ಹಾಸನ ಜಿಲ್ಲೆಯಲ್ಲಿ ಕಾಡಾನೆ ಹಾವಳಿ, ಗ್ರಾಮಸ್ಥರು ತತ್ತರ; ಪ್ರಯೋಜನವಾಗಲಿಲ್ಲ ರೈಲ್ವೆ ಹಳಿಗಳ ಬ್ಯಾರಿಕೇಡ್
ಹಾಸನ ಜಿಲ್ಲೆಯಲ್ಲಿ 18 ಕಿಲೋಮೀಟರ್ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಆನೆ ಟಾಸ್ಕ್ ಫೋರ್ಸ್ ನೀಡಿದ ಸಲಹೆಯಂತೆ ಈ ವರ್ಷ 4 ಕಿಲೋಮೀಟರ್ ಬ್ಯಾರಿಕೇಡ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆಯಾದರು ಸಮಸ್ಯೆ ಮಾತ್ರ ಒಂದಿಂಚೂ ಕಡಿಮೆಯಾಗಿಲ್ಲ.
ಹಾಸನ: ಜಿಲ್ಲೆಯ ಜನರನ್ನು ಮೂರು ದಶಕಗಳಿಂದ ಬೆಂಬಿಡದೆ ಕಾಡುತ್ತಿರುವ ಮಗ್ಗುಲ ಮುಳ್ಳು, ಸಮಸ್ಯೆ ಇನ್ನೂ ಬಗೆ ಹರಿಯುತ್ತಿಲ್ಲ. ಸಮಸ್ಯೆ ಬಗೆಹರಿಸುವ ಬಗ್ಗೆ ಸರ್ಕಾರಗಳು ಗಂಭಿರವಾಗಿ ಚಿಂತನೆಯನ್ನೂ ಮಾಡುತ್ತಿಲ್ಲ. ಮಾನವನ ಅಭಿವೃದ್ಧಿಯ ನಾಗಾಲೋಟದ ಭಾಗವಾಗಿ ಸೃಷ್ಟಿಯಾದ ಸಮಸ್ಯೆ ಇದೀಗ ಕೇವಲ ಹತ್ತೇ ವರ್ಷದಲ್ಲಿ 61 ಜನರನ್ನ ಬಲಿಪಡೆದಿದೆ, ಅಷ್ಟೇ ಪ್ರಮಾಣದ ಆನೆಗಳ ಪ್ರಾಣ ಹಾನಿಗೂ ಕಾರಣವಾಗಿದೆ. ಇದರಿಂದಾಗಿ ಕೋಟ್ಯಾಂತರ ರೂಪಾಯಿ ನಷ್ಟವಾಗಿದ್ದು, ನೆಮ್ಮದಿ ಇಲ್ಲದ ಬದುಕು ನಡೆಸುವಂತಾಗಿದೆ.
ಮಿತಿ ಮೀರಿದ ಕಾಡಾನೆ ಹಾವಳಿಗೆ ಹಾಸನ ಜಿಲ್ಲೆಯ ಜನತೆ ಕಂಗಾಲಾಗಿದ್ದು, ಹತ್ತು ವರ್ಷದಲ್ಲಿ 61 ಜನರು ಸಾವನ್ನಪ್ಪಿದ್ದು, 67 ಆನೆಗಳ ಸೆರೆ ಹಾಗೂ 60ಕ್ಕೂ ಹೆಚ್ಚು ಆನೆಗಳ ಸಾವನ್ನಪ್ಪಿವೆ. ಇನ್ನು 19 ಕೋಟಿ ರೂಪಾಯಿ ಪರಿಹಾರ ನಿಧಿಯಲ್ಲಿ ಸಾಕಷ್ಟು ಹಾನಿಯಾಗಿದ್ದು, ಪರಿಹಾರ ಹುಡುಕಬೇಕಾದ ಸರ್ಕಾರದ ಜಾಣ ಕುರುಡುತನಕ್ಕೆ ಜನರು ಹೈರಾಣಾಗಿದ್ದಾರೆ. ಹೌದು ಕಳೆದ 3 ತಿಂಗಳ ಅವಧಿಯಲ್ಲಿ ಹಾಸನ ಜಿಲ್ಲೆಯಲ್ಲಿ 5 ಜನರು ಕಾಡಾನೆಗಳ ದಾಳಿಗೆ ಸಿಲುಕಿ ಬಲಿಯಾಗಿದ್ದು, ಜಿಲ್ಲೆಯಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಜನರು ಆನೆಯಿಂದ ಮೃತಪಟ್ಟ ವ್ಯಕ್ತಿಯ ಶವವನ್ನ ಡಿಸಿ ಕಚೇರಿ ಎದುರು ಇಟ್ಟು ಪ್ರತಿಭಟನೆ ಮಾಡುವ ಹಂತಕ್ಕೆ ಸಮಸ್ಯೆ ಬಿಗಡಾಯಿಸಿದ್ದು, ಜಿಲ್ಲೆಯಲ್ಲಿ 2001ರಿಂದ 2021ರ ವರೆಗೆ ಕಾಡಾನೆ ದಾಳಿಗೆ 61 ಅಮಾಯಕ ಜನರು ಬಲಿಯಾಗಿದ್ದಾರೆ. ಹಾಗೆಯೇ ಇದೇ ಹತ್ತು ವರ್ಷಗಳಲ್ಲಿ 67 ಕಾಡಾನೆಗಳನ್ನು ಜನರಿಗೆ ತೊಂದರೆ ಕೊಡುತ್ತಿವೆ ಎಂದು ಸೆರೆಹಿಡಿದು ಸ್ಥಳಾಂತರ ಮಾಡಲಾಗಿದೆ. ಜೊತೆಗೆ ಕಾಡಾನೆ ಸಂಘರ್ಷಕ್ಕೆ ಜಿಲ್ಲೆಯಲ್ಲಿ ಸುಮಾರು 50ಕ್ಕೂ ಹೆಚ್ಚು ಆನೆಗಳು ಕೂಡ ಬಲಿಯಾಗಿದ್ದು, ಮೂರು ದಶಕಗಳಿಂದ ಕಾಡುತ್ತಿರುವ ಆನೆಗಳ ಹಾವಳಿ ತಡೆಯುವುದಕ್ಕೆ ಸೋಲಾರ್ ಬೇಲಿ, ಆನೆ ಕಂದಕಗಳನ್ನ ಮಾಡಿ ಸುಸ್ತಾದ ಅರಣ್ಯ ಇಲಾಖೆ ಈಗ ಇದ್ಯಾವುದು ಪ್ರಯೋಜನ ಇಲ್ಲ ಎಂದು ರೈಲ್ವೆ ಹಳಿಗಳ ಬ್ಯಾರಿಕೇಡ್ ನಿರ್ಮಾಣ ಮಾಡುತ್ತಿದೆ.
ಹಾಸನ ಜಿಲ್ಲೆಯಲ್ಲಿ 18 ಕಿಲೋಮೀಟರ್ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಆನೆ ಟಾಸ್ಕ್ ಫೋರ್ಸ್ ನೀಡಿದ ಸಲಹೆಯಂತೆ ಈ ವರ್ಷ 4 ಕಿಲೋಮೀಟರ್ ಬ್ಯಾರಿಕೇಡ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆಯಾದರು ಸಮಸ್ಯೆ ಮಾತ್ರ ಕಡಿಮೆಯಾಗಿಲ್ಲ.
ಮೂರು ದಶಕಗಳಿಂದ ಹಾಸನ ಜಿಲ್ಲೆಯ ಆಲೂರು ಸಕಲೇಶಪುರ ಹಾಗೂ ಅರಕಲಗೂಡು ತಾಲೂಕಿನ ಕೆಲ ಭಾಗ ಹಾಗೂ ಬೇಲೂರು ತಾಲೂಕಿನ ಕೆಲವೆಡೆ ಜನರನ್ನ ಕಂಗೆಡಿಸಿರುವ ಕಾಡಾನೆ ಹಾವಳಿ ಇತ್ತೀಚಿನ ದಿನಗಳಲ್ಲಿ ಮೇರೆ ಮೀರಿದೆ. ಕಳೆದ ನವೆಂಬರ್ನಿಂದ ಇಲ್ಲಿಯವರೆಗೆ ಬರೊಬ್ಬರಿ 5 ಅಮಾಯಕ ಜನರು ಬಲಿಯಾಗಿದ್ದಾರೆ. ಆಲೂರು ಸಕಲೇಶಪುರ ತಾಲೂಕಿನ ಕಾಡಂಚಿನ ಭಾಗದ ಜನರು ನಿತ್ಯವೂ ಜೀವ ಕೈಯಲ್ಲಿ ಹಿಡಿದು ಓಡಾಡಬೇಕಾದ ಸ್ಥಿತಿ ನಿರ್ಮಾಣವಾಗಿದ್ದು, ಮನೆಯಿಂದ ಆಚೆ ಬಂದರೆ ಮತ್ತೆ ವಾಪಸ್ ಜೀವಂತವಾಗಿ ಮನೆಗೆ ಹೋಗುವ ಯಾವುದೇ ಗ್ಯಾರಂಟಿ ಇಲ್ಲದ ಪರಿಸ್ಥಿತಿ ಇಲ್ಲಿದೆ.
ಬರೊಬ್ಬರಿ 65ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ನಾಡಿನಲ್ಲೇ ನೆಲೆ ಕಳೆದುಕೊಂಡಿವೆ, ಹಿಂಡು ಹಿಂಡಾಗಿ ಕಾಫಿ ತೋಟದಿಂದ ಕಾಫಿ ತೋಟ, ಊರಿಂದ ಊರಿಗೆ ಅಲೆಯುತ್ತಾ ಜನರನ್ನ ಜೀವ ಭಯದಲ್ಲಿ ಬದುಕುವಂತೆ ಮಾಡಿದೆ. ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರ ಪರಿಸ್ಥಿತಿಯಂತೂ ಚಿಂತಾಜನಕವಾಗಿದ್ದು, ಜೀವ ಪಣಕ್ಕಿಟ್ಟು ಜನರು ಕೂಲಿ ಮಾಡುತ್ತಿದ್ದಾರೆ. ಸಮಸ್ಯೆ ಬಗೆಹರಿಸಬೇಕಾದ ಅರಣ್ಯ ಇಲಾಖೆಯೂ ಸ್ಥಳೀಯವಾಗಿ ಅಸಹಾಯಕವಾಗಿದೆ.
ಕೆಲ ತಾತ್ಕಾಲಿಕ ಕ್ರಮಗಳ ಮೂಲಕ ಜನರನ್ನ ಸಮಾಧಾನ ಮಾಡುವ ಯತ್ನ ನಡೆದಿದೆ ಅಷ್ಟೇ. ಆದರೆ ಸಮಸ್ಯೆಯ ಆಳ ಅರಿತು ಶಾಶ್ವತ ಪರಿಹಾರ ಕೊಡಬೇಕಾದ ಸರ್ಕಾರ ಹಾಗೂ ಅರಣ್ಯ ಸಚಿವರು ಸಮಸ್ಯೆ ಅರಿಯುವ ಮುನ್ನವೇ ಖಾತೆ ಬದಲಾಯಿಸಿಕೊಂಡು ಹೋಗುತ್ತಾರೆ. ಕಳೆದ ಏಳು ವರ್ಷದಲ್ಲಿ ಏಳು ಅರಣ್ಯ ಸಚಿವರು ಬದಲಾಗಿರುವುದೇ ಇದಕ್ಕೆ ಸ್ಪಷ್ಟ ನಿದರ್ಶನ. ಇದೀಗ ಜಿಲ್ಲೆಯಲ್ಲಿ ಜನರ ಹೋರಾಟ ಆಕ್ರೋಶ ತಾರಕಕ್ಕೇರಿದ್ದರಿಂದ ಫೆಬ್ರವರಿ 16ಕ್ಕೆ ಸಕಲೇಶಪುರದಲ್ಲಿ ಅರಣ್ಯ ಸಚಿವರ ಜೊತೆಗೆ ಸಭೆ ನಿಗದಿಯಾಗಿದೆ.
49 ವರ್ಷ ಜಿಲ್ಲೆಯಲ್ಲಿ ಅಧಿಕಾರ ಇದ್ದವರು ಸಮಸ್ಯೆ ಬಗೆಹಿಸಿಲ್ಲ, ಈಗ ನಾವು ಸಮಸ್ಯೆ ಬಗೆಹರಿಸುವ ಯತ್ನ ಮಾಡುತ್ತಿದ್ದೇವೆ. ಜನರಿಂದಲೇ ಪರಿಹಾರ ಮಾರ್ಗೋಪಾದಯದ ಬಗ್ಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಹೇಳಿದ್ದಾರೆ.
ಒಟ್ಟಿನಲ್ಲಿ ನೀರಾವರಿ ಯೋಜನೆ, ರೈಲ್ವೆ ಯೋಜನೆ, ರಸ್ತೆ, ವಿದ್ಯುತ್ ಯೋಜನೆ ಅದು ಇದು ಅಂತಾ ಅಭಿವೃದ್ಧಿಯ ನೆಪದಲ್ಲಿ ಮನುಷ್ಯ ಮಾಡಿದ ಯಡವಟ್ಟು ಕಾಡು ಪ್ರಾಣಿಗಳ ನೆಲೆಯಲ್ಲೇ ಅಲ್ಲೋಲ ಕಲ್ಲೋಲ ಆಗುವಂತೆ ಮಾಡಿದೆ. ನಿತ್ಯ ನೂರಾರು ಕಿಲೋಮೀಟರ್ ನಡೆದಾಡುತ್ತಿದ್ದ ಆನೆಗಳು ಬದಲಾದ ಪರಿಸ್ಥಿತಿಯಲ್ಲಿ ನಾಡಿನಲ್ಲೇ ನೀರಿನ ಜೊತೆಗೆ ಪೌಷ್ಠಿಕ ಅಹಾರವೂ ಸಿಕ್ಕಿದ್ದರಿಂದ ಇಲ್ಲೇ ನೆಲೆ ಕಂಡುಕೊಂಡಿದ್ದು, ಇದೀಗ ಜನರ ಜೀವಕ್ಕೆ ಸಂಚಕಾರ ತರುತ್ತಿದೆ. ಜನರು ಹೇಳುವಂತೆ ಜಿಲ್ಲೆಯಲ್ಲಿರುವ 65 ಆನೆಗಳ ಸ್ಥಳಾಂತರವೇ ಇದಕ್ಕೆ ಪರಿಹಾರಾನಾ, ಇಲ್ಲ ಪರಿಸರ ವಾದಿಗಳು ಹೇಳುವಂತೆ ಆನೆ ಕಾರಿಡಾರ್ ಸಮಸ್ಯೆಗೆ ಪರಿಹಾರವಾಗುತ್ತಾ, ಎನ್ನುವುದರ ಬಗ್ಗೆ ಏನು ಕ್ರಮ ಕೈಗೊಳ್ಳುತ್ತೆ ಎನ್ನುವುದನ್ನು ಇದೀಗ ಗಮನಿಸಬೇಕಿದೆ.
ಇದನ್ನೂ ಓದಿ: ಹಾಸನ ಕಾಡಾನೆ ದಾಳಿ: ಚಿಕಿತ್ಸೆ ಫಲಿಸದೆ ಕಾರ್ಮಿಕ ಬಲಿ..
Published On - 9:34 pm, Tue, 16 February 21