ಸಾರಿಗೆ ಸಿಬ್ಬಂದಿಗಳ ಬಂದ್ ಬಿಸಿ: ವಿಜಯಪುರ ಕೂಲಿ ಕೆಲಸಗಾರರಿಗೆ ಸಂಕಷ್ಟ

ಕಳೆದ ಮೂರು ದಿನಗಳಿಂದ ಸರಿಯಾಗಿ ಕೆಲಸ ಸಿಗುತ್ತಿಲ್ಲ.ಕಾರಣ ಸಾರಿಗೆ ಬಂದ್ ಬಿಸಿ ಇವರ ಕೆಲಸದ ಮೇಲೆ ಪರಿಣಾಮ ಬೀರಿದೆ. ಸರ್ಕಾರಿ ಬಸ್​ಗಳು ರಸ್ತೆಗೆ ಇಳಿಯದ ಕಾರಣ ಗ್ರಾಮೀಣ ಪ್ರದೇಶದ ಇವರು ಖಾಸಗಿ ವಾಹನಗಳನ್ನು ನೆಚ್ಚಿಕೊಳ್ಳಬೇಕಾಗಿದೆ.

  • ಅಶೋಕ ಯಡಳ್ಳಿ
  • Published On - 22:13 PM, 11 Apr 2021
ಸಾರಿಗೆ ಸಿಬ್ಬಂದಿಗಳ ಬಂದ್ ಬಿಸಿ: ವಿಜಯಪುರ ಕೂಲಿ ಕೆಲಸಗಾರರಿಗೆ ಸಂಕಷ್ಟ
ಬಸ್​ಗಾಗಿ ಕಾಯುತ್ತಿರುವ ಕೂಲಿ ಕಾರ್ಮಿಕರು

ವಿಜಯಪುರ: ಕಳೆದ ಮೂರು ದಿನಗಳಿಂದ ಸರ್ಕಾರಿ ಬಸ್​ಗಳು ರಸ್ತೆಗೆ ಇಳಿದಿಲ್ಲ. ಆರನೇ ವೇತನ ಆಯೋಗದ ವರದಿಯ ಪ್ರಕಾರ ಸರ್ಕಾರ ನಡೆದುಕೊಳ್ಳಬೇಕು ಎಂದು ಸಾರಿಗೆ ಸಿಬ್ಬಂದಿಗಳು ಒತ್ತಾಯ ಮಾಡಿದ್ದರು. ಆದರೆ ಸರ್ಕಾರ ಸಾರಿಗೆ ನೌಕರರ ಬೇಡಿಕೆ ಈಡೇರಿಸದ ಕಾರಣ ಸಾರಿಗೆ ಸಿಬ್ಬಂದಿಗಳು ಬಂದ್​ಗೆ ಕರೆ ಕೊಟ್ಟಿದ್ದಾರೆ. ಇಡೀ ರಾಜ್ಯಾದ್ಯಂತ ಸಾರಿಗೆ ವ್ಯವಸ್ಥೆ ಸ್ತಬ್ಧವಾಗಿದೆ. ಸಾರಿಗೆ ಇಲಾಖೆ ನೌಕರರು ತಮ್ಮ ಪಟ್ಟು ಸಡಿಲಿಸುತ್ತಿಲ್ಲ. ಇತ್ತ ಸರ್ಕಾರವೂ ಆ ಕಡೆ ಗಮನ ಹರಿಸುತ್ತಿಲ್ಲ. ಇಷ್ಟರ ಮಧ್ಯೆ ಸರ್ಕಾರಿ ಬಸ್​ಗಳು ರಸ್ತೆಗಿಳಿದಿಲ್ಲ ಎಂಬಂತಾಗಿದೆ. ಇದು ಸಹಜವಾಗಿಯೇ ಸಾರ್ವಜನಿಕರಿಗೆ ತೊಂದರೆಯಾಗಿದೆ. ಅನಿವಾರ್ಯವಾಗಿ ಖಾಸಗಿ ವಾಹನಗಳ ಮೊರೆ ಹೋಗುವಂತಾಗಿದೆ.

ಗುಳೆ ಹೋಗುವವರ ಜಿಲ್ಲೆ ಎಂಬ ಕುಖ್ಯಾತಿಗೆ ಪಾತ್ರವಾದ ಜಿಲ್ಲೆಯಲ್ಲಿ ಕೆಲಸದ ಸಮಸ್ಯೆಯಿದೆ. ಗ್ರಾಮೀಣ ಭಾಗದಲ್ಲಿ ವರ್ಷ ಪೂರ್ತಿ ಕೆಲಸ ಸಿಗದ ಕಾರಣ ಗ್ರಾಮೀಣ ಭಾಗದ ಜನರು ಕೆಲಸ ಅರಸಿ ನಗರದತ್ತ ಬರುತ್ತಿದ್ದಾರೆ. ಸದ್ಯ ಜಮೀನುಗಳಲ್ಲಿನ ಕೆಲಸ ಮುಕ್ತಾಯವಾಗಿದ್ದು, ಜನರು ಕೆಲಸ ಇಲ್ಲದ ಕಾರಣ ನಗರದತ್ತ ಆಗಮಿಸುತ್ತಿದ್ದಾರೆ. ಜಿಲ್ಲೆಯ ವಿವಿಧ ತಾಲೂಕುಗಳ ಗ್ರಾಮಗಳಿಂದ ವಿಜಯಪುರ ನಗರಕ್ಕೆ ಆಗಮಿಸುವ ಇವರೆಲ್ಲಾ ನಗರದಲ್ಲಿ ಕೆಲಸ ಮಾಡಲು ಬರುತ್ತಾರೆ. ನಿತ್ಯ ಬೆಳಗಿನ ಜಾವ ಆಗಮಿಸುವ ನೂರಾರು ಕಾರ್ಮಿಕರು ಅಥನಿ ರಸ್ತೆಯ ಬಳಿ ಆಗಮಿಸುತ್ತಾರೆ. ಇಲ್ಲಿ ಪಾಯ ತೋಡುವುದು, ಗಾರೆ ಕೆಲಸಕ್ಕೆ ಸಹಾಯ ಮಾಡುವುದು ಸೇರಿದಂತೆ ಇತರೆ ಕೆಲಸಗಳನ್ನು ಮಾಡುತ್ತಾರೆ. ಅಂದಿನ ಕೂಲಿಯನ್ನು ಅಂದೇ ಸಂಪಾದನೆ ಮಾಡಿ ತಮ್ಮೂರಿಗೆ ವಾಪಸ್ ರಾತ್ರಿ ಪ್ರಯಾಣ ಬೆಳೆಸುತ್ತಾರೆ. ನಿತ್ಯ 300 ರಿಂದ 500 ರೂಪಾಯಿವರೆಗೆ ಗಳಿಸುತ್ತಾರೆ.

ಸಾರಿಗೆ ಸಿಬ್ಬಂದಿಗಳ ಬಂದ್​ನಿಂದ ಕೂಲಿ ಕಾರ್ಮಿಕರಿಗೆ ಸಮಸ್ಯೆ
ಹೀಗೆ ಕೆಲಸ ಅರಸಿ ನಗರಕ್ಕೆ ಬಂದು ಕೆಲಸ ಮಾಡಿ ಸಂಪಾದನೆ ಮಾಡುವವರಿಗೆ ಕಳೆದ ಮೂರು ದಿನಗಳಿಂದ ಸರಿಯಾಗಿ ಕೆಲಸ ಸಿಗುತ್ತಿಲ್ಲ.ಕಾರಣ ಸಾರಿಗೆ ಬಂದ್ ಬಿಸಿ ಇವರ ಕೆಲಸದ ಮೇಲೆ ಪರಿಣಾಮ ಬೀರಿದೆ. ಸರ್ಕಾರಿ ಬಸ್​ಗಳು ರಸ್ತೆಗೆ ಇಳಿಯದ ಕಾರಣ ಗ್ರಾಮೀಣ ಪ್ರದೇಶದ ಇವರು ಖಾಸಗಿ ವಾಹನಗಳನ್ನು ನೆಚ್ಚಿಕೊಳ್ಳಬೇಕಾಗಿದೆ. ಸರ್ಕಾರಿ ಬಸ್​ಗಳು ಸಮಯಕ್ಕೆ ಸರಿಯಾಗಿ ಬಂದು ಹೋಗುತ್ತಿತ್ತು. ಆದರೆ ಈಗಾ ಬಸ್ ಬಂದ್ ಆದ ಕಾರಣ ಖಾಸಗಿ ವಾಹನಗಳು ಪೂರ್ಣ ಸೀಟ್ ಭರ್ತಿಯಾಗೋವರೆಗೂ ಪ್ರಯಾಣಕ್ಕೆ ಮುಂದಾಗುತ್ತಿಲ್ಲ.

bus strike

ಸಾರಿಗೆ ಬಸ್​ ಇಲ್ಲದೆ ಕಾರ್ಮಿಕರ ಪರದಾಟ

ಸದ್ಯ ನಮ್ಮೂರಲ್ಲಿ ಕೆಲಸ ಇಲ್ಲ. ನಿತ್ಯ ಜೀವನ ಮಾಡಲು ಸಿಟಿಗೆ ಬರುತ್ತೇವೆ. ಇಲ್ಲಿ ಕಟ್ಟಡ ಕಾಮಗಾರಿ ಹಾಗೂ ಇತರೆ ಕೆಲಸ ಮಾಡಿ ನಿತ್ಯ ಸಂಪಾದನೆ ಮಾಡುತ್ತೇವೆ. ನಮ್ಮೂರಿನಿಂದ ಇಲ್ಲಿಗೆ ಬಂದು ಹೋಗುವುದಕ್ಕೆ 120 ರೂಪಾಯಿ ಸಾರಿಗೆ ವೆಚ್ಚವಾಗುತ್ತದೆ. ನಾವು ಕೆಲಸ ಮಾಡಿ ಸಂಪಾದನೆ ಮಾಡಿದ್ದರಲ್ಲಿ 120 ನ್ನು ಪ್ರಯಾಣಕ್ಕೆ ಇಡುತ್ತೇವೆ. ನಿತ್ಯ 300 ರಿಂದ 500 ಗಳಿಸಿದರೂ 120 ರೂಪಾಯಿ ಓಡಾಡಲೂ ಹೋಗುತ್ತದೆ. ಆದರೆ ಕಳೆದ ಮೂರು ದಿನಗಳಿಂದ ನಮಗೆ ಕೆಲಸ ಸಿಕ್ಕಿಲ್ಲಾ. ನಗರಕ್ಕೆ ತಡವಾಗಿ ಬಂದ ಕಾರಣ ನಮಗೆ ಕೆಲಸ ನೀಡಿಲ್ಲ. ಸರ್ಕಾರಿ ಬಸ್ ಬಾರದ ಕಾರಣ ಖಾಸಗಿ ವಾನಹದಲ್ಲಿ ಬರುತ್ತಿದ್ದೇವೆ. ಖಾಸಗಿ ವಾಹನಗಳು ಸಮಯಕ್ಕೆ ಸರಿಯಾಗಿ ಬರಲ್ಲ. ತಡವಾಗಿ ಬರುವ ಕಾರಣ ನಾವು ಕೆಲಸ ಇಲ್ಲದೇ ನಿತ್ಯ ಹಣ ಖರ್ಚು ಮಾಡಿಕೊಂಡು ಓಡಾಡುವಂತಾಗಿದೆ. ಸರ್ಕಾರಿ ಬಸ್ ಆರಂಭವಾದರೆ ಈ ಸಮಸ್ಯೆ ಇರಲ್ಲ ಎಂದು ಪಡಗಾನೂರು ಗ್ರಾಮದ ಕೂಲಿ ಕಾರ್ಮಿಕ ಈರಣ್ಣ ಹೇಳಿದ್ದಾರೆ.

ಬೆಳಿಗ್ಗೆ ಬೇಗ ಬಂದರೆ ಮಾತ್ರ ಕೆಲಸ ಸಿಗುತ್ತವೆ. ಸದ್ಯ ಸರ್ಕಾರಿ ಬಸ್ ಸಂಚಾರ ಬಂದ್ ಇರುವ ಕಾರಣ ಬೇಗ ಬರಲು ಆಗುತ್ತಿಲ್ಲಾ. ತಡವಾಗಿ ಬಂದ ಕಾರಣ ನಾವು ಕೆಲಸ ಸಿಗದೇ ವಾಪಸ್ ಹೋಗತ್ತಿದ್ದೇವೆ. ಹೀಗೆ ಆದರೆ ನಾವು ಜೀವನ ನಡೆಸೋದು ಹೇಗೆ, ಹೆಂಡತಿ ಮಕ್ಕಳ ಹೊಟ್ಟೆಗೆ ಏನು ಹಾಕೋದು? ಆದಷ್ಟು ಬೇಗಾ ಸರ್ಕಾರಿ ಬಸ್ ಆರಂಭಿಸಿದರೆ ನಮಗೆ ಅನಕೂಲವಾಗುತ್ತದೆ ಎಂದು ಅಥರ್ಗಾ ಗ್ರಾಮಸ್ಥ ರಾವುತ್ ಕಾಂಬಳೆ ಹೇಳಿದ್ದಾರೆ.

ಇದನ್ನೂ ಓದಿ: ಸಾರಿಗೆ ನೌಕರರ ಮುಷ್ಕರ ನಿಲ್ಲಿಸದಿದ್ದರೆ ‘ಅಂತರ್‌ ನಿಗಮ ವರ್ಗಾವಣೆ’ ಪರಿಗಣಿಸದಿರಲು ತೀರ್ಮಾನ!

(vijayapura workers are suffering from KSRTC BMTC bus strike )