ಗದಗ: ಬದುಕಬೇಕೆಂಬ ಛಲವೊಂದು, ಪ್ರತಿಯೊಂದು ಜೀವಿಯು ಎಂಥ ಸಾಹಸಕ್ಕೂ ಮುಂದಾಗುವಂತೆ ಪ್ರೇರೇಪಿಸುತ್ತದೆ ಎಂಬುದಕ್ಕೆ ತಕ್ಕ ನಿದರ್ಶನವೊಂದು ಗದಗ ಜಿಲ್ಲೆಯಲ್ಲಿ ನಡೆದಿದೆ.
ನಾಲ್ಕು ದಿನಗಳಿಂದ ಪ್ರವಾಹದಲ್ಲಿ ಸಿಲುಕಿ ಹೊರಬರಲಾಗದೆ ನರಳುತಿದ್ದ ಶ್ವಾನವೊಂದು ಕೊನೆಗೂ ಈಜಿ ದಡ ಸೇರಿರುವ ಘಟನೆ ಗದಗ ಜಿಲ್ಲೆ ನರಗುಂದ ತಾಲೂಕಿನ ಕೊಣ್ಣೂರು ಸೇತುವೆ ಬಳಿ ನಡೆದಿದೆ. ಮಲಪ್ರಭಾ ನದಿಯ ಪ್ರವಾಹದಿಂದಾಗಿ ಕೊಣ್ಣೂರು ಗ್ರಾಮ ಸಂಪೂರ್ಣ ಜಲಾವೃತಗೊಂಡಿದೆ.
ಇದರಿಂದಾಗಿ ನದಿಯ ಪ್ರವಾಹಕ್ಕೆ ಸಿಲುಕಿದ ಶ್ವಾನವೊಂದು ಹೊರಬರಲಾಗದೆ ನಾಲ್ಕು ದಿನಗಳಿಂದ ನರಳಾಡುತಿತ್ತು. ಶ್ವಾನದ ನರಳಾಟ ಕಂಡ ಸ್ಥಳೀಯರು ಸಹ ಅಸಹಾಯಕತೆಯಲ್ಲಿದ್ದರು. ನಾಲ್ಕು ದಿನಗಳಿಂದ ಹಸಿವಿನಿಂದ ನರಳಿದ್ದ ಶ್ವಾನ ಬದುಕಬೇಕೆಂಬ ಛಲದಿಂದಾಗಿಯೇ ಕೊನೆಗೂ ಉಕ್ಕಿಹರಿಯುತ್ತಿರುವ ಮಲಪ್ರಭಾ ನದಿಯನ್ನು ಕಷ್ಟಪಟ್ಟು ಈಜಿ ದಡ ಸೇರಿದೆ!