ಬೆಂಗಳೂರು, ಮಾ.5: ಕರ್ನಾಟಕದಲ್ಲಿ ಬರಗಾಲ (Drought) ತಲೆದೋರಿದ್ದು, ಕುಡಿಯುವ ನೀರಿಗಾಗಿ ಹಾಹಾಕಾರ ಎದ್ದಿದೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಇಂದು ಗೃಹಕಚೇರಿ ಕೃಷ್ಣಾದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಅಧಿಕಾರಿಗೊಳೊಂದಿಗೆ ಬರ ನಿರ್ವಹಣೆ ಪರಿಶೀಲನೆ ಸಭೆ ನಡೆಸಿ ಚರ್ಚೆ ನಡೆಸಿದರು. ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಕಂಟ್ರೋಲ್ ರೂಂ (Control Room) ತೆರೆಯಲು ಸೂಚಿಸಲಾಗಿದೆ. ಅಲ್ಲದೆ, ಸಹಾಯವಾಣಿ (Helpline) ಆರಂಭಿಸಲು ಸೂಚಿಸಲಾಗಿದೆ ಎಂದರು.
ಕುಡಿಯುವ ನೀರಿನ ಸಮಸ್ಯೆ ಆಗದಂತೆ ಸರ್ಕಾರ ಎಲ್ಲಾ ಕಾರ್ಯಕ್ರಮ ಮಾಡಲಿದೆ. ಹಣಕ್ಕೂ ತೊಂದರೆ ಆಗದ ರೀತಿ ನೋಡಿಕೊಳ್ಳುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು. ಕರ್ನಾಟಕದಲ್ಲಿ ಪ್ರಸಕ್ತ ವರ್ಷ ಬರಗಾಲವಿದೆ. ರಾಜ್ಯದ 194 ತಾಲೂಕುಗಳಲ್ಲಿ ತೀವ್ರ ಬರಗಾಲವಿದೆ. ಯಾವುದೇ ಕಾರಣಕ್ಕೂ ಕುಡಿಯುವ ನೀರಿಗೆ ತೊಂದರೆ ಆಗದಂತೆ ಸೂಚನೆ ನೀಡಿದ್ದೇನೆ. ಕುಡಿಯುವ ನೀರು ಪೂರೈಸಲು ಎಷ್ಟೇ ಹಣ ಬೇಕಿದ್ದರೂ ಸರ್ಕಾರ ಕೊಡುತ್ತದೆ ಎಂದರು.
ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ 854 ಕೋಟಿ ರೂಪಾಯಿ ಇದೆ. ಬರ ಹಿನ್ನೆಲೆಯಲ್ಲಿ ಜಿಲ್ಲೆ ಹಾಗೂ ತಾಲೂಕು ಆಡಳಿತ ಮಟ್ಟದಲ್ಲಿ ಸಭೆ ನಡೆದಿದೆ. ಡಿಸಿಎಂ ಅಧ್ಯಕ್ಷತೆಯಲ್ಲಿ ಬರ ನಿರ್ವಹಣೆ, ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ ನಡೆದಿದೆ. ಸಮಸ್ಯೆ ಇರುವ ಕಡೆ ಯೋಜನೆ ರೂಪಿಸುವಂತೆ ಸಭೆಯಲ್ಲಿ ಸೂಚನೆ ನೀಡಿದ್ದೇನೆ ಎಂದರು.
ಇದನ್ನೂ ಓದಿ: ಮಳೆಯಿಲ್ಲದೆ ಸಮುದ್ರಕ್ಕೆ ಬಂದಿಲ್ಲ ನೀರು! ಕಡಿಮೆಯಾಗಿದೆ ಮೀನುಗಳ ಸಂತಾನೋತ್ಪತ್ತಿ, ಕೈಕಟ್ಟಿ ಕುಳಿತ ಮೀನುಗಾರರು
ಕುಡಿಯುವ ನೀರಿಗಾಗಿ ಹಾಹಾಕಾರ ಎದ್ದಿರುವ ಹಿನ್ನೆಲೆ ಸರ್ಕಾರವೇ ಜನರಿಗೆ ನೀರನ್ನು ಪೂರೈಕೆ ಮಾಡಲು ಮುಂದಾಗಿದೆ. ಈ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, 175 ಗ್ರಾಮಗಳಿಗೆ 204 ಟ್ಯಾಂಕ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುವುದು. 500 ಗ್ರಾಮಗಳಲ್ಲಿ 596 ಖಾಸಗಿ ಬೋರ್‌ವೆಲ್ ಮೂಲಕ ನೀರು ಪೂರೈಕೆ ಮಾಡಲಾಗುವುದು ಎಂದರು.
ಬೆಂಗಳೂರು ನಗರದಲ್ಲೂ ನೀರು ಪೂರೈಕೆಗೆ ಆದ್ಯತೆ ನೀಡಿದ್ದೇವೆ ಎಂದು ಹೇಳಿದ ಸಿದ್ದರಾಮಯ್ಯ, ಬಿಬಿಎಂಪಿಯಿಂದ 120 ಟ್ಯಾಂಕರ್‌ಗಳ ಮೂಲಕ ಹಾಗೂ ಜಲಮಂಡಳಿಯಿಂದ 232 ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುವುದು.ಹೊಸ ಬೋರ್‌ವೆಲ್ ಕೊರೆಯಲು 210 ಕೋಟಿ ರೂ. ನೀಡಲಾಗಿದೆ. ಹೊಸ ಬೋರ್‌ವೆಲ್‌ಗೆ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಹಣ ನೀಡಲ್ಲ. ರಾಜ್ಯ ಸರ್ಕಾರವೇ ಹಣ ನೀಡಿದೆ. ಅನಿವಾರ್ಯವಿದ್ದ ಕಡೆ ಮಾತ್ರ ಹೊಸದಾಗಿ ಬೋರ್‌ವೆಲ್ ಕೊರೆಯಬೇಕು ಎಂದರು.
ಕುಡಿಯುವ ನೀರಿನ ಸಮಸ್ಯೆ ಆರಂಭವಾಗುತ್ತಿದ್ದಂತೆ ಖಾಸಗಿ ಟ್ಯಾಂಕರ್ ಮಾಲೀಕರು ಒಂದು ಟ್ಯಾಂಕರ್ ನೀರಿಗೆ ದುಪಟ್ಟು ದರ ವಸೂಲಿ ಮಾಡುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಟ್ಯಾಂಕರ್ ಮಾಲೀಕರ ಜೊತೆ ಮಾತನಾಡಿ ರೀಜನಬಲ್ ರೇಟ್ ವಿಧಿಸಲು ಹೇಳುತ್ತೇವೆ. ನೀರು ಸರ್ಕಾರದ್ದು. ಹೀಗಿದ್ದಾಗ ಟ್ಯಾಂಕರ್ಗಳು ತರುವ ನೀರು ಎಲ್ಲಿದ್ದು ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿ @siddaramaiah ಅವರು ಇಂದು ರಾಜ್ಯದ ಬರ ಪರಿಸ್ಥಿತಿ ನಿರ್ವಹಣೆ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು, ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಮಾಲೋಚನೆ ನಡೆಸಿದರು.
ಉಪ ಮುಖ್ಯಮಂತ್ರಿಗಳಾದ @DKShivakumar, ಕಂದಾಯ ಸಚಿವರಾದ… pic.twitter.com/1EwfBviJU0
— CM of Karnataka (@CMofKarnataka) March 5, 2024
ರೈತರಿಗೆ ಒಂದು ಪೈಸೆ ಹಣ ಸಹ ಕೊಟ್ಟಿಲ್ಲವೆಂದು ಬಿಜೆಪಿ ಆರೋಪಿಸುತ್ತಿದೆ. ಆದರೆ ರೈತರಿಗೆ ರಾಜ್ಯ ಸರ್ಕಾರದಿಂದ 631 ಕೋಟಿ ರೂ. ಪಾವತಿಸಲಾಗಿದೆ. 33 ಲಕ್ಷದ 25 ಸಾವಿರ ರೈತರಿಗೆ ಸುಮಾರು 631 ಕೋಟಿ ರೂ. ಪಾವತಿ ಮಾಡಲಾಗಿದೆ. ಪ್ರತಿ ರೈತರ ಖಾತೆಗೆ ತಲಾ 2 ಸಾವಿರ ರೂ. ಹಾಕಲಾಗಿದೆ. ವಿಪಕ್ಷದವರು ಸುಮ್ಮನೇ ಟೀಕೆ ಮಾಡುತ್ತಿದ್ದಾರೆ ಎಂದರು.
ಕೆಲವು ಜಿಲ್ಲೆಗಳಲ್ಲಿ ಮೇವು ಸಿಗದ ಹಿನ್ನೆಲೆ ರೈತರು ಜಾನುವಾರುಗಳನ್ನು ಅನಿವಾರ್ಯವಾಗಿ ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಮೇವಿಗೆ ಈವರೆಗೆ ತೊಂದರೆ ಆಗಿಲ್ಲ. ಮೇವು ಬೆಳೆಯಲು 90 ಕೋಟಿ ರೂ. ಕೊಟ್ಟಿದ್ದೇವೆ. ಬೀಜ ಉಚಿತವಾಗಿ ಕೊಟ್ಟಿದ್ದೇವೆ. ಗ್ಯಾರೆಂಟಿ ಸ್ಕೀಂಗಳಿಂದ ಜನರಿಗೆ ದುಡ್ಡು ಕೊಡುತ್ತಿದ್ದೇವೆ. ಪ್ರತಿ ಕುಟುಂಬಕ್ಕೆ ಇದರಿಂದ 4-5 ಸಾವಿರ ಸಿಗುತ್ತಿದೆ. 1 ಕೋಟಿ 20 ಲಕ್ಷ ಕುಟುಂಬಗಳಿಗೆ ಸಿಗುತ್ತಿದೆ. 4.5 ಕೋಟಿ ಜನರಿಗೆ ಇದರ ಲಾಭ ಸಿಗುತ್ತಿದೆ ಎಂದರು.
ಜನರಿಗೆ ಬರಗಾಲದ ತೀವ್ರತೆ ಹೆಚ್ಚಾಗಿರುವುದು ಕಾಣುತ್ತಿಲ್ಲ. ಮೇವು ಸದ್ಯ ಸಮಸ್ಯೆ ಇಲ್ಲ. ನೀರಿನ ಸಮಸ್ಯೆ ಆಗಬಹುದು. ಪರಿಹಾರ ಕೊಡುವ ಪ್ರಯತ್ನ ಮಾಡಬೇಕು. ಖಾಸಗಿ ಬೋರ್ ವೆಲ್ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. ನಿನ್ನೆ ಡಿಕೆ ಶಿವಕುಮಾರ್ ಬಿಬಿಎಂಪಿ ಅಧಿಕಾರಿಗಳಿಗೆ ನೀರು ತೊಂದರೆ ಆಗದಂತೆ ನೋಡಿಕೊಳ್ಳಲು ಸೂಚನೆ ನೀಡಿದ್ದಾರೆ ಎಂದರು.
ಇದನ್ನೂ ಓದಿ: ಧಾರವಾಡ: ಜಾನುವಾರುಗಳಿಗೆ ಮೇವಿನ ಕೊರತೆ; ಕಡಿಮೆ ಬೆಲೆಗೆ ಮಾರಾಟವಾಗ್ತಿದೆ ಗೋವುಗಳು
ಕೇಂದ್ರ 100 ದಿನ ಉದ್ಯೋಗ ಕೊಡಬೇಕು. ಬರಗಾಲ ಬಂದರೆ 150 ದಿನ ಉದ್ಯೋಗ ಕೊಡಬೇಕು ಅಂತ ಇದೆ. ಬರಗಾಲದ ಹಣ ಕೇಂದ್ರ ಸರ್ಕಾರ ಕೊಟ್ಟಿಲ್ಲ. ಕಂದಾಯ ಸಚಿವರು, ಗ್ರಾಮೀಣಾಭಿವೃದ್ಧಿ ಸಚಿವರು ಹೇಳಿದರೂ ಹಣ ಕೊಟ್ಟೇ ಇಲ್ಲ. ವೇಸ್ಟ್ ಪೇಮೆಂಟ್ ಕೂಡ ಕೊಟ್ಟಿಲ್ಲ. 20.10.2023ಕ್ಕೆ ಮೊದಲ ಮನವಿ ಕೊಟ್ಟಿದ್ದೇವೆ. 17 ಸಾವಿರ ಕೋಟಿಗೆ ಮೊದಲು ಮನವಿ ಮಾಡಿದ್ದೆವು. ನಂತರ ಎರಡನೆಯದಾಗಿ 18 ಸಾವಿರದ 172 ಕೋಟಿ ಮನವಿ ಕೊಟ್ಟಿದ್ದೆವು. ಕೊಟ್ಟಿಲ್ಲ ಅನ್ನೋದು ಗೊತ್ತಿದ್ದರೂ ಬಿಜೆಪಿಯವರು ಸುಮ್ಮನೆ ಕೂತಿದ್ದಾರೆ. ನಿಮ್ಮ (ಬಿಜೆಪಿ) ನಾಯಕತ್ವದಲ್ಲೇ ಹೋಗೋಣ ಅಂದರೂ ಪ್ರತಿಕ್ರಿಯೆ ಇಲ್ಲ. ಮೋದಿ, ಅಮಿತ್ ಶಾ ಭೇಟಿ ಮಾಡಿದೆ. ಜಪ್ಪಯ್ಯ ಅಂದರೂ ಕೇಂದ್ರ 1 ರೂ. ಕೊಟ್ಟಿಲ್ಲ. ಕೊಟ್ಟಿಲ್ಲ ಅನ್ನೋದಕ್ಕೂ ನಾವು ಕೇಳೋದು ಬೇಡವಾ ಎಂದರು.
ಬೆಂಗಳೂರಿನ ಸುತ್ತಮುತ್ತ ಜಿಲ್ಲೆಗಳಲ್ಲಿ ನೀರಿನ ಮೂಲ ಹೆಚ್ಚಿಸಲು ಸೂಚಿಸಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು. ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ, ನೆಲಮಂಗಲ, ಮಾಗಡಿ ಭಾಗಗಳಲ್ಲಿ ಜಿಲ್ಲೆಗಳಲ್ಲಿ ನೀರಿನ ಮೂಲ ಹೆಚ್ಚಿಸಲು ಸೂಚನೆ ನೀಡಿದ್ದೇವೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ