ಕರ್ನಾಟಕದಲ್ಲಿ ಒಂದೆಡೆ ವಿದ್ಯುತ್​ ಬೇಡಿಕೆ ಹೆಚ್ಚಳ, ಮತ್ತೊಂದೆಡೆ ಉತ್ಪಾದನೆಯಲ್ಲಿ ಕುಸಿತ: ಇಲ್ಲಿದೆ ಅಂಕಿ-ಅಂಶ

| Updated By: ರಮೇಶ್ ಬಿ. ಜವಳಗೇರಾ

Updated on: Oct 11, 2023 | 8:38 AM

ಬರದಿಂದ ತತ್ತರಿಸಿರುವ ರೈತರಿಗೆ ಮತ್ತೊಂದು ಬರೆ ಬಿದ್ದಿದೆ. ಕರ್ನಾಟಕದಲ್ಲಿ ವಿದ್ಯುತ್​ ಅಭಾವ ಎದುರಾಗಿದೆ. ಇದರಿಂದ ವಿದ್ಯುತ್‌ ಕಣ್ಣಾಮುಚ್ಚಾಲೆ ಶುರುವಾಗಿದ್ದು, ನೀರಾವರಿ ರೈತರಿಗೆ ಸಂಕಷ್ಟ ತಂದಿಟ್ಟಿದೆ. ಹಾಗಾದ್ರೆ, ಕರ್ನಾಟಕದಲ್ಲಿ ಕಳೆದ ವರ್ಷ ಈ ಸಮಯಕ್ಕೆ ಎಷ್ಟು ವಿದ್ಯುತ್ ಉತ್ಪಾದನೆಯಾಗುತ್ತಿದೆ? ಎಷ್ಟು ವಿದ್ಯುತ್ ಕೊರತೆ ಇದೆ? ಎಷ್ಟು ಬೇಡಿಕೆ ಇದೆ? ಎನ್ನುವ ಅಂಕಿ-ಅಂಶಗಳು ಈ ಕೆಳಗಿನಂತಿವೆ.

ಕರ್ನಾಟಕದಲ್ಲಿ ಒಂದೆಡೆ ವಿದ್ಯುತ್​ ಬೇಡಿಕೆ ಹೆಚ್ಚಳ, ಮತ್ತೊಂದೆಡೆ ಉತ್ಪಾದನೆಯಲ್ಲಿ ಕುಸಿತ: ಇಲ್ಲಿದೆ ಅಂಕಿ-ಅಂಶ
ಪ್ರಾತಿನಿಧಕ ಚಿತ್ರ
Follow us on

ಬೆಂಗಳೂರು, (ಅಕ್ಟೋಬರ್ 11): ಕರ್ನಾಟಕದಲ್ಲಿ (Karnataka) ಈ ಬಾರಿ ಭೀಕರ ಬರ (Drought) ಆವರಿಸಿದೆ. ಆಲಮಟ್ಟಿ ಡ್ಯಾಂ ಬಿಟ್ರೆ ಯಾವೊಂದು ಜಲಾಶಯಗಳು ಕೂಡಾ ಈ ಬಾರಿ ಭರ್ತಿಯಾಗಿಲ್ಲ. ಇದರ ಪರಿಣಾಮ ವಿದ್ಯುತ್​ ಮೇಲೆ ಬೀರಿದೆ. ಹೌದು…ಮಳೆ ಇಲ್ಲದಿದ್ದರಿಂದ ಡ್ಯಾಂಗಳು ಖಾಲಿ-ಖಾಲಿಯಾಗಿವೆ. ಇದರಿಂದ ಜಲ ವಿದ್ಯುತ್‌ (Electricity ) ಉತ್ಪಾದನೆಯಲ್ಲಿ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವಿದ್ಯುತ್ ಕೊರತೆ ಹೆಚ್ಚಾಗಿದ್ದು, ಇದೀಗ ರೈತರು ಕಂಗಾಲಾಗಿದ್ದಾರೆ. ಮಳೆ ಇಲ್ಲದೆ ಇರುವುದರಿಂದ ರೈತರ ಪಂಪ್‌ಸೆಟ್‌ಗಳಿಂದ ವಿದ್ಯುತ್‌ಗೆ ಬೇಡಿಕೆ ಹೆಚ್ಚಾಗಿದೆ. ಇದಕ್ಕೆ ತಕ್ಕಂತೆ ವಿದ್ಯುತ್‌ ಪೂರೈಕೆ ಆಗುತ್ತಿಲ್ಲ. ಈ ಹಿಂದೆ ರೈತರಿಗೆ 7 ತಾಸು ತ್ರಿಪೇಸ್‌ ವಿದ್ಯುತ್‌ ಪೂರೈಸಲಾಗುತ್ತಿತ್ತು. ಆದ್ರೆ ಸದ್ಯ ಅದು ಕೆಲವೊಂದು ಜಿಲ್ಲೆಗಳಲ್ಲಿ ಕೇವಲ 2 ತಾಸಿಗೆ ಇಳಿದಿದೆ ಇದರಿಂದ ರೊಚ್ಚಿಗೆದ್ದಿರುವ ರೈತರು ಜಿಲ್ಲೆ ಜಿಲ್ಲೆಯಲ್ಲೂ ಹೋರಾಟ ಶುರು ಮಾಡಿದ್ದಾರೆ. ಹಾಗಾದ್ರೆ, ಕರ್ನಾಟಕದಲ್ಲಿ ಕಳೆದ ವರ್ಷ ಈ ಸಮಯಕ್ಕೆ ಎಷ್ಟು ವಿದ್ಯುತ್ ಉತ್ಪಾದನೆಯಾಗುತ್ತಿದೆ? ಎಷ್ಟು ಬೇಡಿಕೆ ಇದೆ? ಎನ್ನುವ ವಿವರ ಈ ಕೆಳಗಿನಂತಿದೆ.

ರಾಜ್ಯದಲ್ಲಿ ಮುಂಗಾರು ಕೊರತೆಯಿಂದಾಗಿ ವಿದ್ಯುತ್‌ ಉತ್ಪಾದನೆಯಲ್ಲಿ ಕುಸಿತ ಹಾಗೂ ಬೇಡಿಕೆಯಲ್ಲಿ ತೀವ್ರಗತಿಯ ಹೆಚ್ಚಳವಾಗಿರುವುದರಿಂದ ಸಂಕಷ್ಟದ ಸ್ಥಿತಿ ಎದುರಿಸುತ್ತಿದ್ದು, ಪ್ರತಿ ನಿತ್ಯ ಅಗತ್ಯಕ್ಕಿಂತ 40 ರಿಂದ 50 ಮಿಲಿಯನ್‌ ಯೂನಿಟ್‌ ವಿದ್ಯುತ್‌ ಕೊರತೆ ಎದುರಿಸುತ್ತಿದೆ. ಈ ವರ್ಷ ಆಗಸ್ಟ್‌ ತಿಂಗಳಲ್ಲಿ 16,950 ಮೆಗಾ ವ್ಯಾಟ್‌ನಷ್ಟು ವಿದ್ಯುತ್​ ಇದ್ದರೆ, 2022ರ ಆಗಸ್ಟ್​ನಲ್ಲಿ 11286 ಮೆ.ವ್ಯಾ ಬೇಡಿಕೆ ಕಂಡುಬಂದಿತ್ತು. ಇದೀಗ ಅಕ್ಟೋಬರ್‌ನಲ್ಲಿ ವಿದ್ಯುತ್‌ ಬೇಡಿಕೆ ಮತ್ತೆ 15000 ಮೆ.ವ್ಯಾಟ್‌ಗಿಂತಲೂ ಹೆಚ್ಚಳವಾಗಲಿದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಬಿಸಿ: ಕರ್ನಾಟಕ ಈ ಕತ್ತಲೆಭಾಗ್ಯದ ಕೂಪಕ್ಕೆ ಬೀಳುವುದು ಖಚಿತ ಎಂದ ಕುಮಾರಸ್ವಾಮಿ

2022ರ ಅಕ್ಟೋಬರ್‌ನಲ್ಲಿ ನಿತ್ಯ 150 ಮೆ.ವ್ಯಾಟ್‌ನಷ್ಟು ಇರುತ್ತಿದ್ದ ಬೇಡಿಕೆ, ಈ ವರ್ಷ ಅ.1ರಿಂದ 6ರವರೆಗಿನ ಸರಾಸರಿ ನೋಡಿದರೆ ವಿದ್ಯುತ್​ ಬೇಡಿಕೆ 250 ಮೆ.ವ್ಯಾಟ್‌ ದಾಟಿದೆ. ಉದಾಹರಣಗೆ ನೋಡುವುದಾದರೆ ಹಿಂದಿನ ವರ್ಷದ ಅಕ್ಟೋಬರ್ 9 ರಂದು ರಾಜ್ಯದಲ್ಲಿ 8,818 ಮೆಗಾವ್ಯಾಟ್ ವಿದ್ಯುತ್ ಬೇಡಿಕೆಯಿದ್ದರೆ, ಈ ವರ್ಷ ಅದೇ ದಿನ ಅಂದರೆ ಅ.9ರಂದು 15,403 ಮೆಗಾವ್ಯಾಟ್. ಈ ಎಲ್ಲಾ ಅಂಕಿ-ಅಂಶಗಳನ್ನೇ ನೋಡಿದರೆ ಕರ್ನಾಟಕದಲ್ಲಿ ವಿದ್ಯುತ್​ ಬೇಡಿಕೆ ಹೆಚ್ಚಾಗುತ್ತಿದ್ದರೆ, ಮತ್ತೊಂದೆಡೆ ವಿದ್ಯುತ್ ಉತ್ಪಾದನೆಯಲ್ಲಿ ಕುಸಿತವಾಗಿದೆ.

ಜುಲೈ 2022 ರಲ್ಲಿ ಕೃಷಿ ಕ್ಷೇತ್ರಕ್ಕೆ 1,425 ಮೆ.ವ್ಯಾಟ್ ಬಳಕೆಯಾಗಿದ್ದರೆ, ಜುಲೈ 2023 ರಲ್ಲಿ ಇದು 2,209 ಮೆಗಾ ವ್ಯಾಟ್​ಗೆ ಏರಿಕೆಯಾಗಿದೆ. ಲಿಂಗನಮಕ್ಕಿ, ಸೂಫಾ ಮತ್ತು ವಾರಾಹಿ ಜಲಾಶಯದ ಜಲ ವಿದ್ಯುತ್‌ ಉತ್ಪಾದನೆ ಶೇ 50ರಷ್ಟು ಕಡಿಮೆಯಾಗಿದೆ. ಇನ್ನು ಅಕ್ಟೋಬರ್ 1 ರಂದು ಗಾಳಿಯಿಂದ ವಿದ್ಯುತ್​ ಉತ್ಪಾದನೆ 53.63 ಮೆ.ವಾ. ಆಗಿದ್ದರೆ, ಅಕ್ಟೋಬರ್ 9 ರಂದು 4.76 ಮೆ.ವ್ಯಾಟ್​ಗೆ ಇಳಿದಿದೆ. ಇನ್ನೊಂದೆಡೆ ವಿದ್ಯುತ್ ಸ್ಥಾವರಗಳು ಆಗಾಗ್ಗೆ ಸ್ಥಗಿತಗೊಳ್ಳುತ್ತಿವೆ.

2024ರ ಮುಂಗಾರು ಹಂಗಾಮಿನ ವರೆಗೂ ಇದೇ ಪರಿಸ್ಥಿತಿ ಮುಂದುವರೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ಪರಿಸ್ಥತಿ ನಿಭಾಯಿಸಲು ಇಂಧನ ಇಲಾಖೆಯು ಉತ್ತರ ಪ್ರದೇಶ, ಪಂಜಾಬ್‌ನಿಂದ ವಿನಿಮಯ ಯೋಜನೆಯಡಿ ವಿದ್ಯುತ್‌ ಪಡೆಯಲು ಮುಂದಾಗಿದೆ ಎಂದು ತಿಳಿದುಬಂದಿದೆ. ಈ ವಿದ್ಯುತ್​ ಕೊರತೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಈಗಾಗಲೇ ಲೋಡ್​ ಶೆಡ್ಡಿಂಗ್​ ಸಹ ಶುರುವಾಗಿದೆ.

ಮತ್ತೊಂದೆಡೆ ಇಂಧನ ಸಚಿವ ಕೆಜೆ ಜಾರ್ಜ್​ ಮಾತ್ರ ವಿದ್ಯುತ್‌ ಕೊರತೆ ಇಲ್ಲ. ಲೋಡ್‌ ಶೆಡ್ಡಿಂಗ್‌ ಮಾಡುತ್ತಿಲ್ಲ ಎಂದು ಹೇಳುತ್ತಲ್ಲೇ ಇದ್ದಾರೆ. ಆದ್ರೆ, ರಾಜ್ಯಾದ್ಯಂತ ನಿತ್ಯ ಒಂದಲ್ಲ ಒಂದು ರೀತಿಯಲ್ಲಿ ವಿದ್ಯುತ್‌ ವ್ಯತ್ಯಯ, ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಕಡಿತ ಮುಂದುವರೆದಿದೆ. ಇದರಿಂದ ರೈತರು ಕಂಗಾಲಾಗಿದ್ದು, ಇಂಧನ ಇಲಾಖೆ ವಿರುದ್ಧ ಸಿಡಿದೆದ್ದಿದ್ದಾರೆ.

ಒಂದೆಡೆ ಉಚಿತ ವಿದ್ಯುತ್​( ಗೃಹ ಜ್ಯೋತಿ) ಭಾಗ್ಯದ ಮಧ್ಯೆ ಬೇಡಿಕೆ ಹೆಚ್ಚಳವಾಗಿದೆ. ಮತ್ತೊಂದೆಡೆ ವಿದ್ಯುತ್​ ಉತ್ಪಾದನೆಯಲ್ಲಿ ಕುಸಿತವಾಗಿದೆ. ಇದರಿಂದ ರಾಜ್ಯ ಸರ್ಕಾರ ಸಂಕಷ್ಟ ಎದುರಾಗಿದ್ದು, ಇದನ್ನು ಹೇಗೆ ನಿಭಾಯಿಸಲಿದೆ ಎನ್ನುವುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ