ಸುಗ್ಗಿ ಆಚರಣೆ: ಸೀತನಿಯ ಸಿಹಿ ತಿಂದು ಸಂಭ್ರಮಿಸಿದ ಕಲಬುರಗಿ ಗ್ರಾಮಸ್ಥರು
ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ಕಲಬುರಗಿ ಸೇರಿದಂತೆ ಅನೇಕ ಜಿಲ್ಲೆಯ ಜನರು ಸಂಭ್ರಮದಿಂದ ಹಸಿ ಜೋಳದ ಸೀತನಿಯನ್ನು ಸವಿಯುತ್ತಾರೆ. ಮಕ್ಕಳಿಂದ ಹಿಡಿದು ಮುದುಕರವರಗೆ ಸಿಹಿ ಜೋಳವನ್ನು ತಿನ್ನುವ ರೂಡಿ ಮಾಡಿಕೊಂಡಿದ್ದು, ಸಿಹಿ ಜೋಳವನ್ನು ತಿಂದ ನಂತರ ಮಜ್ಜಿಗೆ ಕುಡಿಯುತ್ತಾರೆ.

ಕಲಬುರಗಿ: ಚಳಿಗಾಲ ಮುಗಿದು ಬೇಸಿಗೆ ಪ್ರಾರಂಭವಾಗುತ್ತಿದ್ದಂತೆ ಕಲಬುರಗಿ ಸೇರಿದಂತೆ ಉತ್ತರ ಕರ್ನಾಟಕದ ಜನರು ಸೀತನಿಯ ಹಿಂದೆ ಹೋಗುತ್ತಾರೆ. ಸಿಹಿ ತೆನೆ ಎನ್ನುವುದು ಈ ಭಾಗದ ಜನರ ಬಾಯಲ್ಲಿ ಸೀತನಿ ಆಗಿ ಬದಲಾಗಿದ್ದು, ಸೀತನಿಯನ್ನು ರೈತರು ಇಲ್ಲಿ ಸುಗ್ಗಿಯಾಗಿ ಆಚರಿಸುತ್ತಾರೆ. ಅದು ರೈತರಿಗೆ ಮಾತ್ರ ಸುಗ್ಗಿಯಲ್ಲ. ಬದಲಾಗಿ ಆ ಭಾಗದ ಜನರಿಗೆ ಜನವರಿ, ಫೆಬ್ರವರಿ ಎಂದರೆ ಸೀತನಿಯ ಸುಗ್ಗಿಯೋ ಸುಗ್ಗಿ.
ಈ ಸಮಯದಲ್ಲಿಯೇ ಸುಗ್ಗಿ ಆಚರಣೆ ಮಾಡಲು ಕಾರಣ ಬಿಳಿ ಜೋಳ ತೆನೆಯಾಗುತ್ತದೆ. ತನೆಯಲ್ಲಿ ಜೋಳದ ಕಾಳು ಹಸಿಯಿದ್ದಾಗ, ಅದನ್ನು ತಂದು ಸುಟ್ಟು ತಿನ್ನುವುದನ್ನು ಜನರು ಸಂಭ್ರಮದಿಂದ ಮಾಡುತ್ತಾರೆ. ಕಾಳು ಒಣಗುವ ಮುನ್ನವೆ ಹಸಿ ಜೋಳದ ತನೆಗಳನ್ನು ಸುಟ್ಟು ತಿಂದರೆ ಸ್ವರ್ಗ ಸುಖ, ಜೊತೆಗೆ ಆರೋಗ್ಯಕ್ಕೂ ಹಿತವಾಗಿದ್ದು, ಇಂತಹ ಸೀತನಿ ಸುಗ್ಗಿ ಕಲ್ಯಾಣ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ನಡೆಯುತ್ತದೆ.
ಹೌದು ನವೆಂಬರ್ ತಿಂಗಳಲ್ಲಿ ರೈತರು ಎರಡನೇ ಬೆಳೆಯಾಗಿ ಜೋಳವನ್ನು ಬಿತ್ತುತ್ತಾರೆ. ಆಗ ಬಿತ್ತಿದ್ದ ಜೋಳ, ಜನವರಿ, ಫೆಬ್ರವರಿ ತಿಂಗಳಲ್ಲಿ ಕಾಳುಗಳಾಗುತ್ತದೆ. ಆದರೆ ಜೋಳದ ಕಾಳು ಒಣಗುವ ಮುನ್ನವೇ ಜಮೀನಿನಲ್ಲಿನ ಹಸಿಯಾದ ಜೋಳದ ತೆನೆಗಳನ್ನು ಕಟಾವು ಮಾಡಿಕೊಂಡು ಬರುವ ರೈತರು, ಮನೆಯ ಸಮೀಪ, ಅಥವಾ ತಮ್ಮ ಜಮೀನಿನ ನೆಲದಲ್ಲಿ ಇದ್ದಿಲು ಹಾಕಿ ಅದಕ್ಕೆ ಬೆಂಕಿ ಹಚ್ಚುತ್ತಾರೆ.

ಹಸಿ ಜೋಳದ ತೆನೆ ಸುಡುತ್ತಿರುವ ದೃಶ್ಯ
ಕಡಿಮೆ ಬೆಂಕಿಯಲ್ಲಿ ಜೋಳದ ತೆನೆಗಳನ್ನು ಹಾಕಿ ಸುಟ್ಟು ಸ್ವಲ್ಪ ಹೊತ್ತು ಬೆಂಕಿಯಲ್ಲಿ ಬೇಯಿಸಿ, ಹೊರಗೆ ತೆಗೆದು, ತೆನೆಗಳಿಂದ ಹಸಿ ಜೋಳದ ಕಾಳನ್ನು ಬೇರ್ಪಡಿಸುತ್ತಾರೆ. ಜೋಳದಲ್ಲಿ ಯಾವುದೇ ರೀತಿಯ ಕಸಕಡ್ಡಿ ಬರದಂತೆ ಬೇರ್ಪಡಿಸುವ ನುರಿತ ರೈತರು, ನಂತರ ಅದನ್ನು ತಿನ್ನಲು ನೀಡುತ್ತಾರೆ. ಇಳಿ ಸಂಜೆಯಾಗುತ್ತಿದ್ದಂತೆ ರೈತರ ಜಮೀನು ಮತ್ತು ಮನೆಗಳಲ್ಲಿ ಸೀತನಿ ಸುವಾಸನೆ ಪ್ರಾರಂಭವಾಗುತ್ತದೆ.

ಸಿಹಿ ತೆನೆ ಸುಟ್ಟು ಕಾಳುಗಳನ್ನು ಬೇರ್ಪಡಿಸುತ್ತಿರುವ ದೃಶ್ಯ
ಒಂದಡೆ ಇಳಿ ಸಂಜೆ ಮತ್ತೊಂದಡೆ ಸುಡುವ ಜೋಳದ ಹಸಿ ಕಾಳುಗಳು. ಸುಟ್ಟ ಜೋಳದ ಕಾಳನ್ನು ಶೇಂಗಾ ಹಿಂಡಿಯೊಂದಿಗೆ ತಿಂದರೆ ಸ್ವರ್ಗ ಸುಖ ಸಿಕ್ಕಂತಾಗುತ್ತದೆ. ಹೌದು ಹಸಿ ಜೋಳದ ತೆನೆಯಲ್ಲಿ ಹಾಲಿನ ರೀತಿಯ ದ್ರವ ಇರುತ್ತದೆ. ಜೊತೆಗೆ ಹಸಿ ಜೋಳದ ತೆನೆಗಳು ಸಿಹಿಯಾಗಿರುತ್ತವೆ. ಅದರಲ್ಲೂ ಕೂಡ ಹಸಿ ಇದ್ದಾಗ, ಅದನ್ನು ಸ್ವಲ್ಪ ಬೇಯಿಸಿ ತಿಂದರೆ ಅದರ ಮಜಾನೇ ಬೇರೆ ಎನ್ನುತ್ತಾರೆ ಕಲಬುರಗಿ ಜನರು.

ಸೀತನಿ
ಆರೋಗ್ಯಕ್ಕೂ ಉತ್ತಮ ಈ ಸಿಹಿ ಜೋಳದ ತೆನೆ: ಇನ್ನು ಉತ್ತರ ಕರ್ನಾಟಕದಲ್ಲಿ ಸಾಮಾನ್ಯವಾಗಿ ಬಹುತೇಕರು ಜೋಳದ ರೊಟ್ಟಿಯನ್ನು ತಿನ್ನುತ್ತಾರೆ. ಜೋಳದ ರೊಟ್ಟಿ ಈ ಭಾಗದ ಜನರ ಆಹಾರದ ಪ್ರಮುಖ ಭಾಗ. ಆದರೆ ಹಸಿ ಜೋಳವನ್ನು ತಿನ್ನುವುದು ರೊಟ್ಟಿ ತಿನ್ನುವುದಕ್ಕಿಂತ ಉತ್ತಮ ಎನ್ನುವ ಅಭಿಪ್ರಾಯವಿದೆ. ಹಸಿ ಜೋಳದಲ್ಲಿ ಸಾಕಷ್ಟು ಪೋಷಕಾಂಶಗಳಿರುವುದರಿಂದ ನಿರಂತರವಾಗಿ ಹಸಿ ಜೋಳವನ್ನು ತಿನ್ನುವುದರಿಂದ ಅನೇಕ ಖಾಯಿಲೆಗಳು ದೂರವಾಗುತ್ತವೆ ಎನ್ನುವ ನಂಬಿಕೆ ಈ ಭಾಗದ ಜನರಲ್ಲಿದೆ.

ಸೀತನಿಯನ್ನು ಸವಿಯುತ್ತಿರುವ ಗ್ರಾಮಸ್ಥರು
ಹೀಗಾಗಿ ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ಕಲಬುರಗಿ ಸೇರಿದಂತೆ ಅನೇಕ ಜಿಲ್ಲೆಯ ಜನರು ಸಂಭ್ರಮದಿಂದ ಹಸಿ ಜೋಳದ ಸೀತನಿಯನ್ನು ಸವಿಯುತ್ತಾರೆ. ಮಕ್ಕಳಿಂದ ಹಿಡಿದು ಮುದುಕರವರಗೆ ಸಿಹಿ ಜೋಳವನ್ನು ತಿನ್ನುವ ರೂಡಿ ಮಾಡಿಕೊಂಡಿದ್ದು, ಸಿಹಿ ಜೋಳವನ್ನು ತಿಂದ ನಂತರ ಮಜ್ಜಿಗೆ ಕುಡಿಯುತ್ತಾರೆ. ಇದರಿಂದ ಸಿಹಿ ಜೋಳದ ತೆನೆ ಸುಲಭವಾಗಿ ಪಚನವಾಗುತ್ತದೆ.
ಇನ್ನು ಅನೇಕರು ಸೀತನಿ ದಾಸೋಹವನ್ನು ಕೂಡ ಏರ್ಪಡಿಸಿ, ಉಚಿತವಾಗಿ ಜನರಿಗೆ ಸೀತನಿಯನ್ನು ತಿನ್ನಿಸುತ್ತಾರೆ. ಸೀತನಿ ತಿನ್ನುವ ಕಾರ್ಯಕ್ರಮಗಳು ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು ಜಿಲ್ಲೆಯ ಅನೇಕ ಕಡೆ ನಡೆಯುತ್ತವೆ. ಇಳಿ ಸಂಜೆ ಹೊತ್ತಲ್ಲಿ ಸಂಬಂಧಿಕರನ್ನು ಮನೆಗಳಿಗೆ ಮತ್ತು ತಮ್ಮ ಜಮೀನಿಗೆ ಕರೆಯಿಸುವ ಜನರು, ಭರ್ಜರಿಯಾಗಿ ಸೀತನಿಗಳನ್ನು ಬೇಯಿಸಿ, ಶೇಂಗಾ ಹಿಂಡಿ ಜೊತೆ ಕೊಡುತ್ತಾರೆ. ನಂತರ ಮಜ್ಜಿಗೆ ಕೊಟ್ಟು ಅಥಿತಿಗಳಿಗೆ ಸತ್ಕಾರ ಮಾಡುತ್ತಾರೆ.

ಸುಟ್ಟ ಜೋಳದ ಕಾಳು ಮತ್ತು ಶೇಂಗಾ ಹಿಂಡಿ
ಸೀತನಿ ತಿನ್ನುವುದು ಅನೇಕ ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಪದ್ಧತಿ. ಆದರೆ ಇದು ಬೆಳೆಯನ್ನು ಅವಲಂಬಿಸಿದೆ. ಕೆಲವು ವರ್ಷ ಜೋಳ ಚೆನ್ನಾಗಿ ಬರುವುದಿಲ್ಲ ಆಗ ಸೀತನಿ ಸಂಭ್ರಮಕ್ಕೆ ಮಂಕು ಕವಿಯುತ್ತದೆ. ಸೀತನಿ ತಿನ್ನಿ ಆರೋಗ್ಯ ಕಾಪಾಡಿಕೊಳ್ಳಿ ಎನ್ನುವ ರೈತರು, ತಾವು ತಿನ್ನುವುದರ ಜೊತೆಗೆ ಅನೇಕರಿಗೆ ಸೀತನಿ ತಿನ್ನಿಸುವುದನ್ನು ಅನೇಕ ವರ್ಷಗಳಿಂದ ಮಾಡಿಕೊಂಡು ಬಂದಿದ್ದಾರೆ. ಉತ್ತರ ಕರ್ನಾಟಕದಲ್ಲಿ ರೈತರು ತಮ್ಮ ಕೃಷಿ ಜೊತೆ ಅನೇಕ ರೂಢಿಗಳನ್ನು ಹಾಕಿಕೊಂಡಿದ್ದು, ಅವುಗಳನ್ನು ತಲೆತಲಾಂತರಗಳಿಂದ ಪಾಲಿಸಿಕೊಂಡು ಬರುತ್ತಿರುವುದು ಮತ್ತೊಂದು ಹೆಮ್ಮೆಯ ಸಂಗತಿಯಾಗಿದೆ.
ಚಾಮರಾಜನಗರ: ಸುಗ್ಗಿ ಹುಗ್ಗಿ ಸಂಭ್ರಮದಲ್ಲಿ ಮಾಜಿ ಸಚಿವ ಮಹೇಶ್ ಮಸ್ತ್ ಮಸ್ತ್ ಸ್ಟೆಪ್ಸ್!