ತಮ್ಮ ಮಗುವಿನ ಫೋಟೋಗಳನ್ನು ಮಾಧ್ಯಮದವರು ಕ್ಲಿಕ್ಕಿಸುವುದು ಬೇಡವೆಂದ ವಿರುಷ್ಕಾ ದಂಪತಿ!

ಇತ್ತೀಚಿಗೆ ತನ್ನ ಮತ್ತು ಕೊಹ್ಲಿಯ ಖಾಸಗಿತನವನ್ನು ಅತಿಕ್ರಮಣ ಮಾಡಿದ ಹೆಸರಾಂತ ಪತ್ರಿಕೆಯೊಂದರ ಛಾಯಾಗ್ರಾಹಕನನ್ನು ಅನುಷ್ಕಾ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು.

  • TV9 Web Team
  • Published On - 21:33 PM, 13 Jan 2021
ವಿರುಷ್ಕಾ ದಂಪತಿ

ಕೇವಲ ಎರಡು ದಿನಗಳ ಹಿಂದಷ್ಟೇ (ಜನವರಿ 11) ಹೆಣ್ಣು ಮಗುವಿನ ರೂಪದಲ್ಲಿ ಹೊಸ ಅತಿಥಿಯನ್ನು ತಮ್ಮ ಕುಟುಂಬಕ್ಕೆ ಬರಮಾಡಿಕೊಂಡಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಅವರ ತಾರಾ ಪತ್ನಿ ಅನುಷ್ಕಾ ಶರ್ಮ ಮುಂಬೈನ ಪತ್ರಕರ್ತರ ಸಮುದಾಯಕ್ಕೆ ತಮ್ಮ ಮಗುವಿನ ಫೋಟೋಗಳನ್ನು ಕ್ಲಿಕ್ಕಿಸದಿರುವಂತೆ ಮತ್ತು ಮಗುವಿಗೆ ಸಂಬಂಧಿಸಿದ ಯಾವುದೇ ವಿಷಯವನ್ನು ಪತ್ರಿಕೆಗಳಲ್ಲಿ ಪ್ರಕಟಿಸದಂತೆ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಬಿತ್ತರಿಸದಿರುವಂತೆ ವಿನಂತಿಸಿಕೊಂಡಿದ್ದಾರೆ.

ವಿರುಷ್ಕಾ ದಂಪತಿ ಮಾಧ್ಯಮದವರಿಗೆ ಕಳಿಸಿರುವ ಸಂದೇಶ ಹೀಗಿದೆ:

‘ಹಾಯ್, ಕಳೆದ ಕೆಲ ವರ್ಷಗಳಲ್ಲಿ ನೀವು ತೋರಿರುವ ಪ್ರೀತಿಗೆ ಕೃತಜ್ಞತೆಯುಳ್ಳವರಾಗಿದ್ದೇವೆ. ಈ ಆಭೂತಪೂರ್ವವಾದ ಸಂದರ್ಭವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಮಗೆ ಬಹಳ ಸಂತೋಷವಾಗುತ್ತಿದೆ. ಮಗುವಿನ ತಂದೆತಾಯಿಗಳಾಗಿ ನಿಮ್ಮಲ್ಲಿ ಒಂದು ಚಿಕ್ಕ ಮನವಿಯನ್ನು ಈ ಮೂಲಕ ಮಾಡಿಕೊಳ್ಳುತ್ತೇವೆ, ನಮ್ಮ ಮಗುವಿನ ಖಾಸಗಿತನವನ್ನು ಸಂರಕ್ಷಿಸಲು ನಾವು ಬಯಸುವುದರಿಂದ ನಿಮ್ಮೆಲ್ಲರ ಸಹಕಾರ ಮತ್ತು ಸಹಾಯದ ಅಗತ್ಯ ನಮಗಿದೆ’.

ವಿರಾಟ್ ಕೊಹ್ಲಿ ಸಹೋದರ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ ವಿರುಷ್ಕಾ ಅವರ ಮಗುವಿನ ಪಾದಗಳು

ನಮ್ಮಿಬ್ಬರಿಗೆ ಸಂಬಂಧಿಸಿದ ವಿಷಯಗಳನ್ನು ಮಾಧ್ಯಮದೊಂದಿಗೆ ಹಂಚಿಕೊಳ್ಳುವ ಭರವಸೆಯನ್ನು ನೀಡಿರುವ ಕೊಹ್ಲಿ ಮತ್ತು ಅನುಷ್ಕಾ, ಮಗುವನ್ನು ಕುರಿತ ಯಾವುದೇ ವಿಷಯ ಮತ್ತು ಫೋಟೊಗಳನ್ನು ಪ್ರಕಟಿಸಬಾರದೆಂದು ಕೇಳಿಕೊಂಡಿದ್ದಾರೆ.

‘ನಮ್ಮಿಬ್ಬರಿಗೆ ಸಂಬಂಧಿಸಿದ ವಿಷಯಗಳನ್ನು ನಾವು ತಪ್ಪದೆ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇವೆ. ಆದರೆ ನಮ್ಮ ಮಗುವಿಗೆ ಸಂಬಂಧಿಸಿದ ಯಾವುದನ್ನೂ ಪ್ರಕಟಿಸುವುದಾಗಲೀ, ಬಿತ್ತರಿಸುವುದಾಗಲೀ ಮಾಡಬೇಡಿರೆಂದು ಮನವಿ ಮಾಡುತ್ತೇವೆ. ನಮ್ಮ ಹಿನ್ನೆಲೆಗಳ ಪರಿಚಯ ನಿಮಗಿರುವುದರಿಂದ ನೀವು ನಮ್ಮನ್ನು ಅರ್ಥ ಮಾಡಿಕೊಳ್ಳುತ್ತೀರೆಂಬ ವಿಶ್ವಾಸದೊಂದಿಗೆ ಮತ್ತೊಮ್ಮೆ ಧನ್ಯವಾದಗಳನ್ನು ಹೇಳುತ್ತೇವೆ’ ಎಂದು ಸೆಲಿಬ್ರಿಟಿ ದಂಪತಿ ಹೇಳಿದ್ದಾರೆ.

ಇತ್ತೀಚಿಗೆ ತನ್ನ ಮತ್ತು ಕೊಹ್ಲಿಯ ಖಾಸಗಿತನವನ್ನು ಅತಿಕ್ರಮಣ ಮಾಡಿದ ಹೆಸರಾಂತ ಪತ್ರಿಕೆಯೊಂದರ ಛಾಯಾಗ್ರಾಹಕನನ್ನು ಅನುಷ್ಕಾ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಅವರಿಬ್ಬರೂ ತಮ್ಮ ಮನೆಯ ಬಾಲ್ಕನಿಯಲ್ಲಿ ಕೂತು ವಿನೋದವಾಗಿ ಹರಟುತ್ತಿದ್ದಾಗ ಈ ಫೊಟೋಗ್ರಾಫರ್ ಅದನ್ನು ಕೆಮೆರಾದಲ್ಲಿ ಸೆರೆ ಹಿಡಿದಿದ್ದ. ಆ ಚಿತ್ರ ಪತ್ರಿಕೆಯಲ್ಲಿ ಪ್ರಕಟವಾಗಿತ್ತು.

‘ಈ ಫೊಟೋಗ್ರಾಫರ್​ ಮತ್ತು ಅವನ ಪತ್ರಿಕೆಗೆ ಹಲವಾರು ಬಾರಿ ವಿನಂತಿಸಕೊಂಡರೂ, ನಮ್ಮ ಖಾಸಗಿ ಬದುಕಿನಲ್ಲಿ ಅತಿಕ್ರಮಣ ನಡೆಸುವುದನ್ನು ಮುಂದುವರಿಸಿದ್ದಾರೆ. ಮಹನೀಯರೇ, ಕೂಡಲೇ ಇದನ್ನು ನಿಲ್ಲಿಸಿ’ ಎಂದು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಅನುಷ್ಕಾ ಬರೆದುಕೊಂಡಿದ್ದರು.

ವಿರಾಟ್​ ಕೊಹ್ಲಿ-ಅನುಷ್ಕಾ ಶರ್ಮಾ ದಂಪತಿಗೆ ಹೆಣ್ಣು ಮಗು

ಗೂಗಲ್​ನಲ್ಲಿ ಟ್ರೆಂಡ್ ಆಯ್ತು ಬ್ರೀಚ್ ಕ್ಯಾಂಡಿ ಹಾಸ್ಪಿಟಲ್, ವಿರಾಟ್ ಕೊಹ್ಲಿ