ಶಹಾಪುರ: ಜನರ ನಿದ್ದೆಗೆಡಿಸಿದ್ದ ಖಾನಪುರದ ಮಂಗ ಕೊನೆಗೂ ಸೆರೆ

ಶಹಾಪುರ ತಾಲೂಕಿನ ಖಾನಪುರ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಮಂಗನ ಕಾಟ ಜೋರಾಗಿತ್ತು. ಬೇಸಿಗೆ ಬಿಸಿಲಿನಿಂದ ತಲೆ ಕೆಟ್ಟಿರುವ ಮಂಗ ಇಡೀ ಗ್ರಾಮಸ್ಥರ ನಿದ್ದೆಗೆಡಿಸಿತ್ತು.

  • ಅಮೀನ್ ಹೊಸುರ್
  • Published On - 18:57 PM, 4 Mar 2021
ಶಹಾಪುರ: ಜನರ ನಿದ್ದೆಗೆಡಿಸಿದ್ದ ಖಾನಪುರದ ಮಂಗ ಕೊನೆಗೂ ಸೆರೆ
ಜನರ ಮೇಲೆ ಎಗರಿ ಗಾಯಗೊಳಿಸುತ್ತಿದ್ದ ಮಂಗ

ಯಾದಗಿರಿ: ಒಂದೇ ಒಂದು ಮಂಗ ಇಡೀ ಗ್ರಾಮಸ್ಥರ ನಿದ್ದೆಗೆಡಿಸಿತ್ತು. ಎದುರಿಗೆ ಸಿಕ್ಕವರೆಲ್ಲರ ಮೇಲೆ ಎಗರಿ ಗಾಯಗೊಳಿಸುತ್ತಿತ್ತು. ಮಂಗನ ದಾಳಿಗೆ ಗಾಯಗೊಂಡ ಗ್ರಾಮಸ್ಥರು ಆಸ್ಪತ್ರೆಗೆ ಸೇರಿ ಚಿಕಿತ್ಸೆ ಪಡೆಯುವಂತಾಗಿತ್ತು. ಹೇಗಾದರೂ ಮಾಡಿ ಮಂಗನನ್ನ ಸೆರೆ ಹಿಡಿಯಬೇಕು ಅಂತ ಅರಣ್ಯ ಇಲಾಖೆ ಅಧಿಕಾರಿಗಳು ಸರ್ಕಸ್ ನಡೆಸಿದ್ದರೂ ಮಂಗನ ಸೆರೆ ಹಿಡಿಯುವುದಕ್ಕೆ ಆಗಿರಲಿಲ್ಲ. ಆದರೆ ಕೊನೆಗೆ ಗದಗ ನಗರದಿಂದ ಬಂದ ತಂಡ ನಡೆಸಿದ ಆಪರೇಷನ್ ಮಂಗ ಸಕ್ಸಸ್ ಆಗಿದೆ.

ಜಿಲ್ಲೆಯ ಶಹಾಪುರ ತಾಲೂಕಿನ ಖಾನಪುರ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಮಂಗನ ಕಾಟ ಜೋರಾಗಿತ್ತು. ಬೇಸಿಗೆ ಬಿಸಿಲಿನಿಂದ ತಲೆ ಕೆಟ್ಟಿರುವ ಮಂಗ ಇಡೀ ಗ್ರಾಮಸ್ಥರ ನಿದ್ದೆಗೆಡಿಸಿತ್ತು. ಖಾನಪುರ ಗ್ರಾಮಸ್ಥರು ಕಳೆದ ಒಂದು ವಾರದಿಂದ ಮನೆಯಿಂದ ಹೊರ ಬರುವುದಕ್ಕೆ ಹೆದರುವಂಥ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೊರ ಬಂದರೆ ಸಾಕು ಒಬ್ಬರೇ ಇರುವುದನ್ನು ಕಂಡ ಮಂಗ ದಾಳಿ ಮಾಡಿ ಗಾಯಗೊಳಿಸುತ್ತಿತ್ತು. ಈಗಾಗಲೇ ಒಂದು ವಾರದಲ್ಲೇ ಗ್ರಾಮದ 30ಕ್ಕೂ ಅಧಿಕ ಮಂದಿ ಮೇಲೆ ದಾಳಿ ಮಾಡಿ ಗಾಯಗೊಳಿಸಿದೆ. ಕೈಕಾಲು ಸೇರಿದಂತೆ ದೇಹದ ನಾನಾ ಭಾಗಗಳಿಗೆ ಗಾಯಗೊಳಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತೆ ಮಾಡಿದೆ.

ಮಂಗನನ್ನು ಹೇಗಾದರು ಮಾಡಿ ಸೆರೆ ಹಿಡಿದು ಕಾಡಿಗೆ ಬಿಡುವಂತೆ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದರು. ಎರಡು ದಿನಗಳ ಬಳಿಕ ಗ್ರಾಮಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಕಲಬುರಗಿಯಿಂದ ಮಂಗ ಹಿಡಿಯುವುದಕ್ಕೆ ತಂಡ ಕೂಡ ಕರೆಸಿದ್ದರು. ಆದರೆ ಮೂರು ದಿನಗಳ ಕಾಲ ಪ್ರಯತ್ನ ಪಟ್ಟರೂ ಕಾರ್ಯಚರಣೆ ಯಶಸ್ವಿಯಾಗಿರಲಿಲ್ಲ.

ಕೈ ಕಾಲುಗಳನ್ನು ಪರಚಿದ ಮಂಗ

ಅರವಳಿಕೆ ಚುಚ್ಚುಮದ್ದು ನೀಡಿ ಮಂಗನ ಸೆರೆ
ಮಂಗ ಸಿಗದೆ ಇದ್ದಾಗ ಅರಣ್ಯ ಇಲಾಖೆ ಅಧಿಕಾರಿಗಳು ಗದಗ ಪಶು ಇಲಾಖೆ ಅಧಿಕಾರಿಗಳನ್ನು ಕರೆಸಿ ಮಂಗ ಸೆರೆ ಹಿಡಿಯುವುದಕ್ಕೆ ಪ್ಲಾನ್ ಮಾಡಿದರು. ಫೆಬ್ರವರಿ 2ರ ಇಡೀ ದಿನ ಗದಗನಿಂದ ಬಂದ ಟೀಂ ಮಂಗನ ಹಿಡಿಯುವುದಕ್ಕೆ ಪ್ರಯತ್ನ ಪಟ್ಟಿದ್ದಾರೆ. ಕೊನೆಗೂ ಕೈಗೆ ಸಿಗದೆ ಇದ್ದಾಗ ಅರವಳಿಕೆ ಚುಚ್ಚುಮದ್ದು ನೀಡಿ ಮಂಗನನ್ನು ಸೆರೆ ಹಿಡಿದ್ದಾರೆ. ವೈದ್ಯರಿಂದ ಚಿಕಿತ್ಸೆ ಕೊಡಿಸಿ, ಕಾಡಿಗೆ ಬಿಡುವ ನಿರ್ಧಾರಕ್ಕೆ ಬಂದಿದ್ದಾರೆ. ಮಂಗನ ಸೆರೆ ಹಿಡಿಯುವ ಆಪರೇಷನ್ ಸಕ್ಸಸ್ ಆಗಿದ್ದಕ್ಕೆ ಖಾನಪುರ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಇನ್ನು ಅರಣ್ಯ ಇಲಾಖೆ ಅಧಿಕಾರಿಗಳು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರಿಗೆ ಪರಿಹಾರ ಕೊಡಿಸುವ ಕೆಲಸ ಮಾಡಲಾಗುತ್ತದೆ ಎಂದು ಹೇಳುತ್ತಿದ್ದಾರೆ.

ಮನೆ ಮೇಲೆ ಕುಳಿತಿರುವ ಮಂಗ

ಮಂಗ ಸೆರೆಗೆ ಹರಸಾಹಸ ಪಡುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿ

ಇದನ್ನೂ ಓದಿ

ಮತ್ತೆ ತೆರೆದುಕೊಂಡ ಫ್ಯಾಷನ್ ಲೋಕ: ಮಂಗಳೂರಿನ ಕರಾವಳಿ ಕಾಲೇಜಿನಲ್ಲಿ ಫ್ಯಾಷನ್ ಶೋ ಹೇಗಿತ್ತು ಗೊತ್ತಾ?

ಸರ್ಕಾರಿ ಜಾಗ ಅತಿಕ್ರಮ ಆರೋಪ.. ಮಂಗಳೂರು ಹೊರವಲಯದ ಗೋಶಾಲೆ ನೆಲಸಮ