ಇಬ್ಬರ ಕಿತ್ತಾಟದ ಲಾಭ ಪಡೆಯಲು ಮುಂದಾದ ಮುನಿಯಪ್ಪ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಲಾಬಿ

ದೆಹಲಿ: ಕೆಪಿಸಿಸಿಗೆ ಸಾರಥಿ ನೇಮಕ ಅನ್ನೋದು ದಿನೇ ದಿನೆ ಕಗ್ಗಂಟಾಗ್ತಿದೆ. ಬಣಗಳ ಲಾಬಿ ನೋಡಿ ಸುಸ್ತಾಗಿರುವ ಹೈಕಮಾಂಡ್ ಮಾತ್ರ, ಈಗಲೇ ಅರ್ಜೆಂಟ್ ಏನು ಎಂಬ ಮನಸ್ಥಿತಿಗೆ ಬಂದಿದೆ. ಇತ್ತ ಮುನಿಯಪ್ಪ ಮಾತ್ರ ನಾನು ಯಾವ ಬಣನೂ ಇಲ್ಲ, ನನ್ನನ್ನೇ ನೇಮಿಸಿ ಅಂತಾ ಸೋನಿಯಾರನ್ನ ಕೇಳಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಯ್ಕೆ ವಿಚಾರ ಅನ್ನೋದು ಕನ್ನಡಿಯೊಳಗಿನ ಗಂಟಿನಂತಾಗಿದೆ. ಕೆಪಿಸಿಸಿಗೆ ಸಾರಥಿ ಇವತ್ತು ನೇಮಕವಾಗ್ತಾರೆ, ನಾಳೆ ನೇಮಕವಾಗ್ತಾರೆ ಅಂತಾ ಕಾಂಗ್ರೆಸ್ ಕಾರ್ಯಕರ್ತರು ಕಾದು ಕಾದು ಸುಸ್ತಾಗಿದ್ದಾರೆ. ಇತ್ತ ರಾಜ್ಯದ ನಾಯಕರಲ್ಲೂ ಬಣಗಳು ಸೃಷ್ಟಿಯಾಗಿ ಪಟ್ಟಕ್ಕಾಗಿ ಕಿತ್ತಾಡುತ್ತಿದ್ದಾರೆ. ಇವರನ್ನ ಮಾಡಲು ಅವರು ಒಪ್ಪುತ್ತಿಲ್ಲ, ಅವರನ್ನ ನೇಮಿಸಲು ಇವರು ಒಪ್ಪುತ್ತಿಲ್ಲ. ಎರಡು ಬಣಗಳ ನಡುವಿನ ಕಿತ್ತಾಟದಿಂದಾಗಿ ಹೈ ಕಮಾಂಡ್​ ಇಕ್ಕಟ್ಟಿನಲ್ಲಿ ಸಿಲುಕಿದೆ. ಬಣಗಳ ವೈಷಮ್ಯ ಶಮನ ಮಾಡಲಾಗದೇ ಹೈರಾಣಾಗಿದೆ.

ಇಬ್ಬರ ಕಿತ್ತಾಟದ ಲಾಭ ಪಡೆಯಲು ಮುಂದಾದ ಮುನಿಯಪ್ಪ:
ಕಾಂಗ್ರೆಸ್ ಪಾಳಯದಲ್ಲಿ ಬಣ ರಾಜಕೀಯದಿಂದ ಕೆಲ ನಾಯಕರು ಬಡಿದಾಡಿಕೊಳ್ಳುತ್ತಿದ್ದಾರೆ. ಯಾವೊಬ್ಬ ನಾಯಕನೂ ಪಟ್ಟಕ್ಕೇರಲು ಬಿಡದೇ ಪರಸ್ಪರ ಕಾಲೆಳೆದುಕೊಳ್ಳುತ್ತಿದ್ದಾರೆ. ಆದ್ರೆ, ಇಬ್ಬರ ಜಗಳ ಮೂರನೆಯವರಿಗೆ ಲಾಭ ಅನ್ನುವಂತೆ, ಡಿಕೆಶಿ ಮತ್ತು ಸಿದ್ದರಾಮಯ್ಯ ಬಣದ ಮಧ್ಯೆ ಕೆ.ಹೆಚ್.ಮುನಿಯಪ್ಪ ಲಾಭ ಮಾಡಿಕೊಳ್ಳಲು ಹೊರಟಿದ್ದಾರೆ.

ವಾರಕ್ಕೊಮ್ಮೆ ದೆಹಲಿಗೆ ಬಂದು ಹೈ ಕಮಾಂಡ್ ನಾಯಕರನ್ನ ಭೇಟಿಯಾಗುವ ಮುನಿಯಪ್ಪ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನನ್ನನ್ನೇ ನೇಮಕ ಮಾಡಬೇಕು ಅಂತಾ ಮನವಿ ಮಾಡ್ತಿದ್ದಾರೆ. ನಿನ್ನೆ ಕೂಡ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಭೇಟಿಯಾಗಿರುವ ಮುನಿಯಪ್ಪ ಚರ್ಚೆ ನಡೆಸಿದ್ದಾರೆ.

ಕೆಪಿಸಿಸಿ ಸಾರಥಿಯಾಗಿ ಪರಿಗಣಿಸಲು ಮುನಿಯಪ್ಪ ದುಂಬಾಲು:
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತಮ್ಮನ್ನೇ ಪರಿಗಣಿಸುವಂತೆ ಹಿರಿಯ ಕೈ ನಾಯಕ ಕೆ.ಹೆಚ್.ಮುನಿಯಪ್ಪ ಮನವಿ ಮಾಡಿದ್ದಾರೆ. ಕೆಪಿಸಿಸಿ ಹುದ್ದೆಗೆ ಡಿ.ಕೆ ಶಿವಕುಮಾರ್ ಮತ್ತು ಎಂ.ಬಿ ಪಾಟೀಲ್ ಹೆಸರು ಕೇಳಿ ಬರುತ್ತಿದೆ. ಈ ಇಬ್ಬರು ನಾಯಕರಲ್ಲಿ ಯಾರಿಗೆ ಅಧ್ಯಕ್ಷ ಸ್ಥಾನ ನೀಡಿದರೂ ಪಕ್ಷದಲ್ಲಿ ಭಿನ್ನಮತ ಶುರುವಾಗಲಿದೆ. ಇದು ಪಕ್ಷದ ಬೆಳವಣಿಗೆ ಮಾರಕವಾಗಲಿದ್ದು, ನನಗೆ ಅಧ್ಯಕ್ಷ ಸ್ಥಾನ ನೀಡಿದರೆ ಎರಡು ಬಣಗಳನ್ನು ಒಗ್ಗೂಡಿಸಿಕೊಂಡು ಹೋಗುವ ಕೆಲಸ ಮಾಡುತ್ತೇವೆಂದು ವರಿಷ್ಠರ ಮನವೊಲಿಸೋ ಕೆಲಸ ಮಾಡ್ತಿದ್ದಾರೆ.

ಹೈ ಕಮಾಂಡ್ ಭೇಟಿ ಬಳಿಕ ಮಾತನಾಡಿದ ಕೆ.ಹೆಚ್​.ಮುನಿಯಪ್ಪ, ರಾಜ್ಯ ಕಾಂಗ್ರೆಸ್​ಗೆ ನಾಯಕತ್ವ ಬೇಕಿದೆ. ಶೀಘ್ರವೇ ನಾಯಕತ್ವ ಆಯ್ಕೆ ಮಾಡಬೇಕೆಂದು ಮನವಿ ಮಾಡಿದ್ದೇನೆ. ರಾಜ್ಯ ಕಾಂಗ್ರೆಸ್ ಬಗ್ಗೆ ಭಕ್ತ ಚರಣದಾಸ್ ಮತ್ತು ಮಧುಸೂಧನ್ ಮಿಸ್ತ್ರಿ ನೀಡಿರುವ ವರದಿ ಪರಿಗಣಿಸಬೇಕೆಂದು ಕೇಳಿಕೊಂಡಿದ್ದೇನೆ. ಪಿಸಿಸಿ ಅಧ್ಯಕ್ಷ ನೇಮಕದ ಬಗ್ಗೆಯೂ ವಿವರಿಸಿದೆ. ಪಿಸಿಸಿ ಅಧ್ಯಕ್ಷರ ನೇಮಕ ಶೀಘ್ರದಲ್ಲೇ ಮಾಡೋಣ ಎಂದು ಸೋನಿಯಾ ಹೇಳಿದ್ದಾರೆ ಅಂತಾ ಮುನಿಯಪ್ಪ ಹೇಳಿದ್ದಾರೆ.

ಇತ್ತ ಮುನಿಯಪ್ಪ ಸರಿಯಾದ ಟೈಂ ನೋಡ್ಕೊಂಡು ಸೋನಿಯಾರನ್ನ ಭೇಟಿಯಾಗಿದ್ದಾರೆ. ಇಬ್ಬರ ಕಿತ್ತಾಟದಲ್ಲಿ ನನಗೇನಾದ್ರೂ ಜಾಕ್ ಪಾಟ್ ಹೊಡೆದರೆ ಒಂದು ಕೈ ನೋಡಬಹುದು ಅನ್ನೋ ಲೆಕ್ಕಾಚಾರದಲ್ಲಿ ಕಲ್ಲುಹೊಡೆಯುತ್ತಿದ್ದಾರೆ. ಸೋನಿಯಾ ಗಾಂಧಿಯವ್ರ ನಿಲುವು ಯಾರ ಕಡೆ ಇದೆ ಅನ್ನೋದೆ ಸ್ಪಷ್ಟವಾಗ್ತಿಲ್ಲ.

Related Posts :

ತಾಜಾ ಸುದ್ದಿ

error: Content is protected !!