ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿ ಮತ್ತೆ ಬಾಣಂತಿಯರಿಗೆ ಸಮಸ್ಯೆ: ಹೆರಿಗೆಗೆ ಹಾಕಿದ್ದ ಸ್ಟಿಚ್ ಬಿಚ್ಚಿ ಯಮಯಾತನೆ
ವಿಜಯಪುರ ಜಿಲ್ಲಾ ಆಸ್ಪತ್ರೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಕೆಲ ಬಾಣಂತಿಯರು ಯಾತನೆ ಪಡುತ್ತಿದ್ದಾರೆ. ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸಿಜೇರಿಯನ್ ಹೆರಿಗೆಗೆ ಒಳಗಾಗಿರುವ ಮಹಿಳೆಯರಲ್ಲಿ ಈ ಹಿಂದಿನಂತೆ ಮತ್ತೆ ಸಮಸ್ಯೆ ಕೇಳಿ ಬಂದಿದೆ. ಕಳೆದ 2022 ರಲ್ಲಿ ಸಿಜೇರಿಯನ್ ಹೆರಿಗೆಗೆ ಒಳಗಾಗಿದ್ದ ಬಾಣಂತಿಯರಿಗೆ ಹಾಕಿದ್ದ ಸ್ಟಿಚ್ಗಳು ಬಿಚ್ಚಿ ರಕ್ರಸ್ರಾವ ಹಾಗೂ ಕೀವುಗಟ್ಟುವುದು ಆಗಿ ಯಾತನೆ ಪಡುವಂತಾಗಿತ್ತು.
ವಿಜಯಪುರ, ಅಕ್ಟೋಬರ್ 27: ಕೇಂದ್ರ ಸರ್ಕಾರದ ಕಾಯಕಲ್ಪ ಹಾಗೂ ಇತರೆ ರಾಷ್ಟ್ರ ಮಟ್ಟದ ಪ್ರಶಸ್ತಿಗಳಿಗೆ ಭಾಜನವಾಗಿರುವ ವಿಜಯಪುರ ಜಿಲ್ಲಾಸ್ಪತ್ರೆ ಕಳೆದ ವರ್ಷ ಮೇ ತಿಂಗಳಿನಿಂದ ಬಾರೀ ಸುದ್ದಿಯಾಗಿತ್ತು. ಸಿಜೇರಿಯನ್ ಮೂಲಕ ಹೆರಿಗೆ (pregnancy) ಯಾದ ಮಹಿಳೆಯರಲ್ಲಿ ಹಲವಾರು ಸಮಸ್ಯೆಗಳು ಕಂಡು ಬಂದಿದ್ದವು. ಸಿಜೇರಿಯನ್ ಹೆರಿಗೆ ವೇಳೆ ಹಾಕಿದ್ದ ಹೊಲಿಗೆ ಉಚ್ಚಿದ್ದು ಗಾಯವಾಗಿ ರಕ್ತ ಬರುವ ಪ್ರಕರಣಗಳು ಕಂಡುಬಂದಿವೆ. ಬಳಿಕ ಅಂತಹ ಪ್ರಕರಣಗಳಿಗೆ ತಡೆ ಹಾಕಲಾಗಿತ್ತು. ಆದರೆ ಇದೀಗ ಮತ್ತೆ ಅದೇ ಸಮಸ್ಯೆ ಮುಂದುವರೆದಿದೆ. ಪ್ರತಿ ತಿಂಗಳು ಕೆಲ ಬಾಣಂತಿಯರಲ್ಲಿ ಈ ಸಮಸ್ಯೆ ಕಂಡು ಬರುತ್ತಿದೆ.
ವಿಜಯಪುರ ಜಿಲ್ಲಾ ಆಸ್ಪತ್ರೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಕೆಲ ಬಾಣಂತಿಯರು ಯಾತನೆ ಪಡುತ್ತಿದ್ದಾರೆ. ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸಿಜೇರಿಯನ್ ಹೆರಿಗೆಗೆ ಒಳಗಾಗಿರುವ ಮಹಿಳೆಯರಲ್ಲಿ ಈ ಹಿಂದಿನಂತೆ ಮತ್ತೆ ಸಮಸ್ಯೆ ಕೇಳಿ ಬಂದಿದೆ. ಕಳೆದ 2022 ರಲ್ಲಿ ಸಿಜೇರಿಯನ್ ಹೆರಿಗೆಗೆ ಒಳಗಾಗಿದ್ದ ಬಾಣಂತಿಯರಿಗೆ ಹಾಕಿದ್ದ ಸ್ಟಿಚ್ಗಳು ಬಿಚ್ಚಿ ರಕ್ರಸ್ರಾವ ಹಾಗೂ ಕೀವುಗಟ್ಟುವುದು ಆಗಿ ಯಾತನೆ ಪಡುವಂತಾಗಿತ್ತು.
2023 ರ ಜನವರಿಯಿಂದ ಅಕ್ಟೋಬರ್ 27 ರವೆರೆಗೆ ಒಟ್ಟು 57 ಬಾಣಂತಿಯರಲ್ಲಿ ಈ ಸಮಸ್ಯೆ ಕಂಡು ಬಂದಿದೆ. ಸಿಜೇರಿಯನ್ ಹೆರಿಗೆಗೆ ಒಳಗಾಗಿದ್ದ ಅವರು ಹೊಲಿಗೆ ಬಿಚ್ಚಿ ರಕ್ತಸ್ರಾವ ಹಾಗೂ ಕೀವುಗಟ್ಟುವಿಕೆಯ ನೋವಿಂದ ಬಳಲುವಂತಾಗಿದೆ. ಮೊದಲೇ ಸಿಜೇರಿಯನ್ ನೋವಿನಿಂದ ಬಳುತ್ತಿರುವವು ಹೊಲಿಗೆ ಬಿಚ್ಚಿರುವ ಯಮಯಾತನೆಗೆ ಒಳಗಾಗಿದ್ದಾರೆ. ಇಂಥ ಸಮಸ್ಯೆ ಕಂಡು ಬಂದ ಬಾಣಂತಿಯರಿಗೆ ಮತ್ತೆ ಚಿಕಿತ್ಸೆ ನೀಡಿ ಗುಣಪಡಿಸುವಲ್ಲಿ ಜಿಲ್ಲಾಸ್ಪತ್ರೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆ ವೈದ್ಯರು ಮುಂದಾಗಿದ್ದಾರೆ.
ಶುಚಿತ್ವದ ಕೊರತೆ
ಸಿಜೇರಿಯನ್ ಹೆರಿಗೆಗೆ ಒಳಗಾಗುವವರಲ್ಲಿ ಈ ಸಮಸ್ಯೆ ಇಲ್ಲಿ ಇನ್ನೂ ಮಾಯವಾಗಿಲ್ಲಾ. 2023 ರ ಜನವರಿಯಲ್ಲಿ 4, ಫೆಬ್ರವರಿಯಿಲ್ಲಿ 1, ಮಾರ್ಚನಲ್ಲಿ 6, ಏಪ್ರೀಲ್ನಲ್ಲಿ 8, ಮೇನಲ್ಲಿ 7, ಜೂನ್ನಲ್ಲಿ 7, ಜುಲೈ ನಲ್ಲಿ 5, ಅಗಷ್ಟನಲ್ಲಿ 7, ಸಪ್ಟೆಂಬರ್ ನಲ್ಲಿ 7 ಹಾಗೂ ಅಕ್ಟೋಬರ್ ನಲ್ಲಿ 5 ಪ್ರಕರಣಗಳು ದಾಖಲಾಗಿವೆ. ಪ್ರತಿ ತಿಂಗಳಿನಲ್ಲೂ ಸಿಜೇರಿಯನ್ ಮೂಲಕ ಹೆರಿಗೆಯಾದವರಿಗೆ ಸ್ಟಿಚ್ ಬಿಚ್ಚಿ ರಕ್ತಸ್ರಾವ, ಕೀವು ತುಂಬುವುದು ನೋವು ಬರುವ ಈ ಪ್ರಕರಣಗಳು ಕಂಡು ಬರುತ್ತಲೇ ಇರುತ್ತವೆ. ಇದಕ್ಕೆ ಕಾರಣ ಶುಚಿತ್ವದ ಕೊರತೆ.
ಇದನ್ನೂ ಓದಿ: ಬರಕ್ಕೆ ಈರುಳ್ಳಿ ಬೆಳೆ ಕುಂಠಿತ; ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆ, ರೈತನ ಪಾಲಿಗೂ ಕಣ್ಣೀರುಳ್ಳಿ
ನಿತ್ಯ ಸರಾಸರಿ ಇಲ್ಲಿ 30 ರಿಂದ 40 ಹೆರಿಗೆಗಳು ಆಗುತ್ತವೆ. ಆವುಗಳಲ್ಲಿ ಶೇಕಡಾ 15 ರಿಂದ 25 ರಷ್ಟು ಸಿಜೇರಿಯನ್ ಹೆರಿಗೆಗಳಾಗಿವೆ. ಒಬ್ಬರ ಸಿಜೇರಿಯನ್ ಹೆರಿಗೆ ಆದ ಬಳಿಕ ಶುಚಿ ಮಾಡಲು ನಿರ್ದಿಷ್ಟ ಸಮಯ ಕಾಯದೇ ಮತ್ತೊಂದು ಹೆರಿಗೆ ಮಾಡಿಸುತ್ತಿದ್ದಾರೆ. ಹೆಚ್ಚಿನ ಗರ್ಭಿಣಿಯರು ಹೆರಿಗೆಗೆ ದಾಖಲಾಗುತ್ತಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಇನ್ನು 2023 ರ ಜನವರಿಯಿಂದ ಅಕ್ಟೋಬರ್ 27 ರವರೆಗೂ 5087 ಸಹಜ ಹೆರಿಗೆಗಳು ಆಗಿವೆ. ಸಿಜೇರಿಯನ್ ಮೂಲಕ 2971 ಹೆರಿಗೆಗಳು ಆಗಿವೆ.
ಇದನ್ನೂ ಓದಿ: ಮೈಸೂರಿನ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ ರೋಬಾಟ್ ನರ್ಸ್: ಹೇಗೆ ಕೆಲಸ ಮಾಡುತ್ತೆ? ಇಲ್ಲಿದೆ ವಿವರ
ನಿತ್ಯ ಹೆಚ್ಚು ಗರ್ಭಿಣಿಯರ ದಾಖಲಾತಿಯಿಂದ ಶುಚಿತ್ವದ ಕೊರತೆಯಾಗಿದೆ. ಇಷ್ಟರ ಮದ್ಯೆ 100 ಬೆಡ್ ಈ ಆಸ್ಪತ್ರೆಯಲ್ಲಿ 75 ಬೆಡ್ ತಾಯಂದಿರರಿಗೆ 25 ಬೆಡ್ ಗಳು ಮಕ್ಕಳಿಗೆ ಎಂದು ಮೀಸಲಾಗಿಡಲಾಗಿದೆ. 75 ಬೆಡ್ ಗಳಷ್ಟೇ ಇದ್ದರೂ ಸಹ ಇಲ್ಲಿ ದಾಖಲಾಗಿರುವುದು ಗರ್ಭಿಣಿಯರು ಹಾಗೂ ಬಾಣಂತಿಯರ ಸಂಖ್ಯೆ 150 ಕ್ಕೂ ಅಧಿಕ. ಇದರ ಜೊತೆಗೆ ಒಬ್ಬ ರೋಗಿಯ ಜೊತೆಗೆ ಮೂರ್ನಾಲ್ಕು ಜನ ಕುಟುಂಬಸ್ಥರೂ ಆಗಮಿಸುತ್ತಾರೆ. ಇವೆಲ್ಲ ಕಾರಣದಿಂದ ಬಾಣಂತಿಯರಿಗೆ ಇನ್ಫೆಕ್ಷನ್ ಆಗುತ್ತದೆ ಎಂದು ಇಲ್ಲಿನ ವೈದ್ಯರು ಹೇಳುತ್ತಾರೆ.
ಶುಚಿತ್ವದ ಕಾರಣದಿಂದ ಬಾಧೆಗೆ ಒಳಗಾಗಿರುವ ಸಿಜೇರಿಯನ್ ಮೂಲಕ ಹೆರಿಗೆಯಾದವರಿಗೆ ಜಿಲ್ಲಾಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿದ ರೋಗಿಗಳ ಸಂಖ್ಯೆ, ಹೆರಿಗೆಗಳ ಸಂಖ್ಯೆ ಈ ಸಮಸ್ಯೆಗೆ ಕಾರಣವಾಗಿದೆ. ಕಾರಣ ಹೆಚ್ಚುವರಿ 50 ಬೆಡ್ಗಳ ಆಸ್ಪತ್ರೆ ವಿಸ್ತಾರಕ್ಕೆ ಸರ್ಕಾರ ಈಗಾಗಲೇ ಅನುಮತಿ ನೀಡಿದೆ. ಶೀಘ್ರವಾಗಿ 50 ಬೆಡ್ ಗಳು ಈ ಆಸ್ಪತ್ರೆಗೆ ಸಿಗಲಿವೆ. ಆಗ ಸಿಜೇರಿಯನ್ ಹೆರಿಗೆಗೆ ಒಳಗಾಗಿ ಸಮಸ್ಯೆಗೆ ಒಳಗಾಗುವ ಬಾಣಂತಿಯರ ಪ್ರಕರಣಗಳು ಕಡಿಮೆಯಾಗಬಹುದಾಗಿದೆ. ಇಷ್ಟರ ಮಧ್ಯೆ ಇಲ್ಲಿಯ ವೈದ್ಯರು, ಶೂಶ್ರೂಷಕರು ಹಾಗೂ ಸಿಬ್ಬಂದಿ ಇನ್ನಷ್ಟು ಶುಚಿತ್ವಕ್ಕೆ ಆದ್ಯತೆ ನೀಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.