ಪೊಲೀಸ್ ಸಮವಸ್ತ್ರ ಪತ್ತೆ ವಿಚಾರ: ವಿರೇನ್ ತಂದೆ ಶ್ರೀರಾಮ್ ಹೇಳಿದ್ದೇನು?

ಪೊಲೀಸ್ ಸಮವಸ್ತ್ರ ಪತ್ತೆ ವಿಚಾರ: ವಿರೇನ್ ತಂದೆ ಶ್ರೀರಾಮ್ ಹೇಳಿದ್ದೇನು?

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿಯಿಂದ ಬಂಧನದಲ್ಲಿರುವ ವಿರೇನ್ ಖನ್ನಾ ಮನೆಯಲ್ಲಿ ಪೊಲೀಸ್ ಸಮವಸ್ತ್ರ ಪತ್ತೆಯಾಗಿದ್ದು, ಈ ವಿಚಾರದ ಬಗ್ಗೆ ಮಾತಾನಾಡಿರುವ ಶ್ರೀರಾಮ್ ಖನ್ನಾ ಅದು ಪಾರ್ಟಿ ಬಟ್ಟೆ. ಅದಕ್ಕೂ ಪ್ರಕರಣ ದಾಖಲಿಸುತ್ತಾರಾ? ಎಂದು ಪ್ರಶ್ನೆ ಮಾಡಿದ್ದಾರೆ. ಜೊತೆಗೆ ವಿರೇನ್ ಮನೆಯಲ್ಲಿ 8 ದೇಶದ ಹಣ ಸಿಕ್ಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಮನೆಯಲ್ಲಿ ಸಿಕ್ಕಿರುವುದು ಚಿಲ್ಲರೆ ಹಣ ಮಾತ್ರ, ಅದು ಕೂಡ ಫ್ರೆಂಚ್ ಮಹಿಳೆಗೆ ಸೇರಿದ ಹಣವಾಗಿದೆ ಎಂದಿದ್ದಾರೆ.

ಆರೋಪಿ ರವಿಶಂಕರ್‌ನಿಂದ ಬಲವಂತವಾಗಿ ನನ್ನ ಮಗನ ಹೆಸರನ್ನು ಹೇಳಿಸಿದ್ದಾರೆ. ಆದರೆ ರವಿಶಂಕರ್‌ಗೂ ನನ್ನ ಪುತ್ರನಿಗೂ ಯಾವುದೇ ಸಂಬಂಧವಿಲ್ಲ. ಅಲ್ಲದೆ ಅನಗತ್ಯವಾಗಿ ವಿರೇನ್ ಖನ್ನಾನನ್ನು ಕೇಸ್‌ನಲ್ಲಿ ಸಿಲುಕಿಸಿದ್ದಾರೆ. ಪ್ರಕರಣವನ್ನ ಕೇವಲ ಒಂದು ದೃಷ್ಟಿಕೋನದಿಂದ ನೋಡಬೇಡಿ, ಎರಡೂ ಕಡೆ ನೋಡಿದರೆ ಆಗ ಸತ್ಯ ಏನೆಂದು ತಿಳಿಯುತ್ತದೆ.

ನನ್ನ ಪುತ್ರನನ್ನು ಬಲಿಪಶು ಮಾಡಬೇಡಿ..
ವಿರೇನ್ ಖನ್ನಾ ಮುಗ್ಧ, ಆತ ಡ್ರಗ್ಸ್ ಕಿಂಗ್‌ಪಿನ್ ಅಲ್ಲ. ಇ.ಡಿ ಹಾಗೂ ಪೊಲೀಸರ ತನಿಖೆಗೆ ನಾವು ಸಹಕಾರ ನೀಡುತ್ತೇವೆ. ಜೊತೆಗೆ ಹಣಕಾಸು ಸಂಬಂಧ ಎಲ್ಲ ದಾಖಲೆಗಳನ್ನು ಕೊಡುತ್ತೇವೆ. ಡ್ರಗ್ಸ್ ಕೇಸ್‌ನಲ್ಲಿ ನನ್ನ ಪುತ್ರನನ್ನು ಬಲಿಪಶು ಮಾಡಬೇಡಿ ಎಂದು ಶ್ರೀರಾಮ್ ಖನ್ನಾ ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದ್ದಾರೆ.

ವಿರೇನ್ ಖನ್ನಾ ಆಯೋಜಿಸಿದ್ದ ಪಾರ್ಟಿಗಳಲ್ಲಿ ಡ್ರಗ್ಸ್ ಸಿಕ್ಕಿಲ್ಲ ಹಾಗೂ ದೆಹಲಿಯಲ್ಲಿ ಇರುವ ನಿವಾಸ ನಮ್ಮ ತಾತ ಕಟ್ಟಿರುವುದು, ಅಲ್ಲಿ ವಿರೇನ್ ಖನ್ನಾ ವಾಸವಾಗಿಲ್ಲ ಎಂದಿದ್ದಾರೆ. ಇ.ಡಿ ಕಚೇರಿಯಿಂದ ನಿನ್ನೆ ನನಗೆ ಕರೆ ಬಂದಿತ್ತು. ಅಲ್ಲದೆ ಇ.ಡಿ ಅಧಿಕಾರಿಗಳು ನನ್ನ ಪಾಸ್‌ಪೋರ್ಟ್, ಪಾನ್‌ಕಾರ್ಡ್ ಪಡೆದಿದ್ದಾರೆ.

ಮನೆಯಲ್ಲಿ ಡ್ರಗ್ ಪ್ಲಾಂಟ್ ಮಾಡುವ ಸಾಧ್ಯತೆ ಇತ್ತು..
ಹೋಳಿಯ ಬಳಿಕ ನನ್ನ ಪುತ್ರ ಪಾರ್ಟಿ ಆಯೋಜಿಸಿಲ್ಲ. ನಾವು ಎಲ್ಲಾ ಮಾಹಿತಿಯನ್ನ ನೀಡಲು ತಯಾರಿದ್ದೇವೆ. ಸಿಎಂ ಡ್ರಗ್​ ಪೆಡ್ಲರ್ಸ್ ವಿರುದ್ಧ ಕಾರ್ಯಾಚರಣೆಗೆ ತಿಳಿಸಿದ್ದಾರೆ. ವಿರೇನ್ ಖನ್ನಾ ಫೇಮಸ್ ಪಾರ್ಟಿ ಆರ್ಗನೈಸರ್ ಆಗಿದ್ದಾನೆ. ಈ ಕಾರಣದಿಂದ ನನ್ನ ಪುತ್ರನನ್ನು ಬಂಧಿಸಲಾಗಿದೆ.

ಮನೆಯಲ್ಲಿ ಸಿಸಿ ಕ್ಯಾಮರಾಗಳ ಅಳವಡಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ  ಶ್ರೀರಾಮ್ ಖನ್ನಾ ಸರ್ಚ್ ವಾರಂಟ್ ಇಲ್ಲದೆ ಪೊಲೀಸರು ಮನೆಗೆ ಬಂದಿದ್ದರು, ಮನೆಯಲ್ಲಿ ಡ್ರಗ್ ಪ್ಲಾಂಟ್ ಮಾಡುವ ಸಾಧ್ಯತೆ ಇತ್ತು. ಹೀಗಾಗಿ ನಾವು ಸಿಸಿ ಕ್ಯಾಮರಾವನ್ನು ಅಳವಡಿಸಿದ್ದೇವೆ ಎಂದರು.

Click on your DTH Provider to Add TV9 Kannada