ಯೋಗೀಶ್ ಗೌಡ ಕೊಲೆ ಪ್ರಕರಣ: ವಿನಯ್ ಕುಲಕರ್ಣಿ ವಿರುದ್ಧದ ಮೇಲ್ಮನವಿ ವಿಚಾರಣೆ ಅ.27ಕ್ಕೆ ಮುಂದೂಡಿದ ಸುಪ್ರೀಂ

ಧಾರವಾಡ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಜಾಮೀನು ಮತ್ತು ಶಿಕ್ಷೆಗೆ ತಡೆ ನೀಡಿದ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ವಿಚಾರಣೆ ನಡೆದಿದೆ. ಸಿಬಿಐ ಶಿಕ್ಷೆಗೆ ತಡೆಯಾಜ್ಞೆ ನೀಡುವುದನ್ನು ವಿರೋಧಿಸಿದ್ದು, ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದ ನ್ಯಾಯಪೀಠ ವಿಚಾರಣೆಯನ್ನು ಅಕ್ಟೋಬರ್ 27ಕ್ಕೆ ಮುಂದೂಡಿದೆ.

ಯೋಗೀಶ್ ಗೌಡ ಕೊಲೆ ಪ್ರಕರಣ: ವಿನಯ್ ಕುಲಕರ್ಣಿ ವಿರುದ್ಧದ ಮೇಲ್ಮನವಿ ವಿಚಾರಣೆ ಅ.27ಕ್ಕೆ ಮುಂದೂಡಿದ ಸುಪ್ರೀಂ
ವಿನಯ್ ಕುಲಕರ್ಣಿ ಹಾಗೂ ಸುಪ್ರೀಂ ಕೋರ್ಟ್‌
Image Credit source: PTI
Edited By:

Updated on: Oct 09, 2026 | 12:42 PM

ಬೆಂಗಳೂರು, ಅಕ್ಟೋಬರ್ 9: ಧಾರವಾಡದ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ವಿನಯ್ ಕುಲಕರ್ಣಿಗೆ ನೀಡಿದ್ದ ಶಿಕ್ಷೆಗೆ ತಡೆ ನೀಡಿ, ಜಾಮೀನು ಮಂಜೂರು ಮಾಡಿದ ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮೇಲ್ಮನವಿಗಳ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ನಡೆಯಿತು. ಸಿಬಿಐ ಮತ್ತು ಯೋಗೀಶ್ ಗೌಡ ಅವರ ಸಹೋದರ ಗುರುನಾಥ್ ಗೌಡ ಸಲ್ಲಿಸಿರುವ ಮೇಲ್ಮನವಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಚಂದ್ರಶೇಖರ್ ಅವರಿದ್ದ ಪೀಠ, ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದೆ. ವಿಚಾರಣೆಯನ್ನು ಅಕ್ಟೋಬರ್ 27ಕ್ಕೆ ಮುಂದೂಡಿದೆ.

ಶಿಕ್ಷೆಗೆ ತಡೆ ನೀಡುವುದು ಅಪರೂಪದ ಸಂದರ್ಭದಲ್ಲಷ್ಟೇ: ಸಿಬಿಐ ವಾದ

ಸಿಬಿಐ ಪರ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು, ಶಿಕ್ಷೆಗೆ ತಡೆಯಾಜ್ಞೆ ನೀಡುವುದು ಅಪರೂಪದ ಸಂದರ್ಭಗಳಲ್ಲಿ ಮಾತ್ರ ಆಗಬೇಕು ಎಂದು ವಾದಿಸಿದರು. ಈ ಸಂಬಂಧ ಸುಪ್ರೀಂ ಕೋರ್ಟ್‌ನ ಮೂರು ತೀರ್ಪುಗಳನ್ನು ಉಲ್ಲೇಖಿಸಿದರು. ಸಾರ್ವಜನಿಕ ಸೇವಕರಾಗಿರುವ ವ್ಯಕ್ತಿಗಳಿಗೆ ಸಹಜವಾಗಿ ಶಿಕ್ಷೆಗೆ ತಡೆಯಾಜ್ಞೆ ನೀಡಬಾರದು ಎಂಬ ವಾದವನ್ನೂ ಮಂಡಿಸಿದರು.

ಈ ಹಿಂದೆ ಸಾಕ್ಷ್ಯ ನಾಶಪಡಿಸಿದ ಆರೋಪದ ಹಿನ್ನೆಲೆಯಲ್ಲಿ ವಿನಯ್ ಕುಲಕರ್ಣಿ ಅವರ ಜಾಮೀನನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿತ್ತು ಎಂದು ಸಿಬಿಐ ನ್ಯಾಯಾಲಯದ ಗಮನಕ್ಕೆ ತಂದಿತು. ಅಲ್ಲದೆ, ಹಿಂದಿನ ಎರಡು ಕ್ರಿಮಿನಲ್ ಪ್ರಕರಣಗಳ ವಿವರಗಳನ್ನು ಹೈಕೋರ್ಟ್ ಮುಂದೆ ಬಹಿರಂಗಪಡಿಸಿಲ್ಲ ಎಂದೂ ಸಿಬಿಐ ವಾದಿಸಿತು.

ಎರಡು ವಾರ ಕಾಲಾವಕಾಶಕ್ಕೆ ವಿನಯ್ ಕುಲಕರ್ಣಿ ವಕೀಲರ ಮನವಿ

ವಿನಯ್ ಕುಲಕರ್ಣಿ ಪರ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ವಾದ ಮಂಡಿಸಿ, ಎರಡು ವಾರಗಳ ಕಾಲಾವಕಾಶ ನೀಡುವಂತೆ ಮನವಿ ಮಾಡಿದರು. ಯಾರೂ ಓಡಿಹೋಗುವುದಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಇತರ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದ ಆದೇಶಗಳನ್ನೂ ಪ್ರಶ್ನಿಸಿ ಮೇಲ್ಮನವಿಗಳನ್ನು ಸಲ್ಲಿಸಲಾಗಿದೆ. ಹೀಗಾಗಿ ದಸರಾ ಹಬ್ಬದ ಬಳಿಕ ಎಲ್ಲ ಅರ್ಜಿಗಳ ವಿಚಾರಣೆಯನ್ನು ಒಟ್ಟಿಗೆ ನಡೆಸಬಹುದು ಎಂದು ವಿನಯ್ ಕುಲಕರ್ಣಿ ಪರ ವಕೀಲರು ಮನವಿ ಮಾಡಿದರು.
Yogesh Gowda Murder Case: ಶಿಕ್ಷೆಗೆ ತಡೆ, ಜಾಮೀನು ಪ್ರಶ್ನಿಸಿ ಸಿಬಿಐ, ಗುರುನಾಥ್ ಗೌಡರ್ ಮೇಲ್ಮನವಿ!
ಸಿಬಿಐ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದ ಸುಪ್ರೀಂಕೋರ್ಟ್, ವಿಚಾರಣೆಯನ್ನು ಅಕ್ಟೋಬರ್ 27ಕ್ಕೆ ಮುಂದೂಡಿತು. ಅಂದು ವಿಚಾರಣೆಯನ್ನು ಮುಂದೂಡುವುದಿಲ್ಲ ಎಂದೂ ಪೀಠ ಸ್ಪಷ್ಟಪಡಿಸಿತು.

ಏನಿದು ಯೋಗೀಶ್ ಗೌಡ ಕೊಲೆ ಪ್ರಕರಣ?

ಧಾರವಾಡ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹಾಗೂ ಬಿಜೆಪಿ ಮುಖಂಡ ಯೋಗೀಶ್ ಗೌಡ ಅವರನ್ನು 2016ರ ಜೂನ್ 15ರಂದು ಧಾರವಾಡದ ಸಪ್ತಾಪುರದಲ್ಲಿರುವ ಜಿಮ್‌ನಲ್ಲಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಆರಂಭದಲ್ಲಿ ಸ್ಥಳೀಯ ಪೊಲೀಸರು ತನಿಖೆ ನಡೆಸಿದ್ದರು. ಬಳಿಕ ಯೋಗೀಶ್ ಗೌಡ ಕುಟುಂಬದವರ ಮನವಿಯ ಮೇರೆಗೆ 2019ರಲ್ಲಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಸಿಬಿಐ, ವಿನಯ್ ಕುಲಕರ್ಣಿ ಸೇರಿದಂತೆ ಹಲವರ ವಿರುದ್ಧ ಆರೋಪಪಟ್ಟಿ ಸಲ್ಲಿಸಿತ್ತು.

ವಿಶೇಷ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆ

ಪ್ರಕರಣದ ವಿಚಾರಣೆ ನಡೆಸಿದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು 2026ರ ಏಪ್ರಿಲ್‌ನಲ್ಲಿ ವಿನಯ್ ಕುಲಕರ್ಣಿ ಸೇರಿದಂತೆ 17 ಮಂದಿಯನ್ನು ದೋಷಿಗಳೆಂದು ಘೋಷಿಸಿತ್ತು. ಬಳಿಕ ವಿನಯ್ ಕುಲಕರ್ಣಿ ಸೇರಿದಂತೆ ಹಲವು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.

ಹೈಕೋರ್ಟ್‌ನಿಂದ ಶಿಕ್ಷೆಗೆ ತಡೆ, ಜಾಮೀನು

ವಿಶೇಷ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಆರೋಪಿಗಳು ಕರ್ನಾಟಕ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. 2026ರ ಜುಲೈ 31ರಂದು ಹೈಕೋರ್ಟ್ ವಿನಯ್ ಕುಲಕರ್ಣಿ ಸೇರಿದಂತೆ ಹಲವು ಆರೋಪಿಗಳಿಗೆ ಮೇಲ್ಮನವಿಗಳ ವಿಚಾರಣೆ ಪೂರ್ಣಗೊಳ್ಳುವವರೆಗೆ ಶಿಕ್ಷೆಗೆ ತಡೆ ನೀಡಿ ಜಾಮೀನು ಮಂಜೂರು ಮಾಡಿತ್ತು. ಈ ಆದೇಶದ ವಿರುದ್ಧ ಸಿಬಿಐ ಮತ್ತು ಯೋಗೀಶ್ ಗೌಡ ಅವರ ಸಹೋದರ ಗುರುನಾಥ್ ಗೌಡ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಬಿಜೆಪಿ ಮುಖಂಡ ಯೋಗೇಶ್​​ ಗೌಡ ಕೊಲೆ ಪ್ರಕರಣ: ಶಾಸಕ ವಿನಯ್​​ ಕುಲಕರ್ಣಿಗೆ ‘ಸುಪ್ರೀಂ’ ಸಂಕಷ್ಟ ಸಾಧ್ಯತೆ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:31 am, Fri, 9 October 26

ರಮೇಶ್​ ಎಮ್​.

ರಮೇಶ್​ ಎಂ ವಿಶೇಷ ವರದಿಗಾರರಾಗಿದ್ದಾರೆ, ಮೂಲತಃ ಕಾನೂನು ಪದವೀಧರನಾಗಿದ್ದು ಕಳೆದ 18 ವರ್ಷಗಳಿಂದ ಟಿವಿ9 ಸುದ್ದಿ ವಾಹಿನಿಯಲ್ಲಿ ಕಾನೂನು ಸಂಬಂಧಿತ ವರದಿ ನೀಡುತ್ತಿದ್ದಾರೆ. ಹೈಕೋರ್ಟ್, ಸುಪ್ರೀಂ ಕೋರ್ಟ್ ಹಾಗೂ ವಿಚಾರಣಾ ನ್ಯಾಯಾಲಯಗಳ ಪ್ರಮುಖ ಪ್ರಕರಣಗಳ ವರದಿಗಾರಿಕೆ ಮಾಡುತ್ತಿದ್ದು, ಬೆಂಗಳೂರಿನ ನಿವಾಸಿಯಾಗಿದ್ದಾರೆ.

Read More
Loading...
Unable to load recommendations.
Follow Us