ಬಳ್ಳಾರಿ: ವಿಶ್ವವಿಖ್ಯಾತ ಹಂಪಿ ಉತ್ಸವವನ್ನ ಒಂದೇ ದಿನಕ್ಕೆ ಸೀಮಿತಗೊಳಿಸಿದ ಸರ್ಕಾರದ ನಿರ್ಧಾರ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಯಾವುದೇ ವೇದಿಕೆ ಇಲ್ಲದೇ ಒಂದು ದಿನ ಸಾಂಕೇತಿಕವಾಗಿ ಹಂಪಿ ಉತ್ಸವ ಆಚರಣೆ ಮಾಡಲು ಹೊರಟಿರುವ ಜಿಲ್ಲಾಡಳಿತ ಕಲಾವಿದರ ಕೆಂಗಣ್ಣಿಗೆ ಗುರಿಯಾಗಿದ್ದು, ಕಲಾವಿದರು ಈಗ ಬೀದಿಗಿಳಿದಿದ್ದಾರೆ.
ಹಂಪಿ ಉತ್ಸವ.. ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ಹಂಪಿ ಉತ್ಸವಕ್ಕೆ ಪ್ರತಿ ವರ್ಷ ಕೂಡ ಒಂದಲ್ಲೊಂದು ವಿಘ್ನಗಳು ಎದುರಾಗುತ್ತಲೇ ಇವೆ. ಸರ್ಕಾರ ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಯಾವ ವರ್ಷವೂ ಹಂಪಿ ಉತ್ಸವ ಸಕಾಲದಲ್ಲಿ ನಡೆದಿಲ್ಲ. ಹಂಪಿ ಉತ್ಸವಕ್ಕಾಗಿ ಪ್ರತಿ ವರ್ಷ ಹೋರಾಟಗಳು ನಡೆಯಬೇಕು. ಈ ವರ್ಷ ಹಂಪಿ ಉತ್ಸವದ ಸಂಭ್ರಮಕ್ಕೆ ಕೊರೊನಾ ಬ್ರೇಕ್ ಹಾಕಿದೆ.
ಒಂದೇ ದಿನಕ್ಕೆ ಸೀಮಿತವಾದ ಹಂಪಿ ಉತ್ಸವ: ಕೊರೊನಾ ನೆಪವೊಡ್ಡಿ ಒಂದು ದಿನ ಹಂಪಿ ಉತ್ಸವವನ್ನ ಸಾಂಕೇತಿಕವಾಗಿ ಆಚರಣೆ ಮಾಡಲು ಜಿಲ್ಲಾಡಳಿತ ಮುಂದಾಗಿದೆ. ಯಾವುದೇ ವೇದಿಕೆ ಕಾರ್ಯಕ್ರಮ ಇಲ್ಲದೇ ಕೇವಲ ಮೆರವಣಿಗೆ ಜೊತೆಗೆ ತುಂಗಾರತಿ ಕಾರ್ಯಕ್ರಮದ ಮೂಲಕ ಹಂಪಿ ಉತ್ಸವ ಕಾರ್ಯಕ್ರಮ ನಡೆಸಲು ಜಿಲ್ಲಾಡಳಿತ ನಿರ್ಧರಿಸಿದೆ. ಇದು ಕಲಾವಿದರ ಆಕ್ರೋಶಕ್ಕೆ ಕಾರಣವಾಗಿದೆ. ಯಾಕಂದ್ರೆ ಕೊರೊನಾದಿಂದ ಕಳೆದ 8 ತಿಂಗಳಿಂದಲೂ ಕಲಾವಿದರಿಗೆ ಯಾವುದೇ ಕಾರ್ಯಕ್ರಮಗಳು ಇಲ್ಲದೇ ಕುಟುಂಬ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ. ಹಂಪಿ ಉತ್ಸವದಲ್ಲಾದ್ರೂ ವೇದಿಕೆ ಕಾರ್ಯಕ್ರಮಗಳಲ್ಲಿ ಅವಕಾಶ ಸಿಗಬಹುದು ಅನ್ನೋ ನಿರೀಕ್ಷೆಯಲ್ಲಿ ಕಲಾವಿದರು ಇದ್ದರು. ಆದ್ರೆ ವೇದಿಕೆ ಕಾರ್ಯಕ್ರಮ ಇಲ್ಲದೇ ಹಂಪಿ ಉತ್ಸವ ಆಚರಣೆಗೆ ಜಿಲ್ಲಾಡಳಿತ ಮುಂದಾಗಿದ್ದರಿಂದ ಜಿಲ್ಲೆಯ ಕಲಾವಿದರು ಆಕ್ರೋಶಗೊಂಡಿದ್ದಾರೆ. ಸರಳವಾಗಿಯಾದ್ರೂ ಮೂರು ದಿನಗಳ ಹಂಪಿ ಉತ್ಸವ ಆಚರಣೆ ಮಾಡ್ಬೇಕು ಅಂತಾ ಕಲಾವಿದರು ಒತ್ತಾಯಿಸಿದ್ದಾರೆ.
ಈ ವಿಚಾರವಾಗಿ ಈಗಾಗಲೇ ಜಿಲ್ಲೆಯ ಕಲಾವಿದರು ಒಟ್ಟುಗೂಡಿ ಪ್ರತಿಭಟನೆ ಕೂಡ ನಡೆಸಿದ್ದಾರೆ. ಸರ್ಕಾರ ಹಾಗೂ ಜಿಲ್ಲಾಡಳಿತ ಕಲಾವಿದರ ಬೇಡಿಕೆಗೆ ಸ್ಪಂದಿಸದಿದ್ರೆ ನವಂಬರ್ 13 ರಂದು ಸಾಂಕೇತಿಕವಾಗಿ ನಡೆಯುವ ಹಂಪಿ ಉತ್ಸವದಲ್ಲಿ ಭಾಗವಹಿಸಿ ಕಪ್ಪುಪಟ್ಟಿ ಪ್ರದರ್ಶಿಸಿ ಪ್ರತಿಭಟನೆ ನಡೆಸಲು ಕಲಾವಿದರು ನಿರ್ಧಾರ ಮಾಡಿದ್ದಾರೆ. ಕೊರೊನಾ ನಡುವೆಯೂ ಮೈಸೂರು ದಸರಾ ಹಬ್ಬವನ್ನ ಸರಳವಾಗಿ ಆಚರಣೆ ಮಾಡಲಾಗಿದೆ. ಜೊತೆಗೆ ಉಪಚುನಾವಣೆ ಸೇರಿದಂತೆ ಬೇರೆ-ಬೇರೆ ಕಾರ್ಯಕ್ರಮಗಳು ನಡೆಯುತ್ತಲೇ ಇವೆ. ಆದ್ರೆ ಹಂಪಿ ಉತ್ಸವಕ್ಕೆ ಮಾತ್ರ ಕೊರೊನಾ ನೆಪವೊಡ್ಡುವುದು ಸರಿಯಲ್ಲ ಅನ್ನೋದು ಕಲಾವಿದರ ಮಾತು.
ಒಟ್ನಲ್ಲಿ ಕೊರೊನಾದಿಂದ ಕಂಗೆಟ್ಟ ಕಲಾವಿದರು ಹಂಪಿ ಉತ್ಸವದಲ್ಲಿ ಉತ್ತಮ ವೇದಿಕೆ ಸಿಗುತ್ತೆ ಅಂತ ಅಂದುಕೊಂಡಿದ್ದರು. ಆದ್ರೆ ಅದಕ್ಕೆ ಜಿಲ್ಲಾಡಳಿತ ಬ್ರೇಕ್ ಹಾಕಿದ್ದು, ಕಲಾವಿದರು ರೊಚ್ಚಿಗೇಳುವಂತೆ ಮಾಡಿದೆ.