ಆಡಿಯೋ ಬುಕ್ ಸ್ವರೂಪದಲ್ಲಿ ಪೂರ್ಣಚಂದ್ರ ತೇಜಸ್ವಿ ಅವರ ಕರ್ವಾಲೊ ಕಾದಂಬರಿ ಕೇಳಿ ಆಸ್ವಾದಿಸಿ

ಪೂರ್ಣಚಂದ್ರ ತೇಜಸ್ವಿಯವರ ಜನಪ್ರಿಯ ಕಾದಂಬರಿ ಕರ್ವಾಲೊ ಈಗ ಆಡಿಯೊ ಬುಕ್ ರೂಪದಲ್ಲಿ ಲಭ್ಯವಿದೆ. ಕರ್ವಾಲೊವನ್ನು ಎಲ್ಲಿ, ಹೇಗೆ ಕೇಳಬಹುದು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ!

  • guruganesh bhat
  • Published On - 14:37 PM, 26 Nov 2020
ಕರ್ವಾಲೊ ಕಾದಂಬರಿ

ಬೆಂಗಳೂರು: ಪೂರ್ಣಚಂದ್ರ ತೇಜಸ್ವಿಯವರ ಜನಪ್ರಿಯ ಕೃತಿ ಕರ್ವಾಲೊವನ್ನು ನೀವೀಗ ಕೇಳಲೂಬಹುದು. ಕನ್ನಡ ಪುಸ್ತಕಗಳಿಗೆ ಡಿಜಿಟಲ್ ಸ್ಪರ್ಶ ನೀಡುತ್ತಿರುವ ಮೈ ಲ್ಯಾಂಗ್ ಬುಕ್ಸ್ ಸಂಸ್ಥೆ ಕರ್ವಾಲೋ ಪುಸ್ತಕವನ್ನು ಆಡಿಯೊ ರೂಪದಲ್ಲಿ ಹೊರತಂದಿದೆ. ಇಷ್ಟು ದಿನ ಓದಿದ ಪುಸ್ತಕವನ್ನು ಇನ್ಮುಂದೆ ಕೇಳುವ ಅವಕಾಶ ಕನ್ನಡ ಸಾಹಿತ್ಯ ಪ್ರೇಮಿಗಳಿಗೆ ಲಭ್ಯವಾಗಿದೆ.

ಬದಲಾಗುತ್ತಿರುವ ಜೀವನ ಶೈಲಿಯಲ್ಲಿ ಓದುವ ಹವ್ಯಾಸ ಕಡಿಮೆಯಾಗಿದೆ. ಆದರೆ ಮೂಲತಃ ಮನುಷ್ಯನಿಗೆ ಸಾಹಿತ್ಯ, ಸಂಸ್ಕೃತಿಗಳ ಅನಿವಾರ್ಯತೆ ಇದ್ದೇ ಇದೆ. ಅಧುನಿಕಯುಗದಲ್ಲಿ ಆಡಿಯೊ ಬುಕ್​ಗಳು ಪುಸ್ತಕ ಓದಲು ಹೊಸ ಅವಕಾಶ ತೆರೆದಿಟ್ಟಿವೆ ಎಂದು ಆನ್​ಲೈನ್ ಮೂಲಕ ಆಡಿಯೋ ಬುಕ್ ಲೋಕಾರ್ಪಣೆಗೊಳಿಸಿದ ಚಲನಚಿತ್ರ ನಿರ್ದೇಶಕ ಪವನ್ ಕುಮಾರ್ ತಿಳಿಸಿದರು.

ಎಲ್ಲಿ ಕೇಳಬಹುದು?
ತಂತ್ರಜ್ಞಾನ ಸ್ನೇಹಿಯಾಗಿದ್ದ ಕನ್ನಡದ ಸಾಹಿತಿ ಪೂರ್ಣಚಂದ್ರ ತೇಜಸ್ವಿಯವರ ಪುಸ್ತಕಗಳ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕನ್ನಡ ಪುಸ್ತಕಗಳಿಗೆ ಹೊಸ ಓದುಗರನ್ನು ಸೆಳೆಯಲು ಕರ್ವಾಲೋ ಆಡಿಯೋ ಬುಕ್ ಸಹಾಯವಾಗಲಿದೆ. ಕರ್ವಾಲೋ ಆಡಿಯೋ ಬುಕ್ ಮೂಲಕ ಕೆಲಸ, ಪ್ರಯಾಣದಲ್ಲಿ ನಿರತರಾಗಿರುವಾಗಲೂ ಪುಸ್ತಕ ಕೇಳಬಹುದು. ಹಿರಿಯ ರಂಗಕರ್ಮಿ ಶ್ರೀಪಾದ್ ಭಟ್ ಮತ್ತು ತಂಡದವರ ಕಂಠ ಆಡಿಯೋ ಬುಕ್​ಗಿದೆ.

mylang.in ತಾಣದಲ್ಲಿ ಖರಿದಿಸಿದರೆ ನಿಮ್ಮ ಮೊಬೈಲ್, ಟ್ಯಾಬ್​ಗಳಲ್ಲೇ ಕೇಳಬಹುದು. 6 ಘಂಟೆ 44 ನಿಮಿಷದ ಆಡಿಯೋ ಬುಕ್​ಗೆ 199ರೂ ನಿಗದಿಪಡಿಸಲಾಗಿದೆ. ಕರ್ವಾಲೋ ಇ-ಬುಕ್ ಸಹ ಲಭ್ಯವಿರುವುದು ವಿಶೇಷ.

‘ನಾನು ಇದುವರೆಗೆ ಕೇಳಿದ ಆಡಿಯೊ ಪುಸ್ತಕಗಳಲ್ಲಿ ಕರ್ವಾಲೊ ನೀಡಿದಷ್ಟು ಗಾಢ ಅನುಭವವನ್ನು ಯಾವುದೂ ನೀಡಿಲ್ಲ. ಒಂದು ಕೋಣೆಯಲ್ಲಿ ಕೂತು ಮಂದಣ್ಣ, ಪ್ಯಾರ, ಎಂಕ್ಟರ ಧ್ವನಿ ಕೇಳಿದರೆ ನಾವೇ ಕಥೆಯೊಳಗೆ ಇಳಿದಂತೆ ಭಾಸವಾಗುತ್ತದೆ. ಜೊತೆಗೆ ಜೇನುಹುಳ, ಜೇನಿನ ಧಾಳಿಯಂತಹ ಸನ್ನಿವೇಶದಲ್ಲಿ ನೈಜ ಶಬ್ಧ ಬಳಸಿದ್ದರಿಂದ ಕರ್ವಾಲೋ ಇನ್ನಷ್ಟು ಪರಿಣಾಮಕಾರಿಯಾಗಿದೆ’ 
– ಕರ್ವಾಲೋ ಆಡಿಯೋ ಪುಸ್ತಕ ಕೇಳಿರುವ ಸಾಹಿತ್ಯ ಪ್ರೇಮಿ ಗುರುರಾಜ ಕೋಡ್ಕಣಿ