ಬೆಂಗಳೂರು. (ಅಕ್ಟೋಬರ್ 01): ತಮ್ಮ ಪ್ರಭಾವ ಬಳಸಿ ತಮ್ಮ ಕುಟುಂಬಕ್ಕೆ ಮುಡಾದಿಂದ ಕಾನೂನುಬಾಹಿರವಾಗಿ 14 ಬದಲಿ ನಿವೇಶನ ಪಡೆದ ಆರೋಪ ಸಿಎಂ ಸಿದ್ದರಾಮಯ್ಯ ಮೇಲಿದೆ. ಹೈಕೋರ್ಟ್ ಈ ಬಗ್ಗೆ ತನಿಖೆ ನಡೆಸುವ ಅಗತ್ಯವಿದೆ ಎಂದು ತೀರ್ಪು ನೀಡಿದೆ. ಜಾರಿ ನಿರ್ದೇಶನಾಲಯದ ಕೂಡಾ ತನಿಖೆ ನಡೆಸಲು ಮುಂದಾಗುತ್ತಿದೆ. ಈ ಮಧ್ಯೆ ತಮ್ಮದೇನೂ ತಪ್ಪಿಲ್ಲ, 3 ಎಕರೆ 16 ಗುಂಟೆ ಜಮೀನು ಸ್ವಾಧೀನ ಮಾಡಿಕೊಂಡಿದ್ದಾರೆ, ಸೈಟ್ ಬಿಡಬೇಕು ಅಂದರೆ 62 ಕೋಟಿ ಪರಿಹಾರ ಕೊಟ್ಟುಬಿಡಲಿ ಎನ್ನುತ್ತಿದ್ದ ಸಿದ್ದರಾಮಯ್ಯ ಈಗ ಒಂದು ಹೆಜ್ಜೆ ಹಿಂದೆ ಸರಿದಿದ್ದಾರೆ. ಪತ್ನಿ ಪಾರ್ವತಿ ಅವರು 14 ಸೈಟ್ ಹಿಂತಿರುಗಿಸುವುದಾಗಿ ಪತ್ರ ಬರೆದಿದ್ದಾರೆ. ಅದನ್ನು ಸಿದ್ದರಾಮಯ್ಯ ಕೂಡಾ ಟ್ವೀಟ್ ಮೂಲಕ ದೃಢಪಡಿಸಿದ್ದಾರೆ. ಆದರೆ ಸಿದ್ದರಾಮಯ್ಯ ಪತ್ನಿಯವರ ಈ ಕ್ರಮದಿಂದ ಸಿದ್ದರಾಮಯ್ಯನವರ ವಿರುದ್ಧದ ತನಿಖೆ ನಿಲ್ಲುತ್ತದೆಯೇ ? ತಮ್ಮ ಮೇಲಿನ ಕಳಂಕದಿಂದ ಸಿದ್ದರಾಮಯ್ಯ ಪಾರಾಗುತ್ತಾರೆಯೇ ಎಂಬ ಪ್ರಶ್ನೆಗಳು ಎದುರಾಗಿವೆ.
ಸಿದ್ದರಾಮಯ್ಯ ಹಾಗೂ ಕುಟುಂಬದವರ ವಿರುದ್ಧ ಕೋರ್ಟ್ ಮೆಟ್ಟಿಲೇರಿರುವ ಖಾಸಗಿ ದೂರುದಾರರು 14 ಸೈಟ್ ಹಂಚಿಕೆಯಿಂದ ರಾಜ್ಯದ ಬೊಕ್ಕಸಕ್ಕೆ 56 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಆರೋಪಿಸಿದ್ದಾರೆ. ಹೈಕೋರ್ಟ್ ಕೂಡಾ ತನ್ನ ತೀರ್ಪಿನಲ್ಲಿ 14 ನಿವೇಶನಗಳ ಕಾನೂನುಬಾಹಿರ ಹಂಚಿಕೆಯಿಂದ ಸರ್ಕಾರಕ್ಕೆ 56 ಕೋಟಿ ರೂ. ನಷ್ಟವಾಗಿರುವ ಆರೋಪವಿದೆ. ಇದರ ತನಿಖೆ ಅಗತ್ಯವೆಂದಿದೆ. ಹೀಗಾಗಿ ಸಿದ್ದರಾಮಯ್ಯ ಪತ್ನಿಯವರು 14 ನಿವೇಶನ ಹಿಂತಿರುಗಿಸುವುದರಿಂದ ಆ ನಷ್ಟವನ್ನು ಸರಿದೂಗಿಸಬಹುದಾಗಿದೆ. ರಾಜಕೀಯವಾಗಿಯೂ ಸಿದ್ದರಾಮಯ್ಯ ಪರವಾಗಿ ಅನುಕಂಪ ಮೂಡಲು ಇದು ನೆರವಾಗಬಹುದು. ಅಲ್ಲದೇ ತನಿಖೆ ನಡೆಸುತ್ತಿರುವ ಲೋಕಾಯುಕ್ತ ಪೊಲೀಸರು ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿಲ್ಲವೆಂದು ಬಿ ರಿಪೋರ್ಟ್ ಸಲ್ಲಿಸುವ ಸಾಧ್ಯತೆಗಳೂ ಇವೆ.
ಇದನ್ನೂ ಓದಿ: ಮುಡಾ ಸೈಟ್ ವಾಪಸ್: ಪತ್ನಿಯ ನಿರ್ಧಾರದಿಂದ ಆಶ್ಚರ್ಯಗೊಂಡ ಸಿದ್ದರಾಮಯ್ಯ ಹೇಳಿದ್ದಿಷ್ಟು!
ಆರಂಭದಲ್ಲಿ ಸೈಟ್ ವಾಪಸ್ ಕೊಡುವ ವಿಚಾರವನ್ನು ಖಡಾಖಂಡಿತವಾಗಿ ನಿರಾಕರಿಸುತ್ತಿದ್ದ ಸಿದ್ದರಾಮಯ್ಯ ಸಂಪೂರ್ಣ ಯೂಟರ್ನ್ ತೆಗೆದುಕೊಳ್ಳಲು ಹಲವು ಕಾರಣಗಳಿವೆ. ಜಾರಿ ನಿರ್ದೇಶನಾಲಯ ಕೂಡಾ ಈ ಪ್ರಕರಣದ ಬೆನ್ನು ಹತ್ತಿರುವುದರಿಂದ ಸಿಬಿಐ ಅನ್ನು ದೂರವಿಟ್ಟಂತೆ, ಇಡಿಯನ್ನು ದೂರವಿಡಲು ಸಾಧ್ಯವಾಗುವುದಿಲ್ಲ. ಲೋಕಾಯುಕ್ತ ಪೊಲೀಸರ ತನಿಖೆಯಂತೆ ಇಡಿ ತನಿಖೆ ನಡೆಯುವುದಿಲ್ಲ. ಸಿದ್ದರಾಮಯ್ಯ ಹಾಗೂ ಅವರ ಕುಟುಂಬದವರು, ಅಧಿಕಾರಿಗಳು ಕಠಿಣ ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ. ಬಂಧಿಸಿ ವಿಚಾರಣೆಗೆ ಗುರಿಪಡಿಸುವ ಅಧಿಕಾರವೂ ಇಡಿ ಅಧಿಕಾರಿಗಳಿಗಿದೆ. ಒಬ್ಬ ಅಧಿಕಾರಿ ಸಿದ್ದರಾಮಯ್ಯ ವಿರುದ್ಧ ಹೇಳಿಕೆ ನೀಡಿದರೂ ಸಮಸ್ಯೆ ಕಟ್ಟಿಟ್ಟ ಬುತ್ತಿ. ಹೀಗಾಗಿ ಈ ಸವಾಲುಗಳಿಂದ ಪಾರಾಗಲು ಸಿದ್ದರಾಮಯ್ಯ ಸಾಕಷ್ಟು ಆಲೋಚಿಸಿ, ಕಾನೂನು ತಜ್ಞರ ಅಭಿಪ್ರಾಯ ಪಡೆದೇ ಸೈಟ್ ಹಿಂತಿರುಗಿಸುವ ನಿರ್ಧಾರಕ್ಕೆ ಬಂದಂತಿದೆ. ಇಂತಹ ದೊಡ್ಡ ನಿರ್ಧಾರವನ್ನು ಸಿದ್ದರಾಮಯ್ಯ ಪತ್ನಿ ಒಬ್ಬರೇ ತೆಗೆದುಕೊಂಡಿದ್ದಾರೆಂಬುದನ್ನು ನಂಬಲು ಸಾಧ್ಯವಾಗುವುದಿಲ್ಲ.
ಇನ್ನು ಸೈಟ್ ಹಿಂತಿರುಗಿಸಿದರೂ ತನಿಖೆಯಂತೂ ನಿಲ್ಲುವುದಿಲ್ಲ. ಆದರೆ ಪ್ರಕರಣದ ಆರೋಪದ ತೀವ್ರತೆಯಂತೂ ಕಡಿಮೆಯಾಗುತ್ತದೆ. ಖಾಸಗಿ ದೂರುದಾರರಾದ ಸ್ನೇಹಮಯಿ ಕೃಷ್ಣ, ಟಿ.ಜೆ.ಅಬ್ರಹಾಂ ಹಾಗೂ ಪ್ರತಿಪಕ್ಷಗಳು ಸೈಟ್ ಹಿಂತಿರುಗಿಸುವ ಮೂಲಕ ಸಿದ್ದರಾಮಯ್ಯ ತಮ್ಮ ತಪ್ಪು ಒಪ್ಪಿಕೊಂಡಿದ್ದಾರೆಂದು ಹೇಳುತ್ತಿದ್ದಾರೆ. ಹೀಗಾಗಿ ಸೈಟ್ ಹಿಂತಿರುಗಿಸುವುದರಿಂದ ಸಿದ್ದರಾಮಯ್ಯನವರು ತನಿಖೆಯಿಂದ ತಪ್ಪಿಸಿಕೊಳ್ಳಲಾಗುವುದಿಲ್ಲವೆಂದು ಕಾನೂನು ತಜ್ಞರೂ ಅಭಿಪ್ರಾಯಪಡುತ್ತಾರೆ.
ಭ್ರಷ್ಟಾಚಾರ ತಡೆ ಕಾಯ್ದೆಯಡಿ ಕೇಸ್ ಇದೆ. ಎಫ್‌ಐಆರ್ ದಾಖಲಾಗಿ ತನಿಖೆ ಆರಂಭವಾಗಿದೆ. ಈ ಹಂತದಲ್ಲಿ ಸೈಟ್ ಹಿಂತಿರುಗಿಸುವುದರಿಂದ ಅಂತಹ ಲಾಭವೇನೂ ಆಗುವುದಿಲ್ಲ. ಇದು ರಾಜಿ ಮಾಡಿಕೊಳ್ಳಬಹುದಾದ ಅಪರಾಧ ಅಲ್ಲವಾದ್ದರಿಂದ ತನಿಖೆಯ ಮೇಲೂ ಯಾವುದೇ ಪರಿಣಾಮವಾಗುವುದಿಲ್ಲ. ವಿವಾದ ಆರಂಭವಾದಾಗಲೇ ಕೊಟ್ಟಿದ್ದರೆ ಸ್ವಲ್ಪ ಮಟ್ಟಿನ ಅನುಕೂಲವಾಗಬಹುದಿತ್ತು. ಆದರೆ ಈಗ ಹೈಕೋರ್ಟ್ ಆದೇಶ, ಎಫ್‌ಐಆರ್ ದಾಖಲಾಗಿ ತನಿಖೆ ಆರಂಭವಾದ ಬಳಿಕ ಸೈಟ್ ಹಿಂತಿರುಗಿಸುವುದರಿಂದ ತನಿಖೆ ಮೇಲೇನೂ ಪರಿಣಾಮವಾಗುವುದಿಲ್ಲ. ಎಂದು ಹಿರಿಯ ವಕೀಲ ಅಶೋಕ್ ಹಾರನಹಳ್ಳಿ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: 14 ಸೈಟ್ ಹಿಂದಿರುಗಿಸಲು ನಿರ್ಧಾರ: ಮುಡಾಗೆ ಸಿಎಂ ಪತ್ನಿ ಬರೆದ ಪತ್ರದಲ್ಲೇನಿದೆ?
ಇನ್ನು ಸಿದ್ದರಾಮಯ್ಯ ಪರ ವಕೀಲರು ಮುಂದಿನ ಕಾನೂನು ಹೋರಾಟಕ್ಕೆ ಇದನ್ನು ಅಸ್ತ್ರವಾಗಿ ಬಳಸಿಕೊಳ್ಳಬಹುದು. ಸೈಟ್ ಹಿಂತಿರುಗಿಸುವ ಮೂಲಕ ಸರ್ಕಾರದ ಬೊಕ್ಕಸಕ್ಕಾದ ನಷ್ಟ ಸರಿದೂಗಿಸಲಾಗಿದೆ. ಇದು ಅಧಿಕಾರಿಗಳ ತಪ್ಪಿರಬಹುದು, ಆದರೆ ಅದಕ್ಕೆ ಸಿದ್ದರಾಮಯ್ಯ ಹೊಣೆಯಲ್ಲವೆಂದು ವಾದಿಸಿ ಪ್ರಕರಣ ರದ್ದುಪಡಿಸಲು ಯತ್ನಿಸಬಹುದು. ಆದರೆ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರ ಕ್ರಮದಿಂದ ಸಿದ್ದರಾಮಯ್ಯ ಅವರು ಆರೋಪಮುಕ್ತರಂತೂ ಆಗುವ ಲಕ್ಷಣ ಕಾಣುತ್ತಿಲ್ಲ.
ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 7 ಸಿ ಅಡಿ ಸಿದ್ದರಾಮಯ್ಯ ವಿರುದ್ಧ ಆರೋಪವಿದೆ. ಈ ಸೆಕ್ಷನ್ ಅಡಿ ಸಾರ್ವಜನಿಕ ಸೇವಕನಾದವನು ತನಗಾಗಲೀ ಅಥವಾ ಇತರರಿಗಾಗಲೀ ತನ್ನ ಅಧಿಕಾರ ದುರುಪಯೋಗಪಡಿಸಿಕೊಂಡು ನ್ಯಾಯವಲ್ಲದ ಲಾಭ ಪಡೆದರೆ ಅದು ಅಪರಾಧವಾಗುತ್ತದೆ. ಮುಡಾ ಪ್ರಕರಣದ ವಾಸ್ತವಾಂಶಗಳನ್ನು ಗಮನಿಸಿದರೆ ಮೇಲ್ನೋಟಕ್ಕೆ ಸಿಎಂ ಕುಟುಂಬ ನ್ಯಾಯವಲ್ಲದ ಲಾಭ ಪಡೆದಿರುವುದು ಸ್ಪಷ್ಟವಾಗಿದೆ. 40 ಕಿಲೋ ಮೀಟರ್ ದೂರದ ಜಮೀನು ಬಿಟ್ಟುಕೊಟ್ಟು ಅದರ ಬದಲಿಗೆ ಮೈಸೂರಿನ ಹೃದಯ ಭಾಗದ ನಿವೇಶನಗಳನ್ನು ಪಡೆದಿದ್ದಾರೆ. ಸಾರ್ವಜನಿಕ ಸೇವಕ ತನ್ನ ಕುಟುಂಬದವರಿಗಾಗಿ ಪ್ರಭಾವ ಬಳಸಿರುವುದಕ್ಕೆ ಇದು ಸಾಕು. ಪ್ರಭಾವ ಬಳಸಲು ಸಾರ್ವಜನಿಕ ಸೇವಕ ಯಾವುದೇ ಶಿಫಾರಸು ಅಥವಾ ಆದೇಶ ಮಾಡಬೇಕಿಲ್ಲ. ಪತ್ನಿಗೆ ಲಾಭವಾಗುವುದರ ಹಿಂದೆ ನಿಸ್ಸಂದೇಹವಾಗಿ ಸಿದ್ದರಾಮಯ್ಯ ಇದ್ದಾರೆ. ಸಿದ್ದರಾಮಯ್ಯ ಅವರಿಗಿರುವ ಅಧಿಕಾರದ ಬಲದಿಂದಲೇ ಅವರ ಕುಟುಂಬ ಅನುಕೂಲ ಪಡೆದಿದೆ. ಕೆಸರೆ ಗ್ರಾಮದಲ್ಲಿ ಜಮೀನು ಕಳೆದುಕೊಂಡವರಿಗೆ ವಿಜಯನಗರ 3ನೇ ಹಂತದ ಬಡಾವಣೆಯಲ್ಲಿ ಬದಲಿ ನಿವೇಶನ ಮಂಜೂರು ಮಾಡಿದ ಬೇರೆ ಉದಾಹರಣೆಗಳಿಲ್ಲ.
ಅಚ್ಚರಿಯ ವಿಚಾರವೆಂದರೆ ಸಿಎಂ ಪತ್ನಿಗೆ 50 – 50 ಅನುಪಾತದಲ್ಲಿ ನಿವೇಶನ ಹಂಚಿಕೆಯಾದ ಬಳಿಕ ಈ ನಿಯಮವನ್ನೇ ರದ್ದುಪಡಿಸಲಾಗಿದೆ. ಸಿಎಂ ಪುತ್ರ ಭಾಗಿಯಾಗಿದ್ದ ಸಭೆಯಲ್ಲಿ 50 50 ನಿವೇಶನ ಹಂಚಿಕೆ ತೀರ್ಮಾನವಾಗಿದೆ. 50-50 ಹಂಚಿಕೆ ಕಾನೂನುಬಾಹಿರವೆಂದು ರದ್ದಾಗಿದ್ದರೆ ಸಿಎಂ ಪತ್ನಿಗೆ ದೊರಕಿದ 14 ನಿವೇಶನಗಳಿಗೆ ಏನಾಗಲಿದೆ ಎಂಬ ಬಗ್ಗೆ ತನಿಖೆಯಾಗಬೇಕಿದೆ. ಸಾಮಾನ್ಯ ನಾಗರಿಕನಾಗಿದ್ದರೆ ತನಿಖೆಗೆ ನಾಚುತ್ತಿರಲಿಲ್ಲ. ಮುಖ್ಯಮಂತ್ರಿ ದಿನಗೂಲಿಯವರು, ಜನಸಾಮಾನ್ಯರ ನಾಯಕನಾಗಿ ತನಿಖೆಗೆ ಹಿಂಜರಿಯಬಾರದು. ಸಿದ್ದರಾಮಯ್ಯ ಕುಟುಂಬದ ವಿರುದ್ಧ 56 ಕೋಟಿಯ ಅಕ್ರಮ ಲಾಭ ಪಡೆದ ಆರೋಪ, ಅನುಮಾನಗಳಿರುವಾಗ ತನಿಖೆ ಅತ್ಯಗತ್ಯವೆಂದು ಭಾವಿಸುತ್ತೇನೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ