ಕೌನ್ ಬನೇಗಾ ಕರೋಡ್​ ಪತಿ: ಕೋಟಿ ಗೆದ್ದ IPS ಅಧಿಕಾರಿ ಮೋಹಿತಾ ಶರ್ಮ!

  • sadhu srinath
  • Published On - 14:52 PM, 17 Nov 2020

ಖ್ಯಾತ ನಟ ಅಮಿತಾಬ್ ಬಚ್ಚನ್ ನಡೆಸಿಕೊಡುವ ಜನಪ್ರಿಯ ಕಾರ್ಯಕ್ರಮ ಕೌನ್ ಬನೇಗಾ ಕರೋಡ್​ ಪತಿ ಜನಸಾಮಾನ್ಯರ ಪಾಲಿಗೆ ಅದೃಷ್ಟದ ಬಾಗಿಲು. ತಮ್ಮ ಬುದ್ಧಿವಂತಿಕೆ ಹಾಗೂ ಅದೃಷ್ಟ ಪರೀಕ್ಷೆಯ ಮೂಲಕ ಕೋಟಿ ರೂಪಾಯಿ ಗೆಲ್ಲಲು ದೇಶಾದ್ಯಂತ ಸಾವಿರಾರು ಜನ ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ಅದರಲ್ಲೂ ಈ ಬಾರಿ ಪ್ರಸಾರವಾಗುತ್ತಿರುವ ಕೆಬಿಸಿ ಕಾರ್ಯಕ್ರಮದ 12ನೇ ಆವೃತ್ತಿ ದಿನೇ ದಿನೇ ಸಂಚಲನ ಮೂಡಿಸುತ್ತಿದೆ.

ಕೆಲ ದಿನಗಳ ಹಿಂದಷ್ಟೇ ನಾಜಿಯಾ ನಸೀಮ್ ಎಂಬ ಮಹಿಳೆ ಒಂದು ಕೋಟಿ ಗೆದ್ದು ಎಲ್ಲರ ಗಮನ ಸೆಳೆದಿದ್ದರು. ಇದೀಗ ಮಹಿಳಾ ಐಪಿಎಸ್ ಅಧಿಕಾರಿಯೊಬ್ಬರು ಕೋಟಿ ಗೆದ್ದಿರುವ ಪ್ರೊಮೊವನ್ನು ವಾಹಿನಿ ಬಿಡುಗಡೆಗೊಳಿಸಿದ್ದು ವೀಕ್ಷಕರು ಮತ್ತಷ್ಟು ಕುತೂಹಲ ಭರಿತರಾಗಿದ್ದಾರೆ.

ಈಗ ಹೊರಬಿದ್ದಿರುವ ಪ್ರೊಮೊದಲ್ಲಿ ಬಿಗ್ ಬಿ ಒಂದು ಕೋಟಿ ಎಂದು ಅಚ್ಚರಿಯಿಂದ ಉದ್ಘರಿಸುತ್ತಿರುವ ದೃಶ್ಯವಿದ್ದು ನಂತರದಲ್ಲಿ ಏಳು ಕೋಟಿಯ ಪ್ರಶ್ನೆಗೂ ಮೋಹಿತಾ ಶರ್ಮಾ ಕಾಲಿಟ್ಟಿರುವುದು ಬಹಿರಂಗವಾಗಿದೆ. ಕೆಬಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂಬುದು ನನ್ನ ಪತಿಯ ಕನಸಾಗಿತ್ತು.

ಅದಕ್ಕಾಗಿ ಅವರು ಬಾಲ್ಯದಿಂದಲೂ ಪ್ರಯತ್ನ ಪಡುತ್ತಿದ್ದರು. ಆದರೆ, ಈಗ ನಾನು ಭಾಗವಹಿಸುವ ಅವಕಾಶ ಲಭಿಸಿತು ಎಂದಿದ್ದಾರೆ. ಕೊನೆಯಲ್ಲಿ ಎಷ್ಟು ಹಣ ಗೆಲ್ಲುತ್ತೇನೆ ಎನ್ನುವುದಕ್ಕಿಂತ ಇಲ್ಲಿಂದ ಏನು ಪಡೆದುಕೊಂಡೆ ಎನ್ನುವುದು ತೃಪ್ತಿ ನೀಡಬೇಕು ಎಂದಿರುವ ಮೋಹಿತಾ ಏಳು ಕೋಟಿ ಪ್ರಶ್ನೆಗೆ ಸರಿ ಉತ್ತರ ನೀಡಿದ್ದಾರಾ ಇಲ್ಲವಾ ಎನ್ನುವುದು ಸದ್ಯ ಕುತೂಹಲ ಮೂಡಿಸಿದೆ.

ನಾಜೀಯಾ ನಸೀಮ್ ಬಳಿಕ 12ನೇ ಆವೃತ್ತಿಯಲ್ಲಿ ಕೋಟಿ ಗೆಲ್ಲುತ್ತಿರುವ ಸ್ಪರ್ಧಿ ಮೋಹಿತಾ ಶರ್ಮ ಆಗಿದ್ದು ಇಬ್ಬರೂ ಮಹಿಳಾ ಸ್ಪರ್ಧಿಗಳಾಗಿರುವುದು ವಿಶೇಷ.