ಬೆಂಗಳೂರು: ರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕೆ ವಿಳಂಬ ಮಾಡುವುದರಲ್ಲಿ ಸರ್ಕಾರಿ ಆಸ್ಪತ್ರೆಗಳೇನೂ ಹೊರತಾಗಿಲ್ಲ ಎಂಬುದು ಈಗ ಪ್ರತ್ಯಕ್ಷವಾಗಿ ಸಾಬೀತಾಗಿದೆ.
69 ವರ್ಷದ ವೃದ್ಧರೊಬ್ಬರು ಉಸಿರಾಟ ಸಮಸ್ಯೆಯಿಂದಾಗಿ ನಾಲ್ಕೈದು ಆಸ್ಪತ್ರೆಗಳನ್ನು ಅಲೆದರೂ ಯಾವ ಆಸ್ಪತ್ರೆಯೂ ವೃದ್ಧರಿಗೆ ಚಿಕಿತ್ಸೆ ನೀಡಲು ನಿರಾಕರಿಸಿದ್ದು, ವೃದ್ಧರು ಸರಿಯಾದ ಚಿಕಿತ್ಸೆ ಸಿಗದೆ ಪರದಾಡಿರುವ ಘಟನೆ ಇಂದು ಬೆಂಗಳೂರಿನಲ್ಲಿ ನಡೆದಿದೆ.
ಮೊದಲು ವೃದ್ಧನನ್ನು ಫ್ಯಾಮಿಲಿ ಡಾಕ್ಟರ್ ಹತ್ತಿರ ತೋರಿಸಲಾಗಿ, ಡಾಕ್ಟರ್ ಬಿಪಿ ಹೆಚ್ಚಾಗಿರುವುದರಿಂದ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದ್ದಾರೆ. ನಂತರ ಫೋರ್ಟಿಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಅಲ್ಲಿ ಕೊವಿಡ್ ವರದಿ ಇಲ್ಲದ ಕಾರಣ ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ. ಹೀಗಾಗಿ ಭಾರತಿ ಹಾಸ್ಪಿಟಲ್ ಗೆ ಕರೆದುಕೊಂಡು ಹೋಗಲಾಗಿದೆ. ಅಲ್ಲೂ ಸಹ ಚಿಕಿತ್ಸೆ ಸಿಗದೇ ವಾಪಸ್ ಆಗಿದ್ದಾರೆ.
ನಂತರ ನಾಲ್ಕೈದು ಆಸ್ಪತ್ರೆಗಳನ್ನು ಅಲೆದ ಬಳಿಕ ಕೆಸಿ ಜನರಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಅಲ್ಲೂ ಸಹ ರೋಗಿಯನ್ನು ನಾಲ್ಕೈದು ಗಂಟೆಗಳ ಕಾಲ ಕಾಯಿಸಿ ಅಡ್ಮಿಟ್ ಮಾಡಿಕೊಳ್ಳಲಾಗಿದೆ. ಬೆಳಗ್ಗೆ ಹತ್ತು ಗಂಟೆಗೆ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಬೇಕಿದ್ದ ತಂದೆ ಸಂಜೆ ಏಳು ಗಂಟೆ ಆದರೂ ಅಡ್ಮಿಟ್ ಆಗದ ಹತಾಶೆಯಿಂದ ವೃದ್ಧನ ಮಗ ಆಸ್ಪತ್ರೆಗಳ ವಿರುದ್ಧ ತನ್ನ ಆಕ್ರೋಶ ಹೊರಹಾಕಿದ್ದಾರೆ.