ಗುಡ್ಡದ ಮೇಲಿದೆ ಹೃದಯಾಕಾರದ ಹಸಿರು ಗದ್ದೆ.. ಅದೀಗ ಪ್ರವಾಸಿಗರ ‘ಹಾರ್ಟ್’ ಸ್ಪಾಟ್! ಎಲ್ಲಿ?

| Updated By: ಸಾಧು ಶ್ರೀನಾಥ್​

Updated on: Jul 30, 2020 | 11:19 AM

ಚಿಕ್ಕಮಗಳೂರು: ದಟ್ಟ ಕಾನನದ ಮಧ್ಯೆ ಇರುವ ಗುಡ್ಡ. ಗುಡ್ಡದ ಮೇಲೊಂದು ಗದ್ದೆ. ಗದ್ದೆಯ ಮಧ್ಯೆದಲ್ಲೊಂದು ಹೃದಯ. ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಮಲೆನಾಡ ಸೊಬಗನ್ನ ಮತ್ತಷ್ಟು ಹೆಚ್ಚಿಸಿದೆ ಈ ಹೃದಯ. ಸದ್ಯ ವಾಟ್ಸಾಪ್, ಫೇಸ್‌ಬುಕ್​ಗಳಲ್ಲಿ ವೈರಲ್ ಆಗಿರುವ ಈ ಮನಮೋಹಕ ದೃಶ್ಯವನ್ನ ನೋಡಿದವರು ಇದು ನಮ್ಮ ದೇಶದ ಚಿತ್ರನಾ? ನಮ್ಮ ರಾಜ್ಯದ್ದಾ? ಏನೂ ನಮ್ಮ ಜಿಲ್ಲೆದಾ? ಅಂತಾ ಹುಬ್ಬೇರಿಸಿ ಅಚ್ಚರಿ ಪಡುತ್ತಿದ್ದಾರೆ. ಸುತ್ತಲ್ಲೂ ಹಸಿರು ಹೊದ್ದ ಬೆಟ್ಟ ಗುಡ್ಡಗಳು ಮಧ್ಯೆ ಬೀಸೋ ತಂಗಾಳಿ.. ಕಣ್ಣಿಗೆ ಹಿತನೀಡುವ ಮೋಡಗಳ ಮಂಜಿನಾಟ. […]

ಗುಡ್ಡದ ಮೇಲಿದೆ ಹೃದಯಾಕಾರದ ಹಸಿರು ಗದ್ದೆ.. ಅದೀಗ ಪ್ರವಾಸಿಗರ ಹಾರ್ಟ್ ಸ್ಪಾಟ್! ಎಲ್ಲಿ?
Follow us on

ಚಿಕ್ಕಮಗಳೂರು: ದಟ್ಟ ಕಾನನದ ಮಧ್ಯೆ ಇರುವ ಗುಡ್ಡ. ಗುಡ್ಡದ ಮೇಲೊಂದು ಗದ್ದೆ. ಗದ್ದೆಯ ಮಧ್ಯೆದಲ್ಲೊಂದು ಹೃದಯ. ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಮಲೆನಾಡ ಸೊಬಗನ್ನ ಮತ್ತಷ್ಟು ಹೆಚ್ಚಿಸಿದೆ ಈ ಹೃದಯ. ಸದ್ಯ ವಾಟ್ಸಾಪ್, ಫೇಸ್‌ಬುಕ್​ಗಳಲ್ಲಿ ವೈರಲ್ ಆಗಿರುವ ಈ ಮನಮೋಹಕ ದೃಶ್ಯವನ್ನ ನೋಡಿದವರು ಇದು ನಮ್ಮ ದೇಶದ ಚಿತ್ರನಾ? ನಮ್ಮ ರಾಜ್ಯದ್ದಾ? ಏನೂ ನಮ್ಮ ಜಿಲ್ಲೆದಾ? ಅಂತಾ ಹುಬ್ಬೇರಿಸಿ ಅಚ್ಚರಿ ಪಡುತ್ತಿದ್ದಾರೆ.

ಸುತ್ತಲ್ಲೂ ಹಸಿರು ಹೊದ್ದ ಬೆಟ್ಟ ಗುಡ್ಡಗಳು ಮಧ್ಯೆ ಬೀಸೋ ತಂಗಾಳಿ.. ಕಣ್ಣಿಗೆ ಹಿತನೀಡುವ ಮೋಡಗಳ ಮಂಜಿನಾಟ. ಈ ಪ್ರಕೃತಿ ಸೌಂದರ್ಯದ ಮಧ್ಯೆದಲ್ಲಿ ಮನುಷ್ಯನೇ ನಿರ್ಮಿಸಿರೋ ಮತ್ತೊಂದು ಬ್ಯೂಟಿ ಮಲೆನಾಡಿಗರನ್ನೇ ಸರ್ ಫ್ರೈಸ್ ಆಗುವಂತೆ ಮಾಡಿದೆ. ಹೌದು, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಬಳಿಯ ಸಂಸೆ ಸಮೀಪದ ಬಾಮಿಕೊಂಡ ಎಂಬ ಕುಗ್ರಾಮ ಇದೀಗ ಅಚ್ಚರಿಯ ಕೇಂದ್ರ ಬಿಂದುವಾಗಿದೆ.

100 ವರ್ಷಗಳಿಂದ ‘ಹೃದಯ’ದಲ್ಲಿ ಅನ್ನ ಬೆಳೆಯುತ್ತಿರೋ ಅನ್ನದಾತ!
ಕೈ-ಕಾಲು ಕೆಸರಾದರು ಬೆಳೆಯುವ ಬೆಳೆಗೆ ಹೃದಯದ ಸ್ಪರ್ಶ ನೀಡಿ ಭೂಮಾತೆಯ ಹೃದಯದಲ್ಲೇ ಅನ್ನ ಬೆಳೆಯುತ್ತಿದ್ದಾನೆ ಮಲೆನಾಡಿನ ಮುಗ್ಧ ಅನ್ನದಾತ. ಬಾಮಿಕೊಂಡ ಗ್ರಾಮದ ರೈತ ಕೃಷ್ಣನ ಈ ಭತ್ತದ ಗದ್ದೆ ಈಗ ಪ್ರವಾಸಿ ತಾಣವಾಗಿದೆ. ಅಪ್ಪನ ಕಾಲದಿಂದಲೂ ಅಂದರೆ ಸರಿ ಸುಮಾರು 100ಕ್ಕೂ ಅಧಿಕ ವರ್ಷಗಳಿಂದಲೂ ಕೂಡ ಕೃಷ್ಣ ಹೃದಯದಲ್ಲೇ ಭತ್ತ ಬೆಳೆಯುತ್ತಿದ್ದಾರೆ. ಅಂದಿನಿಂದಲೂ ಇದನ್ನ ಹಾಗೇ ಬಿಟ್ಟಿದ್ದಾರೆ. ಅಲ್ಲೇ ಭತ್ತ ಬೆಳೆಯುತ್ತಿದ್ದಾರೆ. ಆದರೆ, ಸದ್ಯಕ್ಕೆ ಈ ಜಾಗ ಪ್ರವಾಸಿ ತಾಣವಾಗಿದೆ. ಸುತ್ತಲೂ ಹಚ್ಚ ಹಸಿರು. ಮಧ್ಯದಲ್ಲೊಂದು ಗದ್ದೆ. ಗದ್ದೆಯ ಮಧ್ಯದಲ್ಲಿ ಹೃದಯ. ಖಾಲಿ ಬಿಟ್ಟಿರೋ ಹೃದಯ ಆಕಾರದ ಜಾಗ. ಇದೀಗ ಆ ಜಾಗವೇ ನೋಡುಗರ ಆಕರ್ಷಣಿಯ ಕೇಂದ್ರ ಬಿಂದುವಾಗಿದೆ.

ಹೃದಯವನ್ನ ಶೋಕಿಗಾಗಿ, ಪ್ರಚಾರಕ್ಕಾಗಿ ಮಾಡಿದ್ದಲ್ಲ
ಇದನ್ನ ಇವ್ರು ಶೋಕಿಗಾಗೋ ಅಥವ ಪ್ರಚಾರಕ್ಕಾಗೋ ಮಾಡಿದ್ದಲ್ಲ. ಶತಮಾನಗಳ ಹಿಂದೆ ಯಾವ ಟ್ರ್ಯಾಕ್ಟರ್, ಜೆಸಿಬಿ ಏನೂ ಇರಲಿಲ್ಲ. ಎತ್ತಿನ ಹೆಗಲಿಗೆ ನೊಗ ಕಟ್ಟಿ ಗುಡ್ಡವನ್ನ ಸಮಮಾಡಿ ಮಾಡಿದ ಭತ್ತದ ಗದ್ದೆ ಇದು.

ವಿಶೇಷ ಅಂದ್ರೆ ಈಗಲೂ ಎತ್ತಗಳನ್ನ ಬಳಸಿಕೊಂಡೇ ಉಳುಮೆ ಮಾಡುವ ರೈತರಾದ ಕೃಷ್ಣ ಸಹೋದರರು ಕೆಲಸದಲ್ಲಿ ತುಂಬಾ ಮಡಿವಂತಿಕೆ ಕಾಪಾಡಿಕೊಂಡು ಬಂದಿದ್ದಾರೆ. ಗುಡ್ಡದ ಮೇಲೆ ಗದ್ದೆ ಇರೋದ್ರಿಂದ ಮಣ್ಣಿನ ಸವಕಳಿ ತಡೆಯಲು ಗದ್ದೆಯ ಅಕ್ಕಪಕ್ಕದಲ್ಲಿ ಓಣಿಗಳನ್ನ ನಿರ್ಮಾಣ ಮಾಡಿ ಯಾವುದೇ ಮಳೆಗೂ ಮಣ್ಣು ಕೊಚ್ಚಿಹೋಗದಂತೆ ಜಾಗೃತಿ ವಹಿಸಿದ್ದಾರೆ.

ಸರಿ ಸುಮಾರು 5000 ಅಡಿ ಎತ್ತರದಲ್ಲಿದೆ ಹೃದಯ
ಸದ್ಯ ಎಲ್ಲರ ಕುತೂಹಲದ ಕೇಂದ್ರವಾಗಿರೋ ಈ ಹೃದಯ ಸರಿಸುಮಾರು 5 ಸಾವಿರ ಅಡಿ ಎತ್ತರದಲ್ಲಿದೆ. ಮೂಡಿಗೆರೆ ತಾಲೂಕಿನ ಕಳಸ ಪಟ್ಟಣದಿಂದಲೇ 18 ಕಿಲೋ ಮೀಟರ್ ದೂರದಲ್ಲಿರೋ ಬಾಮಿಕೊಂಡ ಗ್ರಾಮಕ್ಕೆ ಹೋಗಲು ಕೂಡ ಸುಗಮ ರಸ್ತೆಯಿಲ್ಲ. ಕಡಿದಾದ ರಸ್ತೆಯಲ್ಲೇ ಸಾಗಬೇಕು, ಅದು ಕೂಡ ಮಳೆ ಬಿಟ್ಟಿದ್ರೆ ಫೋರ್ ವ್ಹೀಲರ್​ನಲ್ಲಿ ಪಯಣ ಬೆಳೆಸಬಹುದು. ಪಟ್ಟಣದ ಸಂಪರ್ಕದಿಂದಲೇ ದೂರನೇ ಇರುವ ಕೃಷ್ಣ ಸಹೋದರರು ಒಂದು ರೀತಿಯಲ್ಲಿ ಪ್ರಕೃತಿಯ ಮಡಿಲಲ್ಲಿ ಇರುವ ಪುಣ್ಯವಂತರೇ ಸರಿ.

ಸುತ್ತಲೂ ಹಸಿರುಟ್ಟ ತುಂಬು ಮುತ್ತೈದೆಯಂತ ಪ್ರಕೃತಿ. ಆ ಪ್ರಕೃತಿಯ ಮಾತೆಯ ಹೃದಯದಲ್ಲಿ ಅನ್ನ ಬೆಳೆಯುತ್ತಿರೋ ಮುಗ್ಧ ಅನ್ನದಾತ. ತಲೆ ತಗ್ಗಿಸಿದರೂ ಸೌಂದರ್ಯ, ತಲೆ ಎತ್ತಿದರೂ ಸೌಂದರ್ಯ. ಅಂತಹಾ ಅದ್ಭುತವಾದ ಈ ತಾಣವನ್ನ ನೋಡಲೆರಡು ಕಣ್ಣು ಸಾಲದಂತಿರೋದಂತು ಸತ್ಯ.

ಪ್ರವಾಸಿಗರ ನೆಚ್ಚಿನ “ಹಾರ್ಟ್” ಸ್ಪಾಟಾದ ಬಾಮಿಕೊಂಡ!
ಈ ಜಾಗವಿರೋದು ಅದೆಷ್ಟೋ ಜನರಿಗೆ ಗೊತ್ತಿರಲಿಲ್ಲ. ಈ ಹೃದಯದ ಸುಂದರವಾದ ಒಂದೆರಡು ಫೋಟೋಗಳು ಹೊರಬೀಳುತ್ತಿದ್ದಂತೆ ಈಗಾಗಲೇ ಪ್ರಕೃತಿಪ್ರಿಯರು ಬಾಮಿಕೊಂಡ ಗ್ರಾಮಕ್ಕೆ ಎಡತಾಕುತ್ತಿದ್ದಾರೆ. ವಾಹ್.. ನಮ್ಮೂರಿನಲ್ಲೇ ಇಂತದ್ದೊಂದು ಹೃದಯವಿದೆಯಲ್ಲಾ ಅಂತಾ ನೋಡಿ ಖುಷಿಪಟ್ಟು ಸಂತಸ ಪಡುತ್ತಿದ್ದಾರೆ.

ಅಜ್ಜನ ಕಾಲದಿಂದಲೂ ಭೂಮಾತೆಯ ಹೃದಯದಲ್ಲೇ ಭತ್ತ ಬೆಳೆಯುತ್ತಿರೋ ರೈತ ಕೃಷ್ಣನ ಕುಟುಂಬ 100 ವರ್ಷಗಳ ಹಿಂದೆ ಹೇಗಿತ್ತೋ ಇಂದಿಗೂ ಹೃದಯದ ಜಾಗ ಹಾಗೇ ಬಿಟ್ಟು, ಸುತ್ತಮುತ್ತಲಿನ ಭಾಗದಲ್ಲಿ ಮಾತ್ರ ಭತ್ತ ಬೆಳೆಯುತ್ತಿದ್ದಾರೆ.
ಬೆಟ್ಟದ ತುದಿಯಲ್ಲಿರೋ ಭತ್ತದ ಗದ್ದೆಯ ಸುತ್ತಲೂ ಇರುವ ಬೆಟ್ಟಗುಡ್ಡದ ಮೇಲೆ ಹಾಸಿರೋ ಹಸಿರ ವನರಾಶಿ ಭತ್ತದ ಗದ್ದೆಯ ಅಂದ ಹೆಚ್ಚಿಸಿದ್ದು, ಮಲೆನಾಡು ಕೇಳಿದ್ದೆಲ್ಲವನ್ನೂ ಕೊಡುವ ಪ್ರವಾಸಿಗರ ಪಾಲಿನ ಅಕ್ಷಯ ಪಾತ್ರೆ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ.

ಯಾಕಂದ್ರೆ, ದೂರದ ದೇಶಗಳಲ್ಲಿ ಇಂತಹಾ ಚಿತ್ರಣ ನೋಡಿ ಜನ ಬೆರಗಾಗುತ್ತಿದ್ದರು. ಆದರೆ, 100 ವರ್ಷಗಳ ಹಿಂದೆಯೇ ಇಂತಹಾ ಅದ್ಭುತ ಲೋಕವನ್ನ ಸೃಷ್ಟಿಸಿರೋ ನಮ್ಮ ರೈತರೇ ನಮ್ಮ ಹೆಮ್ಮೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಒಟ್ಟಿನಲ್ಲಿ ಗುಡ್ಡದ ಮೇಲೊಂದು ಗದ್ದೆಯ ಮಾಡಿ! ಗದ್ದೆಯ ಒಳಗೊಂದು ಹೃದಯವ ಬಿಡಿಸಿ.. ಮೂರು ತಲೆಮಾರಿದಂದಲೂ ಹಾಗೆಯೇ ಪೋಷಿಸಿಕೊಂಡು ಬರ್ತಿರೋ ರೈತರಿಗೆ ನಿಜಕ್ಕೂ ನಮ್ಮದೊಂದು ಸಲಾಂ..
-ಪ್ರಶಾಂತ್

Published On - 8:20 am, Thu, 30 July 20