ಗ್ರಾಮ ಒನ್ ಕೇಂದ್ರ ಉದ್ಘಾಟನೆ; ಒಂದೇ ಸೂರಿನಡಿ ಪ್ರಮುಖ ನಾಗರಿಕ ಸೇವೆಗಳು ಲಭ್ಯ- ಸಚಿವ ಸುರೇಶ್ ಕುಮಾರ್

ರಾಜ್ಯದ ಗ್ರಾಮಗಳಲ್ಲಿ ಒಂದೇ ಸೂರಿನಡಿಯಲ್ಲಿ ಎಲ್ಲಾ ಇಲಾಖೆಗಳ ಪ್ರಮುಖ ನಾಗರಿಕ ಸೇವೆಗಳನ್ನು ನಾಗರಿಕರಿಗೆ ನೀಡುವ ಉದ್ದೇಶದಿಂದ ಖಾಸಗಿ ಸಹಭಾಗಿತ್ವದೊಂದಿಗೆ ಗ್ರಾಮ ಒನ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದರು.

  • ಅಶೋಕ ಯಡಳ್ಳಿ
  • Published On - 14:19 PM, 8 Apr 2021
ಗ್ರಾಮ ಒನ್ ಕೇಂದ್ರ ಉದ್ಘಾಟನೆ; ಒಂದೇ ಸೂರಿನಡಿ ಪ್ರಮುಖ ನಾಗರಿಕ ಸೇವೆಗಳು ಲಭ್ಯ- ಸಚಿವ ಸುರೇಶ್ ಕುಮಾರ್
ಗ್ರಾಮ ಒನ್ ಕೇಂದ್ರವನ್ನು ಉದ್ಘಾಟಿಸಿದ ಸಚಿವ ಸುರೇಶ್ ಕುಮಾರ್

ವಿಜಯಪುರ: ರಾಜ್ಯದ ಗ್ರಾಮಗಳಲ್ಲಿ ಒಂದೇ ಸೂರಿನಡಿಯಲ್ಲಿ ಎಲ್ಲಾ ಇಲಾಖೆಗಳ ಪ್ರಮುಖ ನಾಗರಿಕ ಸೇವೆಗಳನ್ನು ನಾಗರಿಕರಿಗೆ ನೀಡುವ ಉದ್ದೇಶದಿಂದ ಖಾಸಗಿ ಸಹಭಾಗಿತ್ವದೊಂದಿಗೆ ಗ್ರಾಮ ಒನ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಬುಧವಾರ (ಏಪ್ರಿಲ್​ 7) ತಿಳಿಸಿದರು. ವಿಜಯಪುರ ಜಿಲ್ಲೆಯ ಹೊರ್ತಿ ಗ್ರಾಮದಲ್ಲಿ ಗ್ರಾಮ ಒನ್ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಮಹಾರಾಷ್ಟ್ರದ ಗಡಿ ಭಾಗದಲ್ಲಿರುವ ಈ ಗ್ರಾಮದಲ್ಲಿ ಗ್ರಾಮ ಒನ್ ಕೇಂದ್ರ ಸ್ಥಾಪನೆ ಮಾಡಿದ್ದಕ್ಕೆ ಅತ್ಯಂತ ಸಂತಸವಾಗಿದೆ. ಗ್ರಾಮೀಣ ಪ್ರದೇಶದ ನಾಗರಿಕರು ವಿವಿಧ ಸೇವೆಗಾಗಿ ಯಾವುದೇ ಕಚೇರಿಗೆ ಅಲೆಯಬಾರದೆಂಬ ಉದ್ದೇಶದಿಂದ ಇಂತಹ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.

ವಿವಿಧ ಜಿಲ್ಲೆಗಳ ಆಯ್ಕೆ
ರಾಜ್ಯದ ನಾಲ್ಕು ವಿಭಾಗದ ಗ್ರಾಮ ಒನ್ ಕೇಂದ್ರ ಸ್ಥಾಪನೆ ಮಾಡಲು ವಿವಿಧ ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ. ಅದರಲ್ಲಿ ಬೆಂಗಳೂರು – ದಾವಣಗೆರೆ, ಮೈಸೂರು-ಚಿಕ್ಕಮಗಳೂರು, ಬೆಳಗಾವಿ- ವಿಜಯಪುರ, ಕಲ್ಯಾಣ ಕರ್ನಾಟಕದ- ಬೀದರ್ ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ. ಗ್ರಾಮ ಒನ್ ಕೇಂದ್ರಗಳನ್ನು ಪ್ರಥಮ ಹಂತದಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಕಳೆದ 2020 ರ ನವೆಂಬರ್ 19 ರಂದು ನೂರು ಗ್ರಾಮಗಳಲ್ಲಿ ಸ್ಥಾಪನೆ ಮಾಡಲಾಯಿತು. ಪ್ರಾರಂಭದಲ್ಲಿ 150 ಸೇವೆಗಳಿದ್ದವು. 8 ವರ್ಷದಲ್ಲಿ 1,125 ಸೇವೆಗಳು ಪ್ರಾರಂಭ ಮಾಡಲಾಗಿದ್ದು, ಶೇಕಡಾ 98 ರಷ್ಟು ಸೇವೆ ನೀಡಲಾಗಿದೆ ಎಂದು ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದರು.

ವಿಜಯಪುರ ಜಿಲ್ಲೆಯ 125 ಗ್ರಾಮಗಳಲ್ಲಿ ಕೇಂದ್ರಗಳ ಸ್ಥಾಪನೆ
ವಿಜಯಪುರ ಜಿಲ್ಲೆಯಲ್ಲಿ 12 ತಾಲೂಕುಗಳಲ್ಲಿ 193 ಗ್ರಾಮಗಳ ಪೈಕಿ ಒಟ್ಟು 125 ಆಯ್ಕೆಯಾದ ಗ್ರಾಮಗಳಲ್ಲಿ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಜಿಲ್ಲೆಯ ಬಬಲೇಶ್ವರ 10, ಬಸವನ ಬಾಗೇವಾಡಿ 10, ಚಡಚಣ 9, ದೇವರಹಿಪ್ಪರಗಿ 4, ಇಂಡಿ 22, ಕೋಲಾರ 6, ಮುದ್ದೇಬಿಹಾಳ 9, ನಿಡಗುಂದಿ 6, ಸಿಂದಗಿ 19, ತಾಳಿಕೋಟೆ 10, ತಿಕೋಟಾ 10, ವಿಜಯಪುರ 10, ಗ್ರಾಮ ಒನ್ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ. ಸದ್ಯ ಇಂಡಿ ತಾಲೂಕಿನ ಹೊರ್ತಿ ಗ್ರಾಮದಲ್ಲಿ ಗ್ರಾಮ ಒನ್ ಕೇಂದ್ರವನ್ನು ಸ್ಥಾಪನೆ ಮಾಡಿದ್ದು, ಈ ಕೇಂದ್ರದ ಸೇವೆಯಿಂದ ಹೊರ್ತಿ ಗ್ರಾಮವು ಇಡೀ ರಾಜ್ಯಕ್ಕೆ ಮಾದರಿಯಾಗುವಂತೆ ಕೆಲಸ ಮಾಡಬೇಕೆಂದು ಅವರು ತಿಳಿಸಿದರು.

ಪ್ರತಿ ಪ್ರಜೆಗೂ ಸೇವೆಗಳ ಲಭ್ಯವಾಗಬೇಕು
ಜಿಲ್ಲೆಯ ಪ್ರತಿ ಪ್ರಜೆಗೂ ಗ್ರಾಮ ಮಟ್ಟದಲ್ಲಿ ಸರ್ಕಾರದ ಸೇವೆಗಳು ಲಭ್ಯವಾಗಬೇಕು. ವಿಶೇಷವಾಗಿ ಬ್ಯಾಂಕಿಂಗ್ ಸೇವೆಗಳು, ಆರ್.ಟಿ.ಇ. ಸೇವೆಗಳು ಮತ್ತು ಸರ್ಕಾರದ ಇನ್ನಿತರ ಸೇವೆಗಳು ಒಂದೇ ಸೂರಿನಡಿ ಕಲ್ಪಿಸುವ ಯೋಜನೆ ಇದಾಗಿದ್ದು, ಗ್ರಾಮ ಒನ್ ಕೇಂದ್ರವು ಪಿಪಿಪಿ ಮಾದರಿಯಲ್ಲಿ ರಚನೆಯಾಗಿದೆ. ಖಾಸಗಿ ಸಂಸ್ಥೆಯವರು ಕೇಂದ್ರಕ್ಕೆ ಬೇಕಾದ ಎಲ್ಲ ತರಹದ ಭೌತಿಕ ಮತ್ತು ಐಟಿ ಮೂಲ ಸೌಕರ್ಯಗಳ ಜೊತೆಗೆ ಅಗತ್ಯವಾದ ಮಾನವ ಸಂಪನ್ಮೂಲ ಮತ್ತು ಸರ್ಕಾರದ ವ್ಯವಸ್ಥೆಗಳಿಗೆ ಆದ್ಯತೆ ಮತ್ತು ತಾಂತ್ರಿಕ ಸೇವೆಯನ್ನು ಒದಗಿಸುತ್ತಿವೆ. ಈ ಕೇಂದ್ರದಲ್ಲಿ ಒಟ್ಟು 67 ಇಲಾಖೆಗಳ 402 ಸೇವೆಗಳಿವೆ. ಅದರಲ್ಲಿ ಪ್ರಮುಖವಾದ ಸೇವೆಗಳೆಂದರೆ ಕಂದಾಯ ಇಲಾಖೆ, ಸಾಮಾಜಿಕ ಭದ್ರತಾ ಯೋಜನೆ, ಆರೋಗ್ಯ ಇಲಾಖೆ, ಕಾರ್ಮಿಕ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಸಹಕಾರ ಸಂಘಗಳ ಇಲಾಖೆ, ಕಾಲೇಜು ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ, ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಸೇವೆಯನ್ನು ಹೊಂದಿದೆ. ಈ ಯೋಜನೆ ಅಡಿಯಲ್ಲಿ ಮುಂದಿನ ದಿನಗಳಲ್ಲಿ ಮೈಕ್ರೋ ಬ್ಯಾಂಕಿಂಗ್ ಸೇವೆಗಳು, ಇ-ಸ್ಟಾಂಪ್ ಸೇವೆ, ಬಿಎಸ್ಎನ್ಎಲ್ಪಾ ವತಿ ಸೇವೆಗಳು, ಹೆಸ್ಕಾಂ ಬಿಲ್ ಪಾವತಿ ಸೇವೆಗಳು, ಎಲ್ಇಡಿ ಬಲ್ಬ್​ಗಳ ಮಾರಾಟ ಸೇವೆ ಹಾಗೂ ಇತರೆ ಸೇವೆಗಳನ್ನು ಒದಗಿಸಲಾಗುತ್ತದೆ.

ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಅರುಣ್ ಶಹಾಪುರ, ಹೊರ್ತಿ ಗ್ರಾಮ ಪಂಚಾಯತಿ ಅಧ್ಯಕ್ಷ್ಯ ಬಸಲಿಂಗಪ್ಪ ಪೂಜಾರಿ, ಇಂಡಿ ಉಪವಿಭಾಗಾಧಿಕಾರಿ ರಾಹುಲ್ ಶಿಂಧೆ, ದಯಾಸಾಗರ ಪಾಟೀಲ್ ಹಾಗೂ ಹೊರ್ತಿ ಗ್ರಾಮಸ್ಥರು ಭಾಗಿಯಾಗಿದ್ದರು.

(ವರದಿ: ಅಶೋಕ ಯಡಳ್ಳಿ-9980510120)

ಇದನ್ನೂ ಓದಿ

Karnataka Bus Strike Live: ಎರಡನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಮುಷ್ಕರ, ಪೊಲೀಸರ ಭದ್ರತೆಯೊಂದಿಗೆ ಕೆಲ ಬಸ್​ ಸಂಚಾರ

IPL 2021: 49ಬಾಲ್​ಗಳಲ್ಲಿ 104ರನ್! ದೇಸಿ ಕ್ರಿಕೆಟ್​ನಲ್ಲಿ ರನ್ ಮಳೆ ಹರಿಸಿರುವ ರಜತ್​ಗೆ ಆರ್​ಸಿಬಿ ತಂಡದಲ್ಲಿ ಸಿಗುತ್ತಾ ಅವಕಾಶ?

(minister suresh kumar inaugurated grama one Center at vijayapura)