ಯಾದಗಿರಿ: ವಸತಿ ಶಾಲೆಯ ಶೌಚಾಲಯದಲ್ಲೇ ಬಾಲಕಿಗೆ ಹೆರಿಗೆ!
ಯಾದಗಿರಿ ಜಿಲ್ಲೆಯ ಶಹಾಪುರದ ವಸತಿ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿಗೆ ಹೆರಿಗೆಯಾಗಿದೆ. ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಈ ಘಟನೆಯ ಬಗ್ಗೆ ಸ್ವಯಂಪ್ರೇರಿತ ದೂರನ್ನು ದಾಖಲಿಸಿದೆ. ವಸತಿ ಶಾಲೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ ಎಂದು ಆರೋಪಿಸಲಾಗಿದೆ. ತನಿಖೆ ನಡೆಯುತ್ತಿದೆ.

ಯಾದಗಿರಿ, ಆಗಸ್ಟ್ 28: ಯಾದಗಿರಿ (Yadgiri) ಜಿಲ್ಲೆಯ ಶಹಾಪುರ ನಗರದ ವಸತಿ ಶಾಲೆಯ ವಿದ್ಯಾರ್ಥಿನಿಗೆ (Shapur Residential School Student) ಶೌಚಾಲಯದಲ್ಲೇ ಹೆರಿಗೆಯಾಗಿದೆ (Delivery) ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ್ ಕೋಸಂಬೆ ತಿಳಿಸಿದ್ದಾರೆ. ಘಟನೆ ಕುರಿತು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ. ವಿದ್ಯಾರ್ಥಿನಿ ವಸತಿ ಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ. ವಸತಿ ಶಾಲೆಯ ಮೇಲ್ವಿಚಾರಕರ ನಿರ್ಲಕ್ಷ್ಯದಿಂದ ಘಟನೆ ಸಂಭವಿಸಿದೆ. ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬುಧವಾರ ಮಧ್ಯಾಹ್ನ 2:30ರ ಸಮಾರಿಗೆ ವಸತಿ ನಿಲಯದ ಶೌಚಾಲಯದಲ್ಲಿ ವಿದ್ಯಾರ್ಥಿನಿಯ ಹೆರಿಗೆಯಾಗಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ವರದಿಯಾಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ದೂರು ದಾಖಲಿಸಿಕೊಳ್ಳಬೇಕು. ಹಾಗೂ ಘಟನೆ ಸಂಬಂಧ ತನಿಖೆ ನಡೆಸಿ ವಿಸ್ತೃತವಾದ ವರದಿ ನೀಡಬೇಕೆಂದು ಡಿಸಿಪಿ ಅವರಿಗೆ ಸೂಚನೆ ನೀಡಿದ್ದೇನೆ ಎಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ್ ಕೋಸಂಬೆ ಹೇಳಿದರು.
ಇದನ್ನೂ ನೋಡಿ: ಮಕ್ಕಳನ್ನು ಅಂಗನವಾಡಿಯಲ್ಲಿ ಲಾಕ್ ಮಾಡಿ ಜಮೀನು ಕೆಲಸಕ್ಕೆ ಹೋದ ಸಹಾಯಕಿ
ವಿದ್ಯಾರ್ಥಿನಿಯ ದೈಹಿಕ ಬದಲಾವಣೆಯಾದ ಸಂದರ್ಭದಲ್ಲಿ ವಸತಿ ನಿಲಯದ ಸಿಬ್ಬಂದಿ ಆಕೆಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಬೇಕಿತ್ತ್ತು. ಸಮಾಜ ಕಲ್ಯಾಣ ಇಲಾಖೆ ಸುತ್ತೋಲೆ ಪ್ರಕಾರ ವಸತಿ ನಿಲಯದ ಸಿಬ್ಬಂದಿ ಎಲ್ಲ ಮಕ್ಕಳ ವೈದ್ಯಕೀಯ ಪರೀಕ್ಷೆ ತಿಂಗಳಿಗೆ ಒಮ್ಮೆ ಪರಿಶೀಲಿಸಬೇಕಿತ್ತು. ಆದರೆ, ಸಿಬ್ಬಂದಿಗಳು ಆರೋಗ್ಯ ಪರೀಕ್ಷೆ ಮಾಡದೆ ಎಡವಿದ್ದಾರೆ. ಹೀಗಾಗಿ, ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಅಲ್ಲಿನ ಸಿಬ್ಬಂದಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡುತ್ತೇನೆ ಎಂದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:52 am, Thu, 28 August 25



