ಯಾದಗಿರಿ: ಜೋಳದ ಬೆಳೆಗೆ ಹಕ್ಕಿ, ಹಂದಿಗಳ ಕಾಟ; ರೈತರ ಪರದಾಟ

Yadgir: ರೈತರ ಜಮೀನುಗಳಲ್ಲಿ ಈಗ ಜೋಳ ತೆನೆ ಕಟ್ಟಿದ್ದು, ಹಕ್ಕಿಗಳ ಕಾಟ ಶುರುವಾಗಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ರೈತರು ಹರಸಾಹಸಪಡುತ್ತಿದ್ದಾರೆ.

  • ಅಮೀನ್‌ ಹೊಸೂರ್‌
  • Published On - 0:01 AM, 22 Feb 2021
ಯಾದಗಿರಿ: ಜೋಳದ ಬೆಳೆಗೆ ಹಕ್ಕಿ, ಹಂದಿಗಳ ಕಾಟ; ರೈತರ ಪರದಾಟ
ಜೋಳದ ಬೆಳೆ

ಯಾದಗಿರಿ: ಜಿಲ್ಲೆಯ ರೈತರು ಕಳೆದ ವರ್ಷ ಉಂಟಾದ ಪ್ರವಾಹದಿಂದ ಮುಂಗಾರು ಬೆಳೆಯನ್ನ ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ. ಪ್ರವಾಹ ತಗ್ಗಿದ ಮೇಲೆ ಹಿಂಗಾರು ಬೆಳೆಯನ್ನಾದರೂ ಬೆಳೆದುಕೊಳ್ಳೋಣ ಅಂತ ಯೋಚಿಸಿ ಜೋಳ ಬಿತ್ತನೆ ಮಾಡಿದ್ದಾರೆ. ಸದ್ಯ ಜೋಳ ತೆನೆ ಕಟ್ಟಿದ್ದು ಫಸಲು ಸಹ ಭರ್ಜರಿಯಾಗಿ ಬೆಳೆದು ನಿಂತಿದೆ. ಆದರೆ ರಾಶಿಗೂ ಮುನ್ನವೇ ಜೋಳದ ಬೆಳೆ ಬಗ್ಗೆ ರೈತರು ಆತಂಕದಲ್ಲಿದ್ದಾರೆ.

ಜಿಲ್ಲೆಯ ಬಹುತೇಕ ರೈತರು ಜೋಳದ ಬೆಳೆಯನ್ನ ಬೆಳೆಯುತ್ತಾರೆ. ಆದರೆ ಬೆಳೆದ ಜೋಳದ ಬೆಳೆಯನ್ನ ರೈತರು ನಿರಂತರವಾಗಿ ಕಣ್ಣಲ್ಲಿ ಕಣ್ಣಿಟ್ಟು ಕಾಯಬೇಕಾಗಿದೆ. ಇಲ್ಲವೆಂದರೆ ಹಕ್ಕಿಗಳು ಹಾಗೂ ಕಾಡು ಹಂದಿಗಳ ಪಾಲಾಗುತ್ತದೆ. ರೈತರ ಜಮೀನುಗಳಲ್ಲಿ ಈಗ ಜೋಳ ತೆನೆ ಕಟ್ಟಿದ್ದು, ಈಗ ಜೊಳದ ತೆನೆಗಳಿಗೆ ಹಕ್ಕಿಗಳ ಕಾಟ ಶುರುವಾಗಿದೆ. ಜಮೀನಿನಲ್ಲಿ ಯಾರೂ ಇಲ್ಲವೆಂದರೆ ಸಾಕು ಹಕ್ಕಿಗಳ ಹಿಂಡೆ ಜಮೀನಿನಲ್ಲಿ ಆವರಿಸಿಕೊಳ್ಳುತ್ತ್ತದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ರೈತರು ಸಾಕಷ್ಟು ಹರಸಾಹಸಪಡುತ್ತಿದ್ದಾರೆ. ಬೆಳೆಯನ್ನ ರಕ್ಷಿಸಿಕೊಳ್ಳಲು ರೈತರು ಜಮೀನಿನ ತುಂಬಾ ಖಾಲಿ ಬೀಯರ್ ಬಾಟಲ್ ತೂಗು ಹಾಕುವುದು, ಜಮೀನಿನ ಸುತ್ತ ಸೀರೆಗಳನ್ನ ಕಟ್ಟುವುದು ಜೊತೆಗೆ ಖಾಲಿ ತಗಡಿನ ಡಬ್ಬಿಗಳಿಂದ ಸೌಂಡ್ ಮಾಡುವುದು, ಪಟಾಕಿ ಸಿಡಿಸುವುದು ಸೇರಿದಂತೆ ನಾನಾ ಕಸರತ್ತು ಮಾಡುತ್ತಿದ್ದಾರೆ.

ಹಕ್ಕಿಗಳ ಜೊತೆಗೆ ಜೋಳಕ್ಕೆ ರಾತ್ರಿ ವೇಳೆ ಹಂದಿಗಳ ಕಾಟವೂ ಶುರುವಾಗಿದೆ. ಹೀಗಾಗಿ ರೈತರು ರಾತ್ರಿ ಹೊತ್ತು ಜಮೀನಿನಲ್ಲೇ ಮಲಗಿ ಪಟಾಕಿ ಸಿಡಿಸಿ ಕಾಡು ಹಂದಿಗಳನ್ನ ಓಡಿಸಿ ಜೋಳದ ಬೆಳೆ ರಕ್ಷಿಸಿಕೊಳ್ಳುತ್ತಿದ್ದಾರೆ. ಇನ್ನು ಹಕ್ಕಿಗಳನ್ನ ಓಡಿಸುವುದಕ್ಕೆ ರೈತ ಹಗ್ಗದಲ್ಲಿ ಅಸ್ತ್ರವನ್ನ ಮಾಡಿ ಅದರಲ್ಲಿ ಕಲ್ಲು ಕಟ್ಟಿ ಹೊಡೆಯುತ್ತಿದ್ದಾರೆ. ಹೀಗಾಗಿ ರೈತರಿಗೆ ಈಗ ದಿನದ 24 ಗಂಟೆಯೂ ಜೋಳದ ಬೆಳೆ ಕಾಯುವುದೇ ಕೆಲಸವಾಗಿದೆ. ಸ್ವಲ್ಪ ನಿರ್ಲಕ್ಷ್ಯ ವಹಿಸಿದರೂ ಬಂಗಾರದಂಥಹ ಬೆಳೆ ಕಳೆದುಕೊಳ್ಳಬೇಕಾಗುತ್ತದೆ. ಇದರಿಂದ ಮನೆಯವರು ಪಾಳಿಯಂತೆ ಒಬ್ಬೊಬ್ಬರು ಜಮೀನು ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ರೀತಿ ಕಷ್ಟಪಟ್ಟ ಮೇಲೆ ರೈತರಿಗೆ ತಿನ್ನುವುದಕ್ಕೆ ಜೋಳ ಸಿಗುತ್ತದೆ. ಸಾಕಿದ ಜಾನುವಾರುಗಳಿಗೆ ಮೇವು ಸಿಗುತ್ತದೆ. ಇಲ್ಲವೆಂದರೆ ಕಾಡು ಹಂದಿಗಳು ಹಾಗೂ ಬಾನಾಡಿಗಳ ಪಾಲಾಗಿ ಹೋಗುತ್ತದೆ.

ರೈತರು ಪ್ರವಾಹದ ಸಂಕಷ್ಟದ ನಡುವೆಯೂ ಕಷ್ಟಪಟ್ಟು ಜೋಳದ ಬೆಳೆ ಬೆಳೆದಿದ್ದಾರೆ. ಆದರೆ ಎಲ್ಲಾ ಜಮೀನುಗಳು ಖಾಲಿ ಇರುವುದರಿಂದ ಹಕ್ಕಿಗಳು ಮತ್ತು ಕಾಡು ಪ್ರಾಣಿಗಳು ಬೆಳೆ ಇದ್ದ ಜಮೀನು ನಾಶ ಮಾಡಲು ಮುಂದಾಗಿವೆ. ರೈತರು ಮಾತ್ರ ಯಾವುದೇ ಕಾರಣಕ್ಕೂ ಹಕ್ಕಿಗಳು ಮತ್ತು ಕಾಡುಪ್ರಾಣಿಗಳು ತಮ್ಮ ಜಮೀನಿಗೆ ಬರಬಾರದು ಅಂತ ನಾನಾ ಕಸರತ್ತು ನಡೆಸುತ್ತಿದ್ದಾರೆ.

ಡಬ್ಬದಲ್ಲಿ ಶಬ್ದ ಮಾಡಿ ಹಕ್ಕಿಗಳನ್ನು ಓಡಿಸುತ್ತಿರುವ ರೈತ ಮಹಿಳೆ

ಜೋಳದ ಮಧ್ಯೆ ನಿಂತಿರುವ ರೈತರು

ಸಂಜೆ ಹೊತ್ತಿಗೆ ಬರುವ ಹಕ್ಕಿಗಳನ್ನು ಓಡಿಸುತ್ತಿರುವ ರೈತ

ಜೋಳದ ತೆನೆ ತಿನ್ನಲು ಬಂದಿರುವ ಹಕ್ಕಿ

ಇದನ್ನೂ ಓದಿ: ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿ ಕೇಂದ್ರ ತೆರೆದಿದ್ದರೂ ಅತ್ತ ಕಡೆ ಸುಳಿಯದ ರೈತರು..!

ಇದನ್ನೂ ಓದಿ: Drones in Agriculture: ಭತ್ತದ ಕಣಜದಲ್ಲಿ ಕ್ರೀಮಿನಾಶಕ ಸಿಂಪಡಣೆಗಾಗಿ ಡ್ರೋನ್​ಗೆ ಮೊರೆ ಹೋದ ರೈತರು