ತಾಳ್ಮೆ ಪರಿಶೀಲಿಸುವವರಿಗೆ ತಕ್ಕ ಪ್ರತ್ಯುತ್ತರ ನೀಡಲಾಗುವುದು: ಸೇನಾ ಮುಖ್ಯಸ್ಥ ಜ. ಮನೋಜ್​ ಮುಕುಂದ್​ ನರವಾಣೆ ಎಚ್ಚರಿಕೆ

ಗಡಿಭಾಗದಲ್ಲಿ 300 ರಿಂದ 400 ಉಗ್ರರು ಭಾರತದ ಗಡಿ ಪ್ರವೇಶಿಸಲು ಹೊಂಚುಹಾಕಿ ಕುಳಿತಿರುವುದು ನಮ್ಮ ಗಮನದಲ್ಲಿದೆ. ಕದನ ವಿರಾಮ ಉಲ್ಲಂಘನೆಯ ಪ್ರಮಾಣ ಕಳೆದ ವರ್ಷ ಶೇ.44ರಷ್ಟು ಹೆಚ್ಚಾಗಿದೆ. ಇದು ಪಾಕಿಸ್ತಾನದ ದುರುದ್ದೇಶಕ್ಕೆ ಸಾಕ್ಷಿಯಾಗಿದೆ. ನಾವು ಇಂತಹ ಸಂಚಿಗೆ ಹೆದರುವುದಿಲ್ಲ.

  • TV9 Web Team
  • Published On - 13:14 PM, 15 Jan 2021
ತಾಳ್ಮೆ ಪರಿಶೀಲಿಸುವವರಿಗೆ ತಕ್ಕ ಪ್ರತ್ಯುತ್ತರ ನೀಡಲಾಗುವುದು: ಸೇನಾ ಮುಖ್ಯಸ್ಥ ಜ. ಮನೋಜ್​ ಮುಕುಂದ್​ ನರವಾಣೆ ಎಚ್ಚರಿಕೆ
ಸೇನಾ ಮುಖ್ಯಸ್ಥ ಜನರಲ್​ ಮನೋಜ್​ ಮುಕುಂದ್​ ನರವಾಣೆ

ದೆಹಲಿ: ಗಾಲ್ವಾನ್​ ಪ್ರಾಂತ್ಯದ ಸಂಘರ್ಷದಲ್ಲಿ ಜೀವಪಣಕ್ಕಿಟ್ಟು ನಮ್ಮ ಸೈನಿಕರ ಹೋರಾಟ ವ್ಯರ್ಥವಾಗಲು ಬಿಡುವುದಿಲ್ಲ. ಪ್ರಸ್ತುತ ಚೀನಾದೊಂದಿಗಿನ ಗಡಿ ಸಂಘರ್ಷಕ್ಕೆ ತಕ್ಕ ಉತ್ತರವನ್ನು ನೀಡುತ್ತಲೇ ಬಂದಿದ್ದೇವೆ. ಎಂತಹ ಕಠಿಣ ಸಂದರ್ಭದಲ್ಲೂ ನಾವು ಎದೆಗುಂದುವುದಿಲ್ಲ ಎಂದು ಸೇನಾ ಮುಖ್ಯಸ್ಥ ಜನರಲ್​ ಮನೋಜ್​ ಮುಕುಂದ್​ ನರವಾಣೆ ಹೇಳಿದ್ದಾರೆ.

ಸೇನಾದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ನೆರೆಹೊರೆಯ ದೇಶಗಳೊಂದಿಗಿನ ಸಮಸ್ಯೆಯನ್ನು ಮಾತುಕತೆ ಮೂಲಕ ಬಗೆಹರಿಸಲು ಪ್ರಯತ್ನಿಸುತ್ತಲೇ ಇದ್ದೇವೆ. ಆದರೆ, ಅದನ್ನು ನಮ್ಮ ದುರ್ಬಲತೆ ಎಂದು ಪರಿಗಣಿಸಕೂಡದು. ನಮ್ಮ ತಾಳ್ಮೆಯನ್ನು ಯಾರೇ ಪರೀಕ್ಷಿಸಿದರೂ ಅದಕ್ಕೆ ತಕ್ಕ ಪ್ರತ್ಯುತ್ತರವನ್ನು ನೀಡಲು ಹಿಂಜರಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಗಡಿಭಾಗದಲ್ಲಿ 300 ರಿಂದ 400 ಉಗ್ರರು ಭಾರತದ ಗಡಿ ಪ್ರವೇಶಿಸಲು ಹೊಂಚುಹಾಕಿ ಕುಳಿತಿರುವುದು ನಮ್ಮ ಗಮನದಲ್ಲಿದೆ. ಕದನ ವಿರಾಮ ಉಲ್ಲಂಘನೆಯ ಪ್ರಮಾಣ ಕಳೆದ ವರ್ಷ ಶೇ.44ರಷ್ಟು ಹೆಚ್ಚಾಗಿದೆ. ಇದು ಪಾಕಿಸ್ತಾನದ ದುರುದ್ದೇಶಕ್ಕೆ ಸಾಕ್ಷಿಯಾಗಿದೆ. ನಾವು ಇಂತಹ ಸಂಚಿಗೆ ಹೆದರುವುದಿಲ್ಲ. ಕಳೆದ ಬಾರಿ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ 200ಕ್ಕೂ ಹೆಚ್ಚು ಉಗ್ರರನ್ನು ಸದೆಬಡಿದಿದ್ದೇವೆ. ನಮ್ಮ ತಂಟೆಗೆ ಬಂದರೆ ತಕ್ಕ ಶಾಸ್ತಿ ಖಚಿತ ಎಂದು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಸೇನೆಯ ಬಲವನ್ನು ಹೆಚ್ಚಿಸಲು ನಾವು ಆಧುನಿಕತೆಯನ್ನು ಅಳವಡಿಸಿಕೊಳ್ಳುತ್ತಿದ್ದೇವೆ. ಈಗಾಗಲೇ ₹5ಸಾವಿರ ಕೋಟಿಗೂ ಅಧಿಕ ಮೊತ್ತದ ಉಪಕರಣಗಳನ್ನು ತರಿಸಿಕೊಂಡಿದ್ದೇವೆ. ಕಳೆದ ಸಾಲಿನಲ್ಲಿ ₹13ಸಾವಿರ ಕೋಟಿ ಮೊತ್ತದ ಒಪ್ಪಂದಕ್ಕೆ ಸಹಿಯನ್ನೂ ಹಾಕಿದ್ದೇವೆ. ಅತ್ಯಾಧುನಿಕ ಸೌಲಭ್ಯಗಳ ಮೂಲಕ ನಮ್ಮ ಬಲ ಹೆಚ್ಚುತ್ತಿದೆ ಎಂದು ತಮ್ಮ ಭಾಷಣದಲ್ಲಿ ತಿಳಿಸಿದ್ದಾರೆ. ಇದೇವೇಳೆ ರಣರಂಗದಲ್ಲಿ ಶೌರ್ಯ ತೋರಿದ ಯೋಧರಿಗೆ ಸೇನಾ ಪದಕಗಳನ್ನು ನೀಡಿ ಗೌರವಿಸಲಾಯಿತು.

ಸೇನಾದಿನಾಚರಣೆಯ ಪ್ರಯುಕ್ತವಾಗಿ ಭಾರತದ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್​) ಬಿಪಿನ್​ ರಾವತ್, ಸೇನಾ ಮುಖ್ಯಸ್ಥ ಜನರಲ್​ ಮನೋಜ್​ ಮುಕುಂದ್​ ನರವಾಣೆ, ವಾಯುಸೇನೆ ಮುಖ್ಯಸ್ಥ ಆರ್​ಕೆಎಸ್​ ಭದೌರಿಯಾ, ನೌಕಾಪಡೆ ಮುಖ್ಯಸ್ಥ ಅಡ್ಮಿರಲ್​ ಕರಂಬೀರ್​ ಸಿಂಗ್ ಮತ್ತಿತರರು ರಾಷ್ಟ್ರೀಯ ಯುದ್ಧಸ್ಮಾರಕಕ್ಕೆ ಗೌರವ ಸಲ್ಲಿಸಿದರು.

ಯೋಧರಿಗೆ ಸೇನಾ ದಿನದ ಶುಭಾಶಯಗಳು: ಪ್ರಧಾನ ಮಂತ್ರಿ ನರೇಂದ್ರ ಮೋದಿ
ಸೇನಾದಿನದ ಪ್ರಯುಕ್ತ ಟ್ವೀಟ್​ ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ದೇಶದ ಯೋಧರು ಮತ್ತು ಅವರ ಕುಟುಂಬ ವರ್ಗಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ನಮ್ಮ ಸೈನಿಕ ಪಡೆ ಶಕ್ತಿಶಾಲಿ, ಧೈರ್ಯಶಾಲಿ ಮತ್ತು ದೃಢತೆಯಿಂದ ಕೂಡಿದೆ. ದೇಶದ ಜನರು ಹೆಮ್ಮೆಪಡುವಂತೆ ನಮ್ಮ ಸೈನಿಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಾನು ಎಲ್ಲರ ಪರವಾಗಿ ಭಾರತೀಯ ಸೇನೆಗೆ ವಂದಿಸುತ್ತೇನೆ’ ಎಂದು ತಿಳಿಸಿದ್ದಾರೆ.

ಬಾಲ್​ಕೋಟ್​ ದಾಳಿಯಲ್ಲಿ 300ಕ್ಕೂ ಹೆಚ್ಚು ಉಗ್ರರು ಮೃತಪಟ್ಟಿದ್ದಾರೆ: ಕೊನೆಗೂ ಸತ್ಯ ಒಪ್ಪಿಕೊಂಡ ಪಾಕಿಸ್ತಾನ