ಸತತ ಮಳೆಗೆ ಉತ್ತರ ಕನ್ನಡದಲ್ಲಿ 1.5ಕಿ.ಮೀ. ಭೂಕುಸಿತ, ಆತಂಕದಲ್ಲಿ ಸ್ಥಳೀಯರು

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕಾರವಾರ ತಾಲೂಕಿನ ದೇವಳಮಕ್ಕಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ಗುಡ್ಡ ಕುಸಿತ ಆರಂಭವಾಗಿದೆ.

ಕಾರವಾರದಿಂದ 35 ಕಿಲೋಮೀಟರ್ ದೂರದ ಅರಣ್ಯ ಭಾಗದಲ್ಲಿರುವ ನಗೆ ಗ್ರಾಮದ ಗುಡ್ಡ ಪ್ರದೇಶದಲ್ಲಿ ಸುಮಾರು ಒಂದೂವರೆ ಕಿಲೋಮೀಟರ್ ಭೂಕುಸಿತವಾಗಿದೆ. ಕುಸಿತದ ಪರಿಣಾಮ ಮರಗಳು, ಬೃಹತ್ ಬಂಡೆ ಕಲ್ಲುಗಳು ಮಣ್ಣಿನಲ್ಲಿ ಕೊಚ್ಚಿಕೊಂಡು ಕೆಳಕ್ಕೆ ಬಂದು ಸೇರಿವೆ.

ಅದೃಷ್ಟವಶಾತ್ ಗ್ರಾಮದ ಮನೆಗಳಿಗೆ ಯಾವುದೇ ಹಾನಿಯಾಗಿಲ್ಲ. ಆದರೆ, ಸ್ಥಳೀಯರ ಗದ್ದೆ, ತೋಟಗಳತ್ತ ಮಣ್ಣು ಕುಸಿತವಾಗಿದೆ. ಈಗ ಸುರಿಯುತ್ತಿರುವ ಮಳೆಯಿಂದ ಮತ್ತಷ್ಟು ಭೂಮಿ ಕುಸಿತವಾಗುವ ಸಾಧ್ಯತೆ ಹೆಚ್ಚಾಗಿರುವುದರಿಂದ ಗದ್ದೆ, ತೋಟಗಳು ನಾಶವಾಗುವ ಭೀತಿಯಲ್ಲಿ ಗ್ರಾಮದ ಜನ ಆತಂಕಗೊಂಡಿದ್ದಾರೆ.

ಕಾರವಾರ ಅಲ್ಲದೇ ಶಿರಸಿಯ ಜಾಜಿಗುಡ್ಡ ವ್ಯಾಪ್ತಿಯಲ್ಲೂ ಕೂಡ ಗುಡ್ಡ ಬಿರುಕು ಬಿಟ್ಚಿದ್ದು, ಗುಡ್ಡ ಕುಸಿಯುವ ಭೀತಿಯಲ್ಲಿ ಸ್ಥಳೀಯ ಜನರಿದ್ದಾರೆ. ಕಾರವಾರ ಹಾಗೂ ಶಿರಸಿ ಭಾಗದ ಅರಣ್ಯ ಅಧಿಕಾರಿಗಳು ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಹಾಗೇನೆ ಸ್ಥಳೀಯರಿಗೆ ಕುಸಿತದ ಸ್ಥಳಕ್ಕೆ ತೆರಳದಂತೆ ಸೂಚನೆ ನೀಡಿದ್ದಾರೆ.

Related Tags:

Related Posts :

Category: