ಶಿವ ಸೇನೆ-ಕಾಂಗ್ರೆಸ್​ ನಡುವೆ ಕಿಡಿ ಹಚ್ಚಿದ ‘ಔರಂಗಾಬಾದ್’​ ಮರುನಾಮಕರಣ! ಸಂಭಾಜಿನಗರವೇ.. ಅಂತಿಮ ಎಂದ ಸಂಜಯ್​ ರಾವತ್​

ಔರಂಗಜೇಬ್​ಗೆ ಇತರ ಧರ್ಮಗಳ ಬಗ್ಗೆ ಅತಿಯಾದ ದ್ವೇಷ ಇತ್ತು. ಹಿಂದು ಮತ್ತು ಸಿಖ್​ರಿಗೆ ಆತ ತುಂಬ ಹಿಂಸೆ ನೀಡಿದ್ದಾನೆ. ಔರಂಗಜೇಬನಿಗೆ ಸಂಬಂಧಪಟ್ಟ ಅವಶೇಷ, ಹೆಸರಿನ ಬಗ್ಗೆ ನಾವು ಗಮನಹರಿಸಬೇಕಿಲ್ಲ. ಅಷ್ಟಕ್ಕೂ ಔರಂಗಜೇಬ್​ ಯಾರು? ಎಂದು ಸಂಜಯ್​ ರಾವತ್​ ಪ್ರಶ್ನಿಸಿದ್ದಾರೆ.

  • TV9 Web Team
  • Published On - 12:57 PM, 18 Jan 2021
ಶಿವ ಸೇನೆ-ಕಾಂಗ್ರೆಸ್​ ನಡುವೆ ಕಿಡಿ ಹಚ್ಚಿದ ‘ಔರಂಗಾಬಾದ್’​ ಮರುನಾಮಕರಣ! ಸಂಭಾಜಿನಗರವೇ.. ಅಂತಿಮ ಎಂದ ಸಂಜಯ್​ ರಾವತ್​
ಸಂಜಯ್​ ರಾವತ್​

ದೆಹಲಿ: ಮಹಾರಾಷ್ಟ್ರದಲ್ಲಿ ಔರಂಗಾಬಾದ್​ಗೆ ಸಂಭಾಜಿನಗರ ಎಂದು ಹೆಸರಿಡುವ ವಿಚಾರಕ್ಕೆ ಶಿವಸೇನೆ ಮತ್ತು ಕಾಂಗ್ರೆಸ್​ ನಡುವೆ ಭಿನ್ನಾಭಿಪ್ರಾಯ ಮೂಡಿದೆ.

ಔರಂಗಾಬಾದ್​ಗೆ ಸಂಭಾಜಿನಗರವೆಂದು ನಾಮಕರಣ ಮಾಡಲು ಶಿವಸೇನೆ ತುದಿಗಾಲಿನಲ್ಲಿ ನಿಂತಿದ್ದರೂ, ಅದರ ಮೈತ್ರಿ ಪಕ್ಷ ಕಾಂಗ್ರೆಸ್​ ವಿರೋಧ ವ್ಯಕ್ತಪಡಿಸುತ್ತಿದೆ. ಈ ಬಗ್ಗೆ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಿವಸೇನೆ ಸಂಸದ ಸಂಜಯ್​ ರಾವತ್​, ನಮಗೇನೂ ಗೊತ್ತಿಲ್ಲ..ಔರಂಗಾಬಾದ್ ಇನ್ನು ಮುಂದೆ ಸಂಭಾಜಿನಗರ ಎಂದು ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ನಮಗೆ ಸ್ಪಷ್ಟವಾಗಿ ಹೇಳಿಬಿಟ್ಟಿದ್ದಾರೆ. ಹಾಗೇ ಮುಂದುವರಿಯಲಿದೆ ಕೂಡ ಎಂದು ತಿಳಿಸಿದ್ದಾರೆ.

ಆದರೆ ಈ ವಿಚಾರಕ್ಕೆ ಕಾಂಗ್ರೆಸ್ ಯಾಕೆ ವಿರೋಧ ವ್ಯಕ್ತಪಡಿಸುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ನಿರ್ಧಾರವನ್ನಂತೂ ತೆಗೆದುಕೊಂಡು ಆಗಿದೆ. ಇದು ಜನರ ಭಾವನೆಗೆ ಸಂಬಂಧಪಟ್ಟ ವಿಷಯ ಆಗಿದ್ದರಿಂದ ಕಾಂಗ್ರೆಸ್ ವಿರೋಧಿಸುತ್ತಿರಬಹುದು. ನಾವು ಈ ಬಗ್ಗೆ ಚರ್ಚಿಸುತ್ತೇವೆ ಎಂದು ಸಂಜಯ್​ ರಾವತ್ ಹೇಳಿದ್ದಾರೆ.

ಸಾಮ್ನಾದಲ್ಲಿ ಅಸಮಾಧಾನ
ಇನ್ನು ಔರಂಗಾಬಾದ್​ಗೆ ಸಂಭಾಜಿನಗರ ಎಂದು ನಾಮಕರಣ ಮಾಡಲು ವಿರೋಧಿಸುತ್ತಿರುವ ಕಾಂಗ್ರೆಸ್​ ಬಗ್ಗೆ ಶಿವಸೇನಾ ನಿನ್ನೆ ತನ್ನ ಮುಖವಾಣಿ ಸಾಮ್ನಾ ಪತ್ರಿಕೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿತ್ತು. ಔರಂಗಾಬಾದ್ ಹೆಸರು ಬದಲಾವಣೆ ಮಾಡುವುದರಿಂದ ಮುಸ್ಲಿಂ ಸಮುದಾಯಕ್ಕೆ ಬೇಸರವಾಗಬಹುದು ಎಂಬ ಕಾರಣಕ್ಕೆ ಕೆಲವು ಜಾತ್ಯತೀತಗಳು ವಿರೋಧ ಮಾಡುತ್ತಿವೆ. ಆ ಪಕ್ಷಗಳಿಗೆ ತಮ್ಮ ವೋಟ್​ಬ್ಯಾಂಕ್​ ಬಗ್ಗೆ ಚಿಂತೆಯಾಗಿರಬಹುದು ಎಂದು ಹೇಳಿತ್ತು.

ಔರಂಗಜೇಬ್​ಗೆ ಇತರ ಧರ್ಮಗಳ ಬಗ್ಗೆ ಅತಿಯಾದ ದ್ವೇಷ ಇತ್ತು. ಹಿಂದು ಮತ್ತು ಸಿಖ್​ರಿಗೆ ಆತ ತುಂಬ ಹಿಂಸೆ ನೀಡಿದ್ದಾನೆ. ಔರಂಗಜೇಬನಿಗೆ ಸಂಬಂಧಪಟ್ಟ ಅವಶೇಷ, ಹೆಸರಿನ ಬಗ್ಗೆ ನಾವು ಗಮನಹರಿಸಬೇಕಿಲ್ಲ. ಅಷ್ಟಕ್ಕೂ ಔರಂಗಜೇಬ್​ ಯಾರು? ಅದನ್ನು ನಾವು ವಿವರಿಸುವ ಅಗತ್ಯವಿಲ್ಲ ಎಂದುಕೊಳ್ಳುತ್ತೇವೆ. ಒಬ್ಬ ನಿಜವಾದ ಮರಾಠಿಗ, ಹಿಂದೂಗಳು ಈ ಔರಂಗಜೇಬನ ವಿಚಾರದಲ್ಲಿ ಆಸಕ್ತಿ ಹೊಂದುವ ಅಗತ್ಯವಿಲ್ಲ ಎಂದು ಕಟುವಾಗಿ ಪತ್ರಿಕೆಯಲ್ಲಿ ಬರೆಯಲಾಗಿತ್ತು.

ಶಿವಸೇನೆಯದ್ದು ಬೂಟಾಟಿಕೆ ಎಂದ ಕಾಂಗ್ರೆಸ್​
ಹಾಗೇ ಔರಂಗಾಬಾದ್​ಗೆ ಮರುನಾಮಕರಣ ಮಾಡಲು ಮುಂದಾಗಿದ್ದು ಶಿವಸೇನೆಯ ಬೂಟಾಟಿಕೆ ಎಂದು ಮಹಾರಾಷ್ಟ್ರ ಕಂದಾಯ ಸಚಿವ, ಕಾಂಗ್ರೆಸ್ ನಾಯಕ ಬಾಳಾಸಾಹೇಬ್​ ಥೋರಟ್ ಹೇಳಿದ್ದಾರೆ. ಅಷ್ಟೇ ಅಲ್ಲ, ಕಳೆದ ಐದು ವರ್ಷಗಳಲ್ಲಿ ಈ ಬಗ್ಗೆ ಮಾತನಾಡದ ಶಿವಸೇನೆ ಈಗ್ಯಾಕೆ ಮಾತನಾಡುತ್ತಿದೆ ಎಂದೂ ಪ್ರಶ್ನಿಸಿದ್ದಾರೆ. ತಮ್ಮ ರಾಜಕೀಯ ಅನುಕೂಲಕ್ಕಾಗಿ ಇವರು ಔರಂಗಾಬಾದ್​ಗೆ ಬೇರೆ ಹೆಸರಿಡಲು ಮುಂದಾಗುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಇಂದು ಠಾಕ್ರೆಗೆ ಏನೇ ಗೊಂದಲಗಳಿದ್ದರೂ ಅವರು ಕಾಂಗ್ರೆಸ್​ ಪಕ್ಷವನ್ನೇ ಪ್ರಶ್ನಿಸಬೇಕು -ಸಿ.ಟಿ. ರವಿ