ಬಗೆಹರಿಯದ ಕೃಷ್ಣಾ ನದಿ ನೀರು ವಿವಾದ: ಕುಂಟು ನೆಪ ಹೇಳುತ್ತಾ ಓಡಾಡಬೇಡಿ ಎಂದ ರೈತರು
ಕೃಷ್ಣಾ ನದಿ ನೀರು ಮೊದಲ ನ್ಯಾಯಾಧೀಕರಣದಲ್ಲಿ ಬಚಾವತ್ ಆಯೋಗದ ವರದಿಯಂತೆ ನೀರಿನ ಹಂಚಿಕೆಯಾಗಿತ್ತು. ನಂತರ ಎರಡನೇ ನ್ಯಾಯಾಧೀಕರಣದಲ್ಲಿ ಬ್ರಿಜೇಶ್ ಕುಮಾರ್ ಆಯೋಗದ ವರದಿ ತೀರ್ಪು ಹೊರ ಬಂದು 15 ವರ್ಷಗಳಾಗಿವೆ. ಆದರೆ ತೀರ್ಪಿನಂತೆ ನೀರಿನ ಹಂಚಿಕೆ ಹಾಗೂ ಇತರೆ ಕೆಲಸ ಕಾರ್ಯಗಳು ಆಗಿಲ್ಲ. ಈ ಮಧ್ಯೆ ನೆರೆಯ ತೆಲಂಗಾಣ ಹಾಗೂ ಆಂಧ್ರಪ್ರದೇಶ ಸರ್ಕಾರಗಳು ನೀರು ಹಂಚಿಕೆ ಡ್ಯಾಂನ ಎತ್ತರ ಹೆಚ್ಚಿಸುವ ವಿಚಾರವನ್ನು ಸುಪ್ರೀಂ ಕೋರ್ಟ್ವರೆಗೂ ತೆಗೆದುಕೊಂಡು ಹೋಗಿವೆ. ಇತ್ತ ಮಹಾರಾಷ್ಟ್ರವೂ ಈ ವಿಚಾರದಲ್ಲಿ ಕ್ಯಾತೆ ತೆಗೆದಿದೆ. ಹಾಗಾದರೆ ರಾಜ್ಯ ಸರ್ಕಾರ ಮಾಡಬೇಕಾಗಿರುವುದು ಏನು? ಇಲ್ಲಿದೆ ವಿವರ

ವಿಜಯಪುರ, ಜೂನ್ 10: ಕೃಷ್ಣೆ ಹಾಗೂ ಕಾವೇರಿ ರಾಜ್ಯದ ಎರಡು ಕಣ್ಣುಗಳು. ಆದರೆ, ಕಾವೇರಿ ಜಲ ವಿವಾದಕ್ಕೆ ನೀಡಿದ ಪ್ರಾಧಾನ್ಯತೆ ಕೃಷ್ಣೆ ಜಲ ವಿವಾದಕ್ಕೆ ನೀಡಲ್ಲ ಎಂಬ ಆರೋಪವೂ ಇದೆ. 1964 ರಲ್ಲೇ ವಿಜಯಪುರ (Vijayapura) ಜಿಲ್ಲೆ ನಿಡಗುಂದಿ ತಾಲೂಕಿನ ಆಲಮಟ್ಟಿ ಬಳಿ ಕೃಷ್ಣಾ ನದಿಗೆ ಅಡ್ಡಲಾಗಿ ಜಲಾಶಯ ನಿರ್ಮಾಣ ಮಾಡಲು ಅಂದಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಶಿಲಾನ್ಯಾಸ ಮಾಡಿದ್ದರು. 2002 ರಲ್ಲಿ ಆಲಮಟ್ಟಿ ಜಲಾಶಯ (Almatti Dam) ನಿರ್ಮಾಣ ಪೂರ್ಣಗೊಂಡಿತು.
ಬಚಾವತ್ ಆಯೋಗದ ತೀರ್ಪು ನಂತರ ಬ್ರಿಜೇಶ್ ಕುಮಾರ್ ಆಯೋಗದ ವರದಿ ತೀರ್ಪು ಬಂದರೂ ಡ್ಯಾಂ ನಿರ್ಮಾಣಕ್ಕೆ ಭೂಮಿ ನೀಡಿದ ವಿಜಯಪುರ ಮತ್ತು ಬಾಗಕೋಟೆ ಜಿಲ್ಲೆಗಳ ಜನರಿಗೆ ಇನ್ನೂವರೆಗೂ ಫಲ ಸಿಕ್ಕಿಲ್ಲ. ಬ್ರಿಜೇಶ್ ಕುಮಾರ್ ಆಯೋಗದ ವರದಿಯಂತೆ ಡ್ಯಾಂ ಅನ್ನು 519.60 ಮೀಟರ್ನಿಂದ 524.256 ಮೀಟರ್ಗೆ ಎತ್ತರಿಸುವ ವಿಚಾರನ್ನು ತೆಲಂಗಾಣ ಮತ್ತು ಆಂದ್ರಪ್ರದೇಶ ಸರ್ಕಾರಗಳು ಸುಪ್ರೀಂಕೋರ್ಟ್ನ ಅಂಗಳಕ್ಕೆ ತೆಗೆದುಕೊಂಡು ಹೋಗಿವೆ. 5124. 256 ಮೀಟರ್ ಎತ್ತರಿಸಲು ಡ್ಯಾಂ ನಿರ್ಮಾಣ ಕಾಮಗಾರಿ ಈಗಾಗಲೇ ಮುಗಿದು ಹೋಗಿದೆ. ಇನ್ನೇನಿದ್ದರೂ ಕ್ರಸ್ಟ್ ಗೇಟ್ಗಳನ್ನು ಎತ್ತರಿಸುವ ಕೆಲಸ ಮಾತ್ರ ಬಾಕಿ ಇದೆ. ಈ ಮಧ್ಯೆ ಮಹಾರಾಷ್ಟ್ರ ಸರ್ಕಾರ ಆಲಮಟ್ಟಿ ಜಲಾಶಯ ಎತ್ತರ ಹೆಚ್ಚಿಸಿದರೆ ಕೊಲ್ಹಾಪೂರ, ಸಾಂಗ್ಲಿ ಮತ್ತು ಮೀರಜ್ ನಗರಳು ಹಾಗೂ ಸುತ್ತಮುತ್ತಲ ಗ್ರಾಮಗಲಿಗೆ ಪ್ರವಾಹ ಉಂಟಾಗುತ್ತದೆ, ಹೀಗಾಗಿ ಎತ್ತರ ಹೆಚ್ಚಿಸದಂತೆ ರಾಜ್ಯಕ್ಕೆ ಪತ್ರ ಬರೆದಿದೆ.
“ಇದು ತರ್ಕಭದ್ದವಲ್ಲ, ಇದು ಅರ್ಥಹೀನವಾಗಿದೆ. ಜಲಾಶಯ ಎತ್ತರ ಹೆಚ್ಚಿಸಿದರೆ ಮಹಾರಾಷ್ಟ್ರದಲ್ಲಿ ಯಾವುದೇ ಪ್ರವಾಹ ಉಂಟಾಗುವುದಿಲ್ಲ ಎಂದು ಸಮೀಕ್ಷಾ ವರದಿ ಹೇಳಿದೆ. ರಾಜ್ಯ ಸರ್ಕಾರ ತಡ ಮಾಡದೆ ಕಾನೂನು ಹೋರಾಟ ಮಾಡಬೇಕೆಂದು” ರೈತರು ಮತ್ತು ನೀರಾವರಿ ಹೋರಾಟಗಾರರು ಒತ್ತಾಯಿಸಿದ್ದಾರೆ.
“ಬಚಾವತ್ ಆಯೋಗದ ವರದಿಯಂತೆ ಆಮಲಟ್ಟಿ ಡ್ಯಾಂನಲ್ಲಿ 519.60 ಮಿಟರ್ ಮಾತ್ರ ನೀರು ನಿಲ್ಲಿಸಬೇಕೆಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಉಳಿದ ನೀರಿನ ಹಂಚಿಕೆಯನ್ನು ಎರಡನೇ ನ್ಯಾಯಾಧಿಕರಣ ಮಾಡುತ್ತದೆ ಎಂದು ಸಹ ಹೇಳಾಗಿತ್ತು. ಬ್ರಿಜೇಶ್ ಕುಮಾರ್ ಆಯೋಗದ ವರದಿಯಂತೆ ಎರಡನೇ ತೀರ್ಪು ಸುಪ್ರೀಂಕೋರ್ಟ್ ನೀಡಿದೆ. ರಾಜ್ಯ ಸರ್ಕಾರ ಜಲಾಶಯದ ಎತ್ತರ ಹೆಚ್ಚಿಸುವಲ್ಲಿ ಮುಂದಾಗಬೇಕು. ಅದುಬಿಟ್ಟು ಮಹಾರಾಷ್ಟ್ರದವರು ಪತ್ರ ಬರೆದರು, ತೆಲಂಗಾಣ ಮತ್ತು ಆಂಧ್ರಪ್ರದೇಶ ಸುಪ್ರೀಂಕೋರ್ಟ್ಗೆ ಹೋಗಿವೆ ಎಂದು ನೆಪ ಹೇಳಬಾರದು ಎಂದರು.”
“524.256 ಮೀಟರ್ವರೆಗೆ ಜಲಾಶಯದ ಎತ್ತರ ಹೆಚ್ಚಿಸಲು ರಾಜ್ಯ ಸರ್ಕಾರ ಭೂಸ್ವಾಧೀನ ಕಾರ್ಯ ಆರಂಭಿಸಬೇಕು. ಅದಕ್ಕಾಗಿ 1 ಲಕ್ಷ ಕೋಟಿ ರೂಪಾಯಿಗೂ ಆಧಿಕ ಹಣ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗದ ರಾಜ್ಯ ಸರ್ಕಾರ ಕುಂಟು ನೆಪಗಳನ್ನು ಹೇಳಬಾರದು. ಭೂಸ್ವಾಧೀನ, ಆರ್ ಆ್ಯಂಡ್ ಆರ್ ಸಮಗ್ರವಾಗಿ ಮಾಡಿ, ಡ್ಯಾಂನ ಎತ್ತರ ಹೆಚ್ಚಿಸಲು ಏನೆಲ್ಲ ಕಾರ್ಯಗಳನ್ನು ಮಾಡಲಾಗಿದೆ ಅದನ್ನು ಸುಪ್ರೀಂ ಕೋರ್ಟಿಗೆ ಮನವರಿಕೆ ಮಾಡಿಕೊಡಬೇಕು. ಅದನ್ನು ಬಿಟ್ಟು ನೆಪಗಳನ್ನು ಹೇಳಿ ಉತ್ತರ ಕರ್ನಾಟಕ ಭಾಗದ ರೈತರಿಗೆ ತೊಂದರೆ ಕೊಡಬಾರದು” ಒತ್ತಾಯಿಸಿದರು.
ಇದನ್ನೂ ಓದಿ: ವಿಜಯಪುರ ವಿಮಾನ ನಿಲ್ದಾಣಕ್ಕೆ ಮತ್ತೆ ತಡೆ: ಉದ್ಘಾಟನೆಗೆ ಹಸಿರು ಪೀಠದ ವಿಘ್ನ
ಕೃಷ್ಣೆಯ ವಿಚಾರದಲ್ಲಿ ಕೇಂದ್ರವೂ ಸಹ ಗಮನ ಹರಿಸಬೇಕೆಂಬ ಕೂಗು ಜಿಲ್ಲೆಯಲ್ಲಿ ಹಾಗೂ ಕೃಷ್ಣಾ ತೀರದ ರೈತರ ಜನರ ಒತ್ತಾಸೆಯಾಗಿದೆ. ಡ್ಯಾಂನ ಎತ್ತರ ಹೆಚ್ಚಿಸಲು ಎರಡನೇ ನ್ಯಾಯಾಧಿಕರಣ ತೀರ್ಪನ್ನು ಕೇಂದ್ರ ಗೆಜೆಟ್ ಮಾಡಿಕೊಡಬೇಕೆಂದು ಒತ್ತಾಯಿಸಿದ್ದಾರೆ. ರಾಜ್ಯ ಸರ್ಕಾರದ ನೆಪ, ಸುತ್ತಮುತ್ತಲ ರಾಜ್ಯಗಳ ತಗಾದೆ, ಕೇಂದ್ರ ಸರ್ಕಾರದ ನಿರ್ಲಕ್ಷ್ಯದಿಂದ ಕೃಷ್ಣಾ ತೀರದ ಜನರಿಗೆ ಮೋಸವಾಗುತ್ತಿದೆ. ಇನ್ನಾದರೂ ಆಲಮಟ್ಟಿ ಡ್ಯಾಂ ನಿರ್ಮಾಣಕ್ಕಾಗಿ ತ್ಯಾಗ ಮಾಡಿದ ವಿಜಯಪುರ ಬಾಗಲಕೋಟೆ ಜನರಿಗೆ ಕೃಷ್ಣೆಯ ನೀರು ಸಿಗಬೇಕಿದೆ. ಇಲ್ಲವಾದರೆ ಈ ಭಾಗದ ಜನರ ಶಾಪ ಸರ್ಕಾರಗಳಿಗೆ ತಟ್ಟುವುದು ಖಾತ್ರಿ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:15 pm, Tue, 10 June 25