ್ರಾಹಿಂ ಭಾಗವಾನ್ ಹಾಗೂ ರಫಿಕ್ ಕಂದಗಲ್ ಸೇರಿಕೊಂಡು ನಗರದಲ್ಲಿನ ಮರಗಳಿಗೆ ಹೊಡೆದ ಮೊಳೆ, ಕಬ್ಬಿಣದ ರಾಡ್, ಕಬ್ಬಿಣದ ಆ್ಯಂಗಲ್ಗಳನ್ನು ತೆಗೆಯುವುದರ ಮೂಲಕ ಮರಗಳನ್ನು ಉಳಿಸುವ ಕೆಲಸವನ್ನು ಆರಂಭಿಸಿದರು.
ನಕ್ಕವರೇ ಹೆಚ್ಚು
ವಿವಿಧ ಸಲಕರಣೆಗಳನ್ನು ಉಪಯೋಗಿಸಿ ಮರಗಳಲ್ಲಿನ ಮೊಳೆ, ರಾಡ್, ಕಬ್ಬಿಣದ ಪಟ್ಟಿಗಳನ್ನು ತೆಗೆಯುತ್ತಾರೆ. ಆರಂಭದಲ್ಲಿ ಇವರ ಕೆಲಸ ನೋಡಿ ನಗುತ್ತಿದ್ದರು. ಆದರೆ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಮೊಳೆ ಮುಕ್ತ ಮರಗಳ ಅಭಿಯಾನವನ್ನು ಮುಂದುವರೆಸಿದರು. ನಂತರದ ದಿನಗಳಲ್ಲಿ ಕಾರ್ಯ ನೋಡಿದ ಇತರೆ ಐವರು ಯುವಕರಾದ ನವೀದ್, ಸಮೀರ್, ಸಿಕಂದರ್, ಶಫೀಕ್, ಮಹಮ್ಮದ್ರವರು ಇಬ್ರಾಹಿಂ ಭಾಗವಾನ್ ಹಾಗೂ ರಫಿಕ್ ಕಂದಗಲ್ ಜೊತೆ ಕೆಲಸ ಮಾಡಲು ಮುಂದಾದರು.
ಈ ಏಳು ಯುವಕರ ತಂಡ ಶ್ರೀಮಂತ ಮನೆತನದವರಲ್ಲ. ವಾರ ಪೂರ್ತಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ. ವಾರದಲ್ಲಿ ಒಂದು ದಿನ ಸಮಯವನ್ನು ನಗರ ಭಾಗದಲ್ಲಿನ ಮರಗಳಿಗೆ ಹೊಡೆದ ಮೊಳೆ, ಕಬ್ಬಿಣದ ರಾಡ್, ಕಬ್ಬಿಣದ ಆ್ಯಂಗಲ್ಗಳನ್ನು ತೆಗೆಯುವುದಕ್ಕೆ ಮೀಸಲಿಡುತ್ತಾರೆ. ಈ ಮೂಲಕ ಮರಗಳನ್ನು ಉಳಿಸಲು ಮುಂದಾಗಿದ್ದಾರೆ. ಮರದೊಳಗೆ ಮೊಳೆ, ಕಬ್ಬಿಣದ ರಾಡ್, ಕಬ್ಬಿಣದ ಆ್ಯಂಗಲ್ ಸಿಲುಕಿದಾಗ ಮರದ ಕಾಂಡದಲ್ಲಿರುವ ನರಗಳು ನಾಶವಾಗುತ್ತವೆ. ಇದರಿಂದ ಇಡೀ ಕೊಂಬೆ ಒಣಗುತ್ತಾ, ಕೊಂಬೆಯ ಭಾಗ ಬಲಹೀನವಾಗುತ್ತಾ ಹೋಗುತ್ತದೆ. ಜೋರಾಗಿ ಗಾಳಿ ಬೀಸಿದಾಗ ಅಥವಾ ಮಳೆ ಬಂದಾಗ ಕೊಂಬೆಯ ಜೊತೆಗೆ ಇಡೀ ಮರವೇ ನೆಲಕ್ಕೆ ಉರುಳುತ್ತವೆ. ಈ ಕಾರಣದಿಂದ ಮೊಳೆ ಮುಕ್ತ ಮರ ಅಭಿಯಾನ ಮಾಡುವ ಮೂಲಕ ಪರಿಸರ ಪ್ರೇಮ ಮೆರೆಯುತ್ತಿದ್ದಾರೆ.
ನಗರ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಬ್ಯಾನರ್, ಜಾಹೀರಾತು ಫಲಕಗಳನ್ನು ಮರಕ್ಕೆ ಕಟ್ಟಲು ಕಬ್ಬಿಣದ ರಾಡ್ ಮತ್ತು ಮೊಳೆಗಳನ್ನು ಹೊಡೆಯುತ್ತಾರೆ. ಮೊದಲೇ ಮರಗಳಿಲ್ಲದ ನಾಡಲ್ಲಿ ಮೊಳೆ, ಕಬ್ಬಿಣ ರಾಡ್ಗಳನ್ನು ಹೊಡೆಯುವುದರಿಂದ ಇರುವ ಮರಗಳೂ ನಶಿಸಿ ಹೋಗುತ್ತಿವೆ. ನಾವು ಯಾವುದೇ ಫಲಾಪೇಕ್ಷೆಯಿಲ್ಲದೇ ಮರಗಳನ್ನು ಉಳಿಸಲು ಪ್ರಯತ್ನ ಮಾಡುತ್ತಿದ್ದೇವೆ. ನಮ್ಮ ಕಾರ್ಯವನ್ನು ನೋಡಿ ಅನೇಕ ಜನರು ಕುಹಕವಾಡಿದರು. ಸರ್ಕಾರ ಯೋಜನೆಗಳ ಹಣ ಹೊಡೆಯಲು ಈ ಕೆಲಸ ಮಾಡುತ್ತಿದ್ದೀರಾ ಎಂದು ಹಲವರು ಪ್ರಶ್ನೆ ಮಾಡಿದರು. ಇದರಿಂದ ನಿಮಗೇನು ಲಾಭವೆಂದು ಕೂಡಾ ಕೇಳಿದರು. ನಾವು ನಿತ್ಯ ಕೆಲಸ ಮಾಡಿ ಜೀವನ ಮಾಡುವವರು. ವಾರದಲ್ಲಿ ಒಂದು ದಿನ ಎಲ್ಲರೂ ಸೇರಿ ಸಣ್ಣ ಪ್ರಯತ್ನದ ಮೂಲಕ ಪರಿಸರ ಉಳಿವಿಕೆಗೆ ಮುಂದಾಗಿದ್ದೇವೆ ಎಂದು ಯುವಕರು ತಿಳಿಸಿದರು.
ತಂಡದ ಏಳು ಜನ ಸದಸ್ಯರ ಪೈಕಿ ಇಬ್ರಾಹಿಂ ಭಾಗವಾನ್ ಜಮೀನು ಕೆಲಸ ಮಾಡುತ್ತಿದ್ದಾರೆ. ರಫಿಕ್ ಕಂದಗಲ್ ಚಹಾ ಅಂಗಡಿ ನಡೆಸುತ್ತಾರೆ. ನವೀದ್ ವಿದ್ಯಾರ್ಥಿಯಾಗಿದ್ದು, ಸಮೀರ್ ಗ್ಯಾರೇಜ್ನಲ್ಲಿ ಕೆಲಸ ಮಾಡುತ್ತಿದ್ದಾರೆ. ಶಫೀಕ್ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದರೆ, ಸಿಂಕದರ್ ಪೆಟ್ರೋಲ್ ಬಂಕ್ನಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನು ಮಹಮ್ಮದ್ ಗಾರೆ ಕೆಲಸ ಮಾಡುತ್ತಿದ್ದಾರೆ. ತಮ್ಮ ಕೆಲಸದ ನಡುವೆಯೂ ಪರಿಸರ ಕಾಳಜಿ ವಹಿಸಿರುವ ಈ ಯುವಕರ ಕಾರ್ಯಕ್ಕೆ ಸಾರ್ವಜನಿಕರು ಇದೀಗ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:
1 ರೂಪಾಯಿ ಗೌರವಧನ ಸಾಕು: ಪರಿಸರ ಪ್ರವಾಸೋದ್ಯಮ ಮಂಡಳಿ ಅಧ್ಯಕ್ಷ ಮದನ್ ಗೋಪಾಲ್
ವೃದ್ಧೆಯನ್ನು ವೃದ್ಧಾಶ್ರಮಕ್ಕೆ ಸೇರಿಸಿ ಇತರರಿಗೂ ಮಾದರಿಯಾದ ಹಾವೇರಿಯ ಕಾಗಿನೆಲೆ ಪಿಎಸ್ಐ