ಪ್ಯಾಂಡೆಮಿಕ್ ಭೀತಿ ನಡುವೆಯೂ ರೋಚಕವಾಗಿ ನಡೆದ ಐಪಿಎಲ್ 2020 | A fascinating IPL 2020 amid pandemic apprehension

  • Publish Date - 5:53 pm, Wed, 11 November 20
ಪ್ಯಾಂಡೆಮಿಕ್ ಭೀತಿ ನಡುವೆಯೂ ರೋಚಕವಾಗಿ ನಡೆದ ಐಪಿಎಲ್ 2020 | A fascinating IPL 2020 amid pandemic apprehension

ಪ್ರೇಕ್ಷಕರ ಚೀರಾಟ-ಕೂಗಾಟ, ಮೋಹಕ ಚೀರ್ ಲೀಡರ್​ಗಳ ಮಾದಕ ನೃತ್ಯಗಳ ಅನುಪಸ್ಥಿತಿಯಲ್ಲೂ ಇಂಡಿಯನ್ ಪ್ರಿಮೀಯರ್ ಲೀಗ್ 13 ನೇ ಆವೃತ್ತಿಯು ಭಾರಿ ಯಶಸ್ಸಿನೊಂದಿಗೆ ಕೊನೆಗೊಂಡಿದೆ. ನಿರೀಕ್ಷೆಯಂತೆ ಕಳೆದ ವರ್ಷವೂ ಸೇರಿದಂತೆ 4 ಬಾರಿ ಪ್ರಶಸ್ತಿ ಗೆದ್ದಿದ್ದ ಮುಂಬೈ ಇಂಡಿಯನ್ಸ್ 5ನೇ ಬಾರಿಗೆ ಕಿರೀಟವನ್ನು ಮುಡಿಗೇರಿಸಿಕೊಂಡಿತು. ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ಚಾಂಪಿಯನ್ ಪಟ್ಟದ ಫೈಟ್​ನಲ್ಲಿ ನಿರೀಕ್ಷೆಗಿಂತ ಕೆಳಮಟ್ಟದ ಪ್ರದರ್ಶನ ನೀಡಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
ಈ ಸಲ ಟೂರ್ನಿ ನಡೆಯುವುದೇ ಅಸಾಧ್ಯವೆನ್ನುವಂಥ ಸ್ಥಿತಿಯಲ್ಲಿ ಭಾರತೀಯ ಕ್ರಿಕೆಟ್ನಿಯಂತ್ರಣ ಮಂಡಳಿಯು ಅದನ್ನು ಯುನೈಡೆಟ್ ಅರಬ್ ಎಮಿರೇಟ್ಸ್​ಗೆ ಸ್ಥಳಾಂತರಿಸಿ, ಖಾಲಿ ಮೈದಾನಗಳಲ್ಲಿ ಅಚ್ಚುಕಟ್ಟಾಗಿ ನಡೆಯುವಂತೆ ನೋಡಿಕೊಂಡಿತು. ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ಟೂರ್ನಿ ಆರಂಭಗೊಳ್ಳುವ ಮೊದಲೇ ಅಲ್ಲಿಗೆ ತೆರಳಿ, ಮಂಗಳವಾರದಂದು ಫೈನಲ್ ಮುಗಿಯುವವರೆಗೆ ಅಲ್ಲೇ ಉಳಿದು ಪಂದ್ಯಾವಳಿ ಸುಸೂತ್ರವಾಗಿ, ಸಾಂಗವಾಗಿ ನಡೆಯಲು ಯುಎಈ ಕ್ರಿಕೆಟ್ ಸಂಸ್ಥೆಗೆ ನಿರ್ದೇಶನ ಮತ್ತು ಮಾರ್ಗದರ್ಶನ ನೀಡಿದರು.

ಐಪಿಎಲ್ 2020 ಹಲವಾರು ದಾಖಲೆಗಳಿಗೆ, ಮೊದಲುಗಳಿಗೆ, ಅನಿರೀಕ್ಷಿತ ಫಲಿತಾಂಶಗಳಿಗೆ ಸಾಕ್ಷಿಯಾಯಿತು. ಮೂರು ಬಾರಿ ಟ್ರೋಫಿ ಗೆದ್ದಿರುವ ಮತ್ತು ಈ ಬಾರಿ ಗೆಲ್ಲುವ ಫೇವರಿಟ್​ ತಂಡಗಳಲ್ಲಿ ಒಂದಾಗಿದ್ದ ಮಹೇಂದ್ರಸಿಂಗ್ ನೇತೃತ್ವದ ಚೆನೈ ಸೂಪರ್ ಕಿಂಗ್ಸ್ ಅತ್ಯಂತ ಕಳಪೆ ಪ್ರದರ್ಶನ ನೀಡಿ 7ನೇ ಸ್ಥಾನದೊಂದಿಗೆ ಅಭಿಯಾನವನ್ನು ಮುಗಿಸಿದ್ದು ಈ ಸಲದ ಅತಿ ದೊಡ್ಡ ಅಚ್ಚರಿಯೆಂದರೆ ಉತ್ರೇಕ್ಷೆಯೆನಿಸದು. ಕ್ರಿಕೆಟ್ ವಲಯಗಳಲ್ಲಿ ‘ಡ್ಯಾಡೀಸ್ ಆರ್ಮಿ’ ಎಂದು ಕರೆಸಿಕೊಂಡ ಸಿಎಸ್​ಕೆ ತಂಡದಲ್ಲಿ ಮೆಜಾರಿಟಿ ಆಟಗಾರರು 30 ರಿಂದ 40ರ ವಯೋಮಾನದವರಾಗಿದ್ದರು. ಟೀಮಿನ ಪ್ರಮುಖ ಅಟಗಾರರಾಗಿದ್ದ 39 ವರ್ಷ ವಯಸ್ಸಿನ ಶೇನ್ ವಾಟ್ಸನ್ ಎಲ್ಲ ಬಗೆಯ ಕ್ರಿಕೆಟ್​ಗೆ ವಿದಾಯ ಘೋಷಿಸಿರುವುದರಿಂದ ಮುಂದಿನ ಐಪಿಎಲ್​ನಲ್ಲಿ ಕಾಣಿಸಲಾರರು. ಅವರಷ್ಟೇ ವಯಸ್ಸಿನವರಾಗಿರುವ ಧೋನಿ 2021 ರ ಸೀಸನಲ್ಲೂ ಆಡುವುದನ್ನು ಸ್ಪಷ್ಟಪಡಿಸಿದ್ದಾರೆ. ಕೇದಾರ್ ಜಾಧವ್, ಹರ್ಭಜನ್ ಸಿಂಗ್, ಇಮ್ರಾನ್ ತಾಹಿರ್, ಮುರಳಿ ವಿಜಯ್, ಫಫ್ ಡು ಪ್ಲೆಸ್ಸಿ ಮೊದಲಾದವರಿಗೆ ಸಿಎಸ್​ಕೆ ಧಣಿಗಳು ಮುಂದಿನ ಸೀಸನ್​ಗೆ ಗೇಟ್​ಪಾಸ್ ನೀಡಿದರೂ ಆಶ್ಚರ್ಯವಿಲ್ಲ. ಸುರೇಶ್ ರೈನಾ ಅವರ ಐಪಿಎಲ್ ಭವಿಷ್ಯ ಕೂಡ ಮಂಕಾಗಿದೆ. ಯುವ ಆಡಗಾರ ಋತುರಾಜ್ ಗಾಯಕ್ವಾಡ್ ಅವರ ಬ್ಯಾಟಿಂಗ್ ಮಾಜಿ ಅಟಗಾರರನ್ನು ಮತ್ತು ಕಾಮೆಂಟೇಟರ್​ಗಳನ್ನು ಬಹಳ ಇಂಪ್ರೆಸ್ ಮಾಡಿದೆ.

ಟೂರ್ನಿಯನ್ನು ಭರ್ಜರಿಯಾಗಿ ಆರಂಭಿಸಿ ನಂತರ ಮುಗ್ಗುರಿಸಿದ ಸ್ಟೀವ್ ಸ್ಮಿತ್ ನಾಯಕತ್ವದ ರಾಜಸ್ತಾನ್ ರಾಯಲ್ಸ್ ತಂಡ ಅಂತಿಮವಾಗಿ ಪಾಯಿಂಟ್ಸ್ ಟೇಬಲ್​ನಲ್ಲಿ ಕೊನೆ ಸ್ಥಾನ ಪಡೆಯಿತು. 14 ಪಂದ್ಯಗಳಲ್ಲಿ ರಾಯಲ್ಸ್ ಗೆದ್ದಿದ್ದು 6ರಲ್ಲಿ ಮಾತ್ರ. ಜೊಫ್ರಾ ಆರ್ಚರ್, ಜೊಸ್ ಬಟ್ಲರ್, ಬೆನ್ ಸ್ಟೋಕ್ಸ್ ಮತ್ತು ಕೊಂಚ ಮಟ್ಟಿಗೆ ನಾಯಕ ಸ್ಮಿತ್ ಮತ್ತು ಸಂಜು ಸ್ಯಾಮ್ಸ​ನ್ ಮಾತ್ರ ಮಿಂಚಿದರು. ಆರ್ಚರ್ ‘ಮೋಸ್ಟ್ ವ್ಯಾಲುಯೇಬಲ್ ಪ್ಲೇಯರ್ ಆಫ್ ದಿ ಟೂರ್ನಮೆಂಟ್’ ಪ್ರಶಸ್ತಿಗೆ ಪಾತ್ರರಾಗಿದ್ದೊಂದೇ ಸಮಾಧಾನಕರ ಅಂಶ.

ಕಿಂಗ್ಸ್ ಇಲೆವೆನ್ ಪಂಜಾಬ್ ಟೀಮಿನ ಕತೆ ಕೂಡ ಭಿನ್ನವಾಗಿಲ್ಲ. ಕನ್ನಡಿಗರೇ ಹೆಚ್ಚಿದ್ದ ಈ ಟೀಮು ಸುಲಭವಾಗಿ ಗೆಲ್ಲುಬಹುದಾದ ಪಂದ್ಯಗಳನ್ನು ಸೋಲುವುದು ಹೇಗೆ ಅನ್ನುವುದನ್ನು ಇತರರಿಗೆ ತೋರಿಸಿಕೊಟ್ಟಿತು. ಟೂರ್ನಿಯ ಮೊದಲಾರ್ಧದಲ್ಲಿ ದೈತ್ಯ ದಾಂಡಿಗ ಕ್ರಿಸ್ ಗೇಲ್ ಅವರನ್ನು ಕಡೆಗಣಿಸಿದ್ದು ಕೈ ಹಿಚುಕಿಕೊಳ್ಳುವಂತಾಯಿತು. ರನ್ ಗಳಿಕೆಯ ಕೆಲಸವನ್ನು ಕೇವಲ ರಾಹುಲ್ ಮತ್ತು ಮಾಯಾಂಕ್ ಅಗರ್​ವಾಲ್ ಮಾಡಿದರು. ಗ್ಲೆನ್ ಮ್ಯಾಕ್ಸ್​ವೆಲ್​ಗೆ 11 ಕೋಟಿ ರೂಪಾಯಿ ಕೊಟ್ಟು ಖರೀದಿಸಿದ್ದು ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಯಿತು. ಈ ಸೀಸನ್​ನಲ್ಲಿ ಅತಿಹೆಚ್ಚು ರನ್ (670) ಗಳಿಸಿದ ರಾಹುಲ್ ಸೀಸನೊಂದರಲ್ಲಿ ಮೂರು ಬಾರಿ 500ಕ್ಕಿಂತ ಹೆಚ್ಚು ರನ್ ಬಾರಿಸಿದ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು.

ಕೊಲ್ಕತಾ ನೈಟ್​ರೈಡರ್ಸ್ ನಾಯತಕ್ವದ ಗೊಂದಲಕ್ಕೆ ಸಿಕ್ಕು ತೊಳಲಾಡಬೇಕಾಯಿತು. ನಾಯಕರಾಗಿ ನಿಯುಕ್ತರಾಗಿದ್ದ ದಿನೇಶ್ ಕಾರ್ತೀಕ್ ಟೂರ್ನಿಯ ಅರ್ಧಭಾಗದಲ್ಲಿ ಅದನ್ನು ತ್ಯಜಿಸಿ, ಆಯಾನ್ ಮೊರ್ಗನ್​ಗೆ ವರ್ಗಾಯಿಸಿದರು. ಬ್ಯಾಟಿಂಗ್ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಲು ನಾಯಕತ್ವ ಬಿಡುತ್ತಿರುವುದಾಗಿ ಕಾರ್ತೀಕ್ ಹೇಳಿದರಾದರೂ, ಅವರ ಮೇಲೆ ಆ ಬಗ್ಗೆ ಒತ್ತಡ ಹೇರಲಾಗಿತ್ತು ಎಂಬ ಮಾತು ಸಹ ಕೇಳಿಬಂತು. ಶುಭ್​ಮನ್ ಗಿಲ್, ನಿತಿಷ್ ರಾಣಾ, ಮೊರ್ಗನ್ ಮತ್ತು ಯುವ ಬೌಲರ್​ಗಳಾದ ಶಿವಮ್ ಮಾವಿ ಹಾಗೂ ಕಮ್ಲೇಶ್ ನಾಗರಕೋಟಿ ಮೊದಲಾದವರು ಮಿಂಚಿದರು. ಆಂದ್ರೆ ರಸ್ಸೆಲ್, ಸುನಿಲ್ ನರೈನ್ ಮತ್ತು ಕಾರ್ತೀಕ್ ನಿರಾಸೆಗೊಳಿಸಿದರು. ಈ ಟೀಮಿಗೂ ಪ್ಲೇ ಆಫ್ ಹಂತ ತಲುಪುವ ಆವಕಾಶವಿತ್ತು. ಆದರೆ, ಕೊನೆಯ ಲೀಗ್ ಪಂದ್ಯದಲ್ಲಿ ಹೈದರಾಬಾದ್ ಟೀಮು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗೆದ್ದು ಅದರೆ ಆಸೆಯ ಮೇಲೆ ತಣ್ಣೀರೆರಚಿತು.

ಕೇವಲ ಇಬ್ಬರು ಕನ್ನಡಿಗರನ್ನು ಟೀಮಿಗೆ ಆರಿಸಿಕೊಂಡು ‘ಈ ಸಲ ಕಪ್ ನಮ್ದೇ’ ಎಂಬ ಘೋಷವಾಕ್ಯದೊಂದಿಗೆ ಅಭಿಯಾನ ಶುರುಮಾಡಿದ ರಾಯಲ್ ಚಾಲೆಂಲರ್ಸ್ ಬೆಂಗಳೂರು ಎಂದಿನಂತೆ ಕೋಟ್ಯಾಂತರ ಕನ್ನಡಿಗರ ಆಸೆಯುನ್ನು ನುಚ್ಚುನೂರುಗೊಳಿಸಿತು. ‘ಎಮರ್ಜಿಂಗ್ ಪ್ಲೇಯರ್’ ಗೌರವಕ್ಕೆ ಪಾತ್ರರಾದ 20 ವರ್ಷ ವಯಸ್ಸಿನ ಆರಂಭ ಆಟಗಾರ ದೇವದತ್ ಪಡಿಕ್ಕಲ್ ಅವರು ಸೀಸನ್ನಿನ ಶೋಧ ಎಂಬ ಸಮಾಧಾನವೊಂದನ್ನು ಬಿಟ್ಟರೆ ಕನ್ನಡಿಗರು ಹೆಮ್ಮೆಪಟ್ಟಕೊಳ್ಳವಂಥದ್ದೇನನ್ನೂ ಕೊಹ್ಲಿ ಸಾಧಿಸಲಿಲ್ಲ. ಎಬಿ ಡಿ ವಿಲಿಯರ್ಸ್ ಮತ್ತು ಖುದ್ದು ಕೊಹ್ಲಿ ಪ್ಯಾಚ್​ಗಳಲ್ಲಿ ಮಾತ್ರ ಮಿಂಚಿದರು. ಟೀಮಿನ ಮಿಡ್ಲ್ ಆರ್ಡರ್ ಅತ್ಯಂತ ಶಿಥಿಲವಾಗಿತ್ತು. ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಹಲ್ ಪ್ರತಿ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನಗಳನ್ನು ನೀಡಿದರು.

ಹೈದರಾಬಾದ ಫೈನಲ್ ಪ್ರವೇಶಿದೆ ಹೋಗಿದ್ದು ನಿಜಕ್ಕೂ ದುರಾದೃಷ್ಟ. ಡೇವಿಡ್ ವಾರ್ನರ್ ಅವರ ಟೀಮು ಮುಂಬೈ ನಂತರ ಅತ್ಯಂತ ಸಮತೋಲಿತ ತಂಡವಾಗಿತ್ತು. ವಾರ್ನರ್, ಕೇನ್ ವಿಲಿಯಮ್ಸನ್, ಜಾನಿ ಬೇರ್​ಸ್ಟೋ, ರಶೀದ್ ಖಾನ್, ಮನೀಶ್ ಪಾಂಡೆ, ಟಿ ಜಗದೀಶನ್ ಮತ್ತು ಸಂದೀಪ್ ಶರ್ಮ ನಿರ್ಣಾಯಕ ಪಂದ್ಯಗಳಲ್ಲಿ ಉತ್ತಮವಾಗಿ ಆಡಿದರು. ತನಗೆ ದೊರೆತ ಕೆಲವೇ ಅವಕಾಶಗಳಲ್ಲಿ ವೃದ್ಧಿಮಾನ್ ಸಹಾ ಚಾಂಪಿಯನ್​ನಂತೆ ಆಡಿದರು. ಜಗದೀಶನ್​ಗೆಉಜ್ವಲ ಭವಿಷ್ಯವಿದೆ. ಸೀಮಿತ ಓವರ್​ಗಳ ಪಂದ್ಯಗಳಲ್ಲಿ ಬಿಸಿಸಿಐ ಅವರನ್ನು ಉಪಯೋಗಿಸಿಕೊಳ್ಳುವ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. 

ಮುಂಬೈ ಮತ್ತು ಡೆಲ್ಲಿ ಫೈನಲ್ ತಲುಪಲು ಅತ್ಯಂತ ಅರ್ಹ ತಂಡಗಳಾಗಿದ್ದವು. ಡೆಲ್ಲಿಯ ವೇಗದ ಬೌಲರ್​ಗಳುಕಗಿಸೊ ರಬಾಡ ಮತ್ತು ಌನ್ರಿಖ್ ನೊರ್ಕಿಯ ಟೂರ್ನಿಯುದ್ದಕ್ಕೂ ಅತ್ಯುತ್ತುಮವಾಗಿ ದಾಳಿ ನಡೆಸಿದರು. ರಬಾಡ 30 ವಿಕೆಟ್​​​ಗಳನ್ನು ಕಬಳಿಸಿ ಪರ್ಪಲ್ ಕ್ಯಾಪ್ ತಮ್ಮದಾಗಿಸಿಕೊಂಡರು. ಸೀಸನಲ್ಲಿ ತಡವಾಗಿ ಫಾರ್ಮ್ ಕಂಡುಕೊಂಡ ಶಿಖರ್ ಧವನ್ ಬ್ಯಾಕ್ ಟು ಬ್ಯಾಕ್ ಶತಕಗಳನ್ನು ಬಾರಿಸಿ ದಾಖಲೆ ನಿರ್ಮಿಸಿದರು. ನಾಯಕ ಶ್ರೇಯಸ್ ಅಯ್ಯರ್ ಅವರ ನಾಯಕತ್ವ ಭಾರಿ ಪ್ರಶಂಸೆಗೆ ಪಾತ್ರವಾಯಿತು. ಯಂಗ್ ಗನ್​ಗಳಾದ ಪೃಥ್ವಿ ಶಾ ಮತ್ತು ರಿಷಬ್ ಪಂತ್ ಅವರಿಂದ ನಿರೀಕ್ಷಿತ ಮಟ್ಟದ ಕೊಡುಗೆಗಳು ಟೀಮಿಗೆ ಸಿಗಲಿಲ್ಲ.

ಮುಂಬೈ ತಂಡ ಸೋಲಿನೊಂದಿಗೆ ಆಭಿಯಾನ ಶುರುಮಾಡಿದರೂ ನಂತರದ ಪಂದ್ಯಗಳಲ್ಲಿ ಉತ್ಕೃಷ್ಟ ಪ್ರದರ್ಶನಗಳನ್ನು ನೀಡಿ 5ನೇ ಬಾರಿಗೆ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಸೂರ್ಯಕುಮಾರ್ ಯಾದವ್, ಇಶಾನ್ ಕಿಷನ್, ಕ್ವಿಂಟನ್ ಡಿ ಕಾಕ್ ಬ್ಯಾಟಿಂಗ್​ನಲ್ಲಿ ಅದ್ಭುತ ಪ್ರದರ್ಶನಗಳನ್ನು ನೀಡಿದರು. ನಾಯಕ ರೋಹಿತ್ ಅವರ ಗಾಯ ವಿವಾದದ ಕೇಂದ್ರವಾಗಿದ್ದು ಮಾಜಿ ಆಟಗಾರರ ಅಸಂಭದ್ಧ ಹೇಳಿಕೆಗಳಿಂದ. ಫೈನಲ್​ನಲ್ಲಿ ಅವರು ಸಮಯೋಚಿತ ಅರ್ಧ ಶತಕ ಬಾರಿಸಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಪೊಲ್ಲಾರ್ಡ್, ಹಾರ್ದಿಕ್ ಪಾಂಡೆ ಅವರಿಂದಲೂ ಕೆಲ ಉತ್ತಮ ಇನ್ನಿಂಗ್ಸ್​ಗಳು ಬಂದವು. ಆದರೆ, ಮುಂಬೈ ಟ್ರೋಫಿ ಗೆಲ್ಲಲು ಬಹಳ ಮಹತ್ವಪೂರ್ಣ ಕಾಣಿಕೆ ನೀಡಿದವರು ಜಸ್ಪ್ರೀತ್ ಬುಮ್ರಾ ಮತ್ತು ಟ್ರೆಂಟ್ ಬೌಲ್ಟ್. ವೇಗದ ಬೌಲರ್​ಗಳು ಜೋಡಿಯಾಗಿ ಬೇಟೆಯಾಡುತ್ತಾರೆಂದು ಹೇಳುವುದು ಕ್ರಿಕೆಟ್​ನ ಹಳೆಯ ಉಕ್ತಿ. ಅದನ್ನು ಈ ಬೌಲರ್​ಗಳು ಅಕ್ಷರಶಃ ಸಾಬೀತು ಮಾಡಿದರು.

ಒಟ್ಟಿನಲ್ಲಿ ಮುಂಬೈ ಐಪಿಎಲ್ 2020 ಗೆಲ್ಲಲು ಅರ್ಹ ತಂಡವಾಗಿತ್ತು, ಅದು ಗೆದ್ದಿದೆ. ಇನ್ನುಳಿದ್ದಿದ್ದೆಲ್ಲ ಈಗ ಇತಿಹಾಸ.