ಬೆಂಗಳೂರು: ರಾಮನಗರ ಜಿಲ್ಲೆ ಮೇಕೆದಾಟು ಬಳಿ ಕರ್ನಾಟಕ ಸರ್ಕಾರ ಡ್ಯಾಂ ನಿರ್ಮಾಣಕ್ಕೆ ಮುಂದಾಗಿತ್ತು. ಆದ್ರೆ, ಇದಕ್ಕೆ ವಿರೋಧ ವ್ಯಕ್ತಪಡಿಸಿರೋ ತಮಿಳುನಾಡು, ಮೇಕೆದಾಟು ಡ್ಯಾಂ ನಿರ್ಮಿಸಲು ಅವಕಾಶ ನೀಡಬೇಡಿ ಸರ್ವಪಕ್ಷಗಳ ನಿರ್ಣಯ ಕೈಗೊಂಡಿದೆ. ಈ ನಿರ್ಣಯವನ್ನ ಕೇಂದ್ರ ಸರ್ಕಾರಕ್ಕೆ ಕಳುಹಿಸಲು ನಿರ್ಧರಿಸಿವೆ. ಆದ್ರೆ ಈ ಬಗ್ಗೆ ಮಾತನಾಡಿರುವ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮೇಕೆದಾಟು ಯೋಜನೆ ಕಾಮಗಾರಿಯನ್ನು ಮಾಡುತ್ತೇವೆ. ಡಿಪಿಆರ್ ವರದಿ ಸಿಡಬ್ಲ್ಯುಸಿ ಮುಂದೆ ಮಂಡಿಸಲಾಗುತ್ತದೆ. ತಮಿಳುನಾಡಿನ ಬಗ್ಗೆ ನಾನು ಪ್ರತಿಕ್ರಿಯೆ ಕೊಡಲ್ಲ ಎಂದಿದ್ದಾರೆ.
ರಾಜ್ಯದ ಎಲ್ಲ ನೀರಾವರಿ ಯೋಜನೆಗಳ ಬಗ್ಗೆ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಜತೆ ಚರ್ಚಿಸಿದ್ದೇವೆ. ಮೇಕೆದಾಟು, ಎತ್ತಿನಹೊಳೆ ಯೋಜನೆ ಬಗ್ಗೆಯೂ ಚರ್ಚೆ ನಡೆದಿದೆ. ಮೇಕೆದಾಟು ಯೋಜನೆ ಕಾಮಗಾರಿಯನ್ನು ಮಾಡುತ್ತೇವೆ. ಡಿಪಿಆರ್ ವರದಿ ಸಿಡಬ್ಲ್ಯುಸಿ ಮುಂದೆ ಮಂಡಿಸಲಾಗುತ್ತದೆ. ತಮಿಳುನಾಡಿನ ಬಗ್ಗೆ ನಾನು ಪ್ರತಿಕ್ರಿಯೆ ಕೊಡಲ್ಲ. ಎಲ್ಲ ಯೋಜನೆಗಳ ಕಾಮಗಾರಿಯನ್ನು ಮುಗಿಸುತ್ತೇವೆ. ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲಾಗುತ್ತೆ. ಪ್ರತಿ ಮನೆಗೂ ನಲ್ಲಿ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗುತ್ತೆ ಎಂದು ವಿಧಾನಸೌಧದಲ್ಲಿ ಹೇಳಿದರು.
ತಮಿಳುನಾಡು ಈ ವಿಚಾರದಲ್ಲಿ ಕ್ಯಾತೆ ತೆಗೆಯಬಾರದು
ಇನ್ನು ಇದೇ ವಿಚಾರವಾಗಿ ವಿಜಯಪುರದಲ್ಲಿ ಮಾಜಿ ಸಚಿವ ಎಂ.ಬಿ.ಪಾಟೀಲ್ ಪ್ರತಿಕ್ರಿಯಿಸಿ, ಮೇಕೆದಾಟು ನಮ್ಮ ರಾಜ್ಯದಲ್ಲಿ ನಡೆಯುವ ಯೋಜನೆ. ಇದಕ್ಕೆ ತಮಿಳುನಾಡು ಸರ್ಕಾರದ ಹಸ್ತಕ್ಷೇಪ ಸರಿಯಲ್ಲ ಎಂದಿದ್ದಾರೆ. ನಮ್ಮ ನೀರನ್ನು ನಾವು ಬಳಕೆ ಮಾಡಿಕೊಳ್ಳುತ್ತಿದ್ದೇವೆ. ತಮಿಳುನಾಡು ಈ ವಿಚಾರದಲ್ಲಿ ಕ್ಯಾತೆ ತೆಗೆಯಬಾರದು. ಈ ಯೋಜನೆಯಿಂದ ತಮಿಳುನಾಡಿಗೂ ಅನುಕೂಲವಾಗತ್ತೆ. ರಾಜ್ಯ ಸರ್ಕಾರ ಸರ್ವಪಕ್ಷಗಳ ಮಾಜಿ ಸಿಎಂಗಳು. ಮಾಜಿ ಜಲ ಸಂಪನ್ಮೂಲ ಸಚಿವರ ಸಭೆ ಕರೆದು ಚರ್ಚಿಸಲಿ. ಅವರ ಅಭಿಪ್ರಾಯವನ್ನು ಪಡೆಯಬೇಕು. ಯೋಜನೆಯ ಜಾರಿಗೆ ಕೇಂದ್ರದ ಮೇಲೆ ಒತ್ತಡ ತರಬೇಕು ಎಂದರು.
ತಮಿಳುನಾಡಿನ ಸರ್ವಪಕ್ಷ ಸಭೆಯಲ್ಲಿ ನಿರ್ಣಯ ಅಂಗೀಕಾರ
ಮೇಕೆದಾಟು ಬಳಿ ಡ್ಯಾಂ ನಿರ್ಮಾಣಕ್ಕೆ ಮುಂದಾಗಿರುವ ಕರ್ನಾಟಕದ ನಿರ್ಧಾರಕ್ಕೆ, ತಮಿಳುನಾಡು ಸರ್ಕಾರದಿಂದ ಭಾರಿ ವಿರೋಧ ವ್ಯಕ್ತವಾಗಿದೆ. ಈ ಕುರಿತು ಚರ್ಚಿಸಲು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಜುಲೈ 12ರಂದು ಸರ್ವಪಕ್ಷ ಸಭೆ ಕರೆದಿದ್ರು. ಈ ಸಭೆಯಲ್ಲಿ ಡಿಎಂಕೆ, ಕಾಂಗ್ರೆಸ್, ಬಿಜೆಪಿ, ಎಐಎಡಿಎಂಕೆ ಸೇರಿ ಎಲ್ಲ ಪಕ್ಷಗಳ ಪ್ರತಿನಿಧಿಗಳು ಭಾಗವಹಿಸಿದ್ರು. ಯಾವುದೇ ಕಾರಣಕ್ಕೂ ಮೇಕೆದಾಟು ಡ್ಯಾಂ ನಿರ್ಮಾಣಕ್ಕೆ ಅನುಮತಿ ನೀಡಬೇಡಿ ಅಂತಾ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ನಿರ್ಣಯ ಕೈಗೊಂಡಿವೆ. ಈ ನಿರ್ಣಯವನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲು ತಮಿಳುನಾಡು ಸರ್ಕಾರ ನಿರ್ಧರಿಸಿದೆ.
ಸರ್ವಪಕ್ಷ ಸಭೆ ಬಳಿಕ ಮಾತನಾಡಿದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಕಾವೇರಿ ನದಿ ನೀರಿನ ಮೇಲೆ ಕರ್ನಾಟಕದ ಜೊತೆಗೆ ತಮಿಳುನಾಡಿಗೂ ಸಂಪೂರ್ಣ ಹಕ್ಕಿದೆ. ಬೇರೆ ಬೇರೆ ಪಕ್ಷಗಳಲ್ಲಿದ್ರೂ ಕಾವೇರಿ ವಿಚಾರ ಬಂದಾಗ ನಮ್ಮ ಹಕ್ಕು ಬಿಟ್ಟುಕೊಡಲ್ಲ. ಈ ವಿಚಾರದಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದೇವೆ. ಕರ್ನಾಟಕ ಸರ್ಕಾರ ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟಿನಲ್ಲಿ ಡ್ಯಾಂ ನಿರ್ಮಿಸಿದ್ರೆ, ರಾಜ್ಯದ ರೈತರಿಗೆ ನೀರಿಗೆ ಬಹಳ ತೊಂದರೆಯಾಗುತ್ತೆ. ಹೀಗಾಗಿ ಮೇಕೆದಾಟು ಯೋಜನೆ ವಿರುದ್ಧ ಸುಪ್ರೀಂಕೋರ್ಟ್ನಲ್ಲಿ ಹೋರಾಟ ಮಾಡಲು ತಮಿಳುನಾಡು ಸರ್ಕಾರ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲೇ ಸದ್ಯದಲ್ಲೇ ತಮಿಳುನಾಡಿನ ಸರ್ವಪಕ್ಷ ಸದಸ್ಯರ ನಿಯೋಗ ಕೇಂದ್ರ ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್ರನ್ನ ಭೇಟಿ ಮಾಡೋ ಸಾಧ್ಯತೆ ಇದೆ.
ಬೆಂಗಳೂರಿನ ಕುಡಿಯುವ ನೀರಿನ ಪೂರೈಕೆ ಸಮಸ್ಯೆ ಪರಿಹರಿಸಲು, 2008ರಲ್ಲಿ ಕರ್ನಾಟಕ ಸರ್ಕಾರ ಮೇಕೆದಾಟು ಯೋಜನೆ ಘೋಷಿಸಿತ್ತು. ಇದರಿಂದ ತಮಿಳುನಾಡಿಗೆ ಹರಿದು ಹೋಗುವ ಕಾವೇರಿ ನದಿ ನೀರಿನ ಪ್ರಮಾಣ ಕಡಿಮೆಯಾಗಲಿದೆ. ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಕೃಷಿಗೆ ಕಾವೇರಿ ನದಿ ನೀರನ್ನೇ ಅವಲಂಬಿಸಿದ್ದಾರೆ. ಹೀಗಾಗಿ ಮೇಕೆದಾಟು ಯೋಜನೆಗೆ ತಮಿಳುನಾಡು ಸರ್ಕಾರ ಅಡ್ಡಗಾಲು ಹಾಕಿತ್ತು. ತಮಿಳುನಾಡಿನಲ್ಲಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಭತ್ತ ಬೆಳೆಯಲು ಕಾವೇರಿ ನೀರನ್ನೇ ಅವಲಂಬಿಸಿದ್ದಾರೆ. ಕರ್ನಾಟಕ ಕಾವೇರಿ ನದಿಗೆ ಮೇಕೆದಾಟಿನಲ್ಲಿ ಅಣೆಕಟ್ಟು ಕಟ್ಟಿದರೆ ತಮಿಳುನಾಡಿನ ಜನರಿಗೆ ವ್ಯವಸಾಯಕ್ಕೆ ನೀರಿಗೆ ಸಮಸ್ಯೆಯಾಗುತ್ತದೆ ಅನ್ನೋದು ತಮಿಳುನಾಡು ಸರ್ಕಾರದ ವಾದ. ಈ ಹಿನ್ನೆಲೆಯಲ್ಲಿ ಮೇಕೆದಾಟು ಯೋಜನೆಗೆ ತಡೆಯೊಡ್ಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಲು ತಮಿಳುನಾಡು ಸರ್ಕಾರ ಪ್ರಯತ್ನಿಸುತ್ತಿದೆ.
ಇದೇ ವಿಚಾರವಾಗಿ ಜುಲೈ 7ರಂದು ತಮಿಳುನಾಡಿನ ಜಲ ಸಂಪನ್ಮೂಲ ಸಚಿವ ದೊರೈ ಮುರುಗನ್, ಕೇಂದ್ರ ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್ರನ್ನ ಭೇಟಿ ಮಾಡಿ ಮೇಕೆದಾಟು ಯೋಜನೆ ತಡೆಯುವಂತೆ ಮನವಿ ಸಲ್ಲಿಸಿದ್ದರು. ಸದ್ಯದಲ್ಲೇ ತಮಿಳುನಾಡಿನ ಸರ್ವ ಪಕ್ಷಗಳ ಸದಸ್ಯರ ನಿಯೋಗ ಕೂಡ ಕೇಂದ್ರ ಜಲಸಂಪನ್ಮೂಲ ಸಚಿವರನ್ನು ಭೇಟಿಯಾಗುವ ಸಾಧ್ಯತೆಯಿದೆ. ಆದ್ರೆ, ಕರ್ನಾಟಕದ ಪಾಲಿನ ನೀರನ್ನ ಬಳಸಿಕೊಳ್ಳಲು ತಮಿಳುನಾಡು ಕ್ಯಾತೆ ತೆಗೆಯುತ್ತಿರೋದೇಕೆ ಅನ್ನೋದಕ್ಕೆ ತಮಿಳುನಾಡು ಸರ್ಕಾರವೇ ಉತ್ತರ ನೀಡಬೇಕಿದೆ.
ಇದನ್ನೂ ಓದಿ: ಮೇಕೆದಾಟು ಡ್ಯಾಂ ಯೋಜನೆ ಆರಂಭಕ್ಕೆ ಮುಹೂರ್ತ ನಿಗದಿ ಮಾಡುವ ನಂಬಿಕೆ ಇದೆ; ಡಿ.ಕೆ.ಶಿವಕುಮಾರ್ ಟ್ವೀಟ್