ವಿಜಯಪುರ: ಪಾಲಿಕೆ ಚುನಾವಣೆ ಬಳಿಕ ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಾಭಿಪ್ರಾಯ; ಜಿಲ್ಲಾಧ್ಯಕ್ಷರ ಬದಲಾವಣೆಗೆ ಒತ್ತಾಯ

ಪಾಲಿಕೆ ಚುನಾವಣೆ ಫಲಿತಾಂಶದ ಬಳಿಕ ಜಿಲ್ಲಾಧ್ಯಕ್ಷರ ವಿರುದ್ದ ಟಿಕೇಗಳು ಕೇಳಿ ಬಂದಿವೆ. ಜಿಲ್ಲಾಧ್ಯಕ್ಷರ ಬದಲಾವಣೆಯಾಗಬೇಕೆಂದು ಬಂಡಾಯವಾಗಿ ಸ್ಪರ್ಧೆ ಮಾಡಿದ್ದ ಆಭ್ಯರ್ಥಿಗಳು ಪಕ್ಷದ ಹೊರಗಿದ್ದುಕೊಂಡು ಕೂಗು ಎಬ್ಬಿಸಿದ್ದಾರೆ.

ವಿಜಯಪುರ: ಪಾಲಿಕೆ ಚುನಾವಣೆ ಬಳಿಕ ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಾಭಿಪ್ರಾಯ; ಜಿಲ್ಲಾಧ್ಯಕ್ಷರ ಬದಲಾವಣೆಗೆ ಒತ್ತಾಯ
ವಿಜಯಪುರ
Follow us
TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 02, 2022 | 9:11 AM

ವಿಜಯಪುರ: ಜಿಲ್ಲೆಯಲ್ಲಿ ಬಿಜೆಪಿ ಪಕ್ಷದಿಂದ ಉಚ್ಛಾಟನೆ ಶಿಕ್ಷೆಗೆ ಒಳಗಾದವರು ಪಕ್ಷದ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ್ ಅವರನ್ನು ಆಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ, ಮುಂದಿನ ಚುನಾವಣೆಗೆ ಪಕ್ಷವನ್ನು ಸಂಘಟನೆ ಮಾಡಬೇಕೆಂದು ಒತ್ತಾಯ ಮಾಡಿದ್ದಾರೆ. ಇದು ವಿಜಯಪುರ ಜಿಲ್ಲೆಯ ಬಿಜೆಪಿ ಪಕ್ಷದ ಸದ್ಯದ ಬೆಳವಣಿಗೆಯಾಗಿದೆ. 2019 ರಲ್ಲೇ ಮಹಾನಗರ ಪಾಲಿಕೆ ಚುನಾವಣೆ ನಡೆಯಬೇಕಿದ್ದು, ಕಾರಣಾಂತರಗಳಿಂದ 2022 ರ ಅಕ್ಟೋಬರ್​ನಲ್ಲಿ ನಡೆಯಿತು. 35 ಸದಸ್ಯ ಬಲದ ಪಾಲಿಕೆಯಲ್ಲಿ ಬಿಜೆಪಿ 17 ಸ್ಥಾನಗಳನ್ನು ಪಡೆದುಕೊಂಡು ಬಹುಮತದ ಹೊಸ್ತಿಲಿಗೆ ಬಂದು ನಿಂತಿತ್ತು. ಕಾಂಗ್ರೆಸ್ 10, ಪಕ್ಷೇತರ5, 2 ರಲ್ಲಿ ಎಐಎಂಐಂ ಹಾಗೂ 1 ರಲ್ಲಿ ಜೆಡಿಎಸ್ ಗೆದ್ದು ಬೀಗಿತ್ತು. ಇದೇ ಪಾಲಿಕೆಯ ಚುನಾವಣೆಯಲ್ಲಿ ಟಿಕೆಟ್ ಸಿಗದ ಕಾರಣ ಬಂಡಾಯ ಬಿಜೆಪಿಗರಾಗಿ ಪಕ್ಷಕ್ಕಾಗಿ 15 ರಿಂದ20 ವರ್ಷ ದುಡಿದವರು ಸ್ಪರ್ಧೆ ಮಾಡಿದ್ದರು.ಬಂಡಾಯ ಎದ್ದಿದ್ದ ಪದಾಧಿಕಾರಿಗಳು ಸೇರಿದಂತೆ ಒಟ್ಟು 14 ಜನರನ್ನು ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಕೂಚಬಾಳ ಉಚ್ಛಾಟನೆ ಮಾಡಿದ್ದರು.

ಇದೀಗ ಅದೇ ಕಿಸಾನ್ ಮೋರ್ಚಾದ ರಾಜ್ಯ ಕಾರ್ಯದರ್ಶಿ ರವಿಕಾಂತ ಬಗಲಿ, ಜಿಲ್ಲಾ ಪಂಚಾಯತ್ ರಾಜ್ ಪ್ರಕೋಷ್ಟ ಆಧ್ಯಕ್ಷ ರಾಜೂ ಬಿರಾದಾರ್, ನಗರ ಎಸ್ಟಿ ಮೋರ್ಚಾದ ಆಧ್ಯಕ್ಷ ಅಭಿಷೇಕ ಸಾವಂತ, ಜಿಲ್ಲಾ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶೀ ಭಾರತು ಭುಯ್ಯಾರ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಬಾಬು ಶಿರಸ್ಯಾಡ, ಜಿಲ್ಲಾ ಎಸ್ಸಿ ಮೋರ್ಚಾದ ಆಧ್ಯಕ್ಷ ಬಾಬು ಚವ್ಹಾಣ ಸೇರಿದಂತೆ ಇತರರು ಬಿಜೆಪಿ ಜಿಲ್ಲಾಧ್ಯಕ್ಷರ ಬದಲಾವಣೆಗೆ ಒತ್ತಾಯ ಮಾಡಿದ್ದಾರೆ. ಜಿಲ್ಲಾ ಆಧ್ಯಕ್ಷ ಆರ್.ಎಸ್.ಪಾಟೀಲ್ ಕೂಚಬಾಳ ಅಸಮರ್ಥರಿದ್ದು ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ. ಜಿಲ್ಲಾಧ್ಯಕ್ಷರಾದ ಬಳಿಕ ಪಕ್ಷ ಸಂಘಟನೆ ಮಾಡಿಲ್ಲ, ಎಲ್ಲ ರಂಗದಲ್ಲೂ ವಿಫಲರಾಗಿದ್ದೀರಿ. ಅದಕ್ಕೊಸ್ಕರ ಸ್ವಪ್ರೇರಣೆಯಿಂದ ಆತ್ಮಸಾಕ್ಷಿಗೆ ಅನುಗುಣವಾಗಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯ ಮಾಡಿದರು. ಪಾಲಿಕೆ ಚುನಾವಣೆಯ ವೇಳೆ ವಾರ್ಡ್ ನಂಬರ್ 12 ರಲ್ಲಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ್ ಕೂಚಬಾಳ ಸಹೋದರಿ ಪಕ್ಷೇತರ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದಕ್ಕೆ ಯಾವ ಕ್ರಮ ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು.

ಇದೇ ವೇಳೆ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ವಿರುದ್ದವೂ ಉಚ್ಛಾಟಿತ ಬಿಜೆಪಿಗರು ಕಿಡಿ ಕಾರಿದ್ದಾರೆ. ಪಾಲಿಕೆ ಚುನಾವಣೆಯಲ್ಲಿ 35 ವಾರ್ಡ್​ಗಳ ಪೈಕಿ 2 ವಾರ್ಡ್​ಗಳಲ್ಲಿ ಬಿಜೆಪಿ ಅಭ್ಯರ್ಥಿ ಹಾಕಿಲ್ಲ. ಮುಸ್ಲೀಂಮರು ಬಹು ಸಂಖ್ಯಾತರಿರುವ ಎರಡು ವಾರ್ಡ್​ಗಳು ನಾವು ಗೆಲ್ಲಲ್ಲ ಎಂದು ಅಭ್ಯರ್ಥಿ ಹಾಕಿಲ್ಲ ಎಂದು ಹೇಳಿದ್ದೀರಿ ಇದ್ಯಾವ ರಾಜಕಾರಣ ಎಂದಿದ್ದಾರೆ. 35 ವಾರ್ಡ್​ಗಳಲ್ಲಿ 17 ಸದಸ್ಯರು ಗೆದ್ದಿದ್ದನ್ನು ಶಾಸಕ ಯತ್ನಾಳ ತಮ್ಮ ಸಾಧನೆ ಎಂದು ಬಿಂಬಿಸಿದ್ದಾರೆ.

ಇದನ್ನೂ ಓದಿ:ಕರ್ನಾಟಕ ಬಿಜೆಪಿ ನಾಯಕರ ಮೇಲಿನ ಕ್ರಿಮಿನಲ್​ ಕೇಸ್​ಗಳ ಸಂಖ್ಯೆ ಬಿಚ್ಚಿಟ್ಟ ಕಾಂಗ್ರೆಸ್ ವಕ್ತಾರ ರಮೇಶ್​ ಬಾಬು

ಆದರೆ ನಾಗಠಾಣ ಕ್ಷೇತ್ರಕ್ಕೆ 4 ವಾರ್ಡ್​ಗಳು ಬರುತ್ತವೆ. ನಾಲ್ಕು ವಾರ್ಡ್​ಗಳಲ್ಲಿ ಬಿಜೆಪಿ 3 ಸ್ಥಾನ ಗೆದ್ದಿದೆ. ಇನ್ನು ಪಕ್ಷದ ಕಟ್ಟರ್ ಕಾರ್ಯಕರ್ತರಾಗಿದ್ದ 5 ಜನರು ಗೆದ್ದಿದ್ದಾರೆ. 9 ಜನರು ಮಾತ್ರ ನಗರ ಶಾಸಕರ ಪ್ರಭಾವದಿಂದ ಗೆದ್ದಿದ್ದಾರೆ. ಒಟ್ಟು 24 ಟಿಕೆಟ್​ಗಳನ್ನು ತಮ್ಮ ಬೆಂಬಲಿಗರಿಗೆ ನೀಡಿದ್ದ ಶಾಸಕ ಯತ್ನಾಳರು ಗೆದ್ದಿದ್ದು 9 ರಲ್ಲಿ ಮಾತ್ರ. ಮತವಾರು ಲೆಕ್ಕ ಹಾಕಿದಾಗ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಒಟ್ಟು 47,759 ಮತಗಳನ್ನು ಪಡೆದಿದೆ, ಕಾಂಗ್ರೆಸ್ 40,124 ಮತಗಳನ್ನು ಪಡೆದಿದೆ, ಪಕ್ಷೇತರರು 38,644 ಮತಗಳನ್ನು ಪಡೆದಿದ್ದಾರೆ. ಇದು ಯತ್ನಾಳರ ಗೆಲವೋ ಏನೋ ಅವರೇ ತಿಳಿದುಕೊಳ್ಳಬೇಕೆಂದು ಉಚ್ಛಾಟಿತ ಪಕ್ಷದ ಕಾರ್ಯಕರ್ತರು ಸವಾಲು ಹಾಕಿದ್ದಾರೆ .

ಈ ವಿಚಾರ ಕುರಿತು ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ್ ಕೂಚಬಾಳ ಮಾತನಾಡಿದ್ದು ರಾಜಕಾರಣದಲ್ಲಿ ಆರೋಪ ಪ್ರತ್ಯಾರೋಪ ಕಾಮನ್ ಎಂದಿದ್ದಾರೆ. ಉಚ್ಛಾಟಿತರ ಆರೋಪಕ್ಕೆ ಪಾಲಿಕೆ ಚುನಾವಣೆ ಫಲಿತಾಂಶವೇ ಉತ್ತರ. ಪಾಲಿಕೆ ಚುನಾವಣೆ ಇತಿಹಾಸದಲ್ಲೇ ಮತದಾರರು ಇಷ್ಟು ದೊಡ್ಡ ಗೆಲುವನ್ನು ಯಾವ ಪಕ್ಷಕ್ಕೂ ಕೊಟ್ಟಿರಲಿಲ್ಲ. ದಾಖಲೆಯ ಪ್ರಮಾಣದಲ್ಲಿ ನಮಗೆ ಹೆಚ್ಚಿನ ಸ್ಥಾನಗಳು ಬಂದಿವೆ. ಪಾಲಿಕೆ ಚುನಾವಣೆ ಟಿಕೆಟ್ ನಾನೋಬ್ಬನೇ ನೀಡಿಲ್ಲಾ. ಅದಕ್ಕೆ ಪಕ್ಷದ ನೀತಿ ನಿಯಮಗಳಿಗೆ, ಸಮೀತಿಯಲ್ಲಿ ಸಾಧಕ ಬಾಧಕಗಳ ಆಧಾರದ ಮೇಲೆ ಟಿಕೆಟ್ ನೀಡಲಾಗಿದೆ. ನನ್ನ ಮೇಲೆ ಆರೋಪ ಮಾಡುತ್ತಿರುವವರು ಹತಾಶೆ ಮನೋಭಾವನೆಯಿಂದ ಆರೋಪ ಮಾಡುತ್ತಿದ್ದಾರೆ. ಆದರೆ ಅವರ ಬಗ್ಗೆ ನಮಗೆ ಮರುಕ ಅನುಕಂಪವಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ವಿಜಯಪುರದ ಮಾಲೊಂದರಲ್ಲಿ ಅಂತರರಾಷ್ಟ್ರೀಯ ಮಹಿಳಾ ಕ್ರಿಕೆಟರ್ ರಾಜೇಶ್ವರಿ ಗಾಯಕ್ವಾಡ್ ಅನುಚಿತ ವರ್ತನೆ!

ಸದ್ಯ ಪಾಲಿಕೆ ಚುನಾವಣೆಯಲ್ಲಿ ಗೆದ್ದು ಬೀಗಿರುವ ಬಿಜೆಪಿಗೆ ಉಚ್ಛಾಟಿತರ ಹೇಳಿಕೆಗಳು, ಆರೋಪಗಳು ಮುಜುಗರ ತರುತ್ತಿವೆ. ಉಚ್ಛಾಟಿರತರು ಜಿಲ್ಲಾಧ್ಯಕ್ಷರ ಬದಲಾವಣೆಗೆ ಪಟ್ಟು ಹೀಡಿದಿದ್ದಾರೆ. ಈ ವಿಚಾರ ಮುಂದಿನ ವಿಧಾನಸಭಾ ಚುನಾವಣೆಯ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆಯಿದೆ. ಉಚ್ಛಾಟಿತರು ಮಾಡುತ್ತಿರುವ ಆರೋಪಗಳ ಹಿಂದೆ ಜಿಲ್ಲಾ ಬಿಜೆಪಿ ಕೆಲ ಮುಖಂಡರ ಬೆಂಬಲ ಇದೆ ಎಂದು ಕೇಳಿ ಬರುತ್ತಿದೆ. ಈ ಡ್ಯಾಮೇಜ್ ಕಂಟ್ರೋಲ್​ಗೆ ಬಿಜೆಪಿ ವರಿಷ್ಠರು ಯಾವ ನಡೆ ಇಡುತ್ತಾರೆ ಎಂಬುದು ಕಾಯ್ದು ನೋಡಬೇಕಿದೆ.

ವರದಿ: ಅಶೋಕ ಯಡಳ್ಳಿ, ಟಿವಿ9 ವಿಜಯಪುರ

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ