ಮಾಧ್ಯಮಗಳದ್ದು ಕತ್ತಿಯಂಚಿನ ನಡಿಗೆ. ಇಂಚು ಹೆಚ್ಚಲ್ಲ. ಇಂಚು ಕಡಿಮೆಯಲ್ಲ. ಒಲವು ವಿರೋಧಗಳಿಲ್ಲದ ನಿಷ್ಪಕ್ಷಪಾತಿ ನಡೆ. ಆದರೆ ದೇಶ ಕಣ್ಣೆವೆಯಿಕ್ಕಿ ದೃಷ್ಟಿಸುವ ಕೆಲ ಪ್ರಕರಣಗಳು ಈ ಮಾತಿಗೆ ಅಪವಾದ.
2008-09ರಲ್ಲಿ ನೀರಾ ರಾಡಿಯಾ ಪ್ರಕರಣ ಭಾರತದ ಮಾಧ್ಯಮ-ರಾಜಕೀಯ ಕ್ಷೇತ್ರದಲ್ಲಿ ಎಬ್ಬಿಸಿದ ಆಟಾಟೋಪ ಅಷ್ಟಿಷ್ಟಲ್ಲ. ಈಗಲೂ ಪಂಚಾಯತ್ ಮಟ್ಟದ ಪುಡಾರಿಯಿಂದ ದೆಹಲಿ ರಾಜಪಥ್ವರೆಗಿನ ರಾಜಕಾರಣಿಗಳಿಗೂ ನೀರಾ ರಾಡಿಯಾ ಟೇಪ್ ಹಗರಣ ಕೇಳಿದರೆ ಮೈಯಲ್ಲಿ ವಿದ್ಯುತ್ ಸಂಚಾರವಾಗುತ್ತದೆ. ಅತಿ ಪ್ರಮುಖ, ಅತಿ ಕುತೂಹಲಕಾರಿ ಹಗರಣ ಎಂದೇ ನೀರಾ ರಾಡಿಯಾ ಹಗರಣವನ್ನು ಭಾರತದ ರಾಜಕೀಯ ಇತಿಹಾಸ ಉಲ್ಲೇಖಿಸುತ್ತದೆ.
ಅರೆ! ಈಗೆಲ್ಲಿಂದ ನೀರಾ ರಾಡಿಯಾ ನೆನಪಾದಳು ಎಂದು ಕೇಳುವಂತಿಲ್ಲ. ಅಂತಹುದೇ ಒಂದು ಪ್ರಕರಣ ಈಗಲೂ ತಲೆ ಎತ್ತಿದೆ ಅಥವಾ ಕೆಲವರು ಕಾಲನ್ನೂ ಕೆಲವರು ತಲೆಯನ್ನೂ ಎಳೆದು ಪ್ರಕರಣ ಮಾಡಲು ಹವಣಿಸುತ್ತಿದ್ದಾರೆ. ಹುಟ್ಟಿದ ಮಗುವನ್ನು ಬೇಗ ಎತ್ತರಕ್ಕೆ ಬೆಳೆಸಲು ಅಪ್ಪ ಕಾಲನ್ನು ಅಮ್ಮ ಕೈಯನ್ನು ಹಿಡಿದು ಎಳೆದಂತೆ!
ನೆನಪಾಯಿತು ನೀರಾ ರಾಡಿಯಾ ಆಡಿಯೋ ಹಗರಣ
ನೀರಾ ರಾಡಿಯಾ ಪ್ರಕರಣದಲ್ಲಿ ಫೋನ್ ಮಾತುಕತೆಯಷ್ಟನ್ನೇ ಸಾಕ್ಷಿಯಾಗಿ ಪರಿಗಣಿಸಲು ಸಾಲದು ಎಂದು ವಾದಿಸಿದ್ದ ಕೆಲ ಮಾಧ್ಯಮಗಳು ಈಗ ಉಲ್ಟಾ ಹೊಡೆದಿವೆ. ಅಧಿಕೃತವಲ್ಲದ ಮೂಲದಿಂದ ಸೋರಿಕೆಯಾದ ವಾಟ್ಸ್ಆ್ಯಪ್ ಚಾಟ್ ಅನ್ನೇ ಇಟ್ಟುಕೊಂಡು ಅರ್ನಬ್ ಗೋಸ್ವಾಮಿ ಕುತ್ತಿಗೆಗೆ ಕುಣಿಕೆ ಹಾಕುವಂತೆ ವರ್ತಿಸುತ್ತಿವೆ. ಜತೆಗೆ, ಅದನ್ನೇ ಅಂತಿಮ ಸಾಕ್ಷ್ಯಗಳೆಂದು ಪರಿಗಣಿಸಿದಂತೆ ತೋರುತ್ತದೆ.
ರಿಪಬ್ಲಿಕ್ ಮೀಡಿಯಾ ಮುಖ್ಯಸ್ಥ ಅರ್ನಬ್ ಗೋಸ್ವಾಮಿ ಮತ್ತು ಟೆಲಿವಿಷನ್ ರೇಟಿಂಗ್ ನೀಡುವ ಬಾರ್ಕ್ ಸಂಸ್ಥೆಯ ಮಾಜಿ ಮುಖ್ಯಸ್ಥ ಪಾರ್ಥೋ ದಾಸ್ ಗುಪ್ತಾ ನಡುವಿನ ವಾಟ್ಸ್ಆ್ಯಪ್ ಸಂಭಾಷಣೆ ಎನ್ನಲಾದ 500 ಪುಟಗಳ ದಾಖಲೆಯೊಂದು ಟ್ವಿಟರ್ನಲ್ಲಿ ಹರಿದಾಡುತ್ತಿದೆ. ಕೆಲವು ಆಂಗ್ಲ ಮಾಧ್ಯಮಗಳು ಮಾತ್ರ ಈ ವಿಚಾರವನ್ನು ಪರಿಗಣಿಸಿ ಸುದ್ದಿ ಪ್ರಕಟಿಸಿದ್ದು, ಮುಖ್ಯ ವಾಹಿನಿಯ ಹಲವು ಮಾಧ್ಯಮಗಳು ಮೌನವಹಿಸಿವೆ.
ಬಾರ್ಕ್ನ ಮಾಜಿ ಮುಖ್ಯಸ್ಥ ಪಾರ್ಥೋ ದಾಸ್ಗುಪ್ತಾರನ್ನು ಟಿಆರ್ಪಿ ರೇಟಿಂಗ್ ತಿರುಚಿದ ಆರೋಪದ ಮೇಲೆ 2020 ಡಿಸೆಂಬರ್ 24ರಂದೇ ಮುಂಬೈ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೇ, ಮುಂಬೈ ಪೊಲೀಸರು ಈವರೆಗೆ ಸೋರಿಕೆಯಾದ ವಾಟ್ಸ್ಆ್ಯಪ್ ಚಾಟ್ನ ಸತ್ಯಾಸತ್ಯತೆಯ ಕುರಿತು ಪ್ರತಿಕ್ರಿಯೆ ನೀಡಿಲ್ಲ. ಇದು ಇಡೀ ಚಾಟ್ ಕುರಿತು ಅನುಮಾನದ ವಾಸನೆ ಮೂಗಿಗಡರುವಂತೆ ಮಾಡಿದೆ.
ವಾಟ್ಸ್ಆ್ಯಪ್ ಚಾಟ್ನಲ್ಲಿ ಇರುವುದಾದರೂ ಏನು?
ಅರ್ನಬ್ ಗೋಸ್ವಾಮಿ ಎಂದು ಸೇವ್ ಮಾಡಲಾದ ನಂಬರ್ ಮತ್ತು ಪಾರ್ಥೋ ದಾಸ್ಗುಪ್ತಾ ಎಂದು ಸೇವ್ ಮಾಡಲಾದ ನಂಬರ್ ನಡುವಿನ ವಾಟ್ಸ್ಆ್ಯಪ್ ಸಂಭಾಷಣೆಯೇ ಈ ವಿವಾದ ತಿರುಳು ಹುರುಳು. ಅರ್ನಬ್ ಗೋಸ್ವಾಮಿ ವಿರೋಧಿಗಳಿಗೆ ಇದು ಅರ್ನಬ್ ಗೋಸ್ವಾಮಿಯೇ ಕಳಿಸಿದ ಸಂದೇಶ. ಅರ್ನಬ್ ಅಭಿಮಾನಿಗಳಿಗೆ ತಮ್ಮ ಆರಾಧ್ಯ ದೈವವನ್ನು ಹೊಂಡಕ್ಕೆ ನೂಕಲು ಮಾಡುತ್ತಿರುವ ಹುನ್ನಾರ. ಒಳಸಂಚು.ಸತ್ಯ ಯಾವುದು ಸುಳ್ಳು ಯಾವುದು ಎಂಬುದು ಅವರವರಿಗೆ ಬೇಕಾದಂತೆ ನಡೆಸುತ್ತಿರುವ ವ್ಯಾಖ್ಯಾನ.
ಈ ವಾಟ್ಸ್ಆ್ಯಪ್ ಚಾಟ್ ವಿವಾದವನ್ನು ಮುನ್ನೆಲೆಯ ಮಾಧ್ಯಮಗಳು ವರದಿ ಮಾಡದಿರಲು/ನಂಬದಿರಲು ಹಲವು ಕಾರಣಗಳಿವೆ. ಈವರೆಗೆ ಅರ್ನಬ್ ಗೋಸ್ವಾಮಿ ವಿರೋಧಿಯೆಂದು ಬಿಂಬಿತವಾದ ಮತ್ತು ಅಂತಹದೇ ಸುದ್ದಿಗಳನ್ನು ಪ್ರಸಾರ ಮಾಡಿದ ಮಾಧ್ಯಮಗಳಷ್ಟೇ ವಾಟ್ಸ್ಆ್ಯಪ್ ಚಾಟ್ ಇಟ್ಟುಕೊಂಡು ಅರ್ನಬ್ ಗೋಸ್ವಾಮಿ ವಿರುದ್ಧ ಸುದ್ದಿ ಪ್ರಸಾರ ಮಾಡಿವೆ.
ವಾಟ್ಸ್ಆ್ಯಪ್ ಕುರಿತು ಅನುಮಾನ ಮೂಡಲು ಕಾರಣಗಳೇನು?
ಅರ್ನಬ್ ಗೋಸ್ವಾಮಿ ಮತ್ತು ಪಾರ್ಥೋ ದಾಸ್ಗುಪ್ತಾ ನಡುವಿನ ವಾಟ್ಸ್ಆ್ಯಪ್ ಸಂಭಾಷಣೆ ಎನ್ನಲಾಗಿದೆಯೇ ಹೊರತು ಈ ವಾಟ್ಸ್ಆ್ಯಪ್ ಚಾಟ್ ಮುಂಬೈ ಪೊಲೀಸರಿಂದ ಅಧಿಕೃತವಾಗಿ ಬಿಡುಗಡೆಯಾಗಿಲ್ಲ. ಈ ಇಡೀ ಪ್ರಕರಣದ ಮೂಲಭೂತ ಪ್ರಶ್ನೆಗಳಲ್ಲೊಂದು. ಇನ್ನೊಂದು ಅತಿ ಪ್ರಮುಖ ಅಂಶವೆಂದರೆ, ಮುಂಬೈ ಪೊಲೀಸರು ಈವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ!
ಅದು ಯಾವುದೇ ಪ್ರಕರಣವಾಗಿರಲಿ.. ತನಿಖೆಯ ಹಂತದಲ್ಲಿರುವಾಗ ಏಕಾಏಕಿ ಹೇಗೆ ತಾನೇ ದಾಖಲೆಗಳನ್ನು ಸಾರ್ವಜನಿಕವಾಗಿ ಹಂಚಬಹುದು? ಹಾಗೇನಾದರೂ ಸೋರಿಕೆಯಾದಲ್ಲಿ ಅದರ ಲಾಭ ಪಡೆಯುವವರಂತೂ ಇದ್ದೇ ಇರುತ್ತಾರೆ. ಅಂತಹ ಗೌಪ್ಯ ಲಾಭದ ಕಾರಣಕ್ಕೇ ಖಾಸಗಿ ಚಾಟ್ ಸೋರಿಕೆ ಮಾಡಿದ್ದಾರೆ ಎನ್ನುತ್ತಾರೆ.
ಈ ವಾಟ್ಸ್ಆ್ಯಪ್ ಚಾಟ್ನ್ನು ಮೊದಲು ಸೋರಿಕೆ ಮಾಡಿದ್ದು ಆಮ್ಆದ್ಮಿ ಪಕ್ಷದ ಕಾರ್ಯಕರ್ತ ಎನ್ನಲಾಗಿದೆ. ಅಲ್ಲದೇ, ಆತ ಆಪ್ನ ಸಾಮಾಜಿಕ ಜಾಲತಾಣ ನಿರ್ವಹಣೆಯ ಜವಾಬ್ದಾರಿಯನ್ನೂ ಹೊಂದಿದ್ದಾರೆ. ಅರ್ನಬ್ ಗೋಸ್ವಾಮಿಯನ್ನು ಹಣಿಯಲು ಪ್ರಯತ್ನಿಸುತ್ತಿವ ಪಾಳಯದಿಂದಲೇ ಈ ಚಾಟ್ ಸೋರಿರುವ ಸಂಶಯವಿದೆ.
ಯಾರು ಯಾವುದೇ ಸಂಖ್ಯೆಯನ್ನು ಏನೆಂದು ಬೇಕಾದರೂ ಸೇವ್ ಮಾಡಿಕೊಳ್ಳಬಹುದು. ಉದಾ: ಪ್ರಧಾನಿ ನರೇಂದ್ರ ಮೋದಿಯವರ ಹೆಸರಲ್ಲಿ ವಾಟ್ಸ್ಆ್ಯಪ್ ನಂಬರ್ ಸೇವ್ ಮಾಡಿಕೊಂಡು ಸಹ ಚಾಟ್ ಮಾಡಬಹುದು. ಇದು ವಂಚನೆ ಎಸಗುವ ಅತಿ ಸರಳ ವಿಧಾನ. ನೋಡಿ, ಇಬ್ಬರು ಗೆಳೆಯರು ಪರಸ್ಪರ ರಾಜಕೀಯ ವಿರೋಧಿಗಳ ಹೆಸರಲ್ಲಿ ನಂಬರ್ ಸೇವ್ ಮಾಡಿಕೊಂಡು ಚಾಟ್ ಮಾಡುತ್ತೇವೆ. ಸಾದಾ ಚಾಟ್ ಅಲ್ಲ, ಏನೆಂದು ಚಾಟ್ ಮಾಡಿದರೆ ವಿವಾದ ಉಂಟಾಗಬಲ್ಲದೋ ಅಂಥದ್ದೇ ಚಾಟ್ ಮಾಡುತ್ತೇವೆ. ಚಾಟ್ ಅನ್ನು ಪಿಡಿಎಫ್ ಮಾಡಿಯೋ, ಸ್ಕ್ರೀನ್ ಶಾಟ್ ತೆಗೆದೋ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಬಹುದು
ವಾಟ್ಸ್ಆ್ಯಪ್ ಚಾಟ್ನ್ನು ಗಮನಿಸಿದರೆ ಪತ್ರಕರ್ತ, ನಿರೂಪಕ ಅರ್ನಬ್ ಗೋಸ್ವಾಮಿ ಕೆಲ ವಿಷಯಗಳ ಕುರಿತು ಏನು ಹೇಳಲಿ ಎಂದು ದಾಸ್ಗುಪ್ತಾರಲ್ಲಿ ಸಲಹೆ ಕೇಳುತ್ತಾರೆ. ಅರ್ನಬ್ ಗೋಸ್ವಾಮಿಯವರನ್ನು ಹತ್ತಿರದಿಂದ ಬಲ್ಲ ಅಥವಾ ಟಿವಿಯಲ್ಲಷ್ಟೇ ನೋಡಿದವರಿಗೆ ಸಾಮಾನ್ಯವಾಗಿ ಗೋಸ್ವಾಮಿ ಇತರರ ಬಳಿ ಸಲಹೆ ಕೇಳುವ ಜಾಯಮಾನ ಇದ್ದವರಲ್ಲ ಎಂಬುದರ ಅರಿವಿದೆ. ಚಿಕ್ಕಚಿಕ್ಕ ವಿಷಯಕ್ಕೂ ಸಲಹೆ ಕೇಳುವ ಜಾಯಮಾನ ಅರ್ನಬ್ ಗೋಸ್ವಾಮಿಯವರದ್ದಲ್ಲ ಎಂಬುದು ಸಾರ್ವತ್ರಿಕ ಸತ್ಯ.
ಭಾಷೆಯಲ್ಲಿ ದೋಷಗಳ ಸರಮಾಲೆ
ಇದು ಪ್ರಸಿದ್ಧ ವಿವಾದಿತ ನಿರೂಪಕ ಅರ್ನಬ್ ಗೋಸ್ವಾಮಿಯ ಚಾಟ್ ಅಲ್ಲ ಎನ್ನಲು ಬಲವಾದ ಕಾರಣ ಸ್ಪೆಲಿಂಗ್ ದೋಷಗಳು. ಇಡೀ ಚಾಟ್ ಗಮನಿಸಿದರೆ ಅಕ್ಷರ ದೋಷಗಳು ಕಂಡುಬರುತ್ತದೆ. ಆಕ್ಸ್ಫರ್ಡ್ನಲ್ಲಿ ವ್ಯಾಸಂಗ ಮಾಡಿರುವ, ಇಂಗ್ಲಿಷ್-ಹಿಂದಿ ಸುದ್ದಿ ವಾಹಿನಿಯೊಂದರ ಮುಖ್ಯಸ್ಥ ಸರಳ ಪದಗಳನ್ನು ತಪ್ಪುತಪ್ಪಾಗಿ ಬರೆಯುತ್ತಾರೆಯೇ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ವಿದ್ವಾಂಸನೋರ್ವನಿಗೆ ಕಾಗುಣಿತ ಜ್ಞಾನದ ಕೊರತೆ ಎಂದಂತಾಯಿತು ಈ ಕಥೆ!
ಸುಶಾಂತ್ ಸಿಂಗ್ ರಜಪೂತ್, ಬಾಲಿವುಡ್ ಡ್ರಗ್ ಪ್ರಕರಣದಲ್ಲಿ ರಿಯಾ ಚಕ್ರವರ್ತಿ ಮತ್ತು ದೀಪಿಕಾ ಪಡುಕೋಣೆಯವರ ವಾಟ್ಸ್ಆ್ಯಪ್ ಚಾಟ್ ಹಿಂದೆ ಅರ್ನಬ್ ಗೋಸ್ವಾಮಿ ಬೆನ್ನುಹತ್ತಿದ್ದರು. ಈಗ ಅರ್ನಬ್ ಗೋಸ್ವಾಮಿ ಚಾಟ್ ಸಹ ಹಾಗೇ ಚರ್ಚೆಯಾಗಬೇಕು ಎಂದು ಕೆಲ ‘ಉದಾರವಾದಿಗಳು’ ವಾದಿಸುತ್ತಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೇರುವ ಮುನ್ನ, ಸಹ ಯುಪಿಎ ಸರ್ಕಾರ ಕೆಲ ಆಂಗ್ಲ ಸುದ್ದಿವಾಹಿನಿಗಳ ಜತೆ ಗೆಳೆತನ ಹೊಂದಿತ್ತು. ಈಗ ಅರ್ನಬ್ ಗೋಸ್ವಾಮಿ ಅದನ್ನೇ ಮಾಡುತ್ತಿರುವ ಸಾಧ್ಯತೆಯಿದೆ ಎಂದು ಸ್ವತಂತ್ರ ಪತ್ರಕರ್ತ ಆಕಾಶ್ ಬ್ಯಾನರ್ಜಿ ಹೇಳುತ್ತಾರೆ.
ಈಗಾಗಲೇ ಬಾಂಬೆ ಹೈಕೋರ್ಟ್ ಹೇಳಿರುವಂತೆ ಟಿಆರ್ಪಿ ತಿರುಚಿದ ಪ್ರಕರಣದಲ್ಲಿ ಜನವರಿ 29ರವರೆಗೆ ಅರ್ನಬ್ ಗೋಸ್ವಾಮಿಯವರ ಮೇಲೆ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗದು. ಹೀಗಾಗಿ, ಈಗ ವಾಟ್ಸ್ಆ್ಯಪ್ ಚಾಟ್ ಬಹಿರಂಗಪಡಿಸುವುದರಿಂದ ಯಾರಿಗೆ ಏನು ಪ್ರಯೋಜನ ಎಂಬುದು ಇಲ್ಲಿನ ಬಹದೊಡ್ಡ ಪ್ರಶ್ನೆಯೇ ಹೌದು. ಈ ಬಹುದೊಡ್ಡ ಪ್ರಶ್ನೆಯ ಉತ್ತರವೂ ಬಹುದೊಡ್ಡದೇ ಆಗಿರಬಹುದಲ್ಲವೇ.
ಪಾರ್ಥೋ ದಾಸ್ ಗುಪ್ತಾರ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸರ ಬಳಿ ಅರ್ನಬ್ ಗೊಸ್ವಾಮಿ ಜತೆಗಿನ ಚಾಟ್ ಇರುವುದಾದರೂ, ಸೋರಿಕೆಯಾದ ಚಾಟ್ ಅವರದ್ದೇ ಎಂದು ಹೇಳಲು ಸಾಧ್ಯವಾಗದು. ಅಲ್ಲ ಎನ್ನಲೂ ಸಾಧ್ಯವಾಗದು. ಟಿಆರ್ಪಿ ಎಂಬ ಅಮೂರ್ತ ದೇವರ ವರ ಪಡೆಯಲು ವಿಧವಿಧದ ಪೂಜೆಗೈಯುವ ಭಕ್ತಾದಿಗಳು ಬಳಸುವ ಹೂವು ಕೊಳೆತಿರಬಾರದಷ್ಟೇ.
TRP ಹಗರಣದಲ್ಲಿ ಅರ್ನಬ್ ಗೋಸ್ವಾಮಿ ಶಾಮೀಲು.. ಮೊಟ್ಟಮೊದಲ ಬಾರಿಗೆ ಅರ್ನಬ್ ಹೆಸರು ಪ್ರಸ್ತಾಪಿಸಿದ ಮುಂಬೈ ಪೊಲೀಸರು