International Women’s Day 2021: ಕೊರೊನಾ ವಿರುದ್ಧ ದಿಟ್ಟ ಹೋರಾಟ; ಊಟ-ನಿದ್ದೆಯೂ ಇರಲಿಲ್ಲ, ಸಂಗೀತವೇ ಕೈ ಹಿಡಿಯಿತು ಎನ್ನುತ್ತಾರೆ ಈ ವೈದ್ಯೆ

ಗೊತ್ತೇ ಇದೆ ಕಳೆದೊಂದು ವರ್ಷದಿಂದ ಕೊವಿಡ್​-19 ಮಹಾಮಾರಿ ಇಡೀ ಜಗತ್ತನ್ನು ಅದೆಷ್ಟು ಹೈರಾಣಾಗಿಸಿತು ಎಂದು.. ಈ ಹೊತ್ತಲ್ಲಿ ಕೊವಿಡ್​ ವಿರುದ್ಧ ಹೋರಾಟಕ್ಕೆ ನಿಂತವರು ಬರೀ ಪುರುಷರಷ್ಟೇ ಅಲ್ಲ.. ಅದೆಷ್ಟೋ ಕೋಟ್ಯಂತರ ಮಹಿಳೆಯರೂ ಟೊಂಕಕಟ್ಟಿ ನಿಂತು-ಮನೆ, ಪತಿ, ಮಕ್ಕಳನ್ನೆಲ್ಲ ನೋವಾದರೂ ಸಹಿಸಿಕೊಂಡು ದೂರವೇ ಇಟ್ಟು ಹೋರಾಡಿದ್ದಾರೆ.

International Women's Day 2021: ಕೊರೊನಾ ವಿರುದ್ಧ ದಿಟ್ಟ ಹೋರಾಟ; ಊಟ-ನಿದ್ದೆಯೂ ಇರಲಿಲ್ಲ, ಸಂಗೀತವೇ ಕೈ ಹಿಡಿಯಿತು ಎನ್ನುತ್ತಾರೆ ಈ ವೈದ್ಯೆ
ಡಾ. ಸುಜಾತಾ ಹಸವೀಮಠ
Follow us
Lakshmi Hegde
|

Updated on:Mar 06, 2021 | 3:41 PM

ಸ್ತ್ರೀ..ಎಂಬುದು ಬರೀ ಪದವಲ್ಲ, ಅದೊಂದು ಶಕ್ತಿ. ನಮ್ಮ ಸಂಸ್ಕೃತಿಯಲ್ಲಿ ನಾರಿಯರು ಸದಾ ಪೂಜನೀಯರು ಎಂದು ಹೇಳುತ್ತಲೇ ಬಂದರೂ ಸಹ ಅದಕ್ಕೆ ಸಮಾನಾಂತರವಾಗಿ ಇನ್ನೊಂದೆಡೆ ಶೋಷಣೆಯೆಂಬುದು ಪ್ರಸ್ತುತ 21ನೇ ಶತಮಾನದಲ್ಲೂ ನಿಂತಿಲ್ಲ. ಆದರೆ ಮೊದಲಿನ ಕಾಲಕ್ಕೆ ಹೋಲಿಸಿದರೆ ಈಗ ಮಹಿಳೆಯರು ಹೆಚ್ಚು ಸ್ವತಂತ್ರವಾಗಿದ್ದಾರೆ. ಪುರುಷರ ಮೇಲೆ ಅವಲಂಬನೆಯಾಗುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಕೂಲಿಯಿಂದ ಹಿಡಿದು ಸೇನೆಯವರೆಗೆ..ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳಾ ಹೆಜ್ಜೆ ಮೂಡಿದೆ. ಸ್ತ್ರೀ ಎಂಬುದೇ ಒಂದು ಸಂಭ್ರಮ. ಅವಳು ನಗುತ್ತಿದ್ದರೆ ಅಲ್ಲೊಂದು ಹೊಳಹು ಇದ್ದೇ ಇರುತ್ತದೆ ಎಂಬುದನ್ನು ಅನೇಕರೂ ಒಪ್ಪಿಕೊಂಡಿದ್ದಾರೆ. ಹೀಗಿರುವಾಗ ಪ್ರತಿವರ್ಷ ಮಾರ್ಚ್​ 8ರಂದು ಬರುವ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ(International Women’s Day 2021)  ಆ ಸಂಭ್ರಮವನ್ನು ದ್ವಿಗುಣಗೊಳಿಸುತ್ತದೆ. ನಮ್ಮ ಆಸುಪಾಸಲ್ಲೇ ಇರುವ, ಸಾಧನೆ ಮಾಡಿಯೂ ತೆರೆಮರೆಯಲ್ಲೇ ಉಳಿದು ಹೋಗಿರುವ ಮಹಿಳೆಯರ ಮೇಲೆ ಬೆಳಕು ಚೆಲ್ಲಲು ಈ ದಿನವನ್ನು ಮೀಸಲಿಡಲಾಗುತ್ತಿದೆ.

ಗೊತ್ತೇ ಇದೆ ಕಳೆದೊಂದು ವರ್ಷದಿಂದ ಕೊವಿಡ್​-19 ಮಹಾಮಾರಿ ಇಡೀ ಜಗತ್ತನ್ನು ಅದೆಷ್ಟು ಹೈರಾಣಾಗಿಸಿತು ಎಂದು.. ಈ ಹೊತ್ತಲ್ಲಿ ಕೊವಿಡ್​ ವಿರುದ್ಧ ಹೋರಾಟಕ್ಕೆ ನಿಂತವರು ಬರೀ ಪುರುಷರಷ್ಟೇ ಅಲ್ಲ.. ಅದೆಷ್ಟೋ ಕೋಟ್ಯಂತರ ಮಹಿಳೆಯರೂ ಟೊಂಕಕಟ್ಟಿ ನಿಂತು-ಮನೆ, ಪತಿ, ಮಕ್ಕಳನ್ನೆಲ್ಲ, ನೋವಾದರೂ ಸಹಿಸಿಕೊಂಡು ದೂರವೇ ಇಟ್ಟು ಹೋರಾಡಿದ್ದಾರೆ. ಹಾಗೇ ನಮ್ಮ ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ಸಹ ಕೆಲವು ಮಹಿಳಾ ವೈದ್ಯರು, ಆರೋಗ್ಯ ಇಲಾಖೆ, ಜಿಲ್ಲಾಡಳಿತದ ಮಹಿಳಾ ಅಧಿಕಾರಿಗಳು ಕೊರೊನಾ ವಾರಿಯರ್ಸ್​ ಆಗಿ ಜನಮನ ಗೆದ್ದಿದ್ದಾರೆ. ವಿವಿಧ ಜಿಲ್ಲೆಗಳ  ಅಂಥ  ಕೊರೊನಾ ವಾರಿಯರ್ಸ್​ಗಳನ್ನು ಈ ಮಹಿಳಾ ದಿನಾಚರಣೆಯಂದು ಟಿವಿ9 ಕನ್ನಡ ಡಿಜಿಟಲ್ ನಿಮಗೆ ಪರಿಚಯಿಸುತ್ತಿದೆ.  ಈ ಸಂಚಿಕೆಯಲ್ಲಿ ಪ್ರಸ್ತುತ ಲೇಖನ ಧಾರವಾಡದ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ಸುಜಾತಾ ಹಸವೀಮಠ ಕುರಿತು..

ಕೊರೊನಾ ಆರ್ಭಟ ಶುರುವಾದ ಮೇಲೆ ಕೆಲ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಮನೆಗೂ ಹೋಗದೆ ಕೆಲಸ ಮಾಡಿದ್ದಾರೆ. ಅದರಲ್ಲೂ ವೈದ್ಯಕೀಯ ಸಿಬ್ಬಂದಿ ಹಗಲು-ರಾತ್ರಿ ಎನ್ನದೆ ಕೆಲಸ ಮಾಡಿದ್ದಾರೆ. ಕೊರೊನಾ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದಾರೆ. ಹಾಗೇ ಧಾರವಾಡದಲ್ಲೊಬ್ಬರು  ವೈದ್ಯೆ ಇದ್ದಾರೆ. ಕೊರೊನಾ ಕಾಲಿಟ್ಟು, ಲಾಕ್​ಡೌನ್​ ಶುರುವಾದಾಗಿನಿಂದಲೂ ಇಂದಿನವರೆಗೆ ಒಂದೇ ಒಂದು ರಜೆಯನ್ನೂ ಪಡೆಯದೆ ನಿರಂತರವಾಗಿ ಕೆಲಸ ಮಾಡುತ್ತಲೇ ಇದ್ದಾರೆ. ಇದರಿಂದಾಗಿ ಪ್ರತಿಯೊಬ್ಬರಿಂದಲೂ ಪ್ರಶಂಸೆಗೆ ಪಾತ್ರರಾಗುತ್ತಿದ್ದಾರೆ..

ಕೊರೊನಾ ಕಾಲಿಟ್ಟ ಮೇಲೆ ನಿರಂತರವಾಗಿ ಹೋರಾಟದಲ್ಲಿ ತೊಡಗಿಕೊಂಡಿರುವ ಈ ದಿಟ್ಟ ವೈದ್ಯೆಯ ಹೆಸರು ಡಾ. ಸುಜಾತಾ ಹಸವೀಮಠ. ಇವರು ಮೂಲತಃ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬಿಜ್ಜೂರು ಗ್ರಾಮದವರು. 19ವರ್ಷಗಳ ಹಿಂದೆ ಸರ್ಕಾರಿ ವೈದ್ಯೆಯಾಗಿ ಕೆಲಸ ಶುರುಮಾಡಿದ ಸುಜಾತಾ ಇಂದು ಧಾರವಾಡ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತಿ ಡಾ. ಗಂಗಾಧರ್​ ಇನಾಮದಾರ್ ಧಾರವಾಡದ ಕಲಘಟಗಿ ತಾಲೂಕಿನ ಗಳಗಿಹುಲಕೊಪ್ಪ ಗ್ರಾಮದಲ್ಲಿ ಖಾಸಗಿ ಕ್ಲಿನಿಕ್ ನಡೆಸುತ್ತಿದ್ದು, ಮಗಳು ಅಪೂರ್ವಾ ಆರ್ಕಿಟೆಕ್ಟ್ ಇಂಜಿನಿಯರಿಂಗ್​ ಓದುತ್ತಿದ್ದಾಳೆ.

ಕೊರೊನಾ ಕಾಲದಲ್ಲಿ ಅದ್ಭುತ ಕಾರ್ಯನಿರ್ವಹಣೆ ಧಾರವಾಡದಲ್ಲಿ ಮೊದಲ ಪ್ರಕರಣ ಪತ್ತೆಯಾಗಿದ್ದು 2020ರ ಮಾರ್ಚ್​ 22ರಂದು. ನಗರದ ಕೋಳಿಕೇರಿ ಬಡಾವಣೆಗೆ ವಿದೇಶದಿಂದ ಬಂದವರೊಬ್ಬರಲ್ಲಿ ಸೋಂಕು ಕಾಣಿಸಿಕೊಂಡು ಇಡೀ ಜಿಲ್ಲೆಯ ಜನರನ್ನು ಆತಂಕಕ್ಕೆ ನೂಕಿತ್ತು. ಜಿಲ್ಲಾಡಳಿತ ಕೂಡಲೇ ಎಚ್ಚೆತ್ತುಕೊಂಡು, ಕ್ರಮಕ್ಕೆ ಮುಂದಾದರೂ ಅಧಿಕಾರಿಗಳು, ಸಿಬ್ಬಂದಿ, ವೈದ್ಯಕೀಯ ಸಿಬ್ಬಂದಿಯಲ್ಲಿ ಸಹಜವಾಗಿಯೇ ಆತಂಕವಿತ್ತು. ಕೇಂದ್ರ ಸರ್ಕಾರ ಲಾಕ್​ಡೌನ್ ಘೋಷಣೆ ಮಾಡುವುದಕ್ಕೂ ಒಂದು ದಿನ ಮೊದಲೇ ಧಾರವಾಡ ಸ್ತಬ್ಧವಾಗಿತ್ತು. ಇಂಥ ಹೊತ್ತಲ್ಲಿ ಡಾ. ಸುಜಾತಾ ಜಿಲ್ಲಾಡಳಿತದೊಂದಿಗೆ ನಿಂತು ಅದ್ಭುತವಾಗಿ ಕಾರ್ಯನಿರ್ವಹಿಸಿದರು.

ಜವಾಬ್ದಾರಿ ತುಂಬ ಇತ್ತು ಡಾ. ಸುಜಾತಾ ಹಸವೀಮಠ್​ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಆಗಿದ್ದರಿಂದ ಜವಾಬ್ದಾರಿ ಜಾಸ್ತಿಯೇ ಇತ್ತು. ಜಿಲ್ಲೆಯಲ್ಲಿ ಕೊರೊನಾಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿ ನೀಡುವ ಹೊಣೆ ಇವರದ್ದೇ ಆಗಿತ್ತು. ಇದಲ್ಲೆಕ್ಕಿಂತ ಮುಖ್ಯವಾಗಿ ಮೊದಲು ಜಿಲ್ಲೆಯ ಸಾಂಕ್ರಾಮಿಕ ರೋಗಗಳ ಸಮೀಕ್ಷಣಾ ಘಟಕದ ಸಿಬ್ಬಂದಿಯಲ್ಲಿ ಈ ಕೊರೊನಾ ಬಗ್ಗೆ ಮೊದಲು ಅರಿವು ಮೂಡಿಸಬೇಕಿತ್ತು. ಅವರಲ್ಲಿ ಕೊವಿಡ್​-19 ಬಗ್ಗೆ ಜಾಗೃತಿ ಇದ್ದರೆ ಮಾತ್ರ ಅವರು ನಿರಾತಂಕವಾಗಿ, ಶಿಸ್ತಿನಿಂದ ಕೆಲಸ ಮಾಡುತ್ತಾರೆ ಎಂಬುದು ಡಾ. ಸುಜಾತಾ ಅವರ ಬಲವಾದ ನಂಬಿಕೆಯಾಗಿತ್ತು. ಹಾಗಾಗಿ ಮೊದಲು ಇದೇ ಕೆಲಸಕ್ಕೆ ಮುಂದಾದ ಅವರು, ತಮ್ಮ ಕಚೇರಿಯ ಡಾಟಾ ಮ್ಯಾನೇಜರ್ ಪೂಜಾ ಹಟ್ಟಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡರು. ನಂತರ ಉಳಿದ ಸಿಬ್ಬಂದಿಯಲ್ಲೂ ಅರಿವು ಮೂಡಿಸಲು ತೊಡಗಿದರು.

ಇನ್ನು ಕೊರೊನಾ ಪ್ರಾರಂಭದ ದಿನಗಳಲ್ಲಿ ತಾಂತ್ರಿಕವಾಗಿ ಅಷ್ಟೇನೂ ಸೌಲಭ್ಯಗಳು ಇರಲಿಲ್ಲ. ಕೊರೊನಾ ಸೋಂಕಿತರ ಸಂಖ್ಯೆ, ಅವರ ಪ್ರಾಥಮಿಕ, ದ್ವಿತೀಯ ಸಂಪರ್ಕಕ್ಕೆ ಬಂದವರ ಸಂಖ್ಯೆ ಸೇರಿ ಉಳಿದೆಲ್ಲ ರೀತಿಯ ಮಾಹಿತಿಗಳೂ ಜಿಲ್ಲಾ ಸರ್ವೇಕ್ಷಣಾ ಕಚೇರಿಯಿಂದಲೇ ಜಿಲ್ಲಾಡಳಿತಕ್ಕೆ ಹೋಗುತ್ತಿತ್ತು. ಪ್ರಾರಂಭಿಕ ಹಂತದಲ್ಲಿ ಸೋಂಕಿತರ ಸಂಖ್ಯೆ ಕಡಿಮೆ ಇದ್ದಾಗ ಅಂಥ ಕಷ್ಟವೇನೂ ಆಗಲಿಲ್ಲ. ಆದರೆ ಬರುಬರುತ್ತ ಸೋಂಕಿತರ ಸಂಖ್ಯೆ, ಅವರ ಸಂಪರ್ಕಕ್ಕೆ ಬಂದವರ ಸಂಖ್ಯೆ ಏರುತ್ತ ಹೋಯಿತು. ಆಗ ಅಂಕಿ-ಅಂಶಗಳನ್ನು ಪಡೆಯುವುದು, ಅದನ್ನು ಜಿಲ್ಲಾಡಳಿತಕ್ಕೆ ತಲುಪಿಸುವುದು ತೊಡಕಾಗುತ್ತ ಬಂತು. ಆದರೆ ಡಾ. ಸುಜಾತಾ ಸುಮ್ಮನೆ ಕೂರದೆ ತಮ್ಮ ಕಚೇರಿಯ ಎಲ್ಲ ಸಿಬ್ಬಂದಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ನಿರ್ವಹಿಸಲು ಶುರುಮಾಡಿದರು. ಕೊನೆಗಂತೂ ಎಲ್ಲವನ್ನೂ ಫೋನ್ ಮೂಲಕವೇ ನಿರ್ವಹಿಸುವ ಹಂತಕ್ಕೆ ಬಂದುಬಿಟ್ಟರು. ಅವರು ಕಚೇರಿಯಲ್ಲಿ ಇರಲಿ-ಇಲ್ಲದಿರಲಿ ಫೋನ್​ನಲ್ಲೇ ಪ್ರತಿ ಮಾಹಿತಿಯನ್ನೂ ಪಡೆಯತೊಡಗಿದರು. ಹೀಗಾಗಿ ಜಿಲ್ಲಾಡಳಿತಕ್ಕೆ ಅದನ್ನು ನೀಡುವುದೂ ಸುಗಮವಾಗತೊಡಗಿತು.

 Dr Sujata Inspiring Women

ಡ. ಸುಜಾತಾ ಮತ್ತಿತರ ಅಧಿಕಾರಿಗಳು

ಸಹಾಯವಾಣಿಯಾಗಿ ಬದಲಾಯ್ತು ಕಚೇರಿ ನಂಬರ್​ ಕೊರೊನಾ ಸಾಂಕ್ರಾಮಿಕ ರೋಗ ಪ್ರಾರಂಭವಾದಾಗ ಅದರ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದ ಡಾ. ಸುಜಾತಾ ಅವರಿಗೆ ದಿನಕ್ಕೆ ಕನಿಷ್ಠ ಒಂದು ಸಾವಿರ ಕರೆಗಳು ಬರುತ್ತಿದ್ದವು. ಅವರ ಬಳಿ ಇದ್ದ ಕಚೇರಿ ನಂಬರ್​, ವೈಯಕ್ತಿಕ ನಂಬರ್​ಗೆ ನಿರಂತರವಾಗಿ ಫೋನ್​ ಬರುತ್ತಲೇ ಇರುತ್ತಿದ್ದವು. ಹೀಗೆ ಕರೆಮಾಡಿದವರಿಗೆ ಎಲ್ಲರಿಗೂ ತಾಳ್ಮೆಯಿಂದಲೇ ಉತ್ತರಿಸುತ್ತ, ದಕ್ಷತೆಯಿಂದ ಕಾರ್ಯ ನಿರ್ವಹಿಸುತ್ತಿದ್ದರು. ಸುಜಾತಾ ಕಾರ್ಯಕ್ಷಮತೆಯನ್ನು ನೋಡಿದ್ದ ಜಿಲ್ಲಾಧಿಕಾರಿ ದೀಪಾ ಚೋಳನ್​, ಅವರ ಕಚೇರಿಯ ನಂಬರ್​ನ್ನೇ ಕೊರೊನಾ ಸಹಾಯವಾಣಿ ನಂಬರ್​ನ್ನಾಗಿ ಬದಲಿಸಿದರು. ಆಗಂತೂ ಕರೆಗಳ ಸಂಖ್ಯೆ ಇನ್ನಷ್ಟು ಹೆಚ್ಚಾಯಿತು. ಆದರೂ ಒಂದಿನವೂ ನಿರ್ಲಕ್ಷ್ಯ ವಹಿಸದೆ, ಖುಷಿಯಿಂದಲೇ ತಮಗೆ ನೀಡಿರುವ ಕೆಲಸವನ್ನು ಮಾಡತೊಡಗಿದರು.

‘ಕೊರೊನಾ ದೇಶಕ್ಕೆ ವಕ್ಕರಿಸಿದ ಮೇಲೆ ಎಲ್ಲ ಕಡೆಯೂ ಸಹಜವಾಗಿಯೇ ಆತಂಕ ಶುರುವಾಗಿತ್ತು. ಆರಂಭದ ದಿನಗಳಲ್ಲಂತೂ ಏನು ಕೆಲಸ ಮಾಡಬೇಕು? ಹೇಗೆ ಯೋಜನೆ ರೂಪಿಸಬೇಕು ಎಂಬುದೇ ಅರ್ಥವಾಗುತ್ತಿರಲಿಲ್ಲ. ದಿನದಿನಕ್ಕೂ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಹೊಸ ಮಾರ್ಗಸೂಚಿಗಳು ಬರುತ್ತಿದ್ದವು. ಎಷ್ಟೋ ಸಂದರ್ಭಗಳಲ್ಲಂತೂ ಒಂದು ಮಾರ್ಗಸೂಚಿ ಜಾರಿಗೊಳಿಸುವಷ್ಟರಲ್ಲಿಯೇ, ಇನ್ನೊಂದು ಹೊಸ ಗೈಡ್​​ಲೈನ್ ಬರುತ್ತಿತ್ತು. ಎಲ್ಲರೂ ಯುದ್ಧೋಪಾದಿಯಲ್ಲೇ ಕೆಲಸ ಮಾಡುತ್ತಿದ್ದೆವು. ಕೊರೊನಾ ಬಗ್ಗೆ ಸಿಕ್ಕಾಪಟೆ ಊಹಾಪೋಹಗಳು ಹುಟ್ಟಿಕೊಂಡಿದ್ದವು. ಜನರಲ್ಲಿ ಮನಸಲ್ಲಿ ಹುಟ್ಟುವ ಪ್ರಶ್ನೆಗಳಿಗೆ ಉತ್ತರಿಸುವ ಜತೆ, ಅವರಲ್ಲಿನ ಆತಂಕ ಕಡಿಮೆ ಮಾಡುವ ಹೊಣೆ ಜಿಲ್ಲಾಡಳಿತದ ಮೇಲಿತ್ತು. ಅದರಲ್ಲೂ ವೈದ್ಯಕೀಯ ಸಿಬ್ಬಂದಿ ಮೇಲೆ ಜಾಸ್ತಿಯೇ ಜವಾಬ್ದಾರಿ ಇತ್ತು. ಕಚೇರಿಯಲ್ಲೇ ಹೆಚ್ಚಿನ ಸಮಯ ಇದ್ದು, ಕೆಲಸ ಮಾಡುವುದು ಅನಿವಾರ್ಯವಾಗಿತ್ತು. ಇತರ ಇಲಾಖೆಯವರೊಂದಿಗೆ ಸಮನ್ವಯ ಸಾಧಿಸಿಕೊಂಡು ಒಟ್ಟಾಗಿ ಕೆಲಸ ಮಾಡಿದ್ದು ಅನುಕೂಲವಾಯಿತು’ ಎನ್ನುತ್ತಾರೆ ಡಾ. ಸುಜಾತಾ.

Sujata Hasavimath Dharwad

ಕೊರೊನಾ ಬಗ್ಗೆ ಅರಿವು ಮೂಡಿಸುವ ಶಿಬಿರಲ್ಲಿ ಡಾ. ಸುಜಾತಾ ಹಸವೀಮಠ

ಇನ್ನು ನಮ್ಮ ಕಚೇರಿಯ ಫೋನ್​ ನಂಬರ್​ ಸಹಾಯವಾಣಿ ಆದ ನಂತರ ಫೋನ್​ ಕರೆಗಳೂ ಹೆಚ್ಚಾಯಿತು. ತಮಗೆ ಬೇಕಾದ ಮಾಹಿತಿ ಮತ್ತು ಸಹಾಯವನ್ನು ಪಡೆಯಲು ಕರೆ ಮಾಡುವವರ ಸಂಖ್ಯೆ ತುಂಬ ಹೆಚ್ಚಾಯಿತು. ಅದೆಷ್ಟೋ ಜನರು ಮನೆಗೆ ರೇಷನ್ ಬೇಕು ಎಂದು ಕರೆ ಮಾಡುತ್ತಿದ್ದರು. ಆ ಮನೆಗಳಿಗೆ ಆಹಾರ ಧಾನ್ಯ ನೀಡುವ ವ್ಯವಸ್ಥೆಯನ್ನು ಕೂಡಲೇ ಮಾಡಲಾಗುತ್ತಿತ್ತು. ಅದರಲ್ಲೂ ಹೋಂ ಕ್ವಾರಂಟೈನ್​ ಆದವರು ಕರೆ ಮಾಡಿ, ನಮಗೆ ಮನೆಯಿಂದ ಹೊರಗೆ ಬರೋಕೆ ಆಗ್ತಿಲ್ಲ. ಹಾಲು, ತರಕಾರಿ, ರೇಷನ್​ ಏನೇನೂ ಇಲ್ಲ. ಏನು ಮಾಡೋದು ಅಂತ ಕೇಳ್ತಿದ್ದರು. ಆಗೆಲ್ಲ ಸಂಬಂಧಪಟ್ಟ ಅಧಿಕಾರಿಗಳು, ಸಿಬ್ಬಂದಿಗೆ ಈ ಬಗ್ಗೆ ಮಾಹಿತಿ ನೀಡಿ, ಅಂಥವರ ಮನೆಗಳಿಗೆ ಅಗತ್ಯ ವ್ಯವಸ್ಥೆ ಪೂರೈಸಬೇಕಿತ್ತು. ಇಂಥ ಸಂದರ್ಭಗಳಲ್ಲಿ ಎಲ್ಲರೂ ಸೇರಿ, ಜನರಿಗೆ ತೊಂದರೆಯಾಗದಂತೆ ನೋಡಿಕೊಂಡೆವು ಎಂದು ಸುಜಾತಾ ಅಂದಿನ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಆಹಾರ, ನಿದ್ದೆ ಅಷ್ಟಕ್ಕಷ್ಟೇ ! ಕೊರೊನಾ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಲಾಕ್​ಡೌನ್​ ಘೋಷಣೆ ಮಾಡುತ್ತಿದ್ದಂತೆ ಡಾ. ಸುಜಾತಾ ಮತ್ತು ಟೀಂನ ಕೆಲಸ ದ್ವಿಗುಣವಾಯಿತು. ಜಿಲ್ಲೆಯಲ್ಲಿ ಒಂದೇ ಬಾರಿಗೆ ರೆಡ್​​ ಅಲರ್ಟ್ ಸನ್ನಿವೇಶ ಎದುರಾಗಿತ್ತು. ಬೆಳಗ್ಗೆ ಕಚೇರಿಗೆ ಬಂದರೆ ತಿರುಗಿ ಮನೆಗೆ ಹೋಗುವುದು ತಡರಾತ್ರಿಯೇ ಆಗಿತ್ತು. ಅದೆಷ್ಟೋ ಸಲ ಕಚೇರಿಯಲ್ಲೇ ಉಳಿದುಕೊಂಡಿದ್ದೂ ಉಂಟು. ಬೆಳಗ್ಗೆ ತಿಂಡಿ ತಿಂದು ಬಂದರೆ, ಮಧ್ಯಾಹ್ನ ಊಟ ಮರೆತೇ ಹೋಗುತ್ತಿತ್ತು. ಸಮಯವೂ ಸಿಗುತ್ತಿರಲಿಲ್ಲ. ಹೋಟೆಲ್​ಗಳೆಲ್ಲ ಬಂದ್ ಇದ್ದುದರಿಂದ ತರಿಸಿ ತಿನ್ನುವಂತೆಯೂ ಇರಲಿಲ್ಲ. ಹಾಗಾಗಿ ರಾತ್ರಿ ಮನೆಗೆ ಹೋದ ನಂತರವೇ ಊಟ ಮಾಡಬೇಕಾಗಿತ್ತು. 2-3ತಿಂಗಳು ಊಟ-ನಿದ್ದೆ ಏನೂ ಸರಿಯಾಗುತ್ತಿರಲಿಲ್ಲ. ಹಾಗೆ ಬರುಬರುತ್ತ ಕೊರೊನಾ ಸೋಂಕಿತರೊಟ್ಟಿಗೆ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನೂ ಪತ್ತೆ ಹಚ್ಚಿ, ಕ್ವಾರಂಟೈನ್​ಗೆ ಒಳಪಡಿಸುವ ಕೆಲಸವೂ ಬಂತು. ಆಗಂತೂ ಕೊವಿಡ್​-19 ವಾರ್​ರೂಂನಲ್ಲಿಯೇ ಕುಳಿತು ಎಚ್ಚರಿಕೆಯಿಂದ ನಮ್ಮ ಕೆಲಸ ಮಾಡಬೇಕಿತ್ತು ಎನ್ನುತ್ತಾರೆ ಡಾ. ಸುಜಾತಾ.

ಸದಾ ನೆನಪಿರುವ 2 ಘಟನೆಗಳು ಕೊರೊನಾ ಸಂದರ್ಭದಲ್ಲಿ ಮುಂಚೂಣಿಯಲ್ಲಿದ್ದುಕೊಂಡು ನಿರಂತರವಾಗಿ ಹೋರಾಡಿದ ಡಾ. ಸುಜಾತಾರವರಿಗೆ ಒಂದೆರಡು ಘಟನೆಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲವಂತೆ. ಅದನ್ನವರು ನಮ್ಮ ಟಿವಿ9 ಕನ್ನಡ ಡಿಜಿಟಲ್​ ಜತೆ ಹಂಚಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಮೊದಲ ಕೊರೊನಾ ಸೋಂಕು ಪತ್ತೆಯಾಯ್ತು. ಯಲ್ಲಾಪುರ ಬಡಾವಣೆಯಲ್ಲಿ ಇರುವ ಸೋಂಕಿತನ ಕುಟುಂಬಸ್ಥರು ಮತ್ತು ಆತನ ಸಂಪರ್ಕಕ್ಕೆ ಬಂದಿದ್ದ ಎಲ್ಲರನ್ನೂ ಸಾಂಸ್ಥಿಕ ಕ್ವಾರಂಟೈನ್​ ಮಾಡಲಾಗಿತ್ತು. ಹಾಗೇ ಆತನ ಮನೆಯಿಂದ ಮೂರು ಕಿಮೀ ದೂರದವರೆಗೂ ಸೀಲ್​ಡೌನ್​ ಮಾಡಲಾಗಿತ್ತು. ಇದರಿಂದ ಅಲ್ಲಿನ ಜನರು ಎಲ್ಲಿಯೂ ಹೋಗುವಂತಿರಲಿಲ್ಲ. ಆಗ ಅಲ್ಲಿನ ಜನರು ಆಹಾರ ಧಾನ್ಯ ಸೇರಿ ಏನೇ ಸಹಾಯ ಬೇಕಾದರೂ ನನಗೇ ಕರೆ ಮಾಡುತ್ತಿದ್ದರು. ಅವರ ನೋವಿಗೆ ಸ್ಪಂದಿಸಲು ಸಾಧ್ಯವಾಗಿದ್ದು ಆಹಾರ ಇಲಾಖೆಯ ಅಧಿಕಾರಿಗಳ ಸಹಾಯದಿಂದ ಎಂದು ಸುಜಾತಾ ನೆನಪಿಸಿಕೊಳ್ಳುತ್ತಾರೆ.

Dr. Sujata Hasavimath

ಡಾ. ಸುಜಾತಾ

ಅಂತೆಯೇ ಇನ್ನೊಂದು ಘಟನೆಯನ್ನೂ ಮರೆಯಲಾರೆ ಎನ್ನುವ ಅವರು, ಜಿಲ್ಲೆಯಲ್ಲಿ 2 ತಿಂಗಳ ಹಸುಗೂಸಿಗೆ ಕೊವಿಡ್​-19 ಸೋಂಕು ತಗುಲಿತ್ತು. ಈ ಸನ್ನಿವೇಶವನ್ನು ಹೇಗೆ ನಿರ್ವಹಿಸಬೇಕು ಎಂಬುದೇ ದೊಡ್ಡ ಪ್ರಶ್ನೆಯಾಗಿತ್ತು. ಇಡೀ ರಾಜ್ಯದಲ್ಲಿ ಎಲ್ಲಿಯೂ ಇಷ್ಟು ಪುಟ್ಟ ಮಗುವಿಗೆ ಕೊವಿಡ್-19 ತಗುಲಿದ್ದು ವರದಿಯಾಗಿರಲಿಲ್ಲ. ಹಾಗಾಗಿ ಆ ಶಿಶುವಿಗೆ ಏನು ಚಿಕಿತ್ಸೆ ನೀಡಬೇಕು? ಅದನ್ನು ಹೇಗೆ ಕೊವಿಡ್ 19 ಮುಕ್ತ ಮಾಡಬೇಕು ಎಂಬುದೇ ಸವಾಲಾಗಿತ್ತು. ನಂತರ ಹೆದರದೆ, ಆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಮಗುವಿಗೆ ಕೊವಿಡ್​-19 ವರದಿ ನೆಗೆಟಿವ್​ ಬರುವವರೆಗೂ ಕಾಳಜಿಯಿಂದ ಚಿಕಿತ್ಸೆ ನೀಡಲಾಯಿತು. ಅದಕ್ಕೆ ನೆಗೆಟಿವ್​ ವರದಿ ಬರುತ್ತಿದ್ದಂತೆ ನಮಗೆ ಆದ ಖುಷಿಗೆ ಪಾರವೇ ಇರಲಿಲ್ಲ ಎನ್ನುತ್ತಾರೆ ಸುಜಾತಾ.

ಕುಟುಂಬದಿಂದ ದೂರವೇ ಉಳಿಯಬೇಕಾಗಿ ಬಂತು ಲಾಕ್​ಡೌನ್​ನಲ್ಲಿ ಡಾ. ಸುಜಾತಾ ಮತ್ತು ಅವರ ಪತಿ ಪ್ರತ್ಯೇಕವಾಗಿಯೇ ಇರಬೇಕಾಯಿತು. ಸುಜಾತಾ ಅವರ ಮೊಬೈಲ್​ಗೆ ಸದಾ ಕೊರೊನಾ ಸಂಬಂಧ ಕರೆಯೇ ಬರುತ್ತಿತ್ತು. ಕುಟುಂಬದವರೊಂದಿಗೆ ಮಾತನಾಡಲೆಂದೇ ಬೇರೆ ಸಿಮ್ ಕೂಡ ಖರೀದಿಸಿದರು. ಆದರೂ ವಾರಕ್ಕೆ ಒಂದು ಅಥವಾ 2ಬಾರಿ ಮಾತ್ರ ಮಾತುಕತೆ. ಇನ್ನು ಡಾ. ಗಂಗಾಧರ್ ಕೂಡ ಪತ್ನಿಗೆ ಕರೆ ಮಾಡಿದರೆ, ಕೊವಿಡ್​ ಬಗ್ಗೆಯೇ ಮಾತುಕತೆ ನಡೆಯುತ್ತಿತ್ತು. ನಿನ್ನ ಆರೋಗ್ಯದ ಬಗ್ಗೆಯೂ ಗಮನಹರಿಸು ಎಂದು ಕಾಳಜಿ ಮಾಡುತ್ತಿದ್ದರು. ಇನ್ನುಳಿದಂತೆ ವಾಟ್ಸ್​ಆ್ಯಪ್​ ಚಾಟ್​ ನಡೆಯುತ್ತಿತ್ತು. ಸುಮಾರು ನಾಲ್ಕು ತಿಂಗಳು ಇದೇ ರೀತಿ ಮುಂದುವರಿದಿತ್ತು. ಈ ಸಂದರ್ಭದಲ್ಲಿ ಮನೆಯ ಜವಾಬ್ದಾರಿ ತೆಗೆದುಕೊಂಡಿದ್ದು ನನ್ನ ಸೋದರಿ ವಿದ್ಯಾ ಹಸವೀಮಠ. ಅವರಿಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲುವುದಿಲ್ಲ ಎನ್ನುತ್ತಾರೆ ಡಾ. ಸುಜಾತಾ ಹಸವೀಮಠ.

Sujata Hasavimath Corona Warrior

ಸಭೆಯಲ್ಲಿ ಕೊರೊನಾ ಬಗ್ಗೆ ಬಗ್ಗೆ ಮಾಹಿತಿ ನೀಡುತ್ತಿರುವ ಡಾ. ಸುಜಾತಾ

ಲಾಕ್​ ಡೌನ್​ ಮುಗಿದು ಕುಟುಂಬದ ಸದಸ್ಯರೆಲ್ಲ ಮನೆಗೆ ಸೇರಿದರೂ ಮಾತುಕತೆಗೂ ಪುರುಸೊತ್ತು ಸಿಗುತ್ತಿರಲಿಲ್ಲ. ಬೆಳಗ್ಗೆ ಕೆಲಸಕ್ಕೆ ಹೋದರೆ ಮರಳುವುದು ತಡರಾತ್ರಿಯೇ ಆಗಿತ್ತು. ಮನೆಗೆ ಬಂದರೂ ಸುಮ್ಮನೆ ಕೂರದೆ ಕೊವಿಡ್​ ಸೋಂಕಿತರ ಪ್ರಯಾಣದ ವಿವರ, ಪ್ರಾಥಮಿಕ ಸಂಪರ್ಕದ ಮಾಹಿತಿಯನ್ನು ಟ್ರ್ಯಾಕ್ ಮಾಡಬೇಕಿತ್ತು. ಅದೆಷ್ಟೋ ಬಾರಿ ಸುಜಾತಾರವರು ನಿದ್ದೆ ಮಾಡುವುದೇ ರಾತ್ರಿ 2-3ಗಂಟೆಯಾಗುತ್ತಿತ್ತು.

ಪುಣ್ಯಕ್ಕೆ ಆರೋಗ್ಯ ಕೆಡಲಿಲ್ಲ ! ಕೊರೊನಾ ಕೆಲಸದಲ್ಲಿ ತೊಡಗಿಕೊಂಡಿದ್ದ ಡಾ. ಸುಜಾತಾ ಒಂದು ದಿನವೂ ರಜೆ ಪಡೆಯದೆ, ಹಗಲು-ರಾತ್ರಿ ಎನ್ನದೆ ದುಡಿಯುತ್ತಿದ್ದರು. ಈ ಮಧ್ಯೆಯೂ ಒಂದು ವಿಷಯಕ್ಕೆ ಅವರು ಖುಷಿ ವ್ಯಕ್ತಪಡಿಸುತ್ತಾರೆ. ಇಷ್ಟೆಲ್ಲ ಹಗಲು-ರಾತ್ರಿ ಎನ್ನುತ್ತ, ಊಟ-ನಿದ್ದೆಯನ್ನೆಲ್ಲ ಬಿಟ್ಟು ಕೆಲಸ ಮಾಡಿದರೂ ಅದೃಷ್ಟಕ್ಕೆ ಒಂದಿನವೂ ನನ್ನ ಆರೋಗ್ಯ ಕೈಕೊಡಲಿಲ್ಲ. ಇದು ದೇವರ ದಯೆಯೇ ಎಂದವರು ಕೈಮುಗಿಯುತ್ತಾರೆ.

ತಾಯಿಯ ಮಾತೇ ದಿವ್ಯವಾಣಿ ನಾನಿಷ್ಟು ಕೆಲಸ ಮಾಡಲು ನನ್ನ ತಾಯಿ ಆಡಿದ್ದ ಒಂದು ಮಾತೇ ಕಾರಣ ಎನ್ನುವ ಡಾ. ಸುಜಾತಾ, ನನ್ನ ಅಮ್ಮ ಸುಮಂಗಲಮ್ಮ 65ನೇ ವಯಸ್ಸಿನಲ್ಲಿ ತೀರಿಕೊಂಡರು. ಅಂದು ನಾನು ಕೆಲಸಕ್ಕೆ ಸೇರುವ ಮೊದಲ ದಿನ ನನ್ನ ತಾಯಿ, ನೀನು ಯಾರಿಗಾದರೂ ಸಹಾಯ ಮಾಡುವಂಥ ಸ್ಥಿತಿಯಲ್ಲಿದ್ದರೆ ಜಾತಿ, ಧರ್ಮ, ಅಂತಸ್ತು ನೋಡದೆ ಸಹಾಯ ಮಾಡು. ಅವಶ್ಯಕತೆ ಇದ್ದವರಿಗೆ ಸಹಾಯ ಮಾಡುವಾಗ ಅದನ್ನೆಲ್ಲ ನೋಡಬಾರದು. ಇದೇ ನಿನ್ನನ್ನು ಕೊನೇವರೆಗೂ ಕಾಪಾಡುತ್ತದೆ ಎಂದಿದ್ದರು. ಆ ಮಾತುಗಳನ್ನು ನೆನಪಿಸಿಕೊಂಡು ಕೊರೊನಾ ಕಾಲದಲ್ಲಿ ಕೆಲಸ ಮಾಡಿದೆ. ಇದರಿಂದಾಗಿ ಯಾವುದೇ ಸಮಸ್ಯೆಯೂ ಆಗಲಿಲ್ಲ ಎಂದವರು ಹೇಳಿದ್ದಾರೆ.

ಸಂಗೀತವೇ ಉಸಿರು ದಿನದಿಂದ ದಿನಕ್ಕೆ ಕೊರೊನಾ ಸಂಬಂಧಿಸಿದ ಕೆಲಸದಿಂದ ಒತ್ತಡವೂ ಹೆಚ್ಚುತ್ತಾ ಹೋಗುತ್ತಿತ್ತು. ಈ ಸಂದರ್ಭದಲ್ಲಿ ಡಾ. ಸುಜಾತಾ ಹಾಗೂ ಅವರ ಸಿಬ್ಬಂದಿಯ ಸಹಾಯಕ್ಕೆ ಬಂದಿದ್ದು ಸಂಗೀತ. ಮೊದಲಿನಿಂದಲೂ ಡಾ. ಸುಜಾತಾಗೆ ಓದುವ ಹವ್ಯಾಸವಿತ್ತು. ಸಂಗೀತದ ಬಗ್ಗೆಯೂ ಅವರಿಗೆ ಒಲವಿತ್ತು. ಆದರೆ ಕೊರೊನಾ ಸಂದರ್ಭದಲ್ಲಿ ಒಂದೇ ಒಂದು ನಿಮಿಷವೂ ಬಿಡುವು ಇಲ್ಲದ್ದರಿಂದ ಎರಡರಿಂದಲೂ ದೂರವೇ ಇರುವಂತಾಗಿತ್ತು. ಆದರೆ ದಿನದಿಂದ ದಿನಕ್ಕೆ ಒತ್ತಡ ಹೆಚ್ಚಾದಾಗ ಹೊಸದೊಂದು ಉಪಾಯವನ್ನು ಡಾ.ಸುಜಾತಾ ಕಂಡುಕೊಂಡರು. ಕಚೇರಿಯಲ್ಲಿ ಕೆಲಸ ನಡೆಯುತ್ತಿರುವಾಗ ಹಿನ್ನೆಲೆಯಾಗಿ ಮೊಬೈಲ್ ನಲ್ಲಿಯೇ ಸಂಗೀತವನ್ನು ಕೇಳುವುದನ್ನು ಆರಂಭಿಸಿದರು. ಇದು ಅವರಿಗಷ್ಟೇ ಅಲ್ಲದೇ ಅವರೊಂದಿಗೆ ಕೆಲಸ ಮಾಡುವ ಎಲ್ಲ ಸಿಬ್ಬಂದಿಗೂ ಸಹಕಾರಿಯಾಯಿತು. ಸಂಗೀತದಿಂದಾಗಿ ಕೆಲವೇ ನಿಮಿಷಗಳಲ್ಲಿ ಒತ್ತಡ ಕಡಿಮೆಯಾಗಿ ಹೋಗುತ್ತಿತ್ತು. ಹೀಗಾಗಿ ಕೊರೊನಾ ಸಂದರ್ಭದಲ್ಲಿ ತಮಗೆ ಸಹಕಾರ ನೀಡಿದವರ ಪೈಕಿ ಸಂಗೀತವೂ ಒಂದು ಅಂತಾ ಡಾ. ಸುಜಾತಾ ಮುಗುಳ್ನಗುತ್ತಾರೆ.

ಇನ್ನು ಕೊರೊನಾ ಲಾಕ್​​ಡೌನ್​ನ್ನು ತುಂಬ ಚೆನ್ನಾಗಿ ನಿಭಾಯಿಸಲು ಸಾಧ್ಯವಾಗಿದ್ದು ಅನೇಕರ ಸಹಕಾರದಿಂದ. ಅದರಲ್ಲಿ ಪ್ರಮುಖವಾಗಿ ಅಂದಿನ ಜಿಲ್ಲಾಧಿಕಾರಿ ದೀಪಾ ಚೋಳನ್​, ಇಂದಿನ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್​. ಹಾಗೇ ಜಿಲ್ಲಾಡಳಿತದ ಎಲ್ಲ ಅಧಿಕಾರಿಗಳು, ಆರೋಗ್ಯ ಇಲಾಖೆಯ ಹಿರಿಯ ವೈದ್ಯಾಧಿಕಾರಿಗಳು, ಸಿಬ್ಬಂದಿಯನ್ನು ನಾನೆಂದೂ ಮರೆಯುವುದಿಲ್ಲ ಎನ್ನುತ್ತಾರೆ ಸುಜಾತಾ.

Sujata Dharwad

(ನಿರೂಪಣೆ: ನರಸಿಂಹಮೂರ್ತಿ ಪ್ಯಾಟಿ)

Published On - 3:09 pm, Sat, 6 March 21

ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ