ಆದಿಲ್ ಶಾಹಿಗಳ ಆಶಯಕ್ಕೆ ಎಳ್ಳುನೀರು ಬಿಟ್ಟು, ಸುಡು ಬಿಸಿಲಿನ ವಿಜಯಪುರದಲ್ಲಿ ಪ್ರವಾಸೋದ್ಯಮವನ್ನು ಶೈತ್ಯಾಗಾರಕ್ಕೆ ತಳ್ಳಿರುವ ಸರ್ಕಾರ!
Vijayapura Tourism: ಪ್ರವಾಸಿಗರು ಇತ್ತ ಮುಖ ಮಾಡುವಂತೆ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲಾ. ಜಿಲ್ಲೆಗೆ ಬರುವ ಪ್ರವಾಸಿಗರಿಗೆ ಬೇಸಿಗೆ ಅರಮನೆ ಎಂಬ ಸ್ಮಾರಕವಿದೆ ಎಂಬುದೇ ಗೊತ್ತಿಲ್ಲಾ. ಅಷ್ಟರ ಮಟ್ಟಿಗೆ ಪುರಾತತ್ವ ಇಲಾಖೆ ಆಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ.
ಹತ್ತಾರು ಐತಿಹಾಸಿಕ ಸ್ಮಾರಕಗಳನ್ನು ಒಡಲಲ್ಲಿಟ್ಟುಕೊಂಡಿದ್ದರೂ ವಿಜಯಪುರ ಜಿಲ್ಲೆ (Vijayapura) ಸೂಕ್ತ ಪ್ರವಾಸೋದ್ಯಮ (Tourism) ತಾಣವಾಗದೇ ಇರೋದು ದುರಂತವಾಗಿದೆ. ಸರ್ಕಾರ ಸ್ಥಳೀಯ ಜನಪ್ರತಿನಿಧಿಗಳ ಉದಾಸೀನತೆ, ಭಾರತೀಯ ಪುರಾತತ್ವ ಇಲಾಖೆಯ ದಿವ್ಯ ನಿರ್ಲಕ್ಷ್ಯ ಇಡೀ ಜಿಲ್ಲೆಯ ಪ್ರವಾಸೋದ್ಯಮವನ್ನು ಶೇತ್ಯಾಗಾರಕ್ಕೆ ನೂಕಿದೆ. ವಿಶ್ವವಿಖ್ಯಾತ ಗೋಲಗುಮ್ಮಟ ಸೇರಿದಂತೆ ಹತ್ತಾರು ವೈವಿಧ್ಯಮಯ ಸ್ಮಾರಕಗಳು ಕಟ್ಟಡಗಳು ಮಹಲ್ ಗಳು ಇದ್ದೂ ಇಲ್ಲವಾಗಿವೆ. ನಗರದಿಂದ ಅನತಿ ದೂರದಲ್ಲಿರೋ ಬೇಸಿಗೆ ಅರಮನೆಯಂತೂ (Summer palace) ಗತಕಾಲ ಸೇರಲು ಪೈಪೋಟಿ ನಡೆಸಿದೆ. ಆದಿಲ್ ಶಾಹಿ ರಾಜರುಗಳು, ಮೋಜು ಮಸ್ತಿಗಾಗಿ ಯುದ್ದಕಾಲದ ನಂತರ ವಿಶ್ರಾಂತಿಗಾಗಿ ಆಶ್ರಯಿಸುತ್ತಿದ್ದ ಬೇಸಿಗೆ ಅರಮನೆ ಅವಸಾನದತ್ತ ಮುಖ ಮಾಡಿದೆ (negligence). ಈ ಕುರಿತ ವರದಿ ಇಲ್ಲಿದೆ ನೋಡಿ.
ಇತಿಹಾಸ ಪುಟ ಸೇರಲು ಹೊರಟಿದೆ ಆದಿಲ್ ಶಾಹಿಗಳು ನಿರ್ಮಾಣ ಮಾಡಿರೋ ಬೇಸಿಗೆ ಅರಮನೆ… ಇದೀಗಾ ಬೇಸಿಗೆ ಅರಮನೆ ಹಾಳು ಕೊಂಪೆಯಂತಾಗಿದೆ…. ಭಾರತೀಯ ಪುರಾತತ್ವ ಇಲಾಖೆಯ ಸುಪರ್ದಿಯಲ್ಲಿ ನರಳುತ್ತಿದೆ ಸಮ್ಮರ್ ಪ್ಯಾಲೇಸ್… 400 ಕ್ಕೂ ಆಧಿಕ ವರ್ಷಗಳ ಕಾಲ ವಿಜಯಪುರ ಸಾಮ್ರಾಜ್ಯವನ್ನು ಆಳಿದ ಆದಿಲ್ ಶಾಹಿಗಳು ನೂರಾರು ಸ್ಮಾರಕಗಳನ್ನು ನಿರ್ಮಾಣ ಮಾಡಿದ್ದಾರೆ. ಜಗತ್ತೇ ನಿಬ್ಬೆರೆಗಾಗಿ ನೋಡುವಂತ ಗೋಲಗುಮ್ಮಟ, ಇಬ್ರಾಹಿಂ ರೋಜಾ, ಬಾರಾ ಕಮಾನ್, ಸಾಠ್ ಕಬರ್, ಬೇಸಿಗೆ ಅರಮನೆ, ವಿವಿಧ ಚಾವಡಿಗಳು, ಹತ್ತಾರು ಮಹಲ್ ಗಳು ಒಂದೇ ಎರಡೇ ಹೀಗೆ ಸಾಲು ಸಾಲು ಕಟ್ಟಡಗಳನ್ನು ನಿರ್ಮಾಣ ಮಾಡಿದ್ದರು.
ಅವುಗಳಲ್ಲೀಗಾ 80 ಸಂರಕ್ಷಿತ ಸ್ಮಾರಕಗಳು ಎಂದು ಗುರುತಿಸಲಾಗಿದೆ. ಇಂಥ ಸಂರಕ್ಷಿತ ಸ್ಮಾಕರಗಳನ್ನೇ ಅನೇಕ ಸ್ಮಾರಕಗಳು ಕೆಲವೇ ವರ್ಷಗಳಲ್ಲಿ ಕಣ್ಮರೆಯಾಗಿ ಹೋಗುವ ಲಕ್ಷಣಗಳು ಗೋಚರಿಸುತ್ತಿವೆ. ಅವುಗಳ ಪೈಕಿ ಪ್ರಮುಖವಾದುದ್ದೇ ಬೇಸಿಗೆ ಅರಮನೆ. ವಿಜಯಪುರ ನಗರದಿಂದ 20 ಕಿಲೋ ಮೀಟರ್ ದೂರದಲ್ಲಿರೋ ಕುಮಟಗಿ ಗ್ರಾಮದ ಹೊರ ಭಾಗದಲ್ಲಿದೆ ಬೇಸಿಗೆ ಅರಮನೆ. ರಾಣಿ ಮಹಲ್ ಎಂದೂ ಕರೆಯಿಸಿಕೊಳ್ಳುತ್ತಿದ್ದ ಬೇಸಿಗೆ ಅರಮನೆ ಕ್ರಿ ಶ 1580 ರಿಂದ 1626 ರ ಮಧ್ಯ ಕಾಲದಲ್ಲಿ ಎರಡನೇಯ ಇಬ್ರಾಹಿಂ ಆದಿಲ್ ಶಾಹಿ ಆಧಿಕಾರಾವಧಿಯಲ್ಲಿ ನಿರ್ಮಾಣವಾಗಿದೆ. ಬೇಸಿಗೆಯ ಬಿಸಿಲಿನ ಬವಣೆ ನೀಗಿಸಿಕೊಳ್ಳಲು ರಾಜರುಗಳ ಮೋಜು ಮಸ್ತಿಗಾಗಿ ಹಾಗೂ ಯುದ್ದಗಳ ನಂತರ ವಿಶ್ರಾಂತಿಗಾಗಿ ಬೇಸಿಗೆ ಅರಮನೆಯು ಬಳಕೆಯಾಗುತ್ತಿತ್ತು ಎಂಬುದು ಇತಿಹಾಸದಿಂದ ತಿಳಿದು ಬಂದಿದೆ.
ಶಾ ಫತ್ತೇವುಲ್ಲಾ ಶಿರಾಜಿ ಎಂಬುವವರು ಬೇಸಿಗೆ ಅರಮನೆಯ ನಿರ್ಮಾಣದಲ್ಲಿ ವಿಶೇಷ ತಾಂತ್ರಿಕತೆಯನ್ನು ಬಳಕೆ ಮಾಡಿಕೊಂಡು ನಿರ್ಮಾಣ ಮಾಡಿದ್ದಾರೆ. ಸಮತಟ್ಟವಾದ ಪ್ರದೇಶದಲ್ಲಿನ ಕೆರೆಯ ನೀರು ಇಡೀ ಅರಮನೆಯ ತುಂಬೆಲ್ಲಾ ಹರಿಯವಂತೆ ಮಾಡಲಾಗಿದೆ. ಇಂದಿನಂತೆ ಯಾವುದೇ ಯಂತ್ರೋಪಕರಣಗಳಿಲ್ಲದೇ ಸಹಜವಾಗಿ ನೀರನ್ನು ಎಲ್ಲೆಡೆ ಹರಿಸಲಾಗುತ್ತಿತ್ತಂತೆ. ಕರೆಯ ನೀರು ಒತ್ತಡದಿಂದ ಹರಿದು ಬೇಸಿಗೆ ಅರಮನೆಯ ಭಾಗಗಳಿಗೆ ಪೂರೈಕೆಯಾಗುತ್ತಿದ್ದುದು ಅಂದಿನ ಆದಿಲ್ ಶಾಹಿಗಳ ತಾಂತ್ರಿಕತೆಗೆ ಸಾಕ್ಷಿಯಾಗಿದೆ. ಇಂಥ ನೈಪುಣ್ಯ ಹಾಗೂ ತಂತ್ರಜ್ಞಾನವನ್ನು ವಿನಿಯೋಗಿಸಿ ನಿರ್ಮಾಣ ಮಾಡಿರೋ ಬೇಸಿಗೆ ಅರಮನೆ ಅವಸಾನ ಹೊಂದುತ್ತಿದೆ.
ಭಾರತೀಯ ಪುರಾತತ್ವ ಇಲಾಖೆಯ ಸುಪರ್ದಿಯಲ್ಲಿರೋ ಬೇಸಿಗೆ ಅರಮನೆ ಒಂದು ಸುಂದರ ಪ್ರವಾಸಿ ತಾಣವಾಗಬೇಕಿತ್ತು. ಗೋಲಗುಮ್ಮಟ ಹಾಗೂ ಇತರೆ ಸ್ಮಾರಕಗಳನ್ನು ವೀಕ್ಷಣೆ ಮಾಡುವ ಪ್ರವಾಸಿಗರು ಬೇಸಿಗೆ ಅರಮನೆಯನ್ನು ವೀಕ್ಷಣೆ ಮಾಡುವ ಕಾರ್ಯವಾಗಬೇಕಿತ್ತು. ಆದಿಲ್ ಶಾಹಿಗಳ ಕಾಲದಲ್ಲಿ ಹೇಗೆ ನೀರು ಒಳಗೆ ಹರಿದು ಬಂದು ಇಡೀ ಅರಮನೆ ಕೂಲ್ ಕೂಲ್ ಆಗಿರುತ್ತಿತ್ತೋ ಈಗಲೇ ಅದೇ ತಂಪು ತಂಪಾದ ವಾತಾವರಣ ಇಲ್ಲಿ ಮನೆ ಮಾಡಿದೆ. ಆದರೆ ಸೂಕ್ತ ನಿರ್ವಹಣೆ ಸಂರಕ್ಷಣೆ ಮಾಡಿಲ್ಲಾ.
ಪ್ರವಾಸಿಗರು ಇತ್ತ ಮುಖ ಮಾಡುವಂತೆ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲಾ. ಜಿಲ್ಲೆಗೆ ಬರುವ ಪ್ರವಾಸಿಗರಿಗೆ ಬೇಸಿಗೆ ಅರಮನೆ ಎಂಬ ಸ್ಮಾರಕವಿದೆ ಎಂಬುದೇ ಗೊತ್ತಿಲ್ಲಾ. ಅಷ್ಟರ ಮಟ್ಟಿಗೆ ಪುರಾತತ್ವ ಇಲಾಖೆ ಆಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಇನ್ನು ಬೇಸಿಗೆ ಅರಮನೆ ಬಳಿಯ ವೀಕ್ಷಣಾ ಗೋಪುರಗಳು ನೆಲ ಸಮವಾಗುತ್ತಿವೆ. ಹೀಗೆ ಒಂದೊಂದೆ ಕಟ್ಟಡಗಳು ನೆಲಸಮವಾಗುತ್ತಾ ಹೋದರೆ ಮುಂದಿನ ಕೆಲವೇ ವರ್ಷಗಳಲ್ಲಿ ಇಡೀ ಬೇಸಿಗೆ ಅರಮನೆಯೇ ನೆಲಸಮವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಪುರಾತತ್ವ ಇಲಾಖೆ ಆಧಿಕಾರಿಗಳು ಕುಸಿದು ಬೀಳುತ್ತಿರೋ ವೀಕ್ಷಣಾ ಗೋಪುರಗಳು ಸೇರಿದಂತೆ ಇತರೆ ಕಟ್ಟಡಗಳನ್ನು ಸಂರಕ್ಷಿಸಬೇಕು. ಇಡೀ ಬೇಸಿಗೆ ಅರಮನೆಯನ್ನು ಪುನಶ್ಚೇತನಗೊಳಿಸಿ ಸುತ್ತಲಿನ ಜಾಗವನ್ನು ಉದ್ಯಾನವನ್ನಾಗಿ ಮಾಡಿ ಅಭಿವೃದ್ದಿ ಮಾಡಬೇಕು. ಈ ಮೂಲಕ ಬೇಸಿಗೆ ಅರಮನೆಯನ್ನು ಪ್ರವಾಸಿ ತಾಣವನ್ನಾಗಿ ಮಾಡಬೇಕಿದೆ.
ಆದಿಲ್ ಶಾಹಿ ಕಾಲದ ಈ ಬೇಸಿಗೆ ಅರಮನೆಯ ಕುರಿತು ಇತಿಹಾಸಕಾರರಾದ ಎಸ್ ಕೆ ಸಿನ್ಹಾ ಎಂಬುವವರು ಆದಿಲ್ ಶಾಹಿಗಳ ನೀರಿನ ಕೊಡುಗೆ ಹಾಗೂ ಬಳಕೆಗಳ ಬಗ್ಗೆ ಕೊಂಡಾಡಿದ್ಧಾರೆ. ಅಷ್ಟೇ ಅಲ್ಲಾ ಪಾಶ್ಚ್ಯಾತ್ಯ ಇತಿಹಾಸಕಾರ ಸಿ ಸ್ವಿಡ್ಜರ್ ಎಂಬುವವರು ಕೂಡಾ ತಮ್ಮ ಕೃತಿಗಳಲ್ಲಿ ಆದಿಲ್ ಶಾಹಿಗಳ ತಾಂತ್ರಿಕತೆ ಹಾಗೂ ನೀರಿನ ಬಳಕೆ ಬಗ್ಗೆ ನಮೂದಿಸಿದ್ದಾರೆ. ಇಂಥ ಪ್ರಖ್ಯಾತ ಸ್ಮಾರಕವನ್ನು ಹಾಳಾಗದಂತೆ ಇನ್ನು ಮುಂದಾದರೂ ಭಾರತೀಯ ಪುರಾತತ್ವ ಇಲಾಖೆ ಆಧಿಕಾರಿಗಳು, ರಾಜ್ಯ ಸರ್ಕಾರ ಪ್ರವಾಸೋದ್ಯಮ ಇಲಾಖೆ ನೋಡಿಕೊಳ್ಳಬೇಕಿದೆ. ಇವೆಲ್ಲ ಉಳಿಸಿ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಹೊಸ ಆಯಾಮವನ್ನು ನೀಡಬೇಕಿದೆ. ಇಲ್ಲವಾದರೆ ಮುಂದಿನ ಪೀಳಿಗೆಗೆ ಐತಿಹಾಸಿಕ ಸ್ಮಾರಕಗಳ ಫೋಟೋಗಳನ್ನು ಮಾತ್ರ ತೋರಿಸುವಂತಾಗುವುದರಲ್ಲಿ ಯಾವುದೇ ಸಂಶಯವಿಲ್ಲಾ.
ವರದಿ: ಅಶೋಕ ಯಡಳ್ಳಿ, ಟಿವಿ9 ವಿಜಯಪುರ