ಬೆಂಗಳೂರು: ಮಾನವನ ಬದುಕನ್ನು ಇನ್ನಿಲ್ಲದಂತೆ ಕಾಡುತ್ತಿರುವ ಕೊರೊನಾ, ಪ್ರಪಂಚದ ಪ್ರತಿಯೊಂದು ಜೀವಿಯು ಇದರ ಕಬಂಧ ಬಾಹುಗಳ ತೆಕ್ಕೆಯಲ್ಲಿ ಸಿಕ್ಕಿಕೊಂಡಿದೆ. ಜೊತೆಗೆ ಆರಂಭದ ಹಂತದಲ್ಲಿ ಕಡಿವಾಣ ಹಾಕಬೇಕಿದ್ದ ಈ ಕ್ರೂರಿಯನ್ನು ಎಲ್ಲೆಡೆ ಹಬ್ಬಿಸಿಯಾಗಿದೆ. ಇದೂ ಸಾಲದೆಂಬಂತೆ ಈಗ ಮಾನವನ ಬೇಜವಾಬ್ದಾರಿಯಿಂದ ಪ್ರಾಣಿಗಳಿಗೂ ಕೊರೊನಾ ಹಬ್ಬುವ ಭೀತಿ ಎದುರಾಗಿದೆ.
ಬೆಂಗಳೂರು ಗ್ರಾಮಾಂತರದ ಆನೇಕಲ್ ತಾಲೂಕಿನ ಅತ್ತಿಬೆಲೆ ಬಳಿಯ ಆಕ್ಸ್ಫರ್ಡ್ ಆಸ್ಪತ್ರೆಯ ಆಂಬುಲೆನ್ಸ್ ಡ್ರೈವರ್ಸ್ ಗಳು ಹಾಗೂ ಆಸ್ಪತ್ರೆಯ ಸಿಬ್ಬಂದಿಗಳ ಬೇಜವಾಬ್ದಾರಿತನದಿಂದ ಈ ಭಯ ಎಲ್ಲರನ್ನೂ ಕಾಡುತ್ತಿದೆ.
ಆಕ್ಸ್ಫರ್ಡ್ ಆಸ್ಪತ್ರೆಯ ಅಂಬುಲೆನ್ಸ್ ಡ್ರೈವರ್ ಗಳು ಕೆಲಸದ ವೇಳೆ ತಾವು ಬಳಸಿದ PPE ಕಿಟ್, ಹ್ಯಾಂಡ್ ಗ್ಲೌಸ್ ಹಾಗೂ ಮಾಸ್ಕ್ ಗಳನ್ನು ಎಲ್ಲೆಂದರಲ್ಲಿ ಬಿಸಾಡುತ್ತಿದ್ದಾರೆ. ಇದರಿಂದ ಆಸ್ಪತ್ರೆ ಬಳಿಯೇ ಇರುವ ನಾಯಿಗಳು ಪಿಪಿ ಕಿಟ್ ಗಳನ್ನು ತಮ್ಮ ಬಾಯಲ್ಲಿ ಕಚ್ಚಿ ಓಡಾಡುತ್ತಿರುವುದರಿಂದ, ಈ ರೋಗ ಪ್ರಾಣಿಗಳಿಗೂ ಹಬ್ಬುವ ಆತಂಕದಲ್ಲಿ ಸುತ್ತಮುತ್ತಲ ನಿವಾಸಿಗಳಿದ್ದಾರೆ.
ನಿವಾಸಿಗಳಿಂದ ಈ ಬಗ್ಗೆ ಆಸ್ಪತ್ರೆ ಸಿಬ್ಬಂದಿಗೆ ತಿಳಿಸಿದರೆ, ಅವರು ಅಂಬುಲೆನ್ಸ್ ಡ್ರೈವರ್ ಗಳನ್ನು ನಾವು ಯಾವಾಗಲೂ ಕಾಯೋದಕ್ಕೆ ಆಗೋದಿಲ್ಲ ಹಾಗಾಗಿ ಅವರ ಬೇಜವಾಬ್ದಾರಿತನಕ್ಕೆ ನಾವು ಕಾರಣವಲ್ಲ ಎಂಬ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಈ ಬೆಳವಣಿಗೆಯಿಂದ ಸುತ್ತಮುತ್ತಲಿನ ನಿವಾಸಿಗಳಲ್ಲಿ ಆತಂಕ ಶುರುವಾಗಿದೆ.