ಸುದ್ದಿ ವಿಶ್ಲೇಷಣೆ | ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪನವರ ಹೊಸ ಆತ್ಮವಿಶ್ವಾಸದ ಹಿಂದಿನ ಗುಟ್ಟೇನು? ಇಲ್ಲಿದೆ ನೋಡಿ ಉತ್ತರ

ರಾಜಕೀಯ ಎಂದರೆ ನಿಂತ ನೀರಲ್ಲ ಎಂಬುದಕ್ಕೆ ತಾಜಾ ಉದಾಹರಣೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಬಂದಿರೋ ಹೊಸ ಹುಮ್ಮಸ್ಸು. ಇದರ ಹಿಂದಿದೆ ಬಿಜೆಪಿ ಪಕ್ಷದೊಳಗೆ ಆಗಿರುವ ಆಂತರಿಕ ಬದಲಾವಣೆ. ಇದು ಯಡಿಯೂರಪ್ಪನವರಿಗೆ ವರವಾಗಿದ್ದು ಹೇಗೆ ನೋಡಿ..

ಸುದ್ದಿ ವಿಶ್ಲೇಷಣೆ | ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪನವರ ಹೊಸ ಆತ್ಮವಿಶ್ವಾಸದ ಹಿಂದಿನ ಗುಟ್ಟೇನು? ಇಲ್ಲಿದೆ ನೋಡಿ ಉತ್ತರ
ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ
bhaskar hegde

| Edited By: Lakshmi Hegde

Jan 14, 2021 | 5:23 PM

ಬುಧವಾರ ಮಧ್ಯಾಹ್ನ ಸಂಪುಟ ವಿಸ್ತರಣೆ ಆಯಿತು. ಅದರ ಬೆನ್ನಲ್ಲೇ ಎದ್ದ ಸಂಪುಟಕ್ಕೆ ಸೇರಲಾಗದ ಆಕಾಂಕ್ಷಿಗಳ ಸಿಟ್ಟು ಮತ್ತು ಆಕ್ರೋಶ ಈಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಹ್ಯವಾಗಿದೆ. ಬುಧವಾರ ಸಂಜೆ ಹೊತ್ತಿಗೆ ಸಿಟ್ಟಿಗೆದ್ದ ನಾಯಕರು ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರನ್ನು ಎರಡು ತಿಂಗಳೊಳಗೆ ಇಳಿಸಿಬಿಡುತ್ತೇವೆ ಎಂದು ಹೇಳಿಕೆ ನೀಡಿದ್ದೂ ಆಯಿತು.

ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಂಡಂತೆ ಕಾಣದ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಗುರುವಾರ ಬೆಳಗ್ಗೆ ಟಿವಿ ಕ್ಯಾಮರಾ ಮುಂದೆ ಬಂದು, ಆಕ್ರೋಶಗೊಂಡ ಶಾಸಕರು ದೆಹಲಿಗೆ ಹೋಗಿ ಹೈಕಮಾಂಡಿಗೆ ತಕರಾರು ಅರ್ಜಿ ನೀಡಬಹುದು ಎಂದು ಹೇಳಿಕೆ ನೀಡಿ ಅಚ್ಚರಿ ಹುಟ್ಟಿಸಿದ್ದಾರೆ. ಮೊನ್ನೆಮೊನ್ನೆಯವರೆಗೆ ಹೈ ಕಮಾಂಡ್​ ಮುಂದೆ ಕೈ ಕಟ್ಟಿ ನಿಂತು ಸಂಪುಟ ವಿಸ್ತರಣೆಗೆ ಅನುಮತಿ ಕೊಡಿ ಎಂದು ಗೋಗರೆಯುತ್ತಿದ್ದ ಯಡಿಯೂರಪ್ಪ ಇಷ್ಟು ಬೇಗನೇ ದೆಹಲಿಯಲ್ಲಿ ಅಷ್ಟು ಪ್ರಭಾವ ಬೆಳೆಸಿಕೊಂಡಿದ್ದು ಹೇಗೆ? ಒಂದು ವಾರದ ಹಿಂದಿನವರೆಗೂ ಬಿಜೆಪಿ ಹೈಕಮಾಂಡ್​ ಮುಖ್ಯಮಂತ್ರಿಗಳ ಜೊತೆಯಲ್ಲಿಲ್ಲ, ಹಾಗಾಗಿ ಸಂಕ್ರಾಂತಿಯ ನಂತರ ಅವರನ್ನು ತೆಗೆಯುವುದು ಖಂಡಿತ ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಹೇಳಿದಾಗ, ಅದನ್ನು ಖಡಾಖಂಡಿತವಾಗಿ ಖಂಡಿಸುವ ಹೇಳಿಕೆಗಳು ಬಿಜೆಪಿ ಪಕ್ಷದ ನಾಯಕರಿಂದ ಬಂದಿರಲಿಲ್ಲ. ಕೊನೆಗೆ ಅಖಿಲ ಭಾರತೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಪ್ರಭಾರಿ ಅರುಣ್ ಸಿಂಗ್​ ಕಳೆದ ವಾರ ಬಂದಾಗ ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದು ಹೇಳಿದ ಮೇಲೆ ಹಲವಾರು ಬಿಜೆಪಿ ನಾಯಕರಿಗೆ ಇದು ಮನದಟ್ಟಾಯಿತು.

ಹಾಗಾದರೆ ಇಲ್ಲಿ ಏನು ನಡೆದಿದೆ? ಎರಡೂವರೆ ತಿಂಗಳ ಹಿಂದೆ ಅಂದರೆ, ಅರುಣ್ ಸಿಂಗ್​ ನೇಮಕ ಆಗುವತನಕವೂ ಯಡಿಯೂರಪ್ಪ ಅವರನ್ನು ಪಕ್ಷದ ವಿರುದ್ಧ ಪುಂಡಾಟಿಕೆ ಮಾಡುವ ನಾಯಕ ಎಂದೇ ಹೈ ಕಮಾಂಡಿಗೆ ನಂಬಿಸಲಾಗಿತ್ತು. ಯಡಿಯೂರಪ್ಪ ಬಣದವರು ಹೇಳುವ ಪ್ರಕಾರ ಇದು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್​. ಸಂತೋಷ್​ ಅವರ ಕರಾಮತ್ತು ಆಗಿತ್ತು. ಆದರೆ ಈ ಆರೋಪಕ್ಕೆ ಸಾಕ್ಷ್ಯಗಳು ಎಲ್ಲಿಯೂ ಸಿಗುವುದಿಲ್ಲ. ಇದಕ್ಕೆ ಇಂಬು ಕೊಡುವಂತೆ ಹೈ ಕಮಾಂಡ್​ ಕೂಡ ನಡೆದುಕೊಂಡಿತ್ತು: ಓರ್ವ ಮುಖ್ಯಮಂತ್ರಿಗಿರುವ ಸಾಂವಿಧಾನಿಕ ಹಕ್ಕನ್ನು ಚಲಾಯಿಸಲು ಅಂದರೆ ಸಂಪುಟ ವಿಸ್ತರಣೆ ಮಾಡುವ ನಿರ್ಧಾರವನ್ನು ತೆಗೆದುಕೊಳ್ಳಲು ಯಡಿಯೂರಪ್ಪನವರಿಗೆ ಒಪ್ಪಿಗೆ ನೀಡಿರಲಿಲ್ಲ. ಇದಕ್ಕೆ ಟಾಂಗ್​ ಕೊಟ್ಟ ಯಡಿಯೂರಪ್ಪ ಒಂದಿಷ್ಟು ನಿಗಮ/ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಮಾಡಿದ್ದರು. ತಮಗೆ ನಿಷ್ಠರಾದವರನ್ನು ಈ ಸಂಸ್ಥೆಗಳಿಗೆ ನೇಮಕ ಮಾಡುವಾಗ ಪಕ್ಷದ ಅಧ್ಯಕ್ಷ ನಳೀನ್​ ಕುಮಾರ್​ ಕಟೀಲ್​ ಅವರು ಕೊಟ್ಟಿದ್ದ ಮೂರ್ನಾಲ್ಕು ಹೆಸರುಗಳನ್ನು ಸೇರಿಸಲು ಮರೆಯಲಿಲ್ಲ. ಇಷ್ಟೆಲ್ಲ ಆಗಿದ್ದರೂ, ಯಡಿಯೂರಪ್ಪ ಅವರಿಗೆ ದೆಹಲಿಯ ಬಿಜೆಪಿ ರಾಷ್ಟ್ರೀಯ ನಾಯಕರುಗಳನ್ನು ಭೇಟಿ ಮಾಡಲು ವೀಸಾ ಸಿಕ್ಕಿರಲಿಲ್ಲ. ಈ ಹೊತ್ತಿಗೆ ಸರಿಯಾಗಿ ಕರ್ನಾಟಕ ಪ್ರಭಾರಿ ಮುರಳೀಧರ ರಾವ್​ ಅವರ ಬದಲಿಗೆ ಅರುಣ್ ಸಿಂಗ್​ ನೇಮಕವಾಯ್ತು. ಇದೇ ಆಟ ಬದಲಾವಣೆಗೆ (game changer) ಮೂಲ ಕಾರಣವಾಯ್ತಾ? ಹೌದು.

ಆಟ ಬದಲಾಗಿದ್ದು ಹೇಗೆ? ಅರುಣ್ ಸಿಂಗ್​ ನೇಮಕವಾದಾಗ ಅವರನ್ನು ವಿರೋಧ ಪಕ್ಷಗಳು ಹೀಗಳೆದಿದ್ದರು. ಬಿಜೆಪಿ ನಾಯಕರು ಬಾಯ್ಬಿಟ್ಟು ಹೇಳದಿದ್ದರೂ ಅರುಣ್ ಸಿಂಗ್​ ಅವರಿಂದ ಏನೂ ಆಗೋಲ್ಲ ಎಂದು ಹೇಳಿದ್ದಿದೆ. ಸಿಂಗ್​ ಬಂದು ಎಲ್ಲರನ್ನೂ ಭೇಟಿ ಮಾಡಿ ವಾಪಸ್ಸು ಹೋದರು. ಆಗ ಬಂತು ನೋಡಿ ಕೇಂದ್ರ ನಾಯಕರ ಚಿಂತನೆಯಲ್ಲಿ ಬದಲಾವಣೆ..!

ಸಿಂಗ್​ ಚಾಣಾಕ್ಷ. ಅವರೇನೂ ಚುನಾವಣೆ ಗೆಲ್ಲುವ ಕುದುರೆ ಇರಲಿಕ್ಕಿಲ್ಲ. ಆದರೆ, ಚುನಾವಣೆಯ ಹಿಂದಿನ ಎಲ್ಲ ಪಟ್ಟುಗಳನ್ನೂ ಆಳವಾಗಿ ಅಭ್ಯಸಿಸಿದವರು. ಅವರು ಮಾಡಿದ್ದು ಇಷ್ಟೆ: ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಬೇಕೆ? ತೊಂದರೆ ಇಲ್ಲ. ಆದರೆ, ಯಡಿಯೂರಪ್ಪರನ್ನು ಮೀರಿಸುವ ಮತ್ತೊಬ್ಬ ನಾಯಕನನ್ನು ಪಕ್ಷದ ಒಳಗೆ ತೋರಿಸಿ. ನಾಳೇನೇ ಬದಲಾವಣೆ ಮಾಡೋಣ ಎಂದರು. ಯಡಿಯೂರಪ್ಪರನ್ನು ಬದಲಾವಣೆ ಮಾಡಬೇಕು ಎಂದು ಯಾರೆಲ್ಲ ಹೇಳಿದ್ದರೋ, ಅವರಲ್ಲಿ ಉತ್ತರ ಇರಲಿಲ್ಲ. ಆಗ ಸಿಂಗ್​ ಹೇಳಿದ್ದು ಇಷ್ಟು: ಹಾಗಾದರೆ, ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡುವ ವಿಚಾರ ಬಿಟ್ಟು, ಒಳ್ಳೆ ಆಡಳಿತ ನೀಡುವತ್ತ ಗಮನ ಹರಿಸಿ. ಒಂದು ಮೂಲದ ಪ್ರಕಾರ, ಕೇಂದ್ರದಲ್ಲಿ ಸಚಿವರಾಗಿರುವ ಕೆಲವರಿಗೆ ಅರುಣ್ ಸಿಂಗ್​ ಹತ್ತಿರವಾಗಿದ್ದಾರೆ. ಆ ಸಚಿವರು  ಯಡಿಯೂರಪ್ಪ ಅವರನ್ನು ಹತ್ತಿರದಿಂದ ನೋಡಿದವರು ಮತ್ತು ಕರ್ನಾಟಕದ ರಾಜಕೀಯದ ಒಳಹೊರಗನ್ನು ಬಲ್ಲವರು. ಆ ಸಚಿವರು ಪ್ರಾಯಶಃ, ಅರುಣ್​​ ಸಿಂಗ್​ಗೆ ಕೆಲವು ಸುಳಿವು (tips) ನೀಡಿರಬಹುದು. ಅದರ ಆಧಾರದ ಮೇಲೆ, ಅರುಣ್​ ಸಿಂಗ್​ ಈಗ ಕೆಲಸ ಪ್ರಾರಂಭಿಸಿದ್ದಾರೆ. ಸಿಂಗ್​ ತಮ್ಮ ರಾಜಕೀಯ ವಿಚಾರಧಾರೆಯನ್ನು ಕರ್ನಾಟಕದಲ್ಲಿ ಜಾರಿಗೆ ತರಲು ಹೊರಟಂತೆ ಕಾಣುತ್ತಿದೆ. ಅವರ ತಯಾರಿ ಹೇಗಿದೆ ನೋಡಿ. ಸಿಂಗ್​ ಅವರು ಕರ್ನಾಟಕದವರೇ ಆದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್​. ಸಂತೋಷ್​ ಅವರ ಮಾತನ್ನು ಸಹ ಕೇಳುತ್ತಿಲ್ಲ. ಪ್ರತಿಯೊಂದನ್ನು ಅಳೆದು ತೂಗಿ ನೋಡುತ್ತಿದ್ದಾರೆ. ಅಷ್ಟೇ ಅಲ್ಲ, ಪ್ರತಿ ಹೆಜ್ಜೆಯಿಡುವಾಗಲೂ ಪಕ್ಷಕ್ಕೆ ಸಹಾಯವಾಗುತ್ತಾ? ಎಂದು ನೋಡತೊಡಗಿದ್ದಾರೆ ಈ ಸಿಂಗ್​. ಇದೇ ಕಾರಣಕ್ಕೆ ಅವರು ಯಡಿಯೂರಪ್ಪ ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟು ನಿಮಗೆ ಹೇಗೆ ಬೇಕೋ ಆ ಪ್ರಕಾರ ಸಂಪುಟ ವಿಸ್ತರಣೆ ಮಾಡಿ ಎಂದು ಹೇಳಿದ್ದಾರೆ. ಹಾಗೂ ಅದೇ ಪ್ರಕಾರ, ಯಡಿಯೂರಪ್ಪ ಕೂಡ ಸಂಪುಟ ವಿಸ್ತರಣೆ ಮಾಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಇದೇ ಕಾರಣಕ್ಕೆ ಯಡಿಯೂರಪ್ಪ ಇಂದು ಬೆಳಗ್ಗೆ ಆತ್ಮವಿಶ್ವಾಸದಿಂದ ಹೇಳಿದ್ದು: ಯಾರಿಗೆ ವಿಸ್ತರಣೆ ಕುರಿತು ಬೇಸರವಿದೆಯೋ ಅವರೆಲ್ಲ ಕೇಂದ್ರ ನಾಯಕರಿಗೆ ದೂರು ಕೊಡಬಹುದು ಅಂತ. ಎಲ್ಲೀವರೆಗೆ ಅರುಣ್​ ಸಿಂಗ್​ ತನ್ನ ಬೆಂಬಲಕ್ಕೆ ಇರುತ್ತಾರೋ ಅಲ್ಲೀವರೆಗೆ ಇಲ್ಲಿಯ ನಾಯಕರಿಂದ ಏನೂ ಮಾಡಲು ಸಾಧ್ಯವಿಲ್ಲ ಅಂತ ಯಡಿಯೂರಪ್ಪ ಅವರಿಗೆ ಚೆನ್ನಾಗಿ ಗೊತ್ತು. ಈ ಬೆಳವಣಿಗೆ ಮೂಲಕ, ಯಡಿಯೂರಪ್ಪ ಅವರ ಬದಲಾವಣೆಯ ವಿಚಾರಕ್ಕೆ ಸಂಬಂಧಿಸಿದಂತೆ ಸಿಂಗ್​ ಒಂದು ಸಂದೇಶ ಕೊಟ್ಟಿದ್ದಾರೆ. ಸದ್ಯಕ್ಕೆ ಯಡಿಯೂರಪ್ಪ ಅವರ ಬದಲಾವಣೆ ಇಲ್ಲ. ಈ ವಿಚಾರಕ್ಕೆ ಸಿಂಗ್​ ಒಂದು ದೀರ್ಘ ವಿರಾಮ ಹಾಕಿದ್ದಂತೂ ಸ್ಪಷ್ಟ. ಇದೇ ಕಾರಣವಿರಬಹುದು. ಮಂತ್ರಿ ಪದವಿ ಕಳೆದುಕೊಂಡಿರುವ ನಾಗೇಶ್​ ಮತ್ತು ಸಂಪುಟಕ್ಕೆ ಸೇರಲಾಗದ ಮುನಿರತ್ನ ಕೂಡ ತಣ್ಣಗಾಗಿದ್ದಾರೆ ಮತ್ತು ಮಾಧ್ಯಮದ ಮುಂದೆ ಬಂದು ಮುಖ್ಯಮಂತ್ರಿ ವಿರುದ್ಧ ಹೇಳಿಕೆ ನೀಡಲು ಹಿಂದೇಟು ಹಾಕುತ್ತಿದ್ದಾರೆ.

ರಾಜಕೀಯ ವಿಶ್ಲೇಷಣೆ | ಯಡಿಯೂರಪ್ಪ ಪ್ರಯತ್ನದ ಹೊರತಾಗಿಯೂ ಮುನಿರತ್ನಗೆ ಒಲಿಯಲಿಲ್ಲವೇಕೆ ಮಂತ್ರಿಗಿರಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada