ಅನ್ನದಾತನೊಂದಿಗೆ ನಾವು: ಬಂದರೋ ಅಲ್ಲಮಪ್ರಭು, ಒಕ್ಕಲಿಗ ಮುದ್ದಣ್ಣ, ಇಳಿಹಾಳ ಬೊಮ್ಮಯ್ಯ, ಚೆನ್ನಬಸವಣ್ಣ…

’ಹಸಿರು ಕ್ರಾಂತಿಯಿಂದ ಆಹಾರೋತ್ಪಾದನೆಯಲ್ಲಿ ಗಣನೀಯ ಹೆಚ್ಚಳವಾಗಿ ಆಹಾರ ಭದ್ರತೆ ಸಾಧ್ಯವಾಯಿತು. ಜಾಗತೀಕರಣದ ಮುಖಾಂತರ ಸಮಾಜೋ ಆರ್ಥಿಕ ಸ್ಥಿತ್ಯಂತರವಾಯಿತು. ಜೀವ ವೈವಿಧ್ಯತೆ ತಗ್ಗಿ ಪರಿಸರ ನಾಶಕ್ಕೆ ಎಡೆಯಾಯಿತು. ಕೃಷಿ ಅಭಿವೃದ್ದಿಯಲ್ಲಿನ ಅಸಮತೋಲನದಿಂದ ಎಲ್ಲ ಪ್ರಮಾದಗಳು ‘ಉಳುವ ಒಕ್ಕಲು ಮಗನ ತಪ್ಪಾಗಿ’ ಅವನು ತನ್ನನ್ನು ‘ಒಪ್ಪಗೊಳ್ಳಲು’ ಸರಕಾರವೆಂಬ ಪರಮಾತ್ಮನನ್ನು ಬೇಡುವಂತಾಯಿತು.’ -ಚನ್ನಪ್ಪ ಅಂಗಡಿ.

  • TV9 WEB TEAM
  • Published On - 11:35 AM, 11 Jan 2021
ಅನ್ನದಾತನೊಂದಿಗೆ ನಾವು: ಬಂದರೋ ಅಲ್ಲಮಪ್ರಭು, ಒಕ್ಕಲಿಗ ಮುದ್ದಣ್ಣ, ಇಳಿಹಾಳ ಬೊಮ್ಮಯ್ಯ, ಚೆನ್ನಬಸವಣ್ಣ...
ಸಾಂದರ್ಭಿಕ ಚಿತ್ರ

ಅನ್ನ (ಆಹಾರ) ಮಾತ್ರವಲ್ಲ ಅದನ್ನು ಬೆಳೆಯುವ ರೈತನೂ ಪರಬ್ರಹ್ಮ ಎಂದ ದೇಶ ನಮ್ಮದು. ರೈತರ ಬದುಕು ಸಂಕಷ್ಟದಲ್ಲಿದೆ ಎನ್ನುವುದು ನಮ್ಮ ದೇಶದ ಮಟ್ಟಿಗೆ ಹಳೆಯ ಮಾತು. ಇದೀಗ ‘ದೆಹಲಿ ಚಲೋ’ ಚಳವಳಿಯ ನಂತರ ಇದೇ ಮಾತು ವಿಶ್ವಮಟ್ಟದಲ್ಲಿಯೂ ದೊಡ್ಡ ಸುದ್ದಿಯಾಯಿತು. ಇದನ್ನೇ ನೆಪವಾಗಿಸಿಕೊಂಡು ಸೃಜನಶೀಲ ಕಲೆಗಳಲ್ಲಿ ಅನ್ನದಾತನ ಬದುಕು ಹೇಗೆ ಬಿಂಬಿತವಾಗಿದೆ ಎಂಬುದನ್ನು ಶೋಧಿಸುವ ಪ್ರಯತ್ನವನ್ನು ಗಂಭೀರ ಓದುಗರು, ಲೇಖಕರು ಇಲ್ಲಿ ಮಾಡಿದ್ದಾರೆ. ಬೇಸಾಯ ಮತ್ತು ರೈತರನ್ನು ಕನ್ನಡ ಪರಂಪರೆ ಕಂಡ ಬಗೆಯ ಬಗ್ಗೆ ಲೇಖನ ಸರಣಿಯನ್ನು tv9 ಕನ್ನಡ ಡಿಜಿಟಲ್ ಆರಂಭಿಸಿದೆ. ಇಂದು ಧಾರವಾಡದ ಸಹಾಯಕ ಕೃಷಿ ನಿರ್ದೇಶಕ, ಕವಿ, ಚನ್ನಪ್ಪ ಅಂಗಡಿ ಅವರು ಬರೆದಿದ್ದಾರೆ. ಓದಿ, ನಿಮ್ಮ ಪ್ರತಿಕ್ರಿಯೆ ಹಂಚಿಕೊಳ್ಳಿ. 

 

ತನುವ ತೋಂಟವ ಮಾಡಿ, ಮನವ ಗುದ್ದಲಿ ಮಾಡಿ
ಅಗೆದು ಕಳೆದೆನಯ್ಯಾ ಭ್ರಾಂತಿನ ಬೇರ.
ಒಡೆದು ಸಂಸಾರದ ಹೆಂಟೆಯ ಬಗಿದು ಬಿತ್ತೆದೆನಯ್ಯಾ ಬ್ರಹ್ಮಬೀಜವ
ಅಖಂಡಮಂಡಲವೆಂಬ ಬಾವಿ, ಪವನವೆ ರಾಟಾಳ
ಸುಷುಮ್ನ ನಾಳದಿಂದ ಉದಕವ ತಿದ್ದಿ
ಬಸವಗಳೈವರು ಹಸಗೆಡಿಸಿಹವೆಂದು
ಸಮತೆ ಸೈರಣೆ ಎಂಬ ಬೇಲಿಯನಿಕ್ಕಿ
ಆವಾಗಳೂ ಈ ತೋಂಟದಲ್ಲಿ ಜಾಗರವಿದ್ದು
ಸಸಿಯ ಸಲುಹಿದೆನು ಕಾಣಾ ಗುಹೇಶ್ವರಾ.
-ಅಲ್ಲಮ ಪ್ರಭು

ಕೃಷಿ ಪರಿಸರದ ಪಾರಿಭಾಷಿಕ ಪದಗಳ ಮುಖಾಂತರ ತಮ್ಮ ವಿಚಾರಧಾರೆಯನ್ನು ಪರಿಣಾಮಕಾರಿಯಾಗಿ ವ್ಯಕ್ತಪಡಿಸಲು ನಮ್ಮ ಅನೇಕ ವಚನಕಾರರು ಪ್ರಯತ್ನಿಸಿ ಯಶಕಂಡಿದ್ದಾರೆ. ಈ ಪೈಕಿ ಅಲ್ಲಮ ಪ್ರಭುಗಳದು ವಿಶಿಷ್ಟ ಧ್ವನಿ. ಕೃಷಿ ಪರಿಸರ ವ್ಯವಸ್ಥೆ, ಮನುಷ್ಯ ಜೀವನ, ಶರೀರ–ಆತ್ಮವನ್ನು ಒಂದು ನೂಲಿನಲ್ಲಿ ಸಮೀಕರಿಸಿದ, ಮೇಲೆ ಪ್ರಸ್ತಾಪಿಸಿದ ಅವರ ವಚನ ಬಹಳ ಮಾರ್ಮಿಕವಾಗಿದೆ. ಅಲ್ಲಮಪ್ರಭು, ಗೊಗ್ಗಯ್ಯನೆಂಬ ಶರಣನಿಗೆ ಜೀವನ ಸಾಕ್ಷಾತ್ಕಾರದ ಮಾರ್ಗದರ್ಶನ ಮಾಡುತ್ತ ಹೇಳಿದ ವಚನ ಇದಾಗಿದೆ. ದೇಹವೆಂಬ ತೋಟದಲ್ಲಿ ಅಧ್ಯಾತ್ಮದ ಸಸಿಯನ್ನು ನೆಟ್ಟು ಅನುಭಾವದ ಪೈರು ತೆಗೆಯುವ ಪರಿಯನ್ನು ಹೇಳುವ ವಚನ ಮನೋಜ್ಞವಾಗಿದೆ.

ಸಾಧಕ ವ್ಯಕ್ತಿಗಳನ್ನು ಅಂತರಂಗದ ಸಾಧನೆಗೆ ತೊಡಗಿಸುವ ಅಲ್ಲಮನ ರೀತಿ ಅಮೋಘವಾಗಿದೆ. ಕೃಷಿ ಯಾವುದೇ ಪ್ರಮಾಣದಲ್ಲಿರಲಿ ಅದು ನಿಸರ್ಗದ ಪ್ರತಿಕೃತಿಯಾಗಿರುತ್ತದೆ ಎಂಬುದನ್ನು ಈ ವಚನವು ಯಶಸ್ವಿಯಾಗಿ ಹೇಳುತ್ತದೆ. ವ್ಯವಸಾಯದ ಕ್ರಮಗಳನ್ನು ಹೇಳುತ್ತ ಅಲ್ಲಮ ಮನುಷ್ಯನ ಮನೋಧರ್ಮದಲ್ಲಾಗಬೇಕಾದ ಪರಿವರ್ತನೆಗಳನ್ನು ಪ್ರತಿಪಾದಿಸುತ್ತಿದ್ದಾನೆ. ಭೂಮಿಯನ್ನು ಉಳುಮೆ ಮಾಡುವಂತೆ ಮನಸ್ಸನ್ನು ಸೂಕ್ತ ಉಪಕರಣಗಳಿಂದ ಅಗೆದು, ಹರಗಿ, ಸಮತಟ್ಟು ಮಾಡಿ ಉಳುಮೆ ಮಾಡಬೇಕಾಗಿದೆ. ನಮ್ಮಲ್ಲಿರುವ ಭ್ರಮೆ- ಭ್ರಾಂತಿಯೆಂಬ ಕಳೆಯನ್ನು ಬೇರು ಸಮೇತ ಕಿತ್ತೊಗೆಯಬೇಕಾಗಿದೆ. ಈ ಪ್ರಾಪಂಚಿಕ ಬದುಕೆಂಬುದು ಹೆಂಟೆಗಳ ರಾಶಿಯಿದ್ದಂತೆ; ಅದೂ ಎರೆಭೂಮಿಯನ್ನು ಆಳವಾಗಿ ಊಳಿದಾಗ ಬೀಳುವ ಮಣಭಾರದ ಹೆಂಟೆಗಳು. ಅವುಗಳ ಮೇಲೆ ನಡೆದುಕೊಂಡು ಹೋಗುವ ಪರಿಯನ್ನು ನೆನೆದರೆ ಯಾರಿಗಾದರೂ ಆ ದುರ್ಗಮತೆಯ ಅರಿವು ಬಂದೀತು. ಅಂತಹ ಅಡೆತಡೆಗಳನ್ನು ಒಡೆದು, ಹುಡಿಮಾಡಿ ನೆಲವನ್ನು ಹದಗೊಳಿಸಿ ಬೀಜ ಬಿತ್ತಿದಂತೆ ವೈಚಾರಿಕತೆಯನ್ನು ಬಿತ್ತಬೇಕು; ಮನದಲ್ಲಿ ಜ್ಞಾನವೆಂಬ ಬೀಜವನ್ನು ಬಿತ್ತಬೇಕು. ಬೆಳೆಯ ಸಂದಿಗ್ಧ ಹಂತದಲ್ಲಿ ನೀರನ್ನೊದಗಿಸುವ ಬಾವಿ ಇಡೀ ಭೂಮಂಡಲವನ್ನೇ ವ್ಯಾಪಿಸಿದೆ. ಅದು ನೀರಿನ ಚಕ್ರದಲ್ಲಿ ಒಂದಾಗಿ ಸೇರಿಹೋಗಿದೆ. ಭೂಮಿಗೂ ಆಕಾಶಕ್ಕೂ ಮಧ್ಯದಲ್ಲಿರುವ ವಾತಾವರಣದಾದ್ಯಂತ ಅಣುವಿನ ರೂಪದಲ್ಲಿ ಗಾಳಿಯೊಂದಿಗೆ ಗಾಳಿಯಾಗಿ ಪಸರಿಸಿಕೊಂಡಿದೆ. ಆ ಪವನವೇ ನೀರನ್ನು ಎತ್ತಿಕೊಡುವ ರಾಟಾಳದಂತೆ ಕೆಲಸ ಮಾಡುತ್ತಿದೆ. ಇಡಾ, ಪಿಂಗಳ, ಸುಷುಮ್ನನಾಳದ ಮುಖಾಂತರ ನೀರನ್ನು ಹರಿಸಬೇಕಾಗಿದೆ. ಜೀವ ಜಲವಾದ ನೀರು ತನ್ನಲ್ಲಿ ನಾನಾ ಬಗೆಯ ಸತ್ವಾಂಶಗಳನ್ನು ಅರಗಿಸಿಕೊಂಡು ಪ್ರತಿಹಂತದ ಬೆಳವಣಿಗೆಗೆ ಕಾರಣವಾಗುತ್ತದೆ. ಹೀಗೆ ಹಚ್ಚಹಸುರಾಗಿ ಬೆಳೆದು ನಿಂತ ಬೆಳೆಯನ್ನು ಹೊಕ್ಕು ಮೇಯಲು ಸುತ್ತಮುತ್ತಲ ತುಡುಗುಣಿಗಳು ಕಾಯುತ್ತಿವೆ. ಅವುಗಳಿಂದ ಬೆಳೆಯನ್ನು ರಕ್ಷಿಸಿಕೊಳ್ಳಲು ಸಮತೆ ಸೈರಣೆಗಳೆಂಬ ಬೇಲಿಗಳನ್ನು ಕಟ್ಟಬೇಕಾಗಿದೆ. ಆಂತರಿಕ ಪ್ರಜ್ಞೆಯಾಗಿ ಸದಾಕಾಲ ಇರಬೇಕಾದ ಜಾಗರ-ಜಾಗ್ರತೆಯನ್ನು ಸಸಿಯಂತೆ ಸಲುಹಬೇಕಾಗಿದೆ. ಕೃಷಿ

ವ್ಯವಸ್ಥೆ ಮತ್ತು ಮಾನವ ಶರೀರಗಳೆರಡೂ Miniatures of nature ಆಗಿವೆ ಎಂದು ಹೇಳುವ ಅಲ್ಲಮನ ಮಾತು ಎಷ್ಟು ಅರ್ಥಪೂರ್ಣ, ಎಷ್ಟು ಭಾವಪೂರ್ಣ ಮತ್ತು ಎಷ್ಟು ವೈಜ್ಞಾನಿಕವಲ್ಲವೆ ?

ಅಂಗವೆ ಭೂಮಿಯಾಗಿ, ಲಿಂಗವೆ ಬೆಳೆಯಾಗಿ,
ವಿಶ್ವಾಸವೆಂಬ ಬತ್ತ ಒಲಿದು ಉಂಡು
ಸುಖಿಯಾಗಿರಬೇಕೆಂದ ಕಾಮಭೀಮ ಜೀವಧನದೊಡೆ
 -ಒಕ್ಕಲಿಗ ಮುದ್ದಣ್ಣ

ಗಾತ್ರದಲ್ಲಿ ಚಿಕ್ಕದಾದರೂ ತುಂಬಾ ಸುಂದರವಾದ ವಚನ ಇದಾಗಿದೆ. ಮೇಲ್ನೋಟಕ್ಕೆ ಸರಳವಾಗಿ ಕಾಣುವ ಇಲ್ಲಿನ ಸಾಲುಗಳು ಆಳವಾದ ಅರ್ಥವನ್ನು ಹೊಮ್ಮಿಸುವಂತಿವೆ.

ಕೃಷಿ ಪರಿಸರದ ಪರಿಭಾಷೆಯಲ್ಲಿ ಜೀವನ ಮೌಲ್ಯಗಳನ್ನು, ತತ್ವ ರಸಾನುಭವಗಳನ್ನು, ಆಧ್ಯಾತ್ಮ ಸಾಧನೆಗಳನ್ನು, ಆತ್ಮಸಾಕ್ಷಾತ್ಕಾರವನ್ನು ನಿರ್ದೇಶಿಸುವುದು ಮುದ್ದಣ್ಣನ ಕಾವ್ಯಶೈಲಿ. ಸ್ವತಃ ಕೃಷಿಕನಾದ ಒಕ್ಕಲಿಗ ಮುದ್ದಣ್ಣ ‘ಅಂಗವೆ ಭೂಮಿಯಾಗಿ, ಲಿಂಗವೆ ಬೆಳೆಯಾಗಿ’ ಎಂದು ಹೇಳುವಲ್ಲಿ ಅಪಾರವಾದ ಶರಣಪ್ರಜ್ಞೆ ಎದ್ದು ಕಾಣುತಿದೆ. ಅಂಗ, ಭೂಮಿ, ಲಿಂಗ, ಬೆಳೆ ಈ ನಾಲ್ಕು ಸಂಗತಿಗಳು ಐಹಿಕ ಲೋಕದ ವಸ್ತುಗಳು. ಇವೆಲ್ಲಕ್ಕೂ ತನ್ನದೇ ಆದ ಉದ್ದೇಶಗಳಿವೆ. ಅದರೊಂದಿಗೆ ಪರಿಣಾಮಗಳಿವೆ. ಪ್ರಾಪಂಚಿಕ ಬದುಕಿನಲ್ಲಿ ಅವಿರುವಂತೆಯೇ ನೋಡಿದರೆ ಅವು ಕೇಲವ ಮ್ಯಾಟರ್, ದ್ರವ್ಯ ಮಾತ್ರ. ಆದರೆ ಇಲ್ಲಿ ಅಂಗ-ಭೂಮಿ; ಲಿಂಗ-ಬೆಳೆ ಶಬ್ದಗಳು ನುಡಿಗಟ್ಟುಗಳಾಗಿ ಬಂದಾಗ ಪ್ರಾಪ್ತವಾಗುವ ಅರ್ಥ ಸಿರಿವಂತಿಕೆ ಶರಣರ ಭಾಷೆಯಲ್ಲಿಯೇ ಹೇಳುವುದಾದರೆ – ಮಹಾಘನ. ವಚನಕಾರರು ಹೇಳುವ ಲಿಂಗಾಂಗ ಸಾಮರಸ್ಯದ ಧ್ವನಿ ಇಲ್ಲಿ ‘ಶಿಲೆಯೊಳಗಣ ಪಾವಕನಂತೆ, ಉದಕದೊಳಗಣ ಪ್ರತಿಬಿಂಬದಂತೆ, ಬೀಜದೊಳಗಣ ವೃಕ್ಷದಂತೆ, ಶಬ್ದದೊಳಗಣ ನಿಶ್ಯಬ್ದದಂತೆ ಅಳವಡಲ್ಪಟ್ಟಿದೆ, ಪಸರಿಸಿದೆ, ಹೊಳೆಯುತಿದೆ, ಬೆಳಗುತಿದೆ. ವಸ್ತುವಸ್ತುಗಳ ನಡುವಿರುವ ಕಾರ್ಯಕಾರಣ ಸಂಬಂಧವನ್ನು ಇದು ಧ್ವನಿಸುತ್ತದೆ. ಇಲ್ಲಿ ಐನ್‍ಸ್ಟೀನ್‍ನ ಸಾಪೇಕ್ಷ ಸಿದ್ಧಾಂತದ ಛಾಯೆ ಇದೆಯೇನೋ ಅನ್ನಿಸುತ್ತದೆ.

ಸಾಂದರ್ಭಿಕ ಚಿತ್ರ

ಇಳಿಹಾಳ ಬೊಮ್ಮಯ್ಯನೂ ಕೃಷಿ ಕಾಯಕದ ವಚನಕಾರನಾಗಿದ್ದು ಆತ ವಚನ ರಚಿಸಿದ ಬಗ್ಗೆ ದಾಖಲೆಗಳಿಲ್ಲ. ಬಿತ್ತುವ ಬೀಜವನ್ನು ಜಂಗಮರಿಗೆ ಹಂಚಿದನೆಂಬ ಕಥೆಯಿದೆ. ಆದರೆ ನಗೆಯ ಮಾರಿ ತಂದೆ, ನಗಿಸುವದನ್ನೇ ತನ್ನ ಕಾಯಕ ಮಾಡಿಕೊಂಡ ಶರಣನಾಗಿದ್ದು ಅಪ್ಪಟ ಕೃಷಿ ವಸ್ತುವನ್ನಿಟ್ಟುಕೊಂಡು ಹೀಗೆ ಹೇಳುತ್ತಾನೆ,

ಬೀಜವೊಡೆದು ಮೊಳೆಯಂಕುರಿಸುವಾಗ ಎಲೆ ಎಲ್ಲಿದ್ದಿತ್ತು?
ಎಲೆ ಸುಳಿಬಿಟ್ಟು ಕವಲುವಾಗ ಶಾಖೆಯಲ್ಲಿದ್ದಿತ್ತು?
ಶಾಖೆ ಒಡೆದು ಕುಸುಮ ತೋರುವಾಗ ಫಲವೆಲ್ಲಿದ್ದಿತ್ತು?
ಫಲ ಬಲಿದು ರಸ ತುಂಬುವಾಗ ಸವಿಯಲ್ಲಿದ್ದಿತ್ತು?
ಸವಿಯ ಸವಿದು ಪರಿಣತೆಗೊಂಬಾಗ ಅದೇತರೊದಗು?
ಇಷ್ಟರಿ ನೀಲೆಯನರಿ, ಆತುರವೇರಿ ಮಾರೇಶ್ವರಾ.
-ಇಳಿಹಾಳ ಬೊಮ್ಮಯ್ಯ

ಪ್ರಶ್ನೆಗಳ ಸರಣಿಯನ್ನೇ ಹೊತ್ತ ಈ ವಚನ ಸಸ್ಯ ಜೀವನಚಕ್ರದ ಪ್ರಾತ್ಯಕ್ಷಿಕೆಯಂತಿದೆ. ಇದನ್ನು ಪ್ರಭುದೇವ ‘ಬೀಜದೊಳಗಿನ ವೃಕ್ಷದಂತೆ’ ಎಂದು ಒಂದೇ ಮಾತಿನಲ್ಲಿ ಹೇಳಿಬಿಡುತ್ತಾನೆ.

ಒಕ್ಕಲುತನ ಮತ್ತು ಗೋಸಾಕಾಣಿಕೆ ಕಾಯಕದ ಕೀಲಾರದ ಭೀಮಣ್ಣ ತನ್ನ ಮತ್ತೊಂದು ವಚನದ ಮೂಲಕ ಹೇಳುತ್ತಾನೆ,

ತೊಗಟೆಯೊಳಗಣ ಬೀಜ
ಬೀಜದೊಳಗಣ ಅಂಕುರ
ಸಾರಸಸಿ ರೂಪದೋರದೆ ವೇಧಿಸಿಕೊಂಡಿಪ್ಪಂತೆ.
ಇಂತೀ ಕ್ರೀಯೊಳಗಣ  ಭಾವ,
ಭಾವದೊಳಗಣ ಜ್ಞಾನ, ಜ್ಞಾನದೊಳಗಣ ಅರಿವು.
ಅರಿವಿನೊಳಗಣ ನಿಜದ ಬೆಳಗಿನ ಮಹಾಕಲೆಯನೊಳಕೊಂಡ
ಘನಮಹಿಮಂಗೆ ಹಿಡಿದಹೆನೆಂಬ ಭಾವದ ಭ್ರಮೆಯಿಲ್ಲ ;
ಬಿಟ್ಟಿಹೆನೆಂಬ ಕಟ್ಟಿನ ಸೂತಕವಿಲ್ಲ.
ಕಾಲಕರ್ಮವಿರಹಿತ
ತ್ರಿಪುರಾಂತಕಲಿಂಗವೆಂಬಲ್ಲಿ ತಾನು ತಾನಾದ ಶರಣ.
-ಕೀಲಾರದ ಭೀಮಣ್ಣ

ಸಿಪ್ಪೆ (Testa)ಯೊಳಗೆ ಬೀಜವಿದೆ, ಬೀಜದೊಳಗೆ ಅಂಕುರ (Embryo) ವಿದೆ. ಅದನ್ನು ಪೋಷಿಸಿ ಬೆಳೆಸುವ ಸಾರಸಸಿ (Endosperm) ಕೂಡ ಇದೆ. ಆದರೆ ಮತ್ತೊಂದು ಸಸಿಯಾಗಿ ಬೆಳೆಯುವ ಚೈತನ್ಯ ಹೊರಗಣ್ಣಿಗೆ ಕಾಣುವುದಿಲ್ಲ. ಸೂಕ್ತ ವಾತಾವರಣ (Environment) ದೊರೆತಾಗ, ಬೀಜದೊಳಗಿನ ಮೂರು ಭಾಗಗಳು ಕ್ರಿಯೆಯೊಳಗಾಗುತ್ತವೆ. ಅವು ಒಂದಕ್ಕೊಂದು ಪೂರಕವಾಗಿ ವರ್ತಿಸಿದಾಗ ಸ್ವಾವಲಂಬಿ, ಪ್ರತ್ಯೇಕ ಸಸ್ಯ ಹುಟ್ಟಿ ಬರುತ್ತದೆ.

ನೀ ಕೊಟ್ಟ ಭೂಮಿಗೆ ಮುಂದೆ ಕರಲು, ಹಿಂದೆ ಇಗ್ಗರಲು,
ಅಲ್ಲಿಂದ ಆಚೆ ಮಧ್ಯಭೂಮಿ.
ಮೂರು ನೆಲದ ಭೂಮಿಯ ಆರೈದು ಬೆಳೆದಿಹನೆಂದಡೆ,
ಇದಾರ ವಶವೂ ಅಲ್ಲ,
ಕಾಮಭೀಮ ಜೀವಧನದೊಡೆಯ ನೀನೆ ಬಲ್ಲೆ.
-ಒಕ್ಕಲಿಗ ಮುದ್ದಣ್ಣ

ಬೆಳೆಯನ್ನು ಯಶಸ್ವಿಯಾಗಿ ಬೆಳೆದು ಫಸಲು ಪಡೆಯಲು ನೆಲ ಮುಖ್ಯವಾದ ಆಧಾರ. ಅದೇ ರೀತಿ ಭಕ್ತಿಯ ಪೈರನ್ನು ಬೆಳೆಯಲು ಮನುಷ್ಯನ ಮನಸ್ಸು ಮುಖ್ಯ. ದೇವರು ಕೊಟ್ಟ ಭೂಮಿ -ಪ್ರಕೃತಿ ದಯಪಾಲಿಸಿದ ಸಂಪನ್ಮೂಲ- ಕರಲಾಗಿಬಿಟ್ಟಿದೆ. ಕರಲಾದ ಎರೆಭೂಮಿ ಮೇಲೆ, ಅದೂ ಬೇಸಿಗೆಯಲ್ಲಿ ಬರಿಗಾಲಿನಿಂದ ನಡೆದವರಿಗೆ ಅದರ ಅನುಭವ ಸರಿಯಾಗಿಯೇ ಆಗಿರುತ್ತದೆ. ಅಂಥ ನೆಲವು, ಮುಳ್ಳಿನ ಮೇಲೆ ಓಡಾಡಿದ ಭಾವನೆಯನ್ನು ಮೂಡಿಸುತ್ತದೆ. ಮುದ್ದಣ್ಣ ಹೇಳುತ್ತಾನೆ, ತನಕೆ ದಕ್ಕಿರುವ ಭೂಮಿ ಇನ್ನೂ ಮುಂದೆ ಹೋಗಿ ನೋಡಿದರೆ ಅದು ಅತೀ ಕರಲು. ಮತ್ತಿನ್ನುಳಿದ ಭೂಮಿ ಮಧ್ಯಮ ತರದ್ದು. ಇದರಲ್ಲಿ ಪೈರು ಬೆಳೆಯುವ ಬಗೆಯಾದರೂ ಹೇಗೆ? ಈ ಮೂರು ಪ್ರಕಾರದ ಭೂಮಿಯನ್ನು ಪರೀಕ್ಷಿಸಿ ಬೆಳೆಯೋಣವೆಂದರೆ ಅದೂ ಸಾಧ್ಯವಾಗದು. ಪಶುಪತಿಯಾದ ದೇವನಿಗೆ ಮಾತ್ರ ಇದರ ಮರ್ಮ ಗೊತ್ತಿದೆ. ಇಲ್ಲಿ ಮುದ್ದಣ್ಣ ತಾನು ಉಳುವ ಭೂಮಿಯ ಗುಣವನ್ನು ಮುಂದೆಮಾಡಿ ಮನಸ್ಸೆಂಬ ಭೂಮಿಯಲ್ಲಿ ತಾನು ಮಾಡಬೇಕಾದ ಅಧ್ಯಾತ್ಮ ಕೃಷಿಯ ಕುರಿತಾಗಿ ಹೇಳಿದ್ದಾನೆ. ಮನುಷ್ಯ ಅಳವಡಿಸಿಕೊಳ್ಳಬೇಕಾದ ಅಂತರಂಗದ ಬೇಸಾಯದ ಬಗ್ಗೆ ಸೂಚನೆ ನೀಡಿದ್ದಾನೆ.

ಒಮ್ಮೆ ನೆಲದಲ್ಲಿ ಬಿತ್ತಿದ ಬಿತ್ತುವ ಕಿತ್ತಿ ಕಿತ್ತಿ
ಮತ್ತೆ ಬಿತ್ತುತ್ತ ಹೋದಡೆ,
ಆ ಬಿತ್ತು ಮೊಳೆತು ಕಳೆಯೇರಿ ಬೆಳೆದು
ಬೆಳಸನೀವ ಪರಿಯಿನ್ನೆಂತೊ ಮರಳು ಮಾನವಾ ?
ಗುರುವಿತ್ತ ಲಿಂಗವ ತೊರೆ ತೊರೆದು
ಮರಳಿ ಮರಳಿ ಧರಸಿದಡೆ
ಆ ಇಷ್ಟಲಿಂಗವು ಅನಿಷ್ಟವ ಕಳೆದು
ಇಷ್ಟಾರ್ಥವನೀವ ಪರಿಯಿನ್ನೆಂತೊ ?
ಇದು ಕಾರಣ ಕೂಡಲ ಚೆನ್ನಸಂಗಯ್ಯನಲ್ಲಿ
ಮುಕ್ತಿಯನರಸುವಡೆ
ಅಂಗನಲ್ಲಿ ಹೆರೆಹಿಂಗದೆ ಲಿಂಗವ ಧರಿಸಬೇಕು.
-ಚೆನ್ನಬಸವಣ್ಣ

ಮನುಷ್ಯ ಲಿಂಗದಲ್ಲಿ ಇರಿಸಬೇಕಾದ ಅಚಲ ಶ್ರದ್ಧೆ ಎಷ್ಟು ಮುಖ್ಯವೆಂಬುದು ಚೆನ್ನಬಸವಣ್ಣನಿಗಿಂತಲೂ ಹೆಚ್ಚು ಬಲಯುತವಾಗಿ ಬೇರೆ ಯಾರು ಹೇಳಬಲ್ಲರು? ಒಮ್ಮೆ ನೆಲದಲ್ಲಿ ಊರಿದ ಬೀಜವಿರಬಹುದು, ಸಸಿಯಿರಬಹುದು ಅಥವಾ ಸ್ವತಂತ್ರ ಸಸ್ಯವಾಗಿ ಬೆಳೆಯಬಹುದಾದ ಯಾವುದೇ ಭಾಗವಿರಬಹುದು, ಬಹಳ ಮುಖ್ಯವಾಗಿ ಅದಕ್ಕೊಂದು ಸ್ಥಿರತೆ ಬೇಕು. ಹದವಾದ ಮಣ್ಣಿನ ಸಂಪರ್ಕಕ್ಕೆ ಬಂದು, ನಿರಂತರ ಜೈವಿಕ ಚಟುವಟಿಕೆಗಳು ಕೋಶಕೋಶದಲ್ಲಿ ನಡೆಯಬೇಕು. ತಾತ್ಕಾಲಿಕವಾಗಿ ನಿಶ್ಚಲಗೊಂಡ (Dormant) ಜೀವ, ಮತ್ತೊಂದು ಜೀವನ ಚಕ್ರದಲ್ಲಿ ತಿರುಗುವ ಶಕ್ತಿ ಸಾಮರ್ಥ್ಯವನ್ನು ಪಡೆಯಬೇಕು. ಜೀವ ಸ್ಫುರಿಸಲು ಸಜ್ಜುಗೊಂಡ ಸೂಕ್ತ ವಾತಾವರಣದಲ್ಲಿ ‘ಬಿತ್ತುವ’ (Propagule) ದೃಢತೆಯಿಂದ ಒಂದಾಗಬೇಕು. ಕ್ರಿಯಾಶೀಲತೆ ಜೊತೆಗೆ ಕ್ರಿಯಾ ಸ್ಥಿರತೆಯೂ ಮುಖ್ಯವಾಗುವ ವಿಶಿಷ್ಟ ಸಂದರ್ಭವಿದು. ಅದಕ್ಕೆ ಹೊರತಾಗಿ ಅದೇ ಬೀಜವನ್ನು ಕಿತ್ತು ಕಿತ್ತು ಎಲ್ಲೆಂದರಲ್ಲಿ ನೆಡುತ್ತ ಹೋದರೆ ಅದು ಬೇರು ಬಿಡುವದಿಲ್ಲ. ಸಸಿಯಾಗಿ ಬೆಳೆಯುವ ಯಾವ ಉದ್ದೇಶಕ್ಕಾಗಿ ಪ್ರಕೃತಿ ಬೀಜಕ್ಕೆ ಪಾತ್ರ ನೀಡಿದೆಯೋ ಆ ಉದ್ದೇಶ ಈಡೇರಿಕೆಯಾಗದು.

ಪೈರಿಗೆ ನೀರು ಬೇಕೆಂಬಲ್ಲಿ ಉಚಿತವನರಿದು ಬಿಡಬೇಕು.
ಕ್ರಿಯೆಗೆ ಅರಿವು ಬೇಕೆಂಬಲ್ಲಿ ಉಭಯನರಿದು ಘಟಿಸಬೇಕು.
ಏರಿ ಹಿಡಿವನ್ನಕ್ಕ ನೀರ ಹಿಡಿದಡೆ ಸುಖವಲ್ಲದೆ ಮೀರಿದರುಂಟೆ?
ಕ್ರಿಯೆ ಬಿಡಲಿಲ್ಲ, ಅರಿವ ಮರೆಯಲಿಲ್ಲ.
ಬೆಳೆಯ ಕೊಯಿದ  ಮತ್ತೆ ಹೊಲಕ್ಕೆ ಕಾವಲುಂಟೆ ?
ಫಲವ ಹೊತ್ತ ಪೈರಿನಂತೆ, ಪೈರಿನೊಳಕೊಂಡ ಫಲದಂತೆ
ಅರಿವು ಆಚರಣೆಯಲ್ಲ ನಿಂದು,
ಆಚರಣೆ ಅರಿವಿನಲ್ಲಿ ಲೇಪನಾದ ಮತ್ತೆ
ಕಾಮಭೀಮ ಜೀವಧನನೊಡೆಯನೆಂಬುದ ಭಾವಿಸಲಿಲ್ಲ.
-ಒಕ್ಕಲಿಗ ಮುದ್ದಣ್ಣ

ಈ ವಚನವು ಅರಿವು ಆಚಾರಗಳ ಅಂದರೆ ಜ್ಞಾನ ಮತ್ತು ಕ್ರಿಯೆಗಳ ಹೊಂದಾಣಿಕೆ ಕುರಿತು ವಿಶ್ಲೇಷಿಸುತ್ತದೆ. ಜ್ಞಾನವು ಕ್ರಿಯೆಯಲ್ಲಿ ಮೂಡಿಬಂದಾಗ ಮಾತ್ರ ಸಾರ್ಥಕ ಎಂಬ ಅಭಿಪ್ರಾಯ ಇಲ್ಲಿದೆ.

ಬೆಳೆದ ಪೈರಿಗೆ ನೀರು ಬೇಕಾದಾಗ ಉಚಿತವರಿತು ಸರಿಯಾದ ಪ್ರಮಾಣದಲ್ಲಿ ಬಿಡಬೇಕು. ಅದೇ ರೀತಿ ಕ್ರಿಯೆಗೆ ಜ್ಞಾನವು ಬೇಕೆನ್ನುವಾಗ ಎರಡನ್ನೂ ಅರಿತು ಆಚರಿಸಬೇಕು. ಕೆರೆ, ಕಟ್ಟೆ, ಕುಂಟೆ, ಬಾವಿ, ಕಾಲುವೆ ಮುಂತಾದ ನೀರಿನ ಮೂಲಗಳಲ್ಲಿ ಸಾಮರ್ಥ್ಯಕ್ಕೆ ತಕ್ಕಷ್ಟು ನೀರು ಸಂಗ್ರಹಿಸಬೇಕಾಗುತ್ತದೆ. ಅಷ್ಟಿದ್ದರೆ ಮಾತ್ರ ಎಲ್ಲವೂ ಸುಗಮವಾಗಿ ಸಾಗುತ್ತದೆ. ಇಲ್ಲದಿದ್ದರೆ ಅನಾಹುತ ತಪ್ಪಿದ್ದಲ್ಲ. ಭಕ್ತಿ ಸಾಧಕನಾದವನು ಕ್ರಿಯೆಯನ್ನು ಬಿಡದೆ, ಜ್ಞಾನವನ್ನು ಮರೆಯದೆ ಇರಬೇಕು. ಹೊಲದಲ್ಲಿನ ಬೆಳೆಯನ್ನು ಕೊಯ್ದು ಉತ್ಪನ್ನ ಸಾಗಿಸಿದ ಮೇಲೆ ಕಾವಲೇಕೆ ಬೇಕು ? ಬೀಜದಿಂದ ಮೊಳೆತು ಋತುಮಾನ ಪರ್ಯಂತ ಹುಲುಸಾಗಿ ಬೆಳೆದ ಪೈರು ಮಾಗುತ್ತಿದೆ. ಪೈರು ಫಲವನ್ನು ಹೊತ್ತು ನಿಂತಂತೆ ಜ್ಞಾನವು ಆಚರಣೆಯಲ್ಲಿ ಅರಿವನ್ನು ಪಡೆದುಕೊಂಡು ನಿಂತಿದೆ. ಜ್ಞಾನವು ಆಚರಣೆಯಲ್ಲಿ ನಿಂತು, ಆಚರಣೆಯು ಅರಿವಿನಲ್ಲಿ ಒಂದಾಗುವುದೇ ಪರಮಾತ್ಮ.

ನೀರು ಜೀವಜಲವೆಂದು ಕರೆಸಿಕೊಂಡಿದೆ. ಜೀವದ ಪ್ರಾಥಮಿಕ ಅಗತ್ಯಗಳಲ್ಲಿ ನೀರಿಗೆ ಗಾಳಿಯ ನಂತರದ ಸ್ಥಾನ, ಮನುಷ್ಯನೂ ಸೇರಿದಂತೆ ಯಾವುದೇ ಜೀವಿಯು ಆಹಾರವಿಲ್ಲದೆ ಕೆಲಕಾಲ ಜೀವಿಸಿರಬಲ್ಲದು.  ಆದರೆ ನೀರು ಮಾತ್ರ ಬದುಕಿಗೆ ಬೇಕೇಬೇಕು. ಅಂತೆಯೇ ಅದು ಜೀವನಾಧಾರ. ಸಾಯುವಾಗ ಕೂಡಾ ಬಾಯಲ್ಲಿ ನೀರು ಬಿಡುವ ಕ್ರಮ ನಮ್ಮಲ್ಲಿ ರೂಢಿಯಲ್ಲಿದೆ. ಭೂಮಿಯ ಮುಕ್ಕಾಲು ಭಾಗ ನೀರಿನಿಂದಾವೃತವಾಗಿರುವುದು ನಿಸರ್ಗಸತ್ಯ. ಆದರೆ ಆ ಪೈಕಿ ಕೇವಲ ಶೇ. 2 ರಷ್ಟು ನೀರು ಜನ, ಜಾನುವಾರು, ಬೆಳೆಗಳ ಬಳಕೆಗೆ ಯೋಗ್ಯವಾಗಿದೆ. ಆದರೂ ಭೂಗೋಳದಲ್ಲಿ ಜೀವ ಮೊದಲು ಹುಟ್ಟಿದ್ದು ನೀರಿನಲ್ಲಿ. ಇಂದಿಗೂ ಭೂಮಿಯ ತುಂಬೆಲ್ಲಾ ನೀರೇ ನೀರು. ‘ಯಥಾ ಬ್ರಹ್ಮಾಂಡ ತಥಾ ಪಿಂಡಾಂಡ’ ಎಂಬಂತೆ ಪ್ರತಿ ಜೀವಿಯ ಶರೀರದಲ್ಲಿ ಕೂಡ ನೀರಿನ ಪ್ರಮಾಣ ಅತ್ಯಧಿಕವಾಗಿದೆ.

ಅದರಂತೆ ಬೆಳೆ ಯಶಸ್ವಿಯಾಗಿ ಬೆಳೆದು ತನ್ನ ಜೀವನಚಕ್ರ ಪೂರೈಸಲು ನೀರು ಸರಿಯಾದ ಪ್ರಮಾಣದಲ್ಲಿ ಪೂರೈಕೆಯಾಗಬೇಕು. ಹುಟ್ಟು ಕೃಷಿಕನಾದ ಮುದ್ದಣ್ಣ ‘ಪೈರಿಗೆ ನೀರು ಬೇಕೆಂಬಲ್ಲಿ ಉಚಿತವನರಿದು ಬಿಡಬೇಕು’ ಎಂದು ಹೇಳುತ್ತಾನೆ. ಪ್ರತಿ ಸಸ್ಯದ ಜೀವನ ಚಕ್ರದಲ್ಲಿ ಕೆಲವು ಸಂದಿಗ್ಧ ಹಂತಗಳು  ಅಂತಿರುತ್ತವೆ. ಉದಾಹರಣೆಗೆ ಬೇರು ಹಬ್ಬುವ ಹಂತ, ಕವಲೊಡೆಯುವ ಹಂತ, ಮೊಗ್ಗು, ಹೂ ಬಿಡುವ ಹಂತ, ಕಾಳು ಕಟ್ಟುವ ಹಂತ, ಇತ್ಯಾದಿ. ಬೆಳವಣಿಗೆಯ ಉಳಿದ ಅವಧಿಯಲ್ಲಿ ಏನಾದರಾಗಲಿ ಇಂಥ ಸಂದಿಗ್ಧ ಹಂತಗಳಲ್ಲಿ ತೇವಾಂಶದ ಕೊರತೆಯಾಗಬಾರದು ಎಂದು ಕೃಷಿ ವಿಜ್ಞಾನ ಹೇಳುತ್ತದೆ. ಹಾಗೇನಾದರೂ ಆದಲ್ಲಿ ಇಳುವರಿ ಗಣನೀಯ ಪ್ರಮಾಣದಲ್ಲಿ ನಷ್ಟವಾಗುವುದು ಖಾತ್ರಿ.  ಇದರ ಸಂಪೂರ್ಣ ಅರಿವು ಮುದ್ದಣ್ಣನಿಗೆ ಇದ್ದಿರಬೇಕು. ಹಾಗಾಗಿ ಬೆಳೆಗೆ ನೀರುಣಿಸುವ ನೀರಾವರಿಯ ರೂಪಕವನ್ನಿಟ್ಟುಕೊಂಡು ಅರಿವು, ಆಚಾರದಂತಹ ಗಹನವಾದ ಜೀವನ ವಿಧಾನದ ಬಗ್ಗೆ ಹೇಳಲು ಯತ್ನಿಸುತ್ತಾನೆ. ಪೈರಿಗೆ ನೀರು ಬೇಕೆಂಬುದು ಎಷ್ಟು ಸತ್ಯವೊ, ಅದು ಹೆಚ್ಚಾಗಬಾರದೆಂಬುದೂ ಅಷ್ಟೇ ಸತ್ಯ. ಆದಕಾರಣ ಹೊಲದೊಳಗಿನ ಬೆಳೆಗೆ ಹದವರಿತು ನೀರು ಹರಿಸಬೇಕಾಗುತ್ತದೆ. ನೀರಿನ ನ್ಯಾಯಯುತ (Judicious) ಬಳಕೆಯೂ  ಅಷ್ಟೇ ಮುಖ್ಯವಾಗಿದೆ. ಏಕೆಂದರೆ ಅದೊಂದು ನಿಸರ್ಗದ ಅತ್ಯಮೂಲ್ಯ ಸಂಪನ್ಮೂಲವಾಗಿದ್ದು ಸಂತುಲಿತ ರೀತಿಯಲ್ಲಿ ಉಪಯೋಗ ಪಡೆಯುವುದು ವಿವೇಕ. ಇದನ್ನೇ ‘ನೀರೆಚ್ಚರ’ ಎಂದು ಇತ್ತೀಚಿಗೆ ಬಹಳ ಚರ್ಚಿಸಲಾಗುತ್ತಿದೆ. ಪ್ರಕೃತಿದತ್ತವಾದ ಸಂಪನ್ಮೂಲಗಳನ್ನು ಬಳಸುವಾಗ ನಿಸರ್ಗ ವಿವೇಕವನ್ನು ಹೊಂದಿರಬೇಕೆಂದು ಹೇಳುವುದು ಈ ಚರ್ಚೆಯ ಉದ್ದೇಶ. ರೈತನಾದ ಒಕ್ಕಲಿಗ ಮುದ್ದಣ್ಣ, ಇವೆಲ್ಲದರ ಅರಿವಿರುವ ವಿಜ್ಞಾನಿಯೂ, ತತ್ವಜ್ಞಾನಿಯೂ, ಕವಿಯೂ, ಕಲಾವಿದನೂ ಆಗಿದ್ದಾನೆ. ಇವತ್ತಿನ ರೈತ ಕೇವಲ ಬೆಳೆ ಬೆಳದು ತೆಗೆಯುವ ಯಾಂತ್ರಿಕ ಉತ್ಪಾದಕನಾದರೆ ಸಾಲದು. ಅವನು ವಿಜ್ಞಾನಿ, ತತ್ವಜ್ಞಾನಿ, ಕಲಾವಿದನೂ ಆಗಿರಬೇಕಾಗುತ್ತದೆ. ಅವೆಲ್ಲ ಜೀವನದಿಂದ ವಿಮುಖವಾಗುವ ಗುಣ ವಿಶೇಷಗಳೇನಲ್ಲ. ಕೇವಲ ಒಣ ತತ್ವಜ್ಞಾನ, ಉಪದೇಶ ಮಾಡುವುದರಿಂದ ರೈತರಿಗೆ ಹೇಳಿಕೊಳ್ಳುವಂಥ ಲಾಭವೇನಾಗುವುದಿಲ್ಲ. ಇಂದಿನ ವಾಣಿಜ್ಯ ಪರಿಸರದಲ್ಲಿ ಯಶಸ್ವಿಯಾಗಿ ಬದುಕು ಸಾಗಿಸಬೇಕೆಂದರೆ ಆತ ಒಳ್ಳೆಯ ಮಾರಾಟಗಾರನೂ ಆಗಿರಬೇಕು. ಆದರೆ ಹೆಚ್ಚೆಚ್ಚು ಸುಸ್ಥಿರ ಮಾದರಿಯ ಜೀವನವನ್ನು ಆಯ್ದುಕೊಳ್ಳುವುದರಲ್ಲೇ ಅವನ ಜಾಣತನವಿದೆ.

ಸಾಂದರ್ಭಿಕ ಚಿತ್ರ

ಆಯ್ದಕ್ಕಿ ಲಕ್ಕಮ್ಮ ಕೂಡ ಬಿತ್ತುವ ಬೆಳೆಯುವ ಸಂಗತಿಯನ್ನಿಟ್ಟುಕೊಂಡು ತನ್ನ ಆರಾಧ್ಯ ದೇವನ ಕೃಪೆಗಾಗಿ ಹೀಗೆ ಬೇಡುತ್ತಿದ್ದಾಳೆ.

ಆವ ಬೀಜ ಬೀಳುವಲ್ಲಿ ಮೊಳೆ ಮುಖ
ಹಿಂಚು ಮುಂಚುಂಟೆ ?
ನೀ ಮರೆದಲ್ಲಿ ನಾನದಲ್ಲಿ ಬೇರೊಂದೂಡಲುಂಟೆ ?
ಮೂಲ ನಷ್ಟವಾದಲ್ಲಿ ಅಂಕುರ ನಿಂದಿತ್ತು.
ಕೂಟಕ್ಕೆ ಸತಿಪತಿ ಎಂಬ ನಾಮವಲ್ಲದೆ
ಅರಿವಿಂಗೆ ಬೇರೊಂದೊಡಲುಂಟೆ ?
ಬೇರೊಂದಡಿಯಿಡದಿರು
ಮಾರಯ್ಯ ಪ್ರಿಯ ಅಮರೇಶ್ವರ ಲಿಂಗವನರಿಯಬಲ್ಲಡೆ.

ಹೀಗೆ ಜೀವ ಸ್ಫುರಿಸುವ ಪ್ರಕ್ರಿಯೆಯನ್ನು ವರ್ಣಿಸುವ ಸಾಲುಗಳಲ್ಲಿ ಕೃಷಿಯಲ್ಲಿ ಬಿತ್ತನೆ ಬೀಜಕ್ಕಿರುವ ಮಹತ್ವ ಎದ್ದು ಕಾಣುತ್ತಿದೆ. ಸಸಿಯಾಗಿ, ಗಿಡವಾಗಿ, ಮರವಾಗಿ, ಹೆಮ್ಮರವಾಗಿ, ಹೂಕಾಯಿ, ಹಣ್ಣಾಗುವುದು, ಅದರೊಳಗಿಂದ ಮತ್ತೆ ಬೀಜ ಹೊರಟು ಅಸಂಖ್ಯೆ ಸಸಿಗಳಾಗಿ ಹಸಿರು ಹಬ್ಬುತ್ತ ಹೋಗುವುದು. ಹೀಗೆ ನಿಸರ್ಗದಲ್ಲಿ ನಿರಂತರ ನಡೆಯುವ ಚಲನಶೀಲ ಬದುಕಿನ ಮೂಲವಿರುವುದು ಬೀಜದಲ್ಲಿ. ಅದನ್ನೇ ಅಲ್ಲಮಪ್ತಭು ‘ಬೀಜದೊಳಗಣ ವೃಕ್ಷದಂತೆ ನಿಮ್ಮ ಶರಣ ಸಂಬಂಧ’ ಎನ್ನುವಾಗ ಸಕಲ ಜೀವರಾಶಿಗಳಲ್ಲಿ ಅದೃಶ್ಯವಾಗಿ, ಅಲಿಪ್ತವಾಗಿ, ಅವ್ಯಕ್ತವಾಗಿ, ಅಭೇದ್ಯವಾಗಿ, ಪರಮಾತ್ಮ ನೆಲೆಸಿದ್ದಾನೆಂದು ಹೇಳುತ್ತಾನೆ.

ಭಕ್ತಿಯೆಂಬ ಪೃಥ್ವಿಯ ಮೇಲೆ
ಗುರುವೆಂಬ ಬೀಜವಂಕುರಿಸಿ
ಲಿಂಗವೆಂಬ ಎಲೆಯ ಮೇಲೆ
ವಿಚಾರವೆಂಬ ಹೂವಾಯಿತ್ತು
ಆಚಾರವೆಂಬ ಕಾಯಾಯಿತ್ತು
ನಿಷ್ಪತ್ತಿಯೆಂಬ ಹಣ್ಣಾಯಿತ್ತು
ನಿಷ್ಪತ್ತಿಯೆಂಬ ಹಣ್ಣುತೊಟ್ಟು ಬಿಟ್ಟು
ಕಳಚಿ ಬೀಳುವಲ್ಲಿ
ಕೂಡಲಸಂಗಮದೇವ ತನಗೆ ಬೇಕೆಂದು
ಎತ್ತಿಕೊಂಡ.

ಬಸವಣ್ಣ ತನ್ನನ್ನು ನಂಬಿ ಬಂದವರಿಗೆ ತೋರಿಸಿದ್ದು ಆಚರಣೆಗೆ ಸರಳವಾದ, ಜಡ ನಿಯಮಗಳಿಲ್ಲದ, ಅನಗತ್ಯ ಕಟ್ಟುಪಾಡುಗಳಿಂದ ಮುಕ್ತವಾದ ಭಕ್ತಿಮಾರ್ಗ, ಈ ಸರಳ ವಚನದಲ್ಲಿ ಆತ ಹೇಳುತ್ತಿರುವುದು ಕೂಡ ಭಕ್ತಿಯೇ ಮುಕ್ತಿಯಾಗುವ ಸರಳ ಸೂತ್ರ. ಇದೇ ಲಿಂಗಾಂಗ ಸಾಮರಸ್ಯದ ಶಾಶ್ವತ ಸೂತ್ರ. ಶರಣರು ಅಂತರಂಗದ ಕೃಷಿಗೆ ದಾರಿತೋರಿದ ಜಗದೋದ್ಧಾರಕರು. ಅಚ್ಚ ಕನ್ನಡದಲ್ಲಿ ಬೇಸಾಯ ನಡೆಸಿ ನಿಷ್ಪತ್ತಿಯೆಂಬ ಫಲ ಹಂಚಿದವರು.

ಪ್ರಶ್ನೆಯೇನೆಂದರೆ ಅಷ್ಟು ಪ್ರಮುಖವಾದ ಜೀವನ ವಿಧಾನವಾದಂತ ಕೃಷಿಗೆ ಸಂಬಂಧಿಸಿದ ವಚನಕಾರರು ಹೆಚ್ಚಿನ ಸಂಖ್ಯೆಯಲ್ಲಿ ಏಕಿರಲಿಲ್ಲ? ಕಾಯಕದ ವ್ಯಾಪಕತೆ ದೃಷ್ಟಿಯಿಂದ ನೋಡಿದರೆ ಅನುಭವ ಮಂಟಪದಲ್ಲಿನ ಅರ್ಧದಷ್ಟು ಶರಣರು ಕೃಷಿಕರಾಗಿರಬೇಕಿತ್ತು. ಆದರೆ ಒಕ್ಕಲಿಗ ಮುದ್ದಣ್ಣ, ಏಲೇಶ ಕೇತಯ್ಯ, ಕೀಲಾರದ ಭೀಮಣ್ಣ, ಇಳಿಹಾಳ ಬೊಮ್ಮಯ್ಯ ಇಂಥ ಕೆಲವೇ ಕೆಲವು ವ್ಯವಸಾಯಗಾರರು ಸಿಗುತ್ತಾರೆ. ಸಿದ್ಧರಾಮೇಶ್ವರನೂ ಮೂಲತಃ ಕೃಷಿ ಕಾಯಕದವನಾಗಿದ್ದನೆಂದು ಕೆಲವು ಕಡೆ ಕೇಳಿ ಬರುತ್ತದೆ. ಉಳಿದಂತೆ ಗೋರಕ್ಷ, ತುರುಗಾಹಿ ರಾಮಣ್ಣ, ತೆಲುಗೇಶ ಮಸಣಯ್ಯ ಇವರುಗಳು ಗೋವುಗಳನ್ನು ಸಾಕಿಕೊಂಡು ಜೀವನ ನಿರ್ವಹಿಸುತ್ತಿದ್ದರು. ಹೊಡೆಹುಲ್ಲ ಬಂಕಣ್ಣ ಎಂಬುವನು ಮೇವಿನ ಹುಲ್ಲನ್ನು ಮಾರುತ್ತಿದ್ದನೆಂದು ತಿಳಿದುಬರುತ್ತದೆ. ಅವನ ಕುರಿತಾಗಿ ಗುರುರಾಜ ಚರಿತ್ರೆಯಲ್ಲಿ ಒಂದಷ್ಟು ಮಾಹಿತಿಯಿದೆ. ತನ್ನ ಸತ್ಯ ಶುದ್ಧ ಕಾಯಕದಿಂದ ನಿತ್ಯವೂ ಗುರುಲಿಂಗ ಜಂಗಮ ಸೇವೆ ಮಾಡುತ್ತಿದ್ದ ಬಂಕಣ್ಣ, ಬಸವಣ್ಣನ ನಿಕಟವರ್ತಿಯಾಗಿದ್ದ. ಕೃಷಿ ಲೋಕದ ಸಂಪೂರ್ಣ ಅರಿವಿದ್ದ ಆತನ ಹಲವು ವಚನಗಳಲ್ಲಿ ಆ ಸಂಗತಿಗಳು ಸಂಕೇತಗೊಂಡಿವೆ.

ಉದಾಹರಣೆಗೆ,

ಧರೆಯ ಮೇಲೆ ಬಿದ್ದ ಬೀಜ,
ಧರೆಯಲ್ಲಿಯೆ ಅಳಿದು, ಆಕಾಶದಲ್ಲಿ ಫಲವಾಯಿತ್ತು.
ಆ ಫಲವ ಬಯಲ ಕಣದಲ್ಲಿ ಒಕ್ಕಿ, ಮನದ ಹಗಹದಲ್ಲಿ ತುಂಬಿ,
ಬಾಯ ಹಗಹದಲ್ಲಿ ತೆಗೆದು, ಕಣ್ಣಿನ ಕೊಳಗದಲ್ಲಿ ಅಳೆಯುತ್ತಿರಲಾಗಿ,
ಖಂಡುಗವೆಂಬುದಕ್ಕೆ ಮೊದಲೆ ಕೊರಳಡಗಿತ್ತು.
ಕುಂಭೇಶ್ವರಲಿಂಗದಲ್ಲಿದ್ದ ಜಗನ್ನಾಥನನರಿಯಲಾಗಿ.


ಇವರೆಲ್ಲರೂ ಒಂದಿಲ್ಲೊಂದು ರೀತಿಯಲ್ಲಿ ಕೃಷಿಯಲ್ಲಿ ತೊಡಗಿಕೊಂಡಿದ್ದರೆಂದು ಭಾವಿಸಿಕೊಂಡರೂ ಅನುಭವ ಮಂಟಪದಲ್ಲಿ ಸಂಖ್ಯಾದೃಷ್ಟಿಯಿಂದ ಪ್ರಾತಿನಿಧಿತ್ವ ಕಡಿಮೆಯಾಯಿತು. ಆಧುನಿಕ ಕೃಷಿ ಸಾಗುತ್ತಿರುವ ದಾರಿಯ ದಿಕ್ಕು ದೆಸೆ ತಿಳಿಯಬೇಕಾದರೆ ಅಲ್ಲಮ ಪ್ರಭುಗಳ ವಚನವನ್ನು ಗಮನಿಸಬೇಕು.

ಬೆವಸಾಯವ ಮಾಡಿ ಮನೆಯ ಬೀಯಕ್ಕೆ ಭತ್ತವಿಲ್ಲದಿದ್ದಡೆ
ಆ ಬೆವಸಾಯದ ಘೋರವೇಕಯ್ಯಾ?
ಕ್ರಯ ವಿಕ್ರಯವ ಮಾಡಿ ಮನೆಯ ಸಂಚು ನಡೆಯದನ್ನಕ್ಕ
ಆ ಕ್ರಯ ವಿಕ್ರಯದ ಘೋರವೇಕಯ್ಯಾ?
ಒಡೆಯನ ಓಲೈಸಿ ತನುವಿಂಗೆ ಅಷ್ಟಭೋಗವ ಪಡೆಯದಿದ್ದರೆ
ಆ ಓಲಗದ ಘೋರವೇಕಯ್ಯಾ?
ಭಕ್ತನಾಗಿ ಭವಂ ನಾಸ್ತಿಯಾಗದಿದ್ದಡೆ
ಆ ಉಪದೇಶವ ಕೊಟ್ಟ ಗುರು, ಕೊಂಡ ಶಿಷ್ಯ
ಇವರಿಬ್ಬರ ಮನೆಯಲ್ಲಿ ಮಾರಿ ಹೊಗಲಿ ;
ಗುಹೇಶ್ವರಲಿಂಗವತ್ತಲೆ ಹೋಗಲಿ!

ಬಿತ್ತಿ ಬೆಳೆಯುವ ರೈತನ ಮನೆಯಲ್ಲಿಯೇ ಊಟಕ್ಕಾಗಿ ಭತ್ತ ದೊರೆಯದಿದ್ದರೆ, ಅಂತಹ ವ್ಯವಸಾಯವ ಮಾಡುವ ಘೋರವಾದರೂ ಏಕೆ ? ತನ್ನ ಕುಟುಂಬ ಜನ ಜಾನುವಾರುಗಳ ಬೇಡಿಕೆ ಪೂರೈಸಲು ನಮ್ಮ ಪೂರ್ವಜರು ಮಾಡುತ್ತಿದ್ದುದು, ಪರಿಸರ ಸ್ನೇಹಿ ಸುಸ್ಥಿರ ಮಾದರಿಯ ಕೃಷಿ. ಅಂದು ಬಿತ್ತುವುದು ಬೆಳೆಯುವದು ಅವನಿಗೆ ಜೀವನ ವಿಧಾನವಾಗಿತ್ತು. ಹಾಗಾಗಿ ರೈತನ ಮನೆಯಲ್ಲಿ ಉಣ್ಣುವ ಧಾನ್ಯವೂ ಇರುತ್ತಿತ್ತು. ಮೇಯುವ ಸೊಪ್ಪೆಯೂ ಇರುತ್ತಿತ್ತು. ಹಾಲು ಹೈನು ವರ್ಷಪೂರ್ತಿ ತೊಟ್ಟಿಕ್ಕುತ್ತಿತ್ತು. ಇಂದು ಹಾಲು ಪಾಕೀಟಿನಲ್ಲಿ ಬಂದರೆ ಧಾನ್ಯವನ್ನು ರೇಷನ್ನಂಗಡಿಯಲ್ಲಿ ಹುಡುಕಬೇಕಾಗಿದೆ. ಹಸಿರು ಕ್ರಾಂತಿಯು ಉಂಟು ಮಾಡಿದ ಅಡ್ಡಪರಿಣಾಮಗಳಲ್ಲಿ ಇದೂ ಒಂದು.

ಹಸಿರು ಕ್ರಾಂತಿಯಿಂದ ಆಹಾರೋತ್ಪಾದನೆಯಲ್ಲಿ ಗಣನೀಯ ಹೆಚ್ಚಳವಾಗಿ ಆಹಾರ ಭದ್ರತೆ ಸಾಧ್ಯವಾಯಿತು. ಜಾಗತೀಕರಣದ ಮುಖಾಂತರ ಸಮಾಜೋ ಆರ್ಥಿಕ ಸ್ಥಿತ್ಯಂತರವಾಯಿತು. ಜೀವ ವೈವಿಧ್ಯತೆ ತಗ್ಗಿ ಪರಿಸರ ನಾಶಕ್ಕೆ ಎಡೆಯಾಯಿತು. ಕೃಷಿ ಅಭಿವೃದ್ದಿಯಲ್ಲಿನ ಅಸಮತೋಲನದಿಂದ ಎಲ್ಲ ಪ್ರಮಾದಗಳು ‘ಉಳುವ ಒಕ್ಕಲು ಮಗನ ತಪ್ಪಾಗಿ’ ಅವನು ತನ್ನನ್ನು ‘ಒಪ್ಪಗೊಳ್ಳಲು’ ಸರಕಾರವೆಂಬ ಪರಮಾತ್ಮನನ್ನು ಬೇಡುವಂತಾಯಿತು.

ಇದೆಲ್ಲದರ ಮೇಲೆ ಒಕ್ಕಲು ಮುದ್ದಣ್ಣನ ಈ ವಚನ ನೋಡಿದರೆ ಎಲ್ಲವೂ ಅರ್ಥವಾಗಿಬಿಡುತ್ತದೆ.

ವೇದಶಾಸ್ತ್ರವನೋದುವುದಕ್ಕೆ ಹಾರುವನಲ್ಲ,
ಇರಿದು ಮೆರೆವುದಕ್ಕೆ ಕ್ಷತ್ರಿಯನಲ್ಲ,
ವ್ಯವಹರಿಸುವದಕ್ಕೆ ವೈಶ್ಯನಲ್ಲ.
ಉಳುವ ಒಕ್ಕಲಮಗನ ತಪ್ಪ ನೋಡದೆ ಒಪ್ಪುಗೊಳ್ಳಯ್ಯಾ,
ಕಾಮಭೀಮ ಜೀವಧನದೊಡೆಯ ನೀನೆ ಬಲ್ಲೆ.

***

ಲೇಖಕ ಚನ್ನಪ್ಪ ಅಂಗಡಿ

ಇವರು ಧಾರವಾಡದಲ್ಲಿ ಕೃಷಿ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ‘ಮಂದ ಬೆಳಕಿನ ಸಾಂತ್ವನ’, ‘ಭೂಮಿ ತಿರುಗುವ ಶಬ್ದ (ಕವನಸಂಕಲನ)’, ‘ಮಣ್ಣಿನೊಳಗಣ ಮರ್ಮ’, ‘ಕಿಬ್ಬದಿಯ ಕೀಲುಳುಕಿ (ಕಥಾಸಂಕಲನ)’, ‘ಎದೆಯ ಒಕ್ಕಲಿಗ (ವೈಚಾರಿಕ)’ ಮುಂತಾದ ಕೃತಿಗಳನ್ನು ರಚಿಸಿದ್ದಾರೆ.

ಅನ್ನದಾತನೊಂದಿಗೆ ನಾವು: ಹೆಗ್ಗಡತಿಯೂ ಚೋಮನೂ ಬೆಳ್ಳಿಯೂ ತಿಮ್ಮಿಯೂ ನಾಗವೇಣಿಯೂ…